ಉಪನ್ಯಾಸಕರ ಹಾಜರಾತಿಗೆ ಬಯೋಮೆಟ್ರಿಕ್

ಬೆಂಗಳೂರು: ಕಾಲೇಜಿಗೆ ಬಾರದೇ ವೇತನ ಪಡೆಯುವ ಉಪನ್ಯಾಸಕರ ಆಟಕ್ಕೆ ಬ್ರೇಕ್ ಹಾಕಲು ಮುಂದಾಗಿರುವ ಉನ್ನತ ಶಿಕ್ಷಣ ಇಲಾಖೆ ಉಪನ್ಯಾಸಕರ ಹಾಜರಾತಿ ಪರಿಶೀಲನೆಗೆ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೊಳಿಸಲು ನಿರ್ಧರಿಸಿದೆ.

ರಾಜ್ಯದಲ್ಲಿ 412 ಪ್ರಥಮ ದರ್ಜೆ ಕಾಲೇಜುಗಳಿದ್ದು, 17 ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಉಪನ್ಯಾಸಕರಿಗೆ ಇದು ಅನ್ವಯವಾಗಲಿದೆ.

ಉನ್ನತ ಶಿಕ್ಷಣ ಪರಿಷತ್​ನಲ್ಲಿ ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಅವರು ರಾಜ್ಯದ ವಿಶ್ವವಿದ್ಯಾಲಯಗಳ ಕುಲಪತಿಗಳು ಹಾಗೂ ಕುಲಸಚಿವರ ಜತೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಬೋಧನಾ ಸಿಬ್ಬಂದಿ ತರಗತಿಗಳಿಗೆ ಹಾಜರಾಗಿದ್ದಾರೆಯೇ? ಬೋಧನೆ ಮಾಡಿದ್ದಾರೆಯೇ? ಎಂಬುದನ್ನು ವಿದ್ಯಾರ್ಥಿಗಳು ಹಾಗೂ ಪಾಲಕರು ಕೂಡ ಪರಿಶೀಲನೆ ಮಾಡಬಹುದು. ಸದ್ಯ ಶೇ.75 ಹಾಜರಾತಿ ಪಡೆದಿರುವ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆಗಳಿಗೆ ಹಾಜರಾಗಲು ಅವಕಾಶ ಕಲ್ಪಿಸಲಾಗುತ್ತಿದೆ. ಇದೇ ರೀತಿ ಪ್ರಾಧ್ಯಾಪಕರಿಗೂ ಹಾಜರಾತಿ ಕಡ್ಡಾಯ ಮಾಡಲಾಗುತ್ತಿದೆ.

ಈ ಕುರಿತು ಮಾತನಾಡಿರುವ ಸಚಿವ ಜಿ.ಟಿ. ದೇವೇಗೌಡ, ವಿವಿಧ ಕಾಲೇಜುಗಳಲ್ಲಿ ಪ್ರಾಧ್ಯಾಪಕರು ತರಗತಿಗಳಿಗೆ ಸರಿಯಾಗಿ ಹಾಜರಾಗದ ಬಗ್ಗೆ ದೂರುಗಳು ಬಂದಿವೆ. ಈ ಬಗ್ಗೆ ನಿಗಾ ವಹಿಸಲಾಗಿದೆ. ಅಂತಿಮವಾಗಿ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು ಕಾಲೇಜುಗಳಿಗೆ ಬಂದು ಸಹಿ ಮಾಡಿ ಹರಟೆ ಹೊಡೆಯುತ್ತಿದ್ದಾರೆ, ಬೋಧನೆ ಮಾಡುತ್ತಿಲ್ಲ. ಬದಲಾಗಿ ಕಾಲೇಜಿನ ಹೊರಗೆ ತಮ್ಮ ವೈಯಕ್ತಿಕ ಕೆಲಸಗಳಿಗೆ ಹೆಚ್ಚಿನ ಆಸಕ್ತಿ ವಹಿಸುತ್ತಿದ್ದಾರೆ. ಇದರಿಂದ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ ಎಂಬ ದೂರುಗಳಿವೆ.

ನನ್ನಿಂದಲೇ ಆರಂಭ…

ಡಾ.ಎನ್. ಪ್ರಭುದೇವ್ ಅವರು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಆಗಿದ್ದ ಅವಧಿಯಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೊಳಿಸಲಾಗಿತ್ತು. ಕೊನೆಗೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಸರಿಯಾಗಿ ಪಾಲನೆ ಮಾಡದ್ದರಿಂದ ಕೈಬಿಡಲಾಗಿತ್ತು. ಇದೀಗ ಮತ್ತೆ ಹೊಸ ವ್ಯವಸ್ಥೆ ಕುರಿತು ಮಾತನಾಡಿದ ಬೆಂವಿವಿ ಕುಲಪತಿ ಪ್ರೊ. ಕೆ.ಆರ್. ವೇಣುಗೋಪಾಲ್, ನನ್ನಿಂದಲೇ ಬಯೋಮೆಟ್ರಿಕ್ ಆರಂಭ ಆಗಲಿದೆ. ಸಿಬ್ಬಂದಿ ಕೂಡ ಪಾಲಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.