ಉದ್ಯೋಗ ಖಾತ್ರಿ ಯೋಜನೆ ಚುರುಕುಗೊಳಿಸಿ

ಹಾವೇರಿ: ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ಜನರ ಬೇಡಿಕೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು. ಕೊಳವೆ ಬಾವಿಯಲ್ಲಿ ನೀರಿನ ಇಳುವರಿ ಕಡಿಮೆಯಾದಲ್ಲಿ, ನೀರು ಪೂರೈಕೆ ಮಾಡಲು ಸಾಧ್ಯವಾಗದ ಗ್ರಾಮಗಳಿಗೆ ಟ್ಯಾಂಕರ್ ಬಳಿಸಿ ನೀರು ಪೂರೈಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲೆಯ ಕುಡಿಯುವ ನೀರು ಹಾಗೂ ಉದ್ಯೋಗ ಖಾತ್ರಿ ಯೋಜನೆಯ ಪ್ರಗತಿ ಕುರಿತು ಮಂಗಳವಾರ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ವಿವಿಧ ತಾಪಂ ಇಒಗಳ ಸಭೆ ನಡೆಸಿ ಅವರು ಮಾತನಾಡಿದರು. ಕುಡಿಯುವ ನೀರಿನ ಸಮಸ್ಯೆ ಆಲಿಸಲು ಸ್ಥಾಪಿಸಲಾದ ಸಹಾಯವಾಣಿಗಳ ಸೇವೆಯಲ್ಲಿ ಯಾವುದೇ ನ್ಯೂನತೆಯಾಗದಂತೆ ಕಾರ್ಯನಿರ್ವಹಿಸಬೇಕು. ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು. ಉದ್ಯೋಗ ಖಾತ್ರಿ ಯೋಜನೆಯನ್ನು ಚುರುಕುಗೊಳಿಸಬೇಕು ಎಂದರು.

ಖಾಸಗಿ ಕೊಳವೆ ಬಾವಿ ಮೂಲಕ ಕುಡಿಯುವ ನೀರು ಪೂರೈಸುವ ಗ್ರಾಮಗಳಲ್ಲಿ ನೀರಿನ ಇಳುವರಿ ಕಡಿಮೆಯಾಗುತ್ತಿರುವ ಮಾಹಿತಿ ಬಂದಿದೆ. ಈ ಕುರಿತು ಅಂತರ್ಜಲ ಇಲಾಖೆಯಿಂದ ಪರಿಶೀಲಿಸಿ, ನಿಗದಿತ ಪ್ರಮಾಣದಲ್ಲಿ ಜನರಿಗೆ ನೀರು ಪೂರೈಸಲು ಪರ್ಯಾಯ ಕ್ರಮಗಳ ಬಗೆಗೆ ಕ್ರಮವಹಿಸಬೇಕು. ಟ್ಯಾಂಕರ್ ಮೂಲಕ ನೀರು ಪೂರೈಸುವುದು ಅನಿವಾರ್ಯವಾದರೆ ತ್ವರಿತವಾಗಿ ಟ್ಯಾಂಕರ್ ಬಳಸಿ ಎಂದು ಸೂಚಿಸಿದರು.

ಈ ವಾರ ಮಳೆಯಾಗದಿದ್ದರೆ ಮತ್ತಷ್ಟು ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ಬ್ಯಾಡಗಿ ಹಾಗೂ ಹಿರೇಕೆರೂರು ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಬಹುದು. ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಿ ಪರ್ಯಾಯ ನೀರು ಪೂರೈಕೆಗೆ ಕ್ರಿಯಾಯೋಜನೆ ಸಿದ್ಧಪಡಿಸಿಕೊಳ್ಳಿ. ಜನರು ನೀರಿನ ಸಮಸ್ಯೆ ಕುರಿತಂತೆ ದೂರು ಸಲ್ಲಿಸಿದ ತಕ್ಷಣ ಸ್ಪಂದಿಸಿ ನೀರು ಒದಗಿಸಬೇಕು ಎಂದರು.

