ಉದ್ಯಾನಕ್ಕೆ ಬೀಗ, ತೆರೆಯಿರಿ ಬೇಗ

ಶಿರಸಿ: ನಗರದ ಮರಾಠಿಕೊಪ್ಪ ಬೆಳ್ಳಕ್ಕಿ ಕೆರೆ ಸಮೀಪ ಕರಾವಳಿ ಅಭಿವೃದ್ಧಿ ಪ್ರಾಧಿಕಾರವು 40 ಲಕ್ಷ ರೂ. ವೆಚ್ಚದಲ್ಲಿ ಉದ್ಯಾನ ನಿರ್ವಿುಸಿದೆ. ಆದರೆ, ನಗರಸಭೆ ತನ್ನ ಸುಪರ್ದಿಗೆ ತೆಗೆದುಕೊಳ್ಳದ ಕಾರಣ ಉದ್ಯಾನಕ್ಕೆ ಕಳೆದ ನಾಲ್ಕು ತಿಂಗಳಿಂದ ಬೀಗ ಜಡಿಯಲಾಗಿದ್ದು, ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಉದ್ಯಾನಕ್ಕಾಗಿ ಹುಲೇಮಳಗಿಯ ತಿಮ್ಮಪ್ಪ ಹೆಗಡೆ ಎಂಬುವವರು ಜಾಗ ನೀಡಿದ್ದಾರೆ. 2017ರಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ನಿವೇದಿತ ಆಳ್ವಾ ಅವರು ಉದ್ಯಾನ ನಿರ್ವಣಕ್ಕಾಗಿ 40 ಲಕ್ಷ ರೂ. ಮಂಜೂರು ಮಾಡಿ, ಭೂ ಸೇನಾ ನಿಗಮಕ್ಕೆ ವಹಿಸಿದ್ದರು. ಉದ್ಯಾನದ ಒಳಗೆ ಮಕ್ಕಳ ಆಟೋಪಕರಣಗಳು, ವಿಶ್ರಮಿಸಲು ಆಸನಗಳು, ಶೌಚಗೃಹ, ಬೇಕರಿ ಅಥವಾ ಸಣ್ಣ ಹೋಟೆಲ್​ಗಾಗಿ ಕಟ್ಟಡವನ್ನು ಭೂ ಸೇನಾ ನಿಗಮ ಸಿದ್ಧಪಡಿಸಿದೆ. ಉದ್ಯಾನವನ್ನು ನಗರಸಭೆ ಸ್ವಾಧೀನಕ್ಕೆ ಪಡೆದು ಸಾರ್ವಜನಿಕರ ಪ್ರವೇಶಕ್ಕೆ ಮುಕ್ತಗೊಳಿಸಬೇಕಿತ್ತಾದರೂ ಕಳೆದ ಆರು ತಿಂಗಳುಗಳಿಂದ ಈ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ. ಉದ್ಯಾನದಲ್ಲಿ ಅಳವಡಿಸಿದ ಮಕ್ಕಳ ಆಟೋಪಕರಣಗಳ ಖರೀದಿ ಕುರಿತ ದಾಖಲೆಗಳನ್ನು ಸಲ್ಲಿಸುವಂತೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ ನಗರಸಭೆ ಕೇಳಿದೆ. ಆದರೆ, ದಾಖಲೆಗಳನ್ನು ಒದಗಿಸದ ಕಾರಣ ಹಸ್ತಾಂತರಕ್ಕೆ ಹಿನ್ನಡೆಯಾಗಿದೆ.

ಈ ನಡುವೆ ಉದ್ಯಾನ ನಿರ್ವಹಣೆ ಬಗ್ಗೆ ನಗರಸಭೆ ಚಿಂತೆಗೀಡಾಗಿದೆ. ಈಗಾಗಲೇ ಸಿಬ್ಬಂದಿ ಕೊರತೆಯಿಂದ ನಗರಸಭೆ ಹೈರಾಣಾಗಿದೆ. ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದ ಪಕ್ಕದಲ್ಲಿ ನಿರ್ವಿುಸಲಾದ ಈಜುಗೊಳವನ್ನು ಹಸ್ತಾಂತರಿಸಿಕೊಂಡ ಬಳಿಕ ನಿರ್ವಹಿಸಲು ಹೆಣಗಾಡುತ್ತಿರುವ ನಗರಸಭೆ, ಈ ಉದ್ಯಾನಕ್ಕೆ ಯಾರನ್ನು ನೇಮಿಸುವುದು ಎಂದು ಆಲೋಚಿಸುತ್ತಿದೆ.

