ಉಪವಿಭಾಗ ಆಸ್ಪತ್ರೆ ಸಮಸ್ಯೆ ಪರಿಶೀಲನೆ

blank

ಕೊಳ್ಳೇಗಾಲ: ಕೊಳ್ಳೇಗಾಲ ಪಟ್ಟಣದ ಉಪವಿಭಾಗ ಆಸ್ಪತ್ರೆ ಮತ್ತು ಪಟ್ಟಣ ಪೊಲೀಸ್ ಠಾಣೆಗೆ ಸೋಮವಾರ ಕರ್ನಾಟಕ ರಾಜ್ಯ ಮಕ್ಕಳ ಆಯೋಗದ ಸದಸ್ಯ ವೆಂಕಟೇಶ್, ಡಾ.ಕೆ.ಟಿ.ತಿಪ್ಪೇಸ್ವಾಮಿ ಹಾಗೂ ಶಶಿಧರ್ ಕೋಸುಂಬೆ ಭೇಟಿ ನೀಡಿ ಪರಿಶೀಲಿಸಿದರು.

ಆಸ್ಪತ್ರೆಯ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಸದಸ್ಯರು ಭೇಟಿ ನೀಡಿ ಗರ್ಭಿಣಿಯರು, ಬಾಣಂತಿಯರು, ಮಕ್ಕಳ ಯೋಗಕ್ಷೇಮ ವಿಚಾರಿಸಿದರು. ಮಕ್ಕಳ ಪೌಷ್ಟಿಕ ಪುನಶ್ಚೇತನ ಕೇಂದ್ರಕ್ಕೆ ಭೇಟಿ ನೀಡಿ ದಾಖಲಾತಿ ಪರಿಶೀಲಿಸಿದರು. ಅಪೌಷ್ಟಿಕತೆಗೊಳಗಾದ ಮಕ್ಕಳ ಆರೈಕೆ ಹೇಗೆ ಸಾಗಿದೆ ಎಂಬ ಬಗ್ಗೆ ಮಕ್ಕಳ ವ್ಯೆದ್ಯರು, ಟಿಎಚ್‌ಒ ಗೋಪಾಲ್ ಅವರಿಂದ ಮಾಹಿತಿ ಪಡೆದರು.

ಪೌಷ್ಟಿಕ ಪುನಶ್ಚೇತನ ಕೇಂದ್ರ 5 ಹಾಸಿಗೆ ಸಾಮರ್ಥ್ಯ ಹೊಂದಿದೆ. ಆದರೆ, ಒಂದು ಮಗು ಮಾತ್ರ ದಾಖಲಾಗಿದೆ. ಜಿಲ್ಲೆಯಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿದ್ದಾರೆ ಎಂಬ ಮಾಹಿತಿ ಇದೆ. ಆದರೆ ಅವರು ಏಕೆ ದಾಖಲು ಆಗುತ್ತಿಲ್ಲ ಎಂದು ಸದಸ್ಯ ವೆಂಕಟೇಶ್ ಪ್ರಶ್ನಿಸಿದರು. ಈ ಕೊಠಡಿಯಲ್ಲಿ 5 ಹಾಸಿಗೆಗೆ ಸ್ಥಳದ ಸಮಸ್ಯೆ ಇದೆ. ಇದನ್ನು ಬೇರೆಡೆ ಸ್ಥಳಾಂತರ ಮಾಡಿ ಎಂದು ಸೂಚನೆ ನೀಡಿದರು.

