ಉದ್ಯಮಗಳಿಗೆ ಲೆಂಡಿಂಗ್​ಕಾರ್ಟ್ ಆರ್ಥಿಕ ನೆರವು

ಫಿನ್​ಟೆಕ್, ಅಂದರೆ, ತಂತ್ರಜ್ಞಾನ ಆಧಾರಿತ ಹಣಕಾಸು ಉದ್ಯಮ ಕ್ಷೇತ್ರ ಇಂದು ಸಾಕಷ್ಟು ಸದ್ದು ಮಾಡುತ್ತಿರುವ ನವೋದ್ಯಮ ಕ್ಷೇತ್ರ. ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ ಹಣಕಾಸಿನ ನೆರವು ಒದಗಿಸಲು ಪ್ರಯತ್ನಿಸುತ್ತಿರುವ ನವೋದ್ಯಮಗಳಲ್ಲಿ ಲೆಂಡಿಂಗ್​ಕಾರ್ಟ್ ಮುಂಚೂಣಿಯಲ್ಲಿರುವ ಹಾಗೂ ಯಶಸ್ವಿಯಾಗಿ ತನ್ನ ಉದ್ಯಮ ವಿಸ್ತರಿಸುತ್ತಾ ಸಾಗಿರುವ ಕಂಪನಿ. ಸಣ್ಣ ಹಾಗೂ ಮಧ್ಯಮ ಉದ್ಯಮಗಳಿಗೆ(ಎಸ್​ಎಂಇ) ಬ್ಯಾಂಕ್​ಗಳು ಹಾಗೂ ಅನೇಕ ಬ್ಯಾಂಕೇತರ ಹಣಕಾಸು ನಿಗಮಗಳು(ಎನ್​ಬಿಎಫ್​ಸಿ) ಸಾಲ ನೀಡುತ್ತಿವೆಯಾದರೂ ಅಲ್ಲಿನ ಪ್ರಕ್ರಿಯೆಗಳು, ನಿಯಮಗಳಿಂದಾಗಿ ಎಲ್ಲರಿಗೂ ಸುಲಭವಾಗಿ ಸಾಲ ದೊರೆಯುವುದಿಲ್ಲ. ಒಂದುವೇಳೆ ದೊರೆತರೂ, ಪ್ರಕ್ರಿಯೆಗಳನ್ನೆಲ್ಲಾ ದಾಟಿ ಸಾಲ ಪಡೆಯುವವರೆಗೆ ಕೆಲ ತಿಂಗಳುಗಳೇ ಆಗಿರುತ್ತದೆ. ಉದ್ಯಮದ ಅಗತ್ಯಗಳಿಗೆ ತಕ್ಷಣ ಹಣದ ಅಗತ್ಯವಿರುವವರಿಗೆ ಇದರಿಂದ ಅನಾನುಕೂಲವಾಗುತ್ತದೆ. ಹೀಗಾಗಿ ಈ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಅಗತ್ಯವಿರುವವರಿಗೆ ಶೀಘ್ರ ಸಾಲ ದೊರೆಯುವಂತೆ ಮಾಡಲು ಲೆಂಡಿಂಗ್​ಕಾರ್ಟ್, ತಂತ್ರಜ್ಞಾನದ ನೆರವಿನಿಂದ ಆನ್​ಲೈನ್ ವೇದಿಕೆ ಸೃಷ್ಟಿಸಿದೆ.

ಲೆಂಡಿಂಗ್​ಕಾರ್ಟ್ 2014ರಲ್ಲಿ ಹರ್ಷವರ್ಧನ್ ಲುನಿಯಾ ಹಾಗೂ ಮುಕುಲ್ ಸಚನ್ ಆರಂಭಿಸಿದ ನವೋದ್ಯಮ. ಹರ್ಷವರ್ಧನ್ ಹೈದರಾಬಾದ್​ನ ಐಎಸ್​ಬಿಯಿಂದ ಪದವಿ ಪಡೆದು ಅನೇಕ ಬ್ಯಾಂಕ್​ಗಳಲ್ಲಿ ಕಾರ್ಯನಿರ್ವಹಿಸಿದ್ದರು. ಅಲ್ಲಿ ಉದ್ಯಮಗಳಿಗೆ ಹಣಕಾಸಿನ ನೆರವಿನಲ್ಲಾಗುತ್ತಿದ್ದ ವ್ಯತ್ಯಯಗಳನ್ನು ಗಮನಿಸಿದ್ದ ಅವರು 2010ರಲ್ಲಿ ನೌಕರಿ ತೊರೆದು ತಮ್ಮ ಬಾಲ್ಯದ ಗೆಳೆಯ, ಬೆಂಗಳೂರಿನ ಐಐಎಂನಿಂದ ಪದವಿ ಪಡೆದು ಇಸ್ರೋದಲ್ಲಿ ವಿಜ್ಞಾನಿಯಾಗಿದ್ದ ಮುಕುಲ್ ಜತೆ ಆರ್ಥಿಕ ನೆರವಿನ ಬಗ್ಗೆ ಸಲಹೆ ನೀಡುವ ಆನ್​ಲೈನ್ ವೇದಿಕೆ ಸೃಷ್ಟಿಸಿದರು. ಸಣ್ಣ ಹಾಗೂ ಮಧ್ಯಮ ಉದ್ಯಮಗಳೊಂದಿಗೆ ರ್ಚಚಿಸಿ ಸಾಲ ಪಡೆಯಲು ಅವರು ಎದುರಿಸುತ್ತಿದ್ದ ಸಮಸ್ಯೆ ಅರಿತು 2014ರಲ್ಲಿ ಲೆಂಡಿಂಗ್​ಕಾರ್ಟನ್ನು ಕ್ಷಿಪ್ರಗತಿಯಲ್ಲಿ ಸಾಲ ಒದಗಿಸುವ ವೇದಿಕೆಯಾಗಿ ಪರಿವರ್ತಿಸಿದರು. ಅಹಮದಾಬಾದ್ ಮೂಲದ ಲೆಂಡಿಂಗ್ ಕಾರ್ಟ್ ಬೆಂಗಳೂರಿನಲ್ಲೂ ಕಚೇರಿ ಹೊಂದಿದೆ.

ತನ್ನ ವೇದಿಕೆಯಲ್ಲಿ ಅನೇಕ ಲೆಂಡರ್ಸ್/ಸಾಲ ನೀಡುವವರನ್ನು ಹೊಂದಿರುವ ಲೆಂಡಿಂಗ್​ಕಾರ್ಟ್ ಸಾಲದ ಅಗತ್ಯವಿರುವ ಸಣ್ಣ ಉದ್ಯಮಿಗಳಿಗೆ ಅವರಿಂದ 50,000-10,00,000 ರೂ.ವರೆಗೆ ಅಲ್ಪಾವಧಿ ಸಾಲ ದೊರಕಿಸುತ್ತದೆ. ಹಣದ ಅಗತ್ಯವಿರುವವರು ವಿವರಗಳನ್ನು ವೇದಿಕೆಯಲ್ಲಿ ಸಲ್ಲಿಸಿದರೆ, ಕೇವಲ 4 ಗಂಟೆಗಳಲ್ಲಿ ಸ್ವಯಂಚಾಲಿತ ವ್ಯವಸ್ಥೆ ಮೂಲಕ ಅವರ ಸಂಪೂರ್ಣ ವಿವರಗಳನ್ನು ಪರಿಶೀಲಿಸಿ ಅವರು ಸಾಲ ಪಡೆಯಲು ಅರ್ಹರೇ, ಸಾಲ ಮರುಪಾವತಿಸಲು ಶಕ್ತರೇ, ಅವರ

ಉದ್ಯಮ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬಿತ್ಯಾದಿ ವಿವರ ಕಲೆ ಹಾಕಿ ಸಾಲ ಒದಗಿಸುವವರಿಗೆ ನೀಡುತ್ತದೆ. ನಂತರ ಕೇವಲ ಎರಡು-ಮೂರು ದಿನಗಳಲ್ಲಿ ಕಡಿಮೆ ಬಡ್ಡಿ ದರದಲ್ಲಿ ನಿಗದಿತ ಸಾಲ ನೀಡುವ ಕೆಲಸ ಪೂರ್ಣಗೊಳ್ಳುತ್ತದೆ. ಇದಕ್ಕೆ ಸಾಲ ಪಡೆಯುವವರಿಂದ ಸಣ್ಣ ಪ್ರಮಾಣದ ಪ್ರಕ್ರಿಯೆ ಶುಲ್ಕ ಪಡೆಯುವ ಲೆಂಡಿಂಗ್​ಕಾರ್ಟ್, ಸಾಲ ನೀಡುವವರಿಂದ ಬಡ್ಡಿ ದರದಲ್ಲಿ ಒಂದೆರಡು ಪ್ರತಿಶತದಷ್ಟು ಕಮಿಷನ್ ಪಡೆಯುತ್ತದೆ.

ಫ್ಲಿಪ್​ಕಾರ್ಟ್, ಪೇಟಿಎಂ, ಸ್ನ್ಯಾಪ್​ಡೀಲ್, ವೂನಿಕ್,

ಕ್ರಾಫ್ಟ್ಸ್ವಿಲ್ಲಾದಂತಹ ಇ-ಕಾಮರ್ಸ್ ವೇದಿಕೆಗಳೊಂದಿಗೆ ಒಪ್ಪಂದ ಮಾಡಿಕೊಂಡಿರುವ ಲೆಂಡಿಂಗ್​ಕಾರ್ಟ್ ಆ ವೇದಿಕೆಗಳಲ್ಲಿರುವ ವೆಂಡರ್-ಮಾರಾಟಗಾರರಿಗೆ ಸಾಲ ಒದಗಿಸುತ್ತದೆ. ಇತ್ತೀಚೆಗೆ ಯೂನಿಕಾಮರ್ಸ್​ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದು, ಅದರ ಎಸ್​ಎಂಇ ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಸಾಲ ನೀಡುವ ವ್ಯವಸ್ಥೆ ಮಾಡಿದೆ. ದೇಶದ ಮೂಲೆ ಮೂಲೆಗಳನ್ನು ತಲುಪುವ ಲೆಂಡಿಂಗ್​ಕಾರ್ಟ್​ನ ಸೇವೆ ಮತ್ತಷ್ಟು ನಗರಗಳನ್ನು ತಲುಪುವ ಗುರಿ ಹೊಂದಿದೆ. ಈವರೆಗೆ 2 ಸುತ್ತುಗಳಲ್ಲಿ ಅನೇಕ ಹೂಡಿಕೆದಾರರಿಂದ ಸುಮಾರು 270 ಕೋಟಿ ರೂ. ಬಂಡವಾಳ ಪಡೆದಿದೆ.

ವರದಿಯೊಂದರ ಪ್ರಕಾರ ಫಿನ್​ಟೆಕ್ ಕ್ಷೇತ್ರದಲ್ಲಿ ಕಳೆದ ವರ್ಷ 33 ಬಿಲಿಯನ್ ಅಮೆರಿಕನ್ ಡಾಲರ್​ನಷ್ಟು ವಹಿವಾಟು ನಡೆದಿದ್ದು 2020ರ ವೇಳೆಗೆ ಅದು 73 ಬಿಲಿಯನ್​ಗೇರುವ ಅಂದಾಜಿದೆ.

ಲೇಖಕರು: ಸ್ಟಾರ್ಟ್ ಅಪ್​ಗಳ ವಿಷಯದಲ್ಲಿ ಸಂವಹನ ಸಲಹೆಗಾರರು

Leave a Reply

Your email address will not be published. Required fields are marked *