ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅವ್ಯವಹಾರ

ಗದಗ: ತಾಲೂಕಿನ ಲಕ್ಕುಂಡಿ ಗ್ರಾಮ ಪಂಚಾಯಿತಿಯಲ್ಲಿ 2015-16, 2016-17 ಹಾಗೂ 2017-18ನೇ ಸಾಲಿನ ಉದ್ಯೋಗ ಖಾತ್ರಿ ಯೋಜನೆಯಡಿ ಭಾರಿ ಅವ್ಯವಹಾರ ಆಗಿರುವುದು ಬೆಳಕಿಗೆ ಬಂದಿದೆ. ಅರೆಬರೆ ಕೆಲಸ ಮಾಡಿ ಲಕ್ಷಾಂತರ ರೂಪಾಯಿ ಹಣವನ್ನು ತೆಗೆದುಕೊಂಡಿದ್ದಾರೆ. ಕೆಲವೆಡೆ ಕೆಲಸವನ್ನೇ ಮಾಡದೆ ಹಣ ಪಾವತಿಸಿಕೊಂಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

ಗ್ರಾಮದಲ್ಲಿರುವ ಸ್ಮಶಾನದ ಚರಂಡಿ ಮತ್ತು ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ಕೆಲಸ ಮಾಡಿದಂತೆ ತೋರಿಸಿ ಹಣ ಪಾವತಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ದುರುಗಮ್ಮನ ಕೆರೆಯ ಹೂಳು ತೆಗೆದು ಮಣ್ಣನ್ನು ಜನತಾ ಪ್ಲಾಟ್​ನಲ್ಲಿ ರಸ್ತೆಗೆ ಹಾಕಲಾಗಿದೆ. ಈ ಕಾಮಗಾರಿಗೆ 14ನೇ ಹಣಕಾಸು ಹಾಗೂ ಉದ್ಯೋಗ ಖಾತ್ರಿ ಯೋಜನೆ ಸೇರಿ ಎರಡೂ ಯೋಜನೆಯಡಿ ಹಣ ಪಾವತಿಸಲಾಗಿದೆ. ಗ್ರಾಮದಲ್ಲಿ ಅಬ್ದುಲ್ ಸಾಬ್ ಹೆಸರಿನ ಕೆರೆಯೇ ಇಲ್ಲ. ಆದರೂ ಈ ಹೆಸರಿನ ಕೆರೆಯ ಹೂಳೆತ್ತಲಾಗಿದೆ ಎಂದು ಹಣ ತೆಗೆದುಕೊಳ್ಳಲಾಗಿದೆ.

ಹಾಲಗುಂಡಿ ಬಸವಣ್ಣನ ಕೆರೆಗೆ ಉಪಕಾಲುವೆ ಕಾಮಗಾರಿ, ದುರುಗಮ್ಮನ ಕೆರೆ ಹೂಳೆತ್ತುವ ಕಾಮಗಾರಿ, ನಮಾಜ್ ಗಟ್ಟಿಯಿಂದ ಪೊಲೀಸ್​ಪಾಟೀಲರ ಹೊಲದವರೆಗೆ ರಸ್ತೆ ದುರಸ್ತಿ ಕಾಮಗಾರಿಯಲ್ಲಿ ಅವ್ಯವಹಾರವಾಗಿದೆ. ರಾಷ್ಟ್ರೀಯ ಹೆದ್ದಾರಿ 63ರಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ರಸ್ತೆ (ಹಾತಲಗೇರಿ ರಸ್ತೆ) ಡಾಂಬರ್ ರಸ್ತೆ ಇದ್ದರೂ ಅದಕ್ಕೆ ಎನ್​ಆರ್​ಇಜಿಯಲ್ಲಿ ಹಣ ಪಾವತಿಸಲಾಗಿದೆ ಹಾಗೂ ಕಾಂಕ್ರಿಟ್ ರಸ್ತೆ ಇದ್ದರೂ ಕೂಡ ಮಾಣಿಕೇಶ್ವರ ದೇವಸ್ಥಾನವರೆಗಿನ ರಸ್ತೆ ಕಾಮಗಾರಿ ಮಾಡಿದ್ದೇವೆ ಎಂದು ಹಣ ತೆಗೆದುಕೊಳ್ಳಲಾಗಿದೆ.

ಅಬ್ದುಲ್ ಸಾಬ ಕೆರೆ, ಬೆಳ್ಳಿಗೌಡರ ಕೆರೆ, ಅಜವಾನ್ ಕೆರೆ, ಉಮಚಗಿ ಕೆರೆ, ಮುಸ್ಕಿನಬಾವಿ ಕೆರೆ, ಶಾನಬೋಗರ ಕೆರೆ, ಲಕ್ಷ್ಮಪ್ಪನ ಕೆರೆ, ಗುಂಜಳದ ಕೆರೆ, ಗದ್ದಿ ಕೆರೆ, ಬೂದಿಹಾಳರ ಕೆರೆಯಲ್ಲಿ ಅರೆಬರೆ ಕೆಲಸ ಮಾಡಿ ಲಕ್ಷಾಂತರ ರೂ. ಖರ್ಚು ತೋರಿಸಲಾಗಿದೆ. ಲಕ್ಕುಂಡಿ ಉತ್ಸವ ವೇದಿಕೆಯಿಂದ ಅತ್ತಿಮಬ್ಬೆ ಮಹಾದ್ವಾರದವರೆಗೆ ಕಾಂಕ್ರಿಟ್ ರಸ್ತೆ ಇದ್ದರೂ ಕೂಡ ರಸ್ತೆ ಅಭಿವೃದ್ಧಿಪಡಿಸುವುದು, ಎನ್​ಎಚ್ 63ರಿಂದ (ಅತ್ತಿಮಬ್ಬೆ ಮಹಾದ್ವಾರ) ಯಾತ್ರಿ ನಿವಾಸವರೆಗೆ ರಸ್ತೆ ಅಭಿವೃದ್ಧಿ ಎಂದು ಲಕ್ಷಾಂತರ ರೂ. ಹಣ ಪಾವತಿಸಲಾಗಿದೆ.

ಲೋಕಾಯುಕ್ತರಿಗೆ ದೂರು

ಲಕ್ಕುಂಡಿ ಗ್ರಾ.ಪಂ.ನಲ್ಲಿ ಕ್ರಿಯಾಯೋಜನೆ ಹಾಗೂ ಅಂದಾಜು ಪತ್ರಿಕೆ ಇಲ್ಲದೆ ಕಾಮಗಾರಿ ಮಾಡಿ ಹಣ ಪಾವತಿಸಲಾಗಿದೆ ಎಂಬ ದೂರಿದೆ. ಇದೇ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಬೆಂಗಳೂರು ಲೋಕಾಯುಕ್ತ ಕಚೇರಿ ಹಾಗೂ ಗ್ರಾಮೀಣಾಭಿವೃದ್ಧಿ ಆಯುಕ್ತರಿಗೆ ದೂರು ಸಲ್ಲಿಸಲಾಗಿದೆ. ಈ ಅವ್ಯವಹಾರದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಪಿಡಿಒ ಶಾಮೀಲಾಗಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಉಸ್ಮಾನಸಾಬ್ ನಮಾಜಿ ಆರೋಪಿಸಿದ್ದಾರೆ.