ಮೆನು ನಿರ್ವಹಣೆ ಇಲ್ಲ: ಆಸ್ಪತ್ರೆಯಲ್ಲಿ ಪೌಷ್ಟಿಕ ಪುನಶ್ಚೇತನ ಕೇಂದ್ರಕ್ಕೆ ದಾಖಲಾದ ಮಕ್ಕಳಿಗೆ ನೀಡುವ ಊಟ ನೀಡಲಾಗುತ್ತಿರುವ ಎಂಬ ಬಗ್ಗೆ ಸದಸ್ಯರು ಪರಿಶೀಲಿಸಿದರು. ಅಡುಗೆ ಮನೆಯಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಸಿಬ್ಬಂದಿ ಬಳಿ ಈ ಬಗ್ಗೆ ಮಾಹಿತಿ ಪಡೆದರು. ಅಲ್ಲಿಯೇ ಇದ್ದ ಮಕ್ಕಳ ವ್ಯೆದ್ಯರನ್ನು ಪ್ರಶ್ನೆ ಮಾಡಿ, ಅಪೌಷ್ಟಿಕತೆಯಿಂದ ಬಳಲಿರುವ ಮಕ್ಕಳಿಗೆ ಏನೇನು ಆಹಾರ ನೀಡುತ್ತ ಇದ್ದೀರಿ ಎಂದು ಪ್ರಶ್ನಿಸಿದರು. ಅಡುಗೆ ಸಿಬ್ಬಂದಿ-ವೈದ್ಯರು ನೀಡಿದ ಪ್ರತಿಕ್ರಿಯೆಗಳು ಹೊಂದಾಣಿಕೆ ಆಗದ ಕಾರಣ ಮೆನು ಪ್ರಕಾರ ಮಕ್ಕಳಿಗೆ ಆಹಾರ ನೀಡುತ್ತಿಲ್ಲ ಎಂದು ಸದಸ್ಯ ಶಶಿಧರ್ ಕೋಸುಂಬೆ ಅಸಮಾಧಾನ ವ್ಯಕ್ತಪಡಿಸಿದರು. ನಂತರ ಮಕ್ಕಳ ಒಳ ರೋಗಿಗಳ ವಿಭಾಗ, ನವಜಾತ ಶಿಶು ವಿಭಾಗ, ಆಟದ ಕೊಠಡಿ ಮತ್ತು ಸಮಾಲೋಚನಾ ಕೊಠಡಿಗೆ ಭೇಟಿ ನೀಡಿ ವೀಕ್ಷಿಸಿದರು.

ಅಪ್ರಾಪ್ತ ಗರ್ಭಿಣಿಯರ ಬಗ್ಗೆ ನಿಗಾ ವಹಿಸಿ:
ಆಸ್ಪತ್ರೆಗೆ 18 ವರ್ಷದೊಳಗಿನ ಗರ್ಭಿಣಿಯರು ಹೆರಿಗೆಗೆ ಬಂದರೆ ಕೂಡಲೆ ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಸಿ. ಪೊಕ್ಸೋ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿ ಎಂದು ಸದಸ್ಯ ಡಾ.ಕೆ.ಟಿ. ತಿಪ್ಪೇಸ್ವಾಮಿ ಸೂಚನೆ ನೀಡಿದರು. ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ರಾಜಶೇಖರ್ ಈ ಬಗ್ಗೆ ಪ್ರತಿಕ್ರಿಯಿಸಿ, 4 ತಿಂಗಳ ಹಿಂದೆ ಒಂದು ಪ್ರಕರಣ ಬೆಳಕಿಗೆ ಬಂದಿತ್ತು. ಆ ಬಗ್ಗೆ ಎಫ್‌ಐಆರ್ ದಾಖಲಿಸಿದ್ದೇವೆ ಎಂದರು.

