ಉದ್ಯೋಗ ಸೃಷ್ಟಿಗೆ ವಿಮಾನಯಾನ ಪೂರಕ

ಕಲಬುರಗಿ: ನಗರದ ವಿಮಾನ ನಿಲ್ದಾಣ ಕಾಮಗಾರಿ ಶೀಘ್ರ ಪೂರ್ಣಗೊಂಡು ವಿಮಾನ ಹಾರಾಟ ಶುರುವಾದಲ್ಲಿ ಹೈದರಾಬಾದ್ ಕರ್ನಾಟಕದ ಸಾವಿರಾರು ಕೈಗಳಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉದ್ಯೋಗ ದೊರೆಯಲಿದೆ ಎಂದು ವಿಜಯವಾಣಿ ಸ್ಥಾನಿಕ ಸಂಪಾದಕ ವಾದಿರಾಜ ವ್ಯಾಸಮುದ್ರ ಅಭಿಪ್ರಾಯಪಟ್ಟರು.
ಎಚ್ಕೆಸಿಸಿಐ ಸಭಾಂಗಣದಲ್ಲಿ ಶುಕ್ರವಾರ ಹೈದರಾಬಾದ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯಿಂದ ಆಯೋಜಿಸಿದ್ದ ವಿಮಾನ ನಿಲ್ದಾಣದಿಂದ ಆಗುವ ಬೆಳವಣಿಗೆ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸ್ಥಾನ ಕಲಬುರಗಿ ಸೇರಿ ಹೈಕ ವಿಭಾಗದಲ್ಲಿ ಮೂಲಸೌಲಭ್ಯ ಕಲ್ಪಿಸಲಾಗುತ್ತಿದೆ. ಆದರೆ ಉದ್ಯೋಗ ಸೃಷ್ಟಿಯಂತಹ ಕೆಲಸದಲ್ಲಿ ಕೊಂಚ ಹಿಂದೆ ಬಿದ್ದಿದೆ. ವಿಮಾನ ನಿಲ್ದಾಣ ಕಾರ್ಯಚಟುವಟಿಕೆ ಶುರುವಾಗುವ ಮೂಲಕ ಈ ಸಮಸ್ಯೆಗೆ ಪರಿಹಾರ ದೊರೆಯುವ ಭರವಸೆ ಇದೆ ಎಂದರು.
ಕಂಪನಿ ಹಿಂದೇಟು: ಕಲಬುರಗಿಯಲ್ಲಿ ವಿಮಾನ ನಿಲ್ದಾಣದಲ್ಲಿ ಸೌಲಭ್ಯವಿಲ್ಲ ಎಂಬ ಏಕೈಕ ಕಾರಣಕ್ಕೆ ಇಲ್ಲಿಗೆ ಬರಬಹುದಾಗಿದ್ದ ಅನೇಕ ಬಹುರಾಷ್ಟ್ರೀಯ ಕಂಪನಿಗಳು ಹಿಂದೆ ಸರಿದಿವೆ. ಹೀಗಾಗಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಬಹುದಾದ ಅವಕಾಶದಿಂದ ವಂಚಿತವಾಗಿದೆ. ಆದರೀಗ ವಿಮಾನಯಾನ ಆರಂಭದ ಮೂಲಕ ಬಹುದಿನಗಳ ಬೇಡಿಕೆ ಈಡೇರುವಂತಾಗಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಎಚ್ಕೆಸಿಸಿಐ ಅಧ್ಯಕ್ಷ ಅಮರನಾಥ ಸಿ.ಪಾಟೀಲ್ ಮಾತನಾಡಿ, ಕಲಬುರಗಿ ವಿಮಾನ ನಿಲ್ದಾಣಕ್ಕಾಗಿ ದಶಕಗಳಿಂದ ಹೋರಾಟ ನಡೆದಿದ್ದರಿಂದ ಇದೀಗ ಒಂದು ಹಂತಕ್ಕೆ ಬಂದಿದೆ. ಕೈಗಾರಿಕೆಗಳ ಸ್ಥಾಪನೆ, ಉದ್ಯೋಗ ಸೃಷ್ಟಿಗೂ ಪೂರಕವಾಗಲಿದೆ. ಉದ್ಭವಿಸಿರುವ ತಾಂತ್ರಿಕ ತೊಂದರೆಗಳಿಗೆ ಸೂಕ್ತ ಪರಿಹಾರ ಕಂಡುಕೊಂಡು ಶೀಘ್ರ ಶುರು ಮಾಡಬೇಕು ಎಂದು ಆಗ್ರಹಿಸಿದರು.
