ಶಿಗ್ಗಾಂವಿ: ಗಂಟೂ ಹೋಯಿತು… ನಂಟೂ ಇಲ್ಲದಂಗಾಯಿತು… ಪಟ್ಟಣದ ಹೃದಯ ಭಾಗದಲ್ಲಿರುವ ಚಿಕ್ಕ ಮಕ್ಕಳ ಉದ್ಯಾನವನದ ಸದ್ಯದ ಪರಿಸ್ಥಿತಿ ಇದು.
ಸುಮಾರು ಎಂಟು ಲಕ್ಷ ರೂ. ವೆಚ್ಚದಲ್ಲಿ ನಿರ್ವಣಗೊಂಡಿರುವ ಉದ್ಯಾನವನ್ನು ಸ್ಥಳೀಯ ಆಡಳಿತ ರ್ಪಾಂಗ್ ಜಾಗವನ್ನಾಗಿ ಮಾಡಲು ಹೊರಟಿದೆ. ಹಾಗಾದರೆ, ಉದ್ಯಾನ ಅಭಿವೃದ್ಧಿಗೆ ಹಣ ಹಾಕಿದ್ದೇಕೆ..? ಈಗ ನೆಲಸಮ ಮಾಡುವುದೇಕೆ..? ಎನ್ನುವ ಪ್ರಶ್ನೆ ಉದ್ಭವಿಸಿದೆ.
ಪಟ್ಟಣ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಆದರೆ, ಹುಡುಕಿದರೆ ಒಂದೂ ಉದ್ಯಾನವಿಲ್ಲ. ವಾಯುವಿಹಾರಕ್ಕೆ ರಸ್ತೆಯನ್ನೇ ಅವಲಂಬಿಸಬೇಕಿದೆ. ಚಿಕ್ಕ ಮಕ್ಕಳಿಗಾಗಿ 12 ವರ್ಷದ ಹಿಂದೆ ನಿರ್ವಣಗೊಂಡ ಕಿರಿದಾದ ಉದ್ಯಾನವನ್ನು ಸರಿಯಾಗಿ ನಿರ್ವಹಣೆ ಮಾಡದೆ, ಅದನ್ನೂ ಈಗ ಪಕ್ಕದ ಕಚೇರಿಯೊಂದಕ್ಕೆ ಅನುಕೂಲ ಕಲ್ಪಿಸಲು ರ್ಪಾಂಗ್ ಜಾಗವನ್ನಾಗಿ ಮಾಡುತ್ತಿರುವುದು ಈಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಉದ್ಯಾನಕ್ಕಾಗಿ ಹಾಕಿದ್ದ ಲಕ್ಷಾಂತರ ರೂಪಾಯಿ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತಾಗಿದೆ. ಅಧಿಕಾರಿಗಳ ಅನಾದರ, ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದಾಗಿ ಸ್ಥಳೀಯ ಜನರ ತೆರಿಗೆ ಹಣವನ್ನು ಪೋಲು ಮಾಡಿದಂತಾಗಿದೆ.
ಪುರಸಭೆಯ ದಾಖಲೆಯಲ್ಲಿ ಇದು ಚಿಕ್ಕಮಕ್ಕಳ ಉದ್ಯಾನ ಎಂದು ದಾಖಲಾಗಿಲ್ಲ, ಅಲ್ಲದೆ, ಉದ್ಯಾನವನ್ನು ರ್ಪಾಂಗ್ ಜಾಗ ಮಾಡಲು ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಮುಖ್ಯಾಧಿಕಾರಿ ಹೇಳುತ್ತಾರೆ. ಹಾಗಾದರೆ, ಉದ್ಯಾನ ಕಾಮಗಾರಿಗೆ ಟೆಂಡರ್ ಹೇಗಾಯಿತು. ಹಣ ಹೊಡೆಯಲೆಂದೇ ಕಾಮಗಾರಿ ಮಾಡಿದರೇ ಎಂಬ ಪ್ರಶ್ನೆ ತಲೆದೋರಿದೆ.