ರೇಡಿಯಾಲಾಜಿಸ್ಟ್ ನಿಯೋಜನೆಗೆ ಕ್ರಮ:
ಉಪವಿಭಾಗ ಆಸ್ಪತ್ರೆಯಲ್ಲಿ ರೇಡಿಯಾಲಾಜಿಸ್ಟ್ ಹುದ್ದೆ ಖಾಲಿ ಇದೆ. ಹಾಗಾಗಿ ಖಾಸಗಿ ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ರೋಗಿಗಳು ಹೋಗುವ ಸ್ಥಿತಿ ಎದುರಾಗಿದೆ ಎಂದು ಮಾಧ್ಯಮದವರು ತಿಳಿಸಿದಾಗ ಸದಸ್ಯ ವೆಂಕಟೇಶ್, ಶಶಿಧರ್ ಕೋಸುಂಬೆ ಪ್ರತಿಕ್ರಿಯಿಸಿದರು. ಈ ಬಗ್ಗೆ ಆಸ್ಪತ್ರೆಯಿಂದ ವರದಿ ಪಡೆದು ರೇಡಿಯಾಲಾಜಿಸ್ಟ್ ನಿಯೋಜನೆ ಮಾಡಲು ಸರ್ಕಾರ ಮತ್ತು ಆರೋಗ್ಯ ಇಲಾಖೆಯೊಂದಿಗೆ ಪತ್ರ ವ್ಯವಹಾರ ಮಾಡುತ್ತೇವೆ ಎಂದು ಭರವಸೆ ನೀಡಿದರು.

ತಾಯಿ-ಮಗು ಪತ್ತೆ ಮಾಡಿ:
ಬಾಲನ್ಯಾಯ ಕಾಯ್ದೆಯಡಿ ಮಕ್ಕಳ ವಿಶೇಷ ಪೊಲೀಸ್ ಘಟಕದಡಿ ಮಕ್ಕಳ ರಕ್ಷಣೆಗೆ ಏನು ಕ್ರಮವಹಿಸಿದ್ದೀರಿ ಎಂದು ಸದಸ್ಯ ಕೆ.ಟಿ ತಿಪ್ಪೇಸ್ವಾಮಿ ಪ್ರಶ್ನಿಸಿದರು. ಪಿಎಸ್‌ಐ ಬಿ.ವರ್ಷಾ ಪ್ರತಿಕ್ರಿಯಿಸಿ, ಈ ವರ್ಷದಲ್ಲಿ 8 ತಾಯಿ ಮತ್ತು ಮಕ್ಕಳ ನಾಪತ್ತೆ ಪ್ರಕರಣ ದಾಖಲಾಗಿತ್ತು. ಈ ಪೈಕಿ 7 ಪ್ರಕರಣ ಪತ್ತೆ ಹಚ್ಚಿದ್ದೇವೆ ಎಂದು ಮಾಹಿತಿ ನೀಡಿದರು. ಬಾಕಿ ಉಳಿದ 1 ಪ್ರಕರಣ ದಾಖಲಾಗಿ ಒಂದೂವರೆ ತಿಂಗಳಾಗಿದೆ. ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ತ್ವರಿತವಾಗಿ ತಾಯಿ ಮತ್ತು ಮಗು ಪತ್ತೆ ಹಚ್ಚಬೇಕು ಎಂದು ಸದಸ್ಯ ವೆಂಕಟೇಶ್ ಸೂಚಿಸಿದರು.

