ಉಪಳೇಶ್ವರ ಮಾರ್ಗದಲ್ಲಿ ಕಿಡಿಗೇಡಿಗಳ ಉಪಟಳ

ಯಲ್ಲಾಪುರ: ಯಲ್ಲಾಪುರ-ಶಿರಸಿ ರಸ್ತೆಯಲ್ಲಿ ರಾತ್ರಿ ಸಂಚರಿಸುವ ವಾಹನಗಳಿಗೆ ಕಳೆದ ಕೆಲ ದಿನಗಳಿಂದ ಉಪಳೇಶ್ವರ ಮತ್ತು ಜಂಬೇಸಾಲ ಭಾಗದಲ್ಲಿ ಕಿಡಿಗೇಡಿಗಳು ಕಲ್ಲೆಸೆಯುತ್ತಿದ್ದು, ಸವಾರರಲ್ಲಿ ಆತಂಕ ಉಂಟಾಗಿದೆ.
ಉಪಳೇಶ್ವರ ಮತ್ತು ಜಂಬೇಸಾಲ ಮಧ್ಯದ ಇಳಿಜಾರು ರಸ್ತೆಯಲ್ಲಿ ಕಾರು ಬೈಕ್ ಹಾಗೂ ಲಘು ವಾಹನಗಳನ್ನು ಗುರಿಯಾಗಿಸಿ ಕಲ್ಲು ಎಸೆಯಲಾಗುತ್ತಿದೆ. ಎರಡು ದಿನಗಳ ಹಿಂದೆ ಒಂದು ಗಂಟೆಯಲ್ಲಿ ಮೂರು ವಾಹನ ಮೇಲೆ ಕಲ್ಲೆಸೆಯಲಾಗಿದೆ. ಇದರಲ್ಲಿ ಒಂದು ಇಂಡಿಕಾ ಕಾರು, ಒಂದು ಸ್ವಿಫ್ಟ್ ಕಾರು ಹಾಗೂ ಸಾಮಗ್ರಿ ಸಾಗಣಿಕೆಯ ಲಘು ವಾಹನಕ್ಕೆ ಹಾನಿಯಾಗಿದೆ.
ದಾಂಡೇಲಿಯಿಂದ ಶಿರಸಿಯ ಕೆಲ ಹೋಟೆಲ್ ಹಾಗೂ ಅಂಗಡಿಗಳಿಗೆ ಶುದ್ಧ ಕುಡಿಯುವ ನೀರನ್ನು ಸಾಗಿಸುವ ಮಂಜುನಾಥ ಎಂಬುವವರು ಶಿರಸಿಯಿಂದ ರಾತ್ರಿ ಮರಳಿ ಬರುವಾಗ ಅವರ ವಾಹನದ ಮೇಲೆ ಕಲ್ಲು ಎಸೆಯಲಾಗಿದೆ. ವಾಹನ ನಿಲ್ಲಿಸದೇ ಯಲ್ಲಾಪುರಕ್ಕೆ ತಲುಪಿದ್ದಾರೆ. ಸಿದ್ದಾಪುರದಲ್ಲಿ ಮೃತಪಟ್ಟ ಸಂಬಂಧಿಯೊಬ್ಬರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು, ಮರಳಿ ಯಲ್ಲಾಪುರಕ್ಕೆ ಇಂಡಿಕಾ ಕಾರಿನಲ್ಲಿ ಬರುತ್ತಿದ್ದ ರಿತೀಷ ಎಂಬುವವರ ಕಾರಿಗೆ ಕಲ್ಲೆಸೆಯಲಾಗಿದೆ. ಕಲ್ಲು ಕಾರಿನ ಗ್ಲಾಸಿಗೆ ತಾಗದೇ ಪಕ್ಕದಲ್ಲಿ ತಾಗಿದ್ದು ಕಾರು ನಿಲ್ಲಿಸದೇ ಯಲ್ಲಾಪುರಕ್ಕೆ ಬಂದಿದ್ದಾರೆ. ಹಾಗೆಯೇ ಶಿರಸಿ ಮಾರ್ಗದಿಂದ ಯಲ್ಲಾಪುರಕ್ಕೆ ಬರುತ್ತಿದ್ದ ಮತ್ತೊಂದು ಸ್ವಿಫ್ಟ್ ಕಾರಿಗೆ ಕೂಡ ಕಲ್ಲು ಎಸೆಯಲಾಗಿದೆ.
ಹಿಂದೆಂದೂ ನಡೆಯದ ಇಂತಹ ಘಟನೆಗಳು ಈಗ ನಡೆಯುತ್ತಿರುವುದು ಜನರಲ್ಲಿ ಆತಂಕ ಮನೆ ಮಾಡಿದೆ. ಇಂತಹ ಕೃತ್ಯ ಎಸೆಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಹೆಚ್ಚಾಗಿದೆ.