ತುಕ್ಕು ಹಿಡಿದ ಸಾಮಗ್ರಿ: 2007-08ನೇ ಸಾಲಿನ ಎಸ್ಎಫ್ಸಿ ಯೋಜನೆಯಡಿಯಲ್ಲಿ ನಿರ್ವಿುಸಿದ ಉದ್ಯಾನದಲ್ಲಿ ಅಳವಡಿಸಲಾದ ಜಾರುಬಂಡಿ, ಜೋಕಾಲಿ ಹಾಗೂ ಇತರೆ ಆಟದ ಸಾಮಗ್ರಿಗಳು ತುಕ್ಕು ಹಿಡಿದಿವೆ. ವಿಶ್ರಾಂತಿ ಆಸನಗಳಂತೂ ನೆಲಕ್ಕುರುಳಿವೆ. ಉದ್ಯಾನದಲ್ಲಿ ಹಾಯ್ದು ಹೋಗಿರುವ ಚರಂಡಿಯು ಕೊಳಚೆಯಲ್ಲಿ ಹೂತು ಹೋಗಿದ್ದು, ಇದರಿಂದ ಬರುವ ದುರ್ನಾತ ಸಹಿಸಿಕೊಳ್ಳಲಸಾಧ್ಯವಾಗಿದೆ. ಇದೊಂದು ಸೊಳ್ಳೆಗಳನ್ನು ಉತ್ಪಾದಿಸುವ ಕೇಂದ್ರವಾಗಿ ಮಾರ್ಪಟ್ಟಿದೆ. ಉದ್ಯಾನ ಪಕ್ಕದ ರಸ್ತೆಯು ಬಯಲು ಶೌಚಾಲಯವಾಗಿ ಮಾರ್ಪಟ್ಟಿದೆ. ಹೀಗಾಗಿ, ಇಲ್ಲಿ ಸಂಚರಿಸುವವರು ಮುಜುಗರ ಪಡುವಂತಾಗಿದೆ. ರಜಾ ದಿನಗಳಲ್ಲಿ ಮಕ್ಕಳ ಮನಸ್ಸಿಗೆ ಉಲ್ಲಾಸ ನೀಡಬೇಕಾದ ಉದ್ಯಾನ, ದಿನ ಕಳೆದಂತೆ ಅವ್ಯವಸ್ಥೆಯ ತಾಣವಾಗುತ್ತಿದೆ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲಿಲ್ಲ. ಶೌಚಗೃಹವಂತೂ ಮೊದಲೇ ಕಲ್ಪಿಸಿಲ್ಲ.
ಪುರಸಭೆಯ ದಾಖಲೆಯಲ್ಲಿ ಅದು ಚಿಕ್ಕಮಕ್ಕಳ ಉದ್ಯಾನ ಎಂದು ದಾಖಲಾಗಿಲ್ಲ. ಹಿಂದೆ ಆತುರದಲ್ಲಿ ಅಧಿಕಾರಿಗಳು ಅದನ್ನು ನಿರ್ವಿುಸಿದ್ದಾರೆ. ಆದರೆ, ಈಗ ನೂತನ ಕಚೇರಿ ಸಮುಚ್ಚಯಕ್ಕೆ ಹೊಂದಿಕೊಂಡಂತೆ ರ್ಪಾಂಗ್ ಜಾಗವನ್ನಾಗಿ ಪರಿವರ್ತಿಸಲು ಯೋಜನೆ ರೂಪಿಸಲಾಗಿದೆ. ಬರುವ ದಿನದಲ್ಲಿ ಅದು ರ್ಪಾಂಗ್ ಪ್ರದೇಶವಾಗಲಿದೆ.
| ಎಂ. ವಿ. ಹಿರೇಮಠ, ಮುಖ್ಯಾಧಿಕಾರಿ ಪುರಸಭೆ ಶಿಗ್ಗಾಂವಿ
ಊರಲ್ಲಿರುವ ಒಂದೇ ಒಂದು ಪಾರ್ಕನ್ನೂ ನೆಲಸಮಗೊಳಿಸುವ ಸುದ್ದಿ ಬೇಸರ ತಂದಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದರೂ ನಿರ್ವಹಣೆ ಮಾಡಿಲ್ಲ. ಉದ್ಯಾನವನ್ನು ಮೂತ್ರಾಲಯವನ್ನಾಗಿ ಮಾಡಿ ಈಗ ರ್ಪಾಂಗ್ ಜಾಗವನ್ನಾಗಿ ಮಾಡುವುದರ ಮೂಲಕ ಪುರಸಭೆ ಕೈತೊಳೆದುಕೊಳ್ಳುತ್ತಿದೆ. ಮಕ್ಕಳ ಆಡುವ ಜಾಗವನ್ನು ಕಸಿದುಕೊಳ್ಳುತ್ತಿರುವುದು ದುರದೃಷ್ಟಕರ.
| ಎಂ.ಕೆ. ಯಲಿಗಾರ ಸಾಮಾಜಿಕ ಕಾರ್ಯಕರ್ತ