ಮಕ್ಕಳ ಸಹಾಯವಾಣಿ ಬೋರ್ಡ್ ಹಾಕಿ
ಮಕ್ಕಳ ಆಯೋಗದ ಸದಸ್ಯರು ಪಟ್ಟಣ ಪೊಲೀಸ್ ಠಾಣೆಗೆ ಭೇಟಿ ನೀಡಿ ಪರಿಶೀಲಿಸಿದರು. ಠಾಣೆಯನ್ನು ಮಕ್ಕಳ ಸ್ನೇಹಿ ಮಾಡಿ. ಮಕ್ಕಳ ಸಹಾಯವಾಣಿ ಬೋರ್ಡ್ ಇಲ್ಲದ್ದನ್ನು ಕಂಡು ಸದಸ್ಯ ಶಶಿಧರ್ ಕೋಸುಂಬೆ ಪ್ರಶ್ನಿಸಿದರು. ಮೊದಲು ಬೋರ್ಡ್ ಹಾಕಿಸಿ ಎಂದು ಪಿಎಸ್‌ಐಗೆ ಸೂಚನೆ ನೀಡಿದರು.ಸದಸ್ಯ ಕೆ.ಟಿ ತಿಪ್ಪೇಸ್ವಾಮಿ ಮಾತನಾಡಿ, ಮಕ್ಕಳ ಪ್ರಕರಣದ ಬಗ್ಗೆ ಪ್ರತ್ಯೇಕ ನೋಂದಣಿ ಪುಸ್ತಕ ಇಡಬೇಕು. ತೆರೆದ ಮನೆ ಕಾರ್ಯಕ್ರಮ ರಿಜಿಸ್ಟರ್ ನಿರ್ವಹಿಸಬೇಕು. ಶಾಲಾ ಮಕ್ಕಳನ್ನು ಪ್ರತಿ ಗುರುವಾರ ಪೊಲೀಸ್ ಠಾಣೆಗೆ ತೆರೆದ ಮನೆ ಕಾರ್ಯಕ್ರಮದಡಿ ಕರೆತಂದು ಪೋಕ್ಸೋ ಕಾಯ್ದೆ, ಬಾಲ ನ್ಯಾಯಕಾಯ್ದೆ, ಪೊಲೀಸ್ ವ್ಯವಸ್ಥೆ ಬಗ್ಗೆ ಅರಿವು ಮೂಡಿ ಸಬೇಕು ಎಂದು ಸೂಚಿಸಿದರು. ಈ ಸಂದರ್ಭ ಪಿಎಸ್‌ಐ ಬಿ.ವರ್ಷಾ, ಪೊಲೀಸ್ ಇಲಾಖೆ ಆರಂಭಿಸಿರುವ ಆಪ್ತ ಗೆಳತಿ ಕಾರ್ಯಕ್ರಮ ಬಗ್ಗೆ ಮಾಹಿತಿ ನೀಡಿದರು. ಸಿಡಿಪಿಒ ನಂಜಮ್ಮಣಿ, ಸೂಪರ್‌ವೈಸರ್ ಶಿವಲೀಲಾ ಮತ್ತಿತರಿದ್ದರು.

Share This Article

ಉಡುಗೆಗೆ ಮ್ಯಾಚ್​ ಆಗುವ ಲಿಪ್​ಸ್ಟಿಕ್​​​ ಆಯ್ಕೆ ಮಾಡುವುದೇಗೆ?; ಇಲ್ಲಿದೆ ಸಿಂಪಲ್​ ಟಿಪ್ಸ್​​ | Beauty Tips

ನಾವು ಮದುವೆಗೆ ಚೆಂದದ ಬಟ್ಟೆಗಳನ್ನು ಆಯ್ಕೆ ಮಾಡುತ್ತೇವೆ. ಆದ್ದರಿಂದ ಯಾರೂ ನಮಗಿಂತ ಹೆಚ್ಚು ಸುಂದರವಾಗಿ ಕಾಣುವುದಿಲ್ಲ.…

ಚಳಿಗಾಲದಲ್ಲಿ ವಿಟಮಿನ್​​ ಡಿ ಕೊರತೆಯೇ?; ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ಈ ಬದಲಾವಣೆ ಮಾಡಿ | Health Tips

ಚಳಿಗಾಲದಲ್ಲಿ ಸೂರ್ಯನ ಬೆಳಕಿನ ಕೊರತೆಯಿಂದ ವಿಟಮಿನ್ ಡಿ ಕೊರತೆ ಉಂಟಾಗುತ್ತದೆ. ಆದರೆ ಈ ಪೋಷಕಾಂಶವು ಅನೇಕ…

Mushrooms for Cancer: ಅಣಬೆ ತಿಂದರೆ ಯಾವುದೇ ಕ್ಯಾನ್ಸರ್ ಇದ್ರು ಕಂಟ್ರೋಲ್…!

Mushrooms for Cancer : ಕ್ಯಾನ್ಸರ್ ರೋಗ ಅಪಾಯಕಾರಿ. ಕ್ಯಾನ್ಸರ್ ಚಿಕಿತ್ಸೆಯು ತುಂಬಾ ದುಬಾರಿಯಾಗಿದೆ. ಕ್ಯಾನ್ಸರ್​​ನಲ್ಲಿ…