ಉದ್ಯಮಿ ಬಸರಿಕಟ್ಟಿ ಮೇಲೆ ಹಲ್ಲೆಗೆ ಯತ್ನ

ವಿಜಯವಾಣಿ ಸುದ್ದಿಜಾಲ ಹಳಿಯಾಳ

ಟಿಂಬರ್ ಉದ್ಯಮಿ ರಫೀಕ ಅಹಮದ್ ಬಸರಿಕಟ್ಟಿ ಹಾಗೂ ಅವರ ಹಿರಿಯ ಪುತ್ರ ಅಬ್ದುಲ್ ಅಲೀಮ ಬಸರಿಕಟ್ಟಿ ಅವರ ಮೇಲೆ ಹಲ್ಲೆಗೆ ಯತ್ನ ನಡೆದ ಕುರಿತು ಶನಿವಾರ ರಾತ್ರಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿದ ಅಬ್ದುಲ್ ಅಲೀಮ ಬಸರಿಕಟ್ಟಿ ಅವರು, ‘ಶನಿವಾರ ಬೆಳಗ್ಗೆ 10ಕ್ಕೆ ಅಳ್ನಾವರದ ಟಿಂಬರ್ ಕಚೇರಿಗೆ ನಮ್ಮ ಕಾರಿನಲ್ಲಿ ತಂದೆಯೊಂದಿಗೆ ಹೋಗುತ್ತಿದ್ದೆವು. ಆಗ ಬೊಲೆರೊ ವಾಹನವು ಮದ್ನಳ್ಳಿ-ದುಸಗಿ ಮಾರ್ಗಮಧ್ಯೆ ನಮ್ಮ ಕಾರು ಅಡ್ಡಗಟ್ಟಿ ನಿಲ್ಲಿಸಿತು. ಅದರಲ್ಲಿದ್ದ ಅಪರಿಚಿತರು ನಮ್ಮ ಕಾರಿನತ್ತ ಧಾವಿಸಿದಾಗ ಅಲೀಮ್ ಕಾರನ್ನು ಅಳ್ನಾವರದತ್ತ ಓಡಿಸಿದರು. ಹಲ್ಲೆ ಮಾಡಲು ಬಂದ ವಾಹನ ಹಳಿಯಾಳದತ್ತ ತೆರಳಿತು’ ಎಂದು ತಿಳಿಸಿದರು.

ಹಲ್ಲೆ ಯತ್ನಕ್ಕೆ ಕಾರಣವೇನು ತಿಳಿದಿಲ್ಲ. ಎರಡು ದಿನಗಳ ಮುಂಚೆ ಬೊಲೆರೊ ವಾಹನ ಹಳಿಯಾಳದಲ್ಲಿ ಸಂಚರಿಸಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ವಾಹನ ಸುಳ್ಳು (ಫೇಕ್) ಸಂಖ್ಯೆಯನ್ನು ಹೊಂದಿದೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಹಲ್ಲೆ ಯತ್ನ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಹಳಿಯಾಳ ಸಿಪಿಐ ಬಿ.ಎಸ್. ಲೋಕಾಪುರ ತಿಳಿಸಿದ್ದಾರೆ.

ನಮ್ಮ ತಂದೆ ಹಾಗೂ ಸಹೋದರ ಯಾರಿಗೂ ಅನ್ಯಾಯ ಮಾಡಿಲ್ಲ. ಯಾರಿಗೊ ಕೆಟ್ಟದಾಗಿ ಮಾತಾಡಿಲ್ಲ. ಹೀಗಿರುವಾಗ ಈ ಘಟನೆ ಆತಂಕವನ್ನುಂಟು ಮಾಡಿದೆ ಎನ್ನುತ್ತಾರೆ ಪುರಸಭೆ ಸದಸ್ಯ ಅಜರ ಬಸರಿಕಟ್ಟಿ.

ಹಲ್ಲೆ ಯತ್ನಕ್ಕೆ ಖಂಡಿಸಿ ಮೌನ ಪ್ರತಿಭಟನೆ: ಅಂಜುಮನ್ ಎ ಇಸ್ಲಾಂ ಸಂಸ್ಥೆ ಅಧ್ಯಕ್ಷ, ಉದ್ಯಮಿ ಅಬ್ದುಲ್ ಅಲಿಂ ಬಸರಿಕಟ್ಟಿ ಅವರ ಮೇಲೆ ಹಲ್ಲೆಗೆ ಯತ್ನಿಸಿದವರನ್ನು ಬಂಧಿಸುವಂತೆ ಅಂಜುಮನ್ ಎ ಇಸ್ಲಾಂ ದಿ ಇಕ್ಬಾಲ್ ಎಜುಕೇಶನ್ ಸೊಸೈಟಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.

ಪಟ್ಟಣದಲ್ಲಿ ಸೋಮವಾರ ಸೊಸೈಟಿಯ ನೇತೃತ್ವದಲ್ಲಿ ಮೌನ ಪ್ರತಿಭಟನಾ ಮೆರವಣಿಗೆ ನಡೆಸಿದ ತಾಲೂಕಿನ ಮುಸ್ಲಿಂ ಸಮುದಾಯದವರು ಮಿನಿ ವಿಧಾನಸೌಧದಲ್ಲಿ ತಹಸೀಲ್ದಾರ್ ವಿದ್ಯಾಧರ ಗುಳಗುಳೆ ಹಾಗೂ ಪಿಎಸ್​ಐ ಆನಂದಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.

ಮುಪ್ತಿ ಫಯಾಜಅಹಮದ್ ಇಟ್ಟಂಗಿವಾಲೆ, ಅಂಜುಮನ್ ಸಂಸ್ಥೆ ಮಾಜಿ ಅಧ್ಯಕ್ಷ ಎಲ್.ಎಸ್. ದಲಾಲ, ಪುರಸಭೆ ಮಾಜಿ ಅಧ್ಯಕ್ಷ ಖಾಕೇಶಾ ಮಕಾನದಾರ, ಸದಸ್ಯ ಫಯಾಜ್ ಶೇಖ್, ಮಾಜಿ ಸದಸ್ಯ ಸುಭಾನಿ ಹುಬ್ಬಳ್ಳಿ, ಅಂಜುಮನ್ ಸಂಸ್ಥೆ ಪ್ರಮುಖರಾದ ಹಿದಾಯುತುಲ್ಲಾ ಸಾವಕಾರ, ಇಮ್ತಿಯಾಜ್ ಶೇಖ್, ಮಹಮದಗೌಸ ಮುಲ್ಲಾ, ಅರೀಫ್ ಹಲಸಿ, ರಿಜ್ವಾನ್ ಕಿಲ್ಲೆದಾರ, ಸಮೀರ ಜಂಗೂಬಾಯಿ, ಅಬ್ದುಲ ದಲಾಲ, ನಿಸ್ಸಾರ ದುರ್ಗಾಡಿ, ಹಸೀಬ ಅನ್ಸಾರಿ, ಝಾಕೀರ ಲತೀಪಣ್ಣನವರ, ಅಬ್ದುಲ್​ರಹೆಮಾನ್ ಶೇಖ್, ನೂರ ಮುಗದ, ಅಜರ ಹಲಸಿ, ಸೈಯದ್ ಅಲಿ ಅಂಕೋಲೆಕರ, ಫೈರೋಜ್ ಪಠಾಣ, ರಿಯಾಜ್ ಅಂಕೋಲೆಕರ ಇತರರಿದ್ದರು.

Leave a Reply

Your email address will not be published. Required fields are marked *