ಉಪಚುನಾವಣೆಗೆ ಬಿಜೆಪಿಯಿಂದ ಮಾಸ್ಟರ್ ಪ್ಲ್ಯಾನ್

ಎಂ.ಎಸ್. ಹಿರೇಮಠ ಸಂಶಿ

ಕುಂದಗೋಳ ವಿಧಾನಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್​ಗೆ ಸೋಲಿನ ಕಹಿ ಉಣಿಸಿ, ಕಮಲದ ಅಧಿಪತ್ಯ ಸ್ಥಾಪಿಸಲು ಬಿಜೆಪಿ ಚುನಾವಣೆ ಉಸ್ತುವಾರಿಯನ್ನು ಮಾಜಿ ಸಿಎಂ ಜಗದೀಶ ಶೆಟ್ಟರ್ ಹಾಗೂ ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಹೆಗಲಿಗೆ ಹೊರಿಸಿದೆ.

ಮಾಜಿ ಸಚಿವ ಸಿ.ಎಸ್. ಶಿವಳ್ಳಿ ಅವರ ನಿಧನದಿಂದ ತೆರವಾದ ಕುಂದಗೋಳ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್ ಕ್ಷೇತ್ರ ಉಳಿಸಿಕೊಳ್ಳುವ ಕಸರತ್ತು ನಡೆಸಿದ್ದರೆ, ಬಿಜೆಪಿ ನಾಯಕರು ಕಳೆದ ಬಾರಿ ಗೆಲುವಿನ ಸನಿಹಕ್ಕೆ ಬಂದಿದ್ದ ಚಿಕ್ಕನಗೌಡ್ರನ್ನು ಗೆಲ್ಲಿಸುವ ಮೂಲಕ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಲು ಸಜ್ಜಾಗಿದ್ದಾರೆ. ಕಳೆದ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಎಸ್. ಶಿವಳ್ಳಿ ವಿರುದ್ಧ ಕೇವಲ 634 ಮತಗಳ ಅಂತರದಲ್ಲಿ ಎಸ್.ಐ. ಚಿಕ್ಕನಗೌಡ್ರ ಸೋಲುಂಡಿದ್ದರು. ಇದೀಗ ಈ ಉಪ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಮಾಜಿ ಸಚಿವ ದಿ. ಶಿವಳ್ಳಿ ಪತ್ನಿ ಕುಸá-ಮಾವತಿ ಅವರನ್ನು ಸೋಲಿಸಿ ಕಮಲ ಅರಳಿಸಲು ಬಿಜೆಪಿ ನಾಯಕರು ರಣತಂತ್ರ ಹೆಣೆದಿದ್ದಾರೆ ಎನ್ನಲಾಗಿದೆ.

ಅಭ್ಯರ್ಥಿಗಳಿಗಿಂತ ಎರಡೂ ಪಕ್ಷದ ರಾಜ್ಯ ನಾಯಕರೇ ಕುಂದಗೋಳ ಅಖಾಡವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಂತೆ ಕಾಣುತ್ತಿದೆ. ಕೈ ಅಭ್ಯರ್ಥಿ ಕುಸುಮಾ ಶಿವಳ್ಳಿ ಗೆಲುವಿನ ಜವಾಬ್ದಾರಿಯನ್ನು ಕಾಂಗ್ರೆಸ್ ಹೈಕಮಾಂಡ್ ಡಿಕೆಶಿಗೆ ನೀಡಿದ್ದರೆ, ಚಿಕ್ಕನಗೌಡ್ರ ಗೆಲುವಿಗಾಗಿ ಬಿಜೆಪಿ ಉಸ್ತುವಾರಿ ನೀಡುವಲ್ಲಿ ಭಾರಿ ಜಾಣ ನಡೆ ಅನುಸರಿಸಿದೆ. ಉಪ ಚುನಾವಣೆ ಉಸ್ತುವಾರಿಯಾಗಿ ಶೆಟ್ಟರ್ ಹಾಗೂ ಶಿಗ್ಗಾಂವಿ ಶಾಸಕ ಬಸವರಾಜ ಬೊಮ್ಮಾಯಿ ಅವರನ್ನು ನೇಮಿಸಿ, ಉಳಿದ ಪ್ರಮುಖ ನಾಯಕರಿಗೆ ಇತರ ಮಹತ್ತರ ಜವಾಬ್ದಾರಿಗಳನ್ನು ನೀಡಲಾಗಿದೆ. ಇದು ಬಿಜೆಪಿ ಗೆಲುವಿಗೆ ಪ್ಲಸ್ ಪಾಯಿಂಟ್ ಆಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಮಾಜಿ ಮುಖ್ಯಮಂತ್ರಿ ದಿ. ಎಸ್.ಆರ್. ಬೊಮ್ಮಾಯಿ ಅವರು ಮೂಲತಃ ಕುಂದಗೋಳ ತಾಲೂಕಿನ ಕಮಡೊಳ್ಳಿ ಗ್ರಾಮದವರು. ಊರಿನಲ್ಲಿ ಒಂದು ಮನೆಯಿದ್ದು, ಸಂಬಂಧಿಗಳು ವಾಸವಿದ್ದಾರೆ. ಬೊಮ್ಮಾಯಿ ಕುಟುಂಬದವರು ಈಗ ಕಾರ್ಯ ನಿಮಿತ್ತ ಬೇರೆ ಬೇರೆ ಕಡೆ ನೆಲೆಸಿದ್ದರೂ ಕುಂದಗೋಳದಲ್ಲಿ ತಮ್ಮದೇ ಆದ ರಾಜಕೀಯ ಪ್ರಭಾವ ಹೊಂದಿದ್ದಾರೆ.

