ಉದುರುತ್ತಿವೆ ಅಡಕೆ ಮಿಳ್ಳೆಗಳು

ಶಿರಸಿ: ‘ಈ ವರ್ಷ ಕೊನೆ ಕೊಯ್ಲಿಗೆ ಏನೂ ಉಳಿದಿಲ್ಲ. ಅಡಕೆ ಗೊನೆಗಳೆಲ್ಲ ಈಗಲೇ ಖಾಲಿಯಾಗುತ್ತಿವೆ….’ ತಾಲೂಕಿನ ಸಂಪಖಂಡ ಹೋಬಳಿಯ ಬಹುತೇಕ ರೈತರು ಈ ಮಾತು ಹೇಳುತ್ತಿದ್ದಾರೆ. ಹಾಲು ಸಂಘಗಳಲ್ಲಿ, ಅಂಗಡಿ ಎದುರಿನಲ್ಲಿ..ಎಲ್ಲಿಲ್ಲೂ ಇದೇ ಮಾತು ಕೇಳಿಬರುತ್ತಿದೆ.

ಕಳೆದ 15 ದಿನಗಳ ನಿರಂತರ ಮಳೆಗೆ ಸಂಪಖಂಡ ಹೋಬಳಿಯ ರೈತರು ಕಂಗಾಲಾಗಿದ್ದಾರೆ. ತಾಲೂಕಿನ ನಾಲ್ಕು ಹೋಬಳಿಗಳಲ್ಲಿ ಅತ್ಯಧಿಕ ಮಳೆಯಾಗುವ ಸಂಪಖಂಡ ಹೋಬಳಿಯಲ್ಲಿ ಈ ಬಾರಿ ಅಡಕೆ ಬೆಳೆಗೆ ತೀವ್ರ ಹಾನಿಯಾಗಿದೆ.

ಜೂನ್ ಆರಂಭದಲ್ಲಿ ಇನ್ನೂ ಬಲಿಯದ ಎಳೆ ಮಿಳ್ಳೆಗಳು ಒಮ್ಮೆಲೇ ಉದುರಲಾರಂಭಿಸಿದ್ದವು. ಇಲ್ಲಿಯ ರೈತರ ತೋಟ ಪರಿಶೀಲಿಸಿದ ಕೃಷಿ ವಿಜ್ಞಾನಿಗಳು ‘ರಸ ಹೀರುವ ಕೀಟ ಹಾವಳಿಯಿಂದ ಅಡಕೆ ಉದುರಲಾರಂಭಿಸಿದೆ’ ಎಂದು ಒಂದಿಷ್ಟು ಔಷಧ ಸೂಚಿಸಿದ್ದರು. ಅಡಕೆಗೆ ಬೋಡೋ ದ್ರಾವಣ ಸಿಂಪಡಣೆಯ ಸಮಯದಲ್ಲಿ ಬಹುತೇಕ ರೈತರು ವಿಜ್ಞಾನಿಗಳು ಸೂಚಿಸಿದ ಔಷಧವನ್ನು ಮಿಶ್ರಣಗೊಳಿಸಿ ಸಿಂಪಡಿಸಿದ್ದಾರೆ. ಅಂತೂ ಇಂತೂ ಕೀಟದ ಹಾವಳಿಯಿಂದ ಅಡಕೆ ಉದುರುವುದು ನಿಯಂತ್ರಣಕ್ಕೆ ಬರುತ್ತಿದೆ ಎನ್ನುವಷ್ಟರಲ್ಲಿ ಮಳೆ ಗಾಳಿ ಜೋರಾಗಿದೆ. ಇದರಿಂದ ಅಡಕೆ ಮರಗಳು ಒಂದಕ್ಕೊಂದು ಬಡಿದು ಎಳೆ ಮಿಳ್ಳೆಗಳು ಉದುರಿ ರೈತರು ದೊಡ್ಡ ಪ್ರಮಾಣದ ಹಾನಿ ಅನುಭವಿಸಿದ್ದಾರೆ.  ಈಗ ಕಳೆದೊಂದು ವಾರದಿಂದ ಅಡಕೆ ತೋಟಗಳಲ್ಲಿ ನೀರಿನ ಪ್ರಮಾಣ ಹೆಚ್ಚಿ ಎಳೆ ಅಡಕೆ ಉದುರಲಾರಂಭಿಸಿದೆ. ಕೇವಲ 3- 4 ದಿನಗಳಲ್ಲಿ ಸಂಪೂರ್ಣ ಮರವೇ ಬರಿದಾಗುವ ಮಾದರಿಯಲ್ಲಿ ಅಡಕೆ ಉದುರಿದೆ. ಕೆಲವೆಡೆ ಅಡಕೆಗೆ ಕೊಳೆ ರೋಗ ಕಾಣಿಸಿಕೊಂಡು ವಿಸ್ತರಿಸಿಕೊಳ್ಳುತ್ತಿದೆ.  ಸಂಪಖಂಡ ಹೋಬಳಿಯ ರೈತರ ಮನೆ ಮುಂದೆ ಅಡಕೆಯ ದೊಡ್ಡ ದೊಡ್ಡ ರಾಶಿಯೇ ಬೀಳುತ್ತಿದೆ. ಇನ್ನೂ ಬಲಿಯದ ಅಡಕೆ ಇದಾಗಿದ್ದು, ಸುಲಿದು, ಒಣಗಿಸಿ ಸಂಸ್ಕರಣೆ ಮಾಡಲೂ ಸಾಧ್ಯವಾಗುತ್ತಿಲ್ಲ. ತೋಟದಲ್ಲಿಯೇ ಬಿದ್ದು ಕೊಳೆಯುತ್ತಿರುವ ಅಡಕೆಯನ್ನು ಕಂಡು ಮಮ್ಮಲ ಮರುಗುತ್ತಿರುವ ರೈತರು ಕೆಲವನ್ನಾದರೂ ಸುಲಿದು ಸಂಸ್ಕರಿಸಲಾದೀತು ಎಂದ ಆಸೆಯಿಂದ ಆರಿಸಿಕೊಂಡು ಬರುತ್ತಿದ್ದಾರೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಈ ಬಾರಿ ಇಲ್ಲಿಯ ರೈತರ ಸ್ಥಿತಿ ಗಂಭೀರವಾಗಲಿದೆ.