ನರೇಗಾ ಕಾಮಗಾರಿಗಳನ್ನು ಚುರುಕುಗೊಳಿಸಬೇಕು. ನಿಗದಿತ ಗುರಿಯಂತೆ ತಾಲೂಕಾವಾರು ಮಾನವ ದಿನಗಳ ಸೃಜನೆಯಾಗಬೇಕು. ಕೆರೆ ಹೂಳೆತ್ತುವುದು, ಕೊಳವೆ ಬಾವಿಗಳ ಜಲಮರುಪೂರಣ, ಕಾಲುವೆಗಳ ಸ್ವಚ್ಛತೆ, ಬದು, ಚೆಕ್​ಡ್ಯಾಂ, ಕೃಷಿ ಹೊಂಡ ನಿರ್ಮಾಣ ಸೇರಿ ಜಲಮೂಲಗಳ ಹಾಗೂ ಜಲಸಂಗ್ರಹಗಳ ಪುನಶ್ಚೇತನಕ್ಕೆ ಆದ್ಯತೆ ನೀಡಬೇಕು ಎಂದು ತಾಪಂ ಇಒಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ ಇಲಾಖೆ ಸೇರಿ ಜಿಪಂ ಲೈನಿಂಗ್ ಇಲಾಖೆಗಳು ಖಾತ್ರಿಯಡಿ ಕಾಮಗಾರಿಗಳನ್ನು ಚುರುಕುಗೊಳಿಸಬೇಕು. ನಿಗದಿತ ಗುರಿಯಂತೆ ಕಾಲಮಿತಿಯೊಳಗೆ ಕಾಮಗಾರಿಗಳ ಅನುಷ್ಠಾಗೊಳಿಸಿ ಮಾನವ ದಿನಗಳನ್ನು ಸೃಜಿಸಬೇಕು. ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದಿಂದ ಕೆರೆಗಳ ಪುನಶ್ಚೇತನ, ರಸ್ತೆ ಕಾಮಗಾರಿಗಳನ್ನು ಈ ವಾರದಲ್ಲಿಯೇ ಆರಂಭಿಸುವಂತೆ ಸೂಚಿಸಿದರು.

ಬ್ಯಾಡಗಿ ಮತ್ತು ಹಾನಗಲ್ಲನಲ್ಲಿ ಶುಂಠಿ ಕೃಷಿ ಹಿನ್ನೆಲೆಯಲ್ಲಿ ನರೇಗಾ ಕಾಮಗಾರಿಗೆ ಕೂಲಿಕಾರರ ಕೊರತೆ ಉಂಟಾಗಿದೆ. ವಾರದಲ್ಲಿ ಶುಂಠಿ ಬೆಳೆ ಬೇಸಾಯ ಕೆಲಸ ಮುಕ್ತಾಯಗೊಳ್ಳಲಿದೆ. ಉದ್ಯೋಗ ಖಾತ್ರಿ ಕಾಮಗಾರಿಗೆ ಕೂಲಿಕಾರರು ಆಗಮಿಸಲಿದ್ದು, ನಿಗದಿತ ಗುರಿಯನ್ನು ಸಾಧಿಸಲಾಗುವುದು ಎಂದು ಬ್ಯಾಡಗಿ, ಹಾನಗಲ್ಲ ಇಒಗಳು ಮಾಹಿತಿ ನೀಡಿದರು.

ಕುಡಿಯುವ ನೀರಿನ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸಲು ಈಗಾಗಲೇ ಎಲ್ಲ ಪಿಡಿಒಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ. ಸ್ಥಳದಲ್ಲಿಯೇ ಇದ್ದು ಜನರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸುತ್ತಿದ್ದಾರೆ. ನಿಗದಿಯಂತೆ ಪ್ರತಿದಿನಕ್ಕೆ ತಲಾ 40 ಲೀಟರ್​ನಂತೆ ನೀರನ್ನು ಪೂರೈಸಲಾಗುತ್ತಿದೆ ಎಂದರು.

ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಸಕ್ತ ಸಾಲಿನಲ್ಲಿ ನರೇಗಾದಲ್ಲಿ ವಾರ್ಷಿಕ 42 ಲಕ್ಷ ಮಾನವ ದಿನಗಳ ಗುರಿ ನಿಗದಿಪಡಿಸಲಾಗಿದೆ. ಜಲಮೂಲಗಳ ಪುನಶ್ಚೇತನಕ್ಕೆ ಹಾಗೂ ಜಲಸಂಗ್ರಹಗಳ ಪುನಶ್ಚೇತನ ಕಾಮಗಾರಿಗಳಿಗೆ ಆದ್ಯತೆ ನೀಡಲಾಗಿದೆ. ಬರದ ಸಂದರ್ಭದಲ್ಲಿ ಜನರಿಗೆ ಉದ್ಯೋಗ ನೀಡಲು ಗ್ರಾಪಂಗಳಲ್ಲಿ ಕಾಮಗಾರಿಗಳನ್ನು ಆರಂಭಿಸಲಾಗಿದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ 5.8 ಲಕ್ಷ ಮಾನದ ದಿನಗಳ ಸೃಜನೆ ಗುರಿಗೆ 4.6 ಲಕ್ಷ ಗುರಿ ಸಾಧಿಸಲಾಗಿದೆ. ಶೇ. 78.86ರಷ್ಟು ಸಾಧನೆ ಮಾಡಲಾಗಿದೆ.

| ಕೆ. ಲೀಲಾವತಿ, ಜಿಪಂ ಸಿಇಒ

ನೋಟಿಸ್ ಜಾರಿ

ಬರ ಪರಿಶೀಲನೆ ಸಭೆಗಳಿಗೆ ಸತತವಾಗಿ ಗೈರು ಹಾಜರಾಗುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಲು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ಸೂಚಿಸಿದರು. ಈ ಕುರಿತು ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆಯಲು ತೀರ್ವನಿಸಿದ್ದಾಗಿ ತಿಳಿಸಿದರು

Leave a Reply

Your email address will not be published. Required fields are marked *