ಕಲಬುರಗಿ ವಿಮಾನ ನಿಲ್ದಾಣದ ನಿರ್ದೇಶಕ ಸುಶೀಲ್ ಶ್ರೀವಾತ್ಸವ್ ಮಾತನಾಡಿ, ಈ ಭಾಗದ ಬಹುದಿನಗಳ ಕನಸು ನನಸಾಗುವ ದಿನಗಳು ದೂರ ಇಲ್ಲ. ಎರಡು ತಿಂಗಳಲ್ಲಿ ಪೂರ್ಣಪ್ರಮಾಣದಲ್ಲಿ ಶುರು ಆಗಲಿದೆ. ಈ ಭಾಗದ ಅಭಿವೃದ್ಧಿ ಜತೆಗೆ ವಿದ್ಯಾರ್ಥಿ, ಯುವಕರಿಗೂ ಅನುಕೂಲವಾಗಲಿದೆ ಎಂದರು.
ಪ್ರಮುಖರಾದ ಆನಂದ ದಂಡೋತಿ, ವೀರೇಶ ಸ್ವಾಮಿ ಉಪಸ್ಥಿತರಿದ್ದರು. ಎಚ್ಎಸಿಸಿಐ ಉಪಾಧ್ಯಕ್ಷ ಶರಣು ಪಪ್ಪಾ ಸ್ವಾಗತಿಸಿದರು. ರವಿಕುಮಾರ ಸರಸಂಬಿ ವಂದಿಸಿದರು. ಕನರ್ಾಟಕ ಕಾರ್ಯನಿರತ ಪತ್ರಕರ್ತರ ಸಂಘ ನೀಡಿದ ಹಿರಿಯ ಪತ್ರಕರ್ತ ನಾಗೇಂದ್ರರಾವ್ ಹೆಸರಿನ ಪ್ರಶಸ್ತಿ ಪಡೆದ ವಾದಿರಾಜ ವ್ಯಾಸಮುದ್ರ ಅವರನ್ನು ಸಂಸ್ಥೆ ಪದಾಧಿಕಾರಿಗಳು ಸನ್ಮಾನಿಸಿದರು.

ವಿದ್ಯಾರ್ಥಿಗಳೊಂದಿಗೆ ಸಂವಾದ: ವಿಚಾರ ಸಂಕಿರಣದಲ್ಲಿ ಹಿರಿಯರು, ವಿದ್ಯಾರ್ಥಿಗಳು ಕುತೂಹಲಕಾರಿ ಪ್ರಶ್ನೆ ಕೇಳಿ ಗಮನ ಸೆಳೆದರು. ಕಲಬುರಗಿ ವಿಮಾನ ನಿಲ್ದಾಣ ಯಾವಾಗ ಆರಂಭವಾಗುತ್ತದೆ? ಉಡಾನ್ ಯೋಜನೆಯಡಿ ಸೇರಿಸಲಾಗುತ್ತಿದೆಯಾ? ನಿಲ್ದಾಣ ಆರಂಭಕ್ಕೆ ಚುನಾವಣೆ ನೀತಿ ಸಂಹಿತೆ ಅಡ್ಡಿಯಾಗುವುದೇ? ಪ್ರವಾಸೋದ್ಯಮ ವಿಭಾಗದ ವಿದ್ಯಾರ್ಥಿಗಳಿಗೆ ವಿಮಾನ ನಿಲ್ದಾಣ ವೀಕ್ಷಣೆಗೆ ಅವಕಾಶವಿದೆಯಾ ಎಂಬಿತ್ಯಾದಿ ಪ್ರಶ್ನೆ ಕೇಳಿದರು. ಎಚ್ಕೆಸಿಇಐ ಮಾಜಿ ಅಧ್ಯಕ್ಷರಾದ ರಾಧಾಕೃಷ್ಣ ರಘೋಜಿ, ಡಾ.ಎಸ್.ಎಸ್. ಪಾಟೀಲ್ ಕಡಗಂಚಿ, ಮನೀಷ್ ಜಾಜು, ಉಪನ್ಯಾಸಕ ಪ್ರಸಾದ, ವಿದ್ಯಾರ್ಥಿಗಳಾದ ಪಲ್ಲವಿ ಇತರರು ಹಲವಾರು ಪ್ರಶ್ನೆ ಕೇಳಿದರು. ಎಲ್ಲರ ಪ್ರಶ್ನೆಗಳನ್ನು ಆಲಿಸಿದ ವಿಮಾನ ನಿಲ್ದಾಣದ ನಿರ್ದೇಶಕ ಸುಶೀಲ್ ಶ್ರೀವಾತ್ಸವ್ ಎರಡು ತಿಂಗಳಲ್ಲಿ ವಿಮಾನ ನಿಲ್ದಾಣ ಆರಂಭವಾಗಲಿದೆ ಎಂದು ಉತ್ತರಿಸಿದರು.