ಉಪವಿಭಾಗಾಧಿಕಾರಿ ಕಚೇರಿ ಜಪ್ತಿ

ಧಾರವಾಡ: ಕಾಲುವೆ ನಿರ್ವಣಕ್ಕಾಗಿ ರೈತರಿಂದ ವಶಪಡಿಸಿಕೊಂಡಿದ್ದ ಜಮೀನಿನ ಪರಿಹಾರ ನೀಡಲು ವಿಳಂಬ ಮಾಡಿದ್ದರಿಂದ ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿ ಚರಾಸ್ತಿಯನ್ನು ಬುಧವಾರ ಜಪ್ತಿ ಮಾಡಲಾಯಿತು.

ಕಲಘಟಗಿ ತಾಲೂಕಿನ ತಬಕದಹೊನ್ನಳ್ಳಿ, ಜಿನ್ನೂರ ಹಾಗೂ ಮಲಕನಕೊಪ್ಪ ಗ್ರಾಮದಲ್ಲಿ 2006ರಲ್ಲಿ ಕಾಲುವೆ ನಿರ್ವಿುಸಲು ಒಟ್ಟು 9 ರೈತರಿಂದ 2 ಎಕರೆ 21 ಗುಂಟೆ ಜಾಗವನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಈ ಯೋಜನೆಯಲ್ಲಿ ರೈತರಿಗೆ 35 ಲಕ್ಷ ರೂ. ಪರಿಹಾರ ನೀಡುವಲ್ಲಿ ವಿಳಂಬ ಮಾಡಿದ್ದರಿಂದ ಕಚೇರಿ ಜಪ್ತಿ ಮಾಡಿದರು.

ಬಾಕಿ ಹಣ ನೀಡುವಂತೆ 2015ರಲ್ಲಿ ರೈತರು ನ್ಯಾಯಾಲಯ ಮೊರೆ ಹೋಗಿದ್ದರು. ಇದರ ವಿಚಾರಣೆ ನಡೆಸಿದ್ದ 2ನೇ ಹೆಚ್ಚುವರಿ ದಿವಾಣಿ ನ್ಯಾಯಾಲಯ ಕೂಡಲೇ ಪರಿಹಾರ ನೀಡುವಂತೆ ಆದೇಶ ನೀಡಿತ್ತು. ಆದಾಗ್ಯೂ ಪರಿಹಾರ ನೀಡುವಲ್ಲಿ ವಿಳಂಬ ಮಾಡಿದ ಹಿನ್ನೆಲೆಯಲ್ಲಿ ಈಗಾಗಲೇ ಎರಡು ಬಾರಿ ಜಪ್ತಿ ಮಾಡಲಾಗಿತ್ತು. ಬುಧವಾರ ಮತ್ತೆ ಕಚೇರಿಗೆ ಆಗಮಿಸಿ ಕಂಪ್ಯೂಟರ್, ಪ್ರಿಂಟರ್, ಜೆರಾಕ್ಸ್ ಯಂತ್ರ ಸೇರಿ ಇತರ ವಸ್ತುಗಳನ್ನು ಜಪ್ತಿ ಮಾಡಿದರು. ವಕೀಲ ಎಸ್.ವಿ. ಜಿನ್ನೂರ, ಬೇಲೀಫ್​ರಾದ ಎಚ್.ವೈ. ಪೂಜಾರ, ರಾಜು ದಾದ್ವೇಕರ, ರೈತ ಮಣ್ಣಪ್ಪ ಜಾಲಿಹಾಳ, ಇತರರು ಇದ್ದರು.

ಕಿಮ್ಸ್​ನ 7 ನೌಕರರಿಗೆ ಮೆಮೊ

ಹುಬ್ಬಳ್ಳಿ: ವ್ಯಕ್ತಿಯೊಬ್ಬರು ಫಿಟ್ಸ್ ನಿಂದ ಒದ್ದಾಡುತ್ತಿದ್ದರೂ ಚಿಕಿತ್ಸೆ ನೀಡದ ಇಲ್ಲಿನ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್್ಸ)ಯ ಸಿಎಂಒ, ವೈದ್ಯರು, ಶುಶ್ರೂಷಕರು ಹಾಗೂ ಅಟೆಂಡರ್ ಸೇರಿ 7 ಜನರಿಗೆ ಮೆಮೊ (ಜ್ಞಾಪನಾ ಪತ್ರ) ನೀಡಲಾಗಿದೆ.

ರಾತ್ರಿ ಪಾಳೆಯಲ್ಲಿ ಕರ್ತವ್ಯ ನಿರತ ಸಿಎಂಒ ಡಾ. ನಿತೀಶ್ ಜೈನ್, ವೈದ್ಯ ಡಾ. ಆನಂದ ಕೊಪ್ಪದ, ಪಿಜಿ ಡಾ. ಕಿರಣ, ಶುಶ್ರೂಷಕರಾದ ದೀಪಾ ನಾಯಕ, ಕಾಶಿನಾಥ ಶೇಕನ್ನವರ, ಸತೀಶ ಕಲ್ಯಾಣಿ, ಚಂದ್ರಶೇಖರ ಎಸ್. ಅವರಿಗೆ ಮೆಮೊ ನೀಡಲಾಗಿದೆ. ಅಮಲಿನಲ್ಲಿದ್ದ ಹಳೇಹುಬ್ಬಳ್ಳಿಯ ನಾಗಪ್ಪ ಪೂಜಾರ ಎಂಬುವವರನ್ನು ಸೆ. 15ರಂದು ತಡರಾತ್ರಿ ಆಂಬುಲೆನ್ಸ್​ನಲ್ಲಿ ಕಿಮ್ಸ್​ಗೆ ಕರೆತರಲಾಗಿತ್ತು. ಫಿಟ್ಸ್ ಬಂದು ಒದ್ದಾಡುತ್ತಿದ್ದರೂ ಚಿಕಿತ್ಸೆ ನೀಡಿರಲಿಲ್ಲ. ತುರ್ತಚಿಕಿತ್ಸಾ ಘಟಕದಲ್ಲಿದ್ದ ವ್ಯಕ್ತಿಯನ್ನು ಉಪಚರಿಸುವಲ್ಲಿ ವೈದ್ಯರು ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪ ವ್ಯಕ್ತವಾಗಿತ್ತು. ಕರ್ತವ್ಯ ಮರೆತ ತಮ್ಮ ಮೇಲೆ ಶಿಸ್ತಿನ ಕ್ರಮ ಜರುಗಿಸಬಾರದೇಕೆ? ಎಂದಿರುವ ಪ್ರಭಾರಿ ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ ಸಿ., ಮೂರು ದಿನದೊಳಗೆ ಉತ್ತರ ನೀಡುವಂತೆ ಸೆ. 17ರಂದು ಹೊರಡಿಸಿರುವ ಮೆಮೊದಲ್ಲಿ ತಿಳಿಸಿದ್ದಾರೆ.

ಚಾಲಕನಿಗೆ 3 ವರ್ಷ ಜೈಲು ಶಿಕ್ಷೆ

ಧಾರವಾಡ: ನಿಷ್ಕಾಳಜಿಯಿಂದ ಕಾರ್ ಚಲಾಯಿಸಿ ಇಬ್ಬರ ಸಾವಿಗೆ ಕಾರಣವಾಗಿದ್ದ ಚಾಲಕನಿಗೆ ಇಲ್ಲಿನ ಪ್ರಧಾನ ಹಿರಿಯ ದಿವಾಣಿ ಹಾಗೂ ಸಿಜೆಎಂ ನ್ಯಾಯಾಲಯವು 3 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ಆದೇಶ ಹೊರಡಿಸಿದೆ.

2015ರ ಅ. 10ರಂದು ಧಾರವಾಡದಿಂದ ನುಗ್ಗಿಕೇರಿ ಕಡೆಗೆ ಹೊರಟಿದ್ದ ಕಾರ್, ಎದುರಿಗೆ ಬರುತ್ತಿದ್ದ 2 ಬೈಕ್​ಗಳಿಗೆ ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ 1 ಬೈಕ್​ನಲ್ಲಿನ ಹುಬ್ಬಳ್ಳಿ ನವನಗರದ ಮಹ್ಮದ್ ರಫೀಕ್ ಶೇಖ್, ಇರ್ಫಾನ್ ದಾದಾಪೀರ್ ಮಿಶ್ರಿಕೋಟೆ ಎಂಬುವರು ಮೃತಪಟ್ಟಿದ್ದರೆ, ಇನ್ನೊಂದು ಬೈಕ್​ನ ಇಬ್ಬರು ಸವಾರರು ಗಂಭೀರವಾಗಿ ಗಾಯಗೊಂಡಿದ್ದರು. ಧಾರವಾಡ ರಜತಗಿರಿಯ ನಿವಾಸಿಯಾದ ಕಾರ್ ಚಾಲಕ ಅಭಿಷೇಕ ದೇಸಾಯಿ ವಿರುದ್ಧ ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ನಡೆಸಿದ್ದ ಪೊಲೀಸರು, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ಮಾಡಿದ ಪ್ರಧಾನ ಹಿರಿಯ ದಿವಾಣಿ ಹಾಗೂ ಸಿಜೆಎಂ ನ್ಯಾಯಾಲಯ ನ್ಯಾ. ಎಸ್.ವಿ. ಶ್ರೀಕಾಂತ ಅವರು, ಅಪಘಾತಕ್ಕೆ ಕಾರ್ ಚಾಲಕನ ನಿರ್ಲಕ್ಷ್ಯೇ ಕಾರಣ ಎಂದು ಅಭಿಪ್ರಾಯಪಟ್ಟು, ಚಾಲಕ ಅಭಿಷೇಕ ದೇಸಾಯಿಗೆ 3 ವರ್ಷ ಜೈಲು ಶಿಕ್ಷೆ ಹಾಗೂ 4,750 ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಹಿರಿಯ ಸಹಾಯಕ ಅಭಿಯೋಜಕ ಬಿ.ವಿ. ಪಾಟೀಲ ವಾದ ಮಂಡಿಸಿದ್ದರು.

Leave a Reply

Your email address will not be published. Required fields are marked *