ಉದ್ಯೋಗ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ

ಚಿಕ್ಕಬಳ್ಳಾಪುರ: ಸೂಲಾಲಪ್ಪದಿನ್ನೆ ಎಸ್​ಜೆಸಿಐಟಿ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳಕ್ಕೆ ಉತ್ತವ ಪ್ರತಿಕ್ರಿಯೆ ವ್ಯಕ್ತವಾಯಿತು.

ಕರ್ನಾಟಕ ಕೌಶಲ ಮಿಷನ್, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮ, ಜಿಲ್ಲಾಡಳಿತ, ಜಿಪಂ ಹಾಗೂ ಆಳ್ವಾಸ್ ಎಜುಕೇಷನ್ ಫೌಂಡೇಷನ್ ವತಿಯಿಂದ ಕೈಗೊಂಡಿದ್ದ ಮೇಳಕ್ಕೆ ಜಿಲ್ಲೆ ಮಾತ್ರವಲ್ಲದೆ, ದೇವನಹಳ್ಳಿ, ದೊಡ್ಡಬಳ್ಳಾಪುರ ಸೇರಿ ವಿವಿಧೆಡೆಯಿಂದ 11 ಸಾವಿರಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಪಾಲ್ಗೊಂಡು ಸಂದರ್ಶನ ಎದುರಿಸಿದರು. ಇನ್ನೂ ಕಂಪನಿಯ ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗದ ಸಿಬ್ಬಂದಿ ಆಕಾಂಕ್ಷಿಗಳಿಗೆ ಉದ್ಯೋಗ, ಸಿಗುವ ವೇತನ ಮತ್ತು ಸವಲತ್ತು ಕುರಿತು ಮಾಹಿತಿ ನೀಡಿದರು.

109 ಕಂಪನಿಗಳು ಭಾಗಿ: ಮೇಳದಲ್ಲಿ ಬಯೋಟೆಕ್, ಬಾಸ್ಕ್, ಟೆಕ್ ಮಹೇಂದ್ರ, ಐಟಿಸಿ, ಎಲ್​ಎಂ ಯೂರಿಂಡ್ ಪವರ್, ತಾಜ್, ಹೋಂಡಾ, ಸಿಪ್ಲಾ, ಟೈಟಾನ್, ಆಕ್ಸಿಸ್ ಬ್ಯಾಂಕ್ ಸೇರಿ 109 ಕಂಪನಿಗಳು ಪಾಲ್ಗೊಂಡಿದ್ದವು. ಆರೋಗ್ಯ, ವಿಮೆ, ಬ್ಯಾಂಕಿಂಗ್ ಜತೆಗೆ ವಿವಿಧ ಕ್ಷೇತ್ರಗಳಲ್ಲಿನ ಮಾರ್ಕೆಟಿಂಗ್, ಸೂಪರ್​ವೈಸರ್, ನಿರ್ವಾಹಕರ ಹುದ್ದೆಗೆ ಆಕಾಂಕ್ಷಿಗಳನ್ನು ವಿದ್ಯಾರ್ಹತೆಗೆ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳಲಾಯಿತು. ಮೇಳದ ಪ್ರವೇಶ ದ್ವಾರದಲ್ಲಿ ಆಕಾಂಕ್ಷಿಗಳಿಗಾಗಿ ಪ್ರತ್ಯೇಕ ಮಾರ್ಗದರ್ಶಿ ಕೇಂದ್ರ ಸ್ಥಾಪಿಸಲಾಗಿತ್ತು. ವಿವಿಧ ಹುದ್ದೆಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಕೌಂಟರ್ ತೆರೆಯಲಾಗಿತ್ತು. ಆಕಾಂಕ್ಷಿಗಳಿಗೆ ಊಟದ ವ್ಯವಸ್ಥೆ ಕೈಗೊಳ್ಳಲಾಗಿತ್ತು.

