More

  ಉದ್ಯಮ ಬೆಳವಣಿಗೆಗೆ ಟೈಕಾನ್ ಪೂರಕ

  ಹುಬ್ಬಳ್ಳಿ: ದಿ ಇಂಡಸ್ ಎಂಟರಪ್ರೀನರ್ಸ್ (ಟೈ) ಹುಬ್ಬಳ್ಳಿ ಶಾಖೆ ವತಿಯಿಂದ ನಗರದ ಡೆನಿಸನ್ಸ್ ಹೋಟೆಲ್​ನಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ಉದ್ಯಮಶೀಲತಾ ಶೃಂಗಸಭೆಗೆ ಶನಿವಾರ ಚಾಲನೆ ನೀಡಲಾಯಿತು.

  ದೇಶ ವಿದೇಶಗಳಿಂದ ಆಗಮಿಸಿರುವ ಉದ್ಯಮಿಗಳು, ಸಾಧಕರು, ಟೈ ಪ್ರತಿನಿಧಿಗಳು ತಮ್ಮ ಕಥೆಯೊಂದಿಗೆ ಉದ್ಯಮ ಆರಂಭಕ್ಕೆ ಬೇಕಾದ ಅಗತ್ಯತೆಗಳ ಬಗ್ಗೆ ರ್ಚಚಿಸಲಿರುವ ಮಹತ್ವದ ಸಮ್ಮೇಳನವನ್ನು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಉದ್ಘಾಟಿಸಿದರು. ಫೆ. 14ರಂದು ಹುಬ್ಬಳ್ಳಿಯಲ್ಲಿ ಹೂಡಿಕೆದಾರರ ಸಮಾವೇಶ ನಡೆಯಲಿದ್ದು, ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿ ಬೇರೆ ಬೇರೆ ಕಡೆಯಿಂದ ಹೂಡಿಕೆದಾರರು ಆಗಮಿಸಲಿದ್ದಾರೆ. ಈ ಭಾಗದಲ್ಲಿ ಉದ್ಯಮ ಬೆಳವಣಿಗೆಗೆ ಅನುಕೂಲಕರ ವಾತಾವರಣ ಇದ್ದು, ಪೂರಕವಾಗಿ ಸರ್ಕಾರ ಕೂಡ ತೆರಿಗೆ ವಿನಾಯಿತಿಯಂತಹ ಕೆಲ ಸೌಲಭ್ಯಗಳನ್ನು ನೀಡಲಿದೆ ಎಂದು ಶೆಟ್ಟರ್ ಹೇಳಿದರು. ಹೊಸ ಉದ್ಯಮಿಗಳಿಗೆ ಟೈದಿಂದ ಪ್ರೋತ್ಸಾಹ ದೊರೆಯುತ್ತಿದೆ. ಅದೇ ರೀತಿ ಈ ಬಾರಿ ಹೂಡಿಕೆದಾರರ ಸಮಾವೇಶದಲ್ಲಿ ಬೆಂಗಳೂರು ಹೊರತುಪಡಿಸಿ ದ್ವಿತೀಯ ದರ್ಜೆ ನಗರಗಳಲ್ಲಿ ಹೂಡಿಕೆಗೆ ಆದ್ಯತೆ ನೀಡುವಂತೆ ಅಭಿಯಾನ ಆರಂಭಿಸಿದ್ದೇವೆ. ಹುಬ್ಬಳ್ಳಿ ಸಮಾವೇಶ ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಿಗೂ ಅನ್ವಯಿಸುತ್ತದೆ ಎಂದರು.

  ಭೂಸ್ವಾಧೀನ ಪ್ರಕ್ರಿಯೆ ಸರಳಗೊಳಿಸಲು ಮುಖ್ಯಮಂತ್ರಿ ನಿಯಮಾವಳಿಗೆ ತಿದ್ದುಪಡಿ ತಂದಿದ್ದಾರೆ. ಭೂ ಪರಿವರ್ತನೆಯೂ ಸರಳವಾಗಲಿದೆ ಎಂದರು.

