Thursday, 13th December 2018  

Vijayavani

Breaking News

ಉತ್ಸಾಹವಿರಲಿ, ಆದರೆ ವಿವೇಕ ಮಂಕಾಗದಿರಲಿ

Sunday, 07.01.2018, 3:05 AM       No Comments

ಚಿಕ್ಕಂದಿನಲ್ಲಿ ಹಬ್ಬಗಳು ನಮಗೆ ಕೇವಲ ಆಚರಣೆಗಳಾಗಿರಲಿಲ್ಲ. ಸಂಭ್ರಮದ ದಿನಗಳಾಗಿದ್ದವು. ಪ್ರತಿಯೊಂದು ಹಬ್ಬಕ್ಕೂ ಅದರದೇ ಆದ ವಿಶಿಷ್ಟ ರೀತಿಯ ಸೊಬಗು, ಮಹತ್ವ ಇರುತ್ತಿತ್ತು. ನಮ್ಮ ಅಮ್ಮ ಆಗ ಈ ಹಬ್ಬಗಳನ್ನು ಮಾಸಗಳ ಮೂಲಕ ಗುರ್ತಿಸುತ್ತಿದ್ದರು. ಯಾವ ಯಾವ ಮಾಸದಲ್ಲಿ ಯಾವ ಯಾವ ಹಬ್ಬಗಳು ಬರುತ್ತವೆ ಎಂಬ ಖಚಿತ ಲೆಕ್ಕಾಚಾರ ಅವರಿಗಿತ್ತು. ನಮ್ಮ ಹಳ್ಳಿಯ ರೈತರು ಮಳೆಯ ನಕ್ಷತ್ರಗಳ ಮೂಲಕ ಹಬ್ಬಗಳನ್ನು ನೆನಪಿನಲ್ಲಿಟ್ಟುಕೊಳ್ಳುತ್ತಿದ್ದರು. ಬೇಸಿಗೆಯಲ್ಲಿ ಹಬ್ಬಗಳು ಜಾಸ್ತಿ ಇರುತ್ತಿರಲಿಲ್ಲ. ಸಂಕ್ರಾಂತಿ, ಶಿವರಾತ್ರಿಗಳಷ್ಟೆ. ಸಂಕ್ರಾಂತಿ ನಮ್ಮಲ್ಲಿ ಜನರ ಹಬ್ಬವಲ್ಲ, ಜಾನುವಾರುಗಳ ಹಬ್ಬ. ಆಗ ರೈತರಿಗೆಲ್ಲ ಬಿಡುವಿನ ಸಮಯ. ಮಾಡಿದ ಹುಗ್ಗಿಯನ್ನು ಮೊದಲು ನೀಡುತ್ತಿದ್ದುದೂ ಮನೆಯ ಮಂದಿಗಲ್ಲ, ಜಾನುವಾರುಗಳಿಗೆ. ಅವುಗಳ ಮೈ ತೊಳೆದು, ಬಣ್ಣ ಗುನ್ನಂಪಟ್ಟೆ ಮೊದಲಾದ ಅಲಂಕಾರಗಳಿಂದ ಸಿಂಗರಿಸಿ, ಅವುಗಳಿಗೆ ಸೊಗಸಾದ ಗೌನು ತೊಡಿಸಿ, ಮೆರವಣಿಗೆಯಲ್ಲಿ ಕರೆತಂದು ದೇವಸ್ಥಾನದ ಮುಂದೆ ಅವುಗಳಿಗೆ ತೀರ್ಥ ಪ್ರೋಕ್ಷಣೆ ಮಾಡಿ, ಕಿಚ್ಚು ಹಾಯಿಸಿದರೆ ಅದೇ ಹಬ್ಬದ ಆಚರಣೆ. ದುಡಿದ ಜೀವಗಳಿಗೆ ಕೃತಜ್ಞತೆ ಅರ್ಪಿಸುವ ಹಬ್ಬದ ಈ ಪರಿಕಲ್ಪನೆಯೇ ಅತ್ಯಂತ ಅರ್ಥಪೂರ್ಣ. ಮನೆಮಂದಿಯೆಲ್ಲಾ ಇದರಲ್ಲಿ ಪಾಲ್ಗೊಳ್ಳುತ್ತಿದ್ದರು. ನಮ್ಮ ಅಪ್ಪ ಎತ್ತುಗಳನ್ನು ಸಿಂಗರಿಸಿದರೆ, ಅಮ್ಮ ಅವರ ತೌರಿನ ತಳಿಯ ಎಮ್ಮೆಗೆ ಅಲಂಕಾರ ಮಾಡುತ್ತಿದ್ದರು. ನಾನು ಹುಟ್ಟಿದಾಗ ನಮ್ಮ ತಾತ ನನ್ನ ಆರೈಕೆಗೆಂದು ಒಂದು ಎಮ್ಮೆಯನ್ನೇ ಕೊಟ್ಟಿದ್ದರಂತೆ. ಆ ಎಮ್ಮೆಯ ಪರಂಪರೆಯ ತಳಿ ಈಗಲೂ ನಮ್ಮ ಮನೆಯಲ್ಲಿದೆ. ‘ತೊಟ್ಟಿಲ ಹೊತ್ಕೊಂಡು ತೌರು ಬಣ್ಣ ಉಟ್ಕೊಂಡು ಅಪ್ಪ ಕೊಟ್ಟೆಮ್ಮೆ ಹೊಡಕೊಂಡು’ ನಮ್ಮಮ್ಮ ಆಗ ನರಹಳ್ಳಿಯ ನಮ್ಮ ಮನೆಗೆ ಬಂದಿದ್ದಿರಬೇಕು. ನಮಗೆ ಮಕ್ಕಳಿಗೆ ಕರುಗಳನ್ನು ಅಲಂಕರಿಸುವುದೇ ಹಬ್ಬ. ಹೀಗೆ ಸಂಕ್ರಾಂತಿ ಹಬ್ಬ ಕೊರೆಯುವ ಛಳಿಯಲ್ಲಿಯೂ ನಮಗೆ ಬೆಚ್ಚನೆಯ ಅನುಭವ ನೀಡುತ್ತಿತ್ತು.