ರಾಜಕೀಯ ಚಿತ್ರಣ: 1962ರಲ್ಲಿ ತಮ್ಮ ಕ್ಷೇತ್ರ ಬದಲಾಯಿಸಿದ ಎಸ್.ಆರ್. ಬೊಮ್ಮಾಯಿ ಕುಂದಗೋಳ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತರು. 1967ರಲ್ಲಿ ಸ್ಪರ್ಧಿಸಿ 20,291 ಮತಗಳಿಂದ ಗೆಲುವು ಸಾಧಿಸಿದರು. 1978ರಲ್ಲಿ ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರದ ಜೆಎನ್​ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಎಸ್.ಆರ್. ಬೊಮ್ಮಾಯಿ ಗೆಲುವು ಸಾಧಿಸಿದರು. ನಂತರ 1983, 85ರ ಚುನಾವಣೆಯಲ್ಲಿಯೂ ಜಯ ಗಳಿಸಿದ್ದಾರೆ. 1989ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್. ಸಾಂಡ್ರಾ ವಿರುದ್ಧ ಸೋಲು ಅನುಭವಿಸಿದರು.

ದಿ. ಎಸ್.ಆರ್. ಬೊಮ್ಮಾಯಿ ಅವರ ಪುತ್ರ ಬಸವರಾಜ ಬೊಮ್ಮಾಯಿ ಆಗಾಗ ಕ್ಷೇತ್ರಕ್ಕೆ ಭೇಟಿ ನೀಡುವುದರೊಂದಿಗೆ ತವರಿನಲ್ಲಿ ಪ್ರಭಾವಿಯಾಗಿ ರಾಜಕೀಯ ಹಿಡಿತ ಸಾಧಿಸಿದ್ದಾರೆ. ಇವರು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಜಲ ಸಂಪನ್ಮೂಲ ಸಚಿವರಾಗಿದ್ದರು. ಈಗ ಶಿಗ್ಗಾಂವಿ- ಸವಣೂರು ಕ್ಷೇತ್ರದ ಹಾಲಿ ಶಾಸಕರಾಗಿದ್ದಾರೆ. ಕ್ಷೇತ್ರದ ಹಿನ್ನೆಲೆ, ಸಾಧಕ- ಬಾಧಕಗಳು, ಕ್ಷೇತ್ರದ ನಾಡಿಮಿಡಿತ ಬಲ್ಲವರಾದ ಬಸವರಾಜ ಬೊಮ್ಮಾಯಿ ಅವರಿಗೆ ಸಹಜವಾಗಿ ಉಪ ಚುನಾವಣೆಯ ಉಸ್ತುವಾರಿ ಒಲಿದಿದೆ ಎಂದರೆ ತಪ್ಪಾಗದು.

ಬಿರುಸಿನ ಪ್ರಚಾರ: ಕುಂದಗೋಳವನ್ನು ಮತ್ತೆ ಪಡೆದುಕೊಳ್ಳ ಬೇಕು, ಜತೆಗೆ ಪಕ್ಷ ವಹಿಸಿಕೊಟ್ಟ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸುವ ನಿಟ್ಟಿನಲ್ಲಿ ಬಿಜೆಪಿ ಅಭ್ಯರ್ಥಿ ಚಿಕ್ಕನಗೌಡ್ರ ಪರ ಬಸವರಾಜ ಬೊಮ್ಮಾಯಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಇಬ್ಬರಿಗೂ ಕುಂದಗೋಳದ ಗೆಲುವು ಪ್ರತಿಷ್ಠೆಯ ಪ್ರಶ್ನೆಯಾಗಿದೆ.

Leave a Reply

Your email address will not be published. Required fields are marked *