ಹೂಡಿಕೆಯಲ್ಲಿ ರಾಜ್ಯ ಮೊದಲು: ದೇಶದಲ್ಲಿ ಅತಿ ಹೆಚ್ಚು ಉದ್ಯೋಗ ಸೃಷ್ಟಿ ಹಾಗೂ ಬಂಡವಾಳ ಹೂಡಿಕೆಯಲ್ಲಿ ರಾಜ್ಯ ಮೊದಲನೇ ಸ್ಥಾನದಲ್ಲಿದೆ ಎಂದು ಸಂಸದ ಎಂ.ವೀರಪ್ಪ ಮೊಯ್ಲಿ ಹೇಳಿದರು. ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವಧಿಯಲ್ಲಿ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಹಾಗೂ ಉದ್ಯೋಗ ಸೃಷ್ಟಿಯಾಗಿತ್ತು. ಸಮಿಶ್ರ ಸರ್ಕಾರ ಇದನ್ನು ಮುಂದುವರಿಸಿಕೊಂಡು ಹೋಗಬೇಕಿದೆ. ದೇಶದಲ್ಲಿ ಪ್ರತಿವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸಲು ಕೇಂದ್ರ ಸರ್ಕಾರದಿಂದ ಸಾಧ್ಯವಾಗಿಲ್ಲ. ವಿದೇಶಿ ಬಂಡವಾಳ ಹೂಡಿಕೆ ಕಡಿಮೆಯಾಗುತ್ತಿದೆ ಎಂದು ಆರೋಪಿಸಿದರು.

ಜಿಲ್ಲೆಯ ನಿರುದ್ಯೋಗ ಯುವಕರ ಭವಿಷ್ಯ ನಿರ್ವಿುಸುವ ಉದ್ದೇಶದಿಂದ ಮೇಳ ಆಯೋಜಿಸಲಾಗಿದೆಯೇ ಹೊರತು ರಾಜಕೀಯ ಉದ್ದೇಶವಿಲ್ಲ. ಮೇಳದಲ್ಲಿ ಭಾಗವಹಿಸಿರುವ ವಿವಿಧ ಕಂಪನಿಗಳಲ್ಲಿ 16,122 ಉದ್ಯೋಗಗಳು ಖಾಲಿ ಇವೆ. ಆನ್​ಲೈನ್​ನಲ್ಲಿ ನೋಂದಣಿಯಾದ 11,066 ನಿರುದ್ಯೋಗಿಗಳಿಗೆ ಅಗತ್ಯ ಕೌಶಲ ತರಬೇತಿ ನೀಡಿ ಸಜ್ಜುಗೊಳಿಸಲಾಗಿದೆ. ಕೌಶಲ ಅನುಗುಣವಾಗಿ ಉದ್ಯೋಗ ದೊರೆಯಲಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಮಾತನಾಡಿ, ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ಪದವಿಗಳನ್ನು ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಉದ್ಯೋಗ ದೊರೆಯುತ್ತಿಲ್ಲ. ಅಲ್ಲದೆ ಎಸ್ಸೆಸ್ಸೆಲ್ಸಿ, ಪಿಯುಸಿ ಉತ್ತೀರ್ಣ, ಅನುತ್ತೀರ್ಣಗೊಂಡವರು ಉದ್ಯೋಗಕ್ಕಾಗಿ ಅಲೆದಾಡುವಂತಾಗಿದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದರು.

ಜಿಪಂ ಅಧ್ಯಕ್ಷ ಎಚ್.ವಿ.ಮಂಜುನಾಥ್, ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣಪ್ಪ, ಜಿಲ್ಲಾಧಿಕಾರಿ ಪಿ.ಅನಿರುಧ್ ಶ್ರವಣ್, ಜಿಪಂ ಸಿಇಒ ಗುರುದತ್ ಹೆಗಡೆ, ಹೆಚ್ಚುವರಿ ಜಿಲ್ಲಾಧಿಕಾರಿ ಆರತಿ ಆನಂದ್, ಎಸ್ಪಿ ಕಾರ್ತಿಕ್​ರೆಡ್ಡಿ, ಉಪವಿಭಾಗಾಧಿಕಾರಿ ಬಿ.ಶಿವಸ್ವಾಮಿ, ಮಾಜಿ ಶಾಸಕರಾದ ಎನ್.ಸಂಪಂಗಿ, ವೆಂಕಟಸ್ವಾಮಿ ಮತ್ತಿತರರಿದ್ದರು.