ಶಿವರಾತ್ರಿಯ ಸೊಬಗೇ ಬೇರೆ. ಅದು ಹೇಳಿ ಕೇಳಿ ಉಪವಾಸದ ಹಬ್ಬ. ಉಪವಾಸವೆಂದರೆ ಏನೂ ತಿನ್ನಬಾರದು ಎಂದಲ್ಲ. ಊಟ ಮಾಡಬಾರದು ಎಂಬುದಷ್ಟಕ್ಕೇ ಅದರ ವ್ಯಾಖ್ಯಾನ. ಬಗೆಬಗೆಯ ತಿಂಡಿಗಳು ಇದ್ದೇ ಇರುತ್ತಿದ್ದವು. ಆದರೆ ಶಿವರಾತ್ರಿ ನನಗೆ ನೆನಪಿರುವುದು ನಮ್ಮಲ್ಲಿ ನಡೆಯುತ್ತಿದ್ದ ಪಟ ಕುಣಿತದಿಂದ. ಶಿವರಾತ್ರಿ ಹಬ್ಬದ ದಿನ ಇಡೀ ರಾತ್ರಿ ನಮ್ಮ ಊರಿನ ಎಲ್ಲ ದೇವರುಗಳ ಮೆರವಣಿಗೆ. ನಮ್ಮಲ್ಲಿ ದಿನಕ್ಕೊಂದು ದೇವರು. ಸೋಮವಾರ ಚೆನ್ನಯ್ಯ, ಮಂಗಳವಾರ ಮಾರಮ್ಮ, ಬುಧವಾರ ಹಿರಿಯಮ್ಮ, ಗುರುವಾರ ಚಿಕ್ಕಮ್ಮ, ಶುಕ್ರವಾರ ಅರಸಮ್ಮ, ಶನಿವಾರ ಶನಿದೇವರು, ಭಾನುವಾರ ಬೋರೆದೇವರು. ಇವರಲ್ಲಿ ಮಾರಮ್ಮನಿಗೆ, ಹಿರಿಯಮ್ಮನಿಗೆ ಹಾಗೂ ಶನಿದೇವರಿಗೆ ಪಟಕುಣಿತವಿರಲಿಲ್ಲ. ಉಳಿದ ದೇವರ ಜೊತೆಗೆ ಅಕ್ಕಪಕ್ಕದ ಊರುಗಳ ದೇವರುಗಳೂ ಜೊತೆಗೂಡುತ್ತಿದ್ದುದುಂಟು. ಆ ದೇವರುಗಳ ಪಟಕುಣಿತ ಕಣ್ಣಿಗೆ ಹಬ್ಬ. ಜೊತೆಗೆ ವೀರಮಕ್ಕಳ ಕುಣಿತ. ತಮಟೆಯವರ ವೈಭವವಂತೂ ಅಸದೃಶ. ಅವರು ತಮಟೆ ಹೊಡೆಯುತ್ತ ಕುಣಿಯುತ್ತಿದ್ದರೆ ಅವರ ತಾಳಕ್ಕೆ ದೇವರ ಪಟ ಹೊತ್ತವರೂ ಕುಣಿಯಬೇಕಿತ್ತು. ಎಲ್ಲರ ಮನೆಯ ಮುಂದೆಯೂ ಮೆರವಣಿಗೆ ಸಾಗಿದರೂ ಊರ ಮುಖ್ಯರ ಮುಂದೆ ಮಾತ್ರ ಕುಣಿತವಿರುತ್ತಿತ್ತು. ಆ ದಿನ ಇಡೀ ಊರು ಜಾಗರಣೆ ಮಾಡುತ್ತಿತ್ತು. ಆ ಸದ್ದುಗದ್ದಲದಲ್ಲಿ ಯಾರು ನಿದ್