ಉದ್ಯಾನದಲ್ಲಿನ ಹಸಿರು ಕಾಯ್ದುಕೊಳ್ಳುವ ಜವಾಬ್ದಾರಿ ಈಗ ಭೂ ಸೇನಾ ನಿಗಮದ ಮೇಲೆ ಬಿದ್ದಿದೆ. ಉದ್ಯಾನದ ಒಳಗಡೆ ಬೋರ್​ವೆಲ್ ಕೊರೆಸಿ ಪಂಪ್ ಮೂಲಕ ನೀರುಣಿಸ್ತುತಿರುವ ಭೂ ಸೇನಾ ನಿಗಮದ ಸಿಬ್ಬಂದಿ, ಸ್ಥಳೀಯರ ಆಕ್ರೋಶಕ್ಕೂ ಕಾರಣರಾಗಿದ್ದಾರೆ. ಎರಡು ಮೂರು ದಿನಗಳಿಗೆ ಒಮ್ಮೆ ಆಗಮಿಸಿ ಪಂಪ್ ಚಾಲು ಮಾಡಿ ಈ ಸಿಬ್ಬಂದಿ ಹೊರ ಹೋದರೆ ಸಂಪೂರ್ಣ ದಿನ ನೀರು ಹರಿಯುತ್ತಿದೆ. ಅಕ್ಕ ಪಕ್ಕದ ನಿವಾಸಿಗಳ ಮನೆ ಬಾವಿಯ ನೀರು ಪಾತಾಳಕ್ಕಿಳಿಯುತ್ತಿದೆ!

ಉದ್ಯಾನದ ಗೇಟ್ ಬೀಗ ಭದ್ರವಾಗಿರುವ ಧೈರ್ಯದಿಂದ ಪಡ್ಡೆ ಹುಡುಗರು ಕಾಂಪೌಂಡ್ ಜಿಗಿದು ಅಕ್ರಮ ಚಟುವಟಿಕೆಗಳಿಗೆಗಾಗಿ ಅಲ್ಲಿ ಹೋಗುತ್ತಿದ್ದಾರೆ. ಕಾಂಪೌಂಡ್ ಜಿಗಿಯುವ ವೇಳೆ ಕೆಲ ಯುವತಿಯರಿಗೆ ಸಣ್ಣ ಪುಟ್ಟ ಗಾಯ ಆದ ಘಟನೆಗಳೂ ನಡೆದಿವೆ ಎನ್ನುತ್ತಾರೆ ಸ್ಥಳೀಯರು. ಗಾಂಜಾ, ಬಾಟಲ್ ಪ್ರವೃತ್ತಿ ಉದ್ಯಾನದೊಳಗೆ ಜೋರಾಗಿದೆ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರವಾಗಿ ನಗರಸಭೆ ಆದಷ್ಟು ಬೇಗ ಉದ್ಯಾನದ ಜವಾಬ್ದಾರಿ ವಹಿಸಿಕೊಳ್ಳಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ನಗರಸಭೆಯಲ್ಲಿ ಸಿಬ್ಬಂದಿ ಕೊರತೆಯಿಂದ ಉಸ್ತುವಾರಿ ನೋಡಿಕೊಳ್ಳಲು ಕಷ್ಟ. ಉದ್ಯಾನದ ನಿರ್ವಹಣೆಯನ್ನು ಎನ್​ಜಿಒಗಳಿಗೆ ವಹಿಸಿ ಉದ್ಯಾನವನ್ನು ಮುಂದಿನ ಒಂದೆರಡು ತಿಂಗಳಿನಲ್ಲಿ ಸಾರ್ವಜನಿಕರಿಗೆ ಮುಕ್ತಗೊಳಿಸಲು ನಿರ್ಧರಿಸಿದ್ದೇವೆ. – ಅಶ್ವಿನಿ ಬಿ. ಎಂ., ಪೌರಾಯುಕ್ತೆ, ಶಿರಸಿ

ಗಾರ್ಡನ್ ಎದುರಿನ 8 ಕಡೆಗಳಲ್ಲಿ 5 ಕಡೆಗಳಲ್ಲಿ ಅವೈಜ್ಞಾನಿಕವಾಗಿ ಸಿ.ಡಿ. (ಅಡ್ಡಚರಂಡಿ) ನಿರ್ವಿುಸಿದ್ದಾರೆ. ಈಗ ಗಾರ್ಡನ್ ಒಳಗೆ ದಿನವಿಡೀ ನೀರು ಹರಿಸಿ ಪೋಲು ಮಾಡುತ್ತಿದ್ದಾರೆ. – ವಿ.ಎನ್. ಭಾಗವತ್, ಸ್ಥಳೀಯ ನಿವಾಸಿ