  ವಿಜಯವಾಣಿ, ದಿಗ್ವಿಜಯ ನ್ಯೂಸ್ ಚಾನೆಲ್ ಮಾಧ್ಯಮ ಸಹಯೋಗ ಹಾಗೂ ವರ್ಲ್ಡ್ ಸ್ಕೆ್ವೕರ್, ಕೆಎಲ್​ಇ ಪ್ರಾಯೋಜಕತ್ವದಲ್ಲಿ ನಡೆದಿರುವ ಟೈ ಸಮ್ಮೇಳನದಲ್ಲಿ ಶಾಸಕರಾದ ಅರವಿಂದ ಬೆಲ್ಲದ, ಎಸ್.ವಿ. ಸಂಕನೂರ, ಇತರರು ಇದ್ದರು.

  ಮಹಿಳಾ ಸಮಾವೇಶ: ಗ್ಲೋಬಲ್ ಅಡ್ಜಸ್ಟ್​ಮೆಂಟ್ ಫೌಂಡೇಶನ್​ನ ಡಾ. ರಂಜನಿ ಮಣಿಯನ್ ಮಹಿಳಾ ಸಮಾವೇಶದಲ್ಲಿ ವುಮೆನ್ ಇನ್ ಗ್ಲೋಬಲ್ ಬಿಜನೆಸ್ ಕುರಿತು ಮಾತನಾಡಿದರು. ಯಾವುದೇ ಕೆಲಸ ಅಥವಾ ಉದ್ಯೋಗ ಸಂಕಲ್ಪ ಮಾಡಿ ಕೈಗೊಂಡ ನಂತರ, ಅಸಾಧ್ಯ ಎಂದು ಕೈ ಬಿಡುವುದಲ್ಲ, ಒಂದಿಷ್ಟು ವಿಶ್ರಾಂತಿ ಪಡೆದು ಮತ್ತೆ ಮುನ್ನುಗ್ಗಬೇಕು. ಅಡೆತಡೆ ಬಂದರೂ ಸರಿದೂಗಿಸಿಕೊಂಡು ಹೋಗಬೇಕು ಎಂದರು.

  ಟೈ ಹುಬ್ಬಳ್ಳಿ ಶಾಖೆ ಅಧ್ಯಕ್ಷ ಶಶಿಧರ ಶೆಟ್ಟರ್, ವಿಜೇಶ ಸೈಗಲ್, ಧರ್ತಿ ದೇಸಾಯಿ, ವಿಶಾಲ ನಾಡಗೌಡ, ಯೋಗೇಶ ಹಬೀಬ, ಶ್ರಾವಣಿ ಪವಾರ, ಇತರರು ಇದ್ದರು.

  ಸಬಲೀಕರಣ ಸಮಾಜದಿಂದ ಅಸಾಧ್ಯ : ನಡವಳಿಕೆಯೇ ನಮ್ಮ ಔನ್ನತ್ಯ ನಿರ್ಧರಿಸುತ್ತದೆ ಎಂಬ ವಿಷಯದ ಮೇಲೆ ನಡೆದ ಚರ್ಚೆಯಲ್ಲಿ ಉತ್ತರ ಕರ್ನಾಟಕದ ಪ್ರತಿಭೆಗಳಾದ ಕೃಷಿ ಸಾಧಕಿ ಕವಿತಾ ಮಿಶ್ರಾ, ಮಂಜುಳಾ ಮುನವಳ್ಳಿ, ಭಾರತಿ ಕೊಠಾರಿ ಇತರರು ಪಾಲ್ಗೊಂಡಿದ್ದರು. ಯಾವುದೇ ಒಂದು ಮಹಿಳೆಯ ಸಬಲೀಕರಣ ಸರ್ಕಾರ, ಸಮಾಜ ಅಥವಾ ಸರ್ಕಾರೇತರ ಸಂಸ್ಥೆಗಳಿಂದ ಸಾಧ್ಯವಿಲ್ಲ. ಅದು ಸಾಧ್ಯವಾಗುವುದು ಮನೆಯಲ್ಲಿ ಮೊದಲು ತಂದೆ, ಮದುವೆಯಾದ ನಂತರ ಪತಿ, ವಯಸ್ಸಾದ ನಂತರ ಮಗನ ಬೆಂಬಲದಿಂದ ಮಾತ್ರ. ನನಗೆ ನನ್ನ ಗಂಡನೇ ಮರುಜನ್ಮ ನೀಡಿದರು. ಅವರಿಂದಾಗಿ ಕೃಷಿಯಲ್ಲಿ ಸಹ ಸಾಧನೆ ಮಾಡಲು ಸಾಧ್ಯವಾಗಿದೆ. ರೈತರು ಸಹ ಕೋಟಿ ರೂ.ಗಳ ಬಗ್ಗೆ ಮಾತನಾಡುವಂತಹ ಸಾಧನೆ ಮಾಡಬಹುದು. ಯಾವುದೇ ಕೆಲಸ ಸಣ್ಣದಲ್ಲ ಎಂದು ಕವಿತಾ ಮಿಶ್ರಾ ಹೇಳಿದರು. ಅನ್ಯಾಯ ಕಂಡಾಗ ಅದನ್ನು ಪ್ರತಿಭಟಿಸುವುದರಿಂದಲೇ ಮಹಿಳೆಯರಲ್ಲಿ ನಾಯಕತ್ವದ ಗುಣ ಬೆಳೆಯುತ್ತದೆ. ಏಳನೇ ವರ್ಗದಲ್ಲಿದ್ದಾಗ ಮನೆ ಹತ್ತಿರ ನಡೆಯುತ್ತಿದ್ದ ಬಾಲ್ಯ ವಿವಾಹ ತಡೆದಿದ್ದೆ. ಸುತ್ತಮುತ್ತ ನಡೆಯುವ ಅನ್ಯಾಯ ವಿರೋಧಿಸಬೇಕು. ಆಗಲೇ ನಮ್ಮಲ್ಲಿ ನಾಯಕತ್ವದ ಗುಣ ಬರುತ್ತದೆ ಎಂದು ಮಂಜುಳಾ ಮುನವಳ್ಳಿ ಹೇಳಿದರು.

  ಬಾಬಾ ರಾಮದೇವ್ ಜತೆ ಸಂವಾದ ಇಂದು: ಟೈಕಾನ್​ದಲ್ಲಿ ಫೆ. 2ರಂದು ಬೆಳಗ್ಗೆಯಿಂದ ನಡೆಯುವ ಉದ್ಯಮ ಶೃಂಗ ಸಭೆಯಲ್ಲಿ ಸಾಂಖ್ಯ ಲ್ಯಾಬ್ಸ್ ಸಿಇಒ ಪರಾಗ್ ನಾಯಕ್, ಕೆನ್ ಅಗ್ರಿಟೆಕ್ ಎಂ.ಡಿ. ವಿವೇಕ ನಾಯಕ್, ಮೈಕ್ರೋಫಿನಿಷ್ ವಾಲ್ವಸ್ ಚೇರ್ಮನ್ ತಿಲಕ್ ವಿಕಮ್ ಅವರು ‘ಬಿ ಲೋಕಲ್, ಥಿಂಕ್ ಗ್ರೋಬಲ್’, ಕುರಿತು, ಟೈ ಚೆನ್ನೈ ಅಧ್ಯಕ್ಷ ಸಿ.ಕೆ. ರಂಗನಾಥನ್ ಸಂಶೋಧನೆ ಕುರಿತು ಮಾತನಾಡುವರು. ನಂತರ ಸಂಜೆವರೆಗೆ ನಡೆಯುವ ಅಧಿವೇಶನಗಳಲ್ಲಿ ಖ್ಯಾತನಾಮರು ವಿವಿಧ ವಿಷಯಗಳ ಕುರಿತು ತಿಳಿಸಿಕೊಡುವರು. ಸಂಜೆ 6.45ರಿಂದ ರಾತ್ರಿ 8ರವರೆಗೆ ‘ಈವ್ನಿಂಗ್ ವಿತ್ ಲೆಜೆಂಡ್ಸ್’ ಕಾರ್ಯಕ್ರಮದಲ್ಲಿ ವಿಶ್ವ ವಿಖ್ಯಾತ ಯೋಗ ಗುರು ಶ್ರೀ ಬಾಬಾ ರಾಮದೇವ್ ಅವರು ಸಂವಾದದಲ್ಲಿ ಪಾಲ್ಗೊಳ್ಳುವರು. ಉದ್ಯಮಿ ಮೋಹನ್​ದಾಸ್ ಪೈ, ಟಾಟಾ ಕಾಫಿ ಅಧ್ಯಕ್ಷ ಹರೀಶ ಭಟ್ ಸಹ ಭಾಗವಹಿಸಲಿದ್ದು, ಮುಕ್ತ ಪ್ರವೇಶವಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts