ಸಿನಿಮಾ

ಉತ್ಸುಕತೆಯಿಂದ ಮತ ಚಲಾಯಿಸಿದ ಮತದಾರರು

ಕೊಳ್ಳೇಗಾಲ: ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಮತದಾರರು ಬುಧವಾರ ಮತಗಟ್ಟೆಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ಉತ್ಸುಕತೆಯಿಂದ ಮತ ಚಲಾಯಿಸಿದರು.


ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ತೆರೆಯಲಾಗಿದ್ದ ಮತಗಟ್ಟೆ ಕೇಂದ್ರಗಳಲ್ಲಿ ಬೆಳಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭವಾಯಿತು. ಮಧ್ಯಾಹ್ನ 12 ಗಂಟೆ ನಂತರ ಎಲ್ಲೆಡೆ ಬಿರುಸಿನಿಂದ ಮತದಾರರು ಮತ ಚಲಾವಣೆ ಮಾಡಲು ಮತಗಟ್ಟೆಗಳತ್ತ ಬರುತ್ತಿದ್ದು ಕಂಡು ಬಂದಿತು. ಮಧ್ಯಾಹ್ನ 3 ಗಂಟೆ ಶೇ.31 ರಷ್ಟು ಮತದಾನವಾಗಿತ್ತು.
ಮತಗಟ್ಟೆಯತ್ತ ಬರುತ್ತಿದ್ದ ಮತದಾರರಿಗೆ ಆಯಾ ಪಕ್ಷದ ಕಾರ್ಯಕರ್ತರು ಮತ ನೀಡುವಂತೆ ಮನವಿ ಮಾಡುತ್ತಿದ್ದು ಸಾಮಾನ್ಯವಾಗಿತ್ತು. ಬಿಜೆಪಿ ಅಭ್ಯರ್ಥಿ ಎನ್.ಮಹೇಶ್, ಕಾಂಗ್ರೆಸ್ ಅಭ್ಯರ್ಥಿ ಎ.ಆರ್.ಕೃಷ್ಣಮೂರ್ತಿ, ಅವರ ಪತ್ನಿ ಮಂಜುಳಾ, ಮಾಜಿ ಶಾಸಕ ಎಸ್.ಬಾಲರಾಜು ಮತಗಟ್ಟೆಗೆ ತೆರಳಿ ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಿ ಮಾಹಿತಿ ಪಡೆದರು.
ವೃದ್ಧರು, ಅಂಗವಿಕಲರಿಗೆ ನೆರವು: ಅಶಕ್ತ ಮತದಾರರನ್ನು ವಿವಿಧ ಪಕ್ಷಗಳ ಬೆಂಬಲಿಗರು ಆಟೋ ಹಾಗೂ ಬೈಕ್‌ಗಳಲ್ಲಿ ಮತಗಟ್ಟೆಗೆ ಕರೆತಂದು ಮತದಾನಕ್ಕೆ ನೆರವಾದರು. ಅಂಗವಿಕಲರು ಹಾಗೂ ಅನಾರೋಗ್ಯಪೀಡಿತರನ್ನು ವ್ಹೀಲ್‌ಚೇರ್‌ಗಳ ಮೂಲಕ ಮತಗಟ್ಟೆಗೆ ಕರೆತಂದು ಮತದಾನ ಮಾಡಿಸಲಾಯತು.

ಎನ್.ಮಹೇಶ್ ಹಕ್ಕು ಚಲಾವಣೆ: ಪಟ್ಟಣದ 1ನೇ ವಾರ್ಡ್‌ನಲ್ಲಿರುವ ಐಇಎಲ್‌ಸಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 121ರಲ್ಲಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎನ್.ಮಹೇಶ್ ಬೆಳಗ್ಗೆ 7.30 ಸಮಯದಲ್ಲಿ ಮತ ಚಲಾಯಿಸಿದರು. ಇದಕ್ಕೂ ಮುನ್ನ ನಗರದಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಈ ವೇಳೆ ಪುತ್ರ ಅರ್ಜುನ್ ಇದ್ದರು.
ಎನ್.ಮಹೇಶ್ ಮಾತನಾಡಿ, ಸಂವಿಧಾನಿಕ ಹಕ್ಕನ್ನು ಚಲಾಯಿಸಿದ್ದೇನೆ. ಬಹಳ ಖುಷಿಯಾಗಿದೆ. ಈ ಚುನಾವಣೆಯಲ್ಲಿ ನಮಗೆ ಯಶಸ್ಸು ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕುಟುಂಬದ ಜತೆ ಮಾಜಿ ಶಾಸಕ ಜಿಎನ್‌ಎನ್ ಮತದಾನ: ಪಟ್ಟಣದ ಎಪಿಎಂಸಿ ಸಭಾಂಗಣದಲ್ಲಿ ತೆರೆಯಲಾಗಿದ್ದ 130ನೇ ಮತಗಟ್ಟೆ ಕೇಂದ್ರದಲ್ಲಿ ಮಾಜಿ ಶಾಸಕ ಜಿ.ಎನ್. ನಂಜುಂಡಸ್ವಾಮಿ, ಪತ್ನಿ ಶೋಭಾ, ಪುತ್ರ ಜಿ.ಎನ್.ಲೋಕೇಶ್ ಮತ ಚಲಾಯಿಸಿದರು. ಜಿ.ಎನ್.ನಂಜುಂಡಸ್ವಾಮಿ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಎ.ಆರ್.ಕೃಷ್ಣಮೂರ್ತಿ ಅವರ ವನವಾಸ ಈ ಬಾರಿ ಅಂತ್ಯಗೊಳಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ. ಜನರು ಡಾ.ಬಿ.ಆರ್.ಅಂಬೇಡ್ಕರ್ ನೆನೆದು ಸಂವಿಧಾನ ಉಳಿವಿಗಾಗಿ ಮತ ಹಾಕುತ್ತಿದ್ದಾರೆ. ರಾಜ್ಯದಲ್ಲಿ ಬದಲಾವಣೆ ಆಗುವ ವಾತಾವರಣವಿದೆ ಎಂದರು.

ಮಿಮಿಕ್ರಿ ಗೋಪಿ ಮತದಾನ: ಕ್ಷೇತ್ರದ ನಿವಾಸಿ, ಹೆಸರಾಂತ ಹಾಸ್ಯ ಕಲಾವಿದ ಮಿಮಿಕ್ರಿ ಗೋಪಿ ಕುಣಗಳ್ಳಿ ಗ್ರಾಮದ 113ರ ಮತಗಟ್ಟೆಯಲ್ಲಿ ಮತದಾನ ಮಾಡಿದರು. ವಿಜಯವಾಣಿಯೊಂದಿಗೆ ಮಾತನಾಡಿ, ಮತದಾನ ನಮ್ಮ ಹಕ್ಕು. ಉತ್ತಮ ಸೇವಕನ ಆಯ್ಕೆ ಮಾಡುವ ಹಕ್ಕನ್ನು ಸಂವಿಧಾನ ನೀಡಿದೆ. ಕ್ಷೇತ್ರದ ಅಭಿವೃದ್ಧಿಗೆ ನಿಸ್ವಾರ್ಥ, ಪ್ರಬುದ್ಧ ವ್ಯಕ್ತಿಯನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಸಂತಸದಿಂದ ಮತ ಚಲಾಯಿಸಿದ್ದೇನೆ ಎಂದರು.

Latest Posts

ಲೈಫ್‌ಸ್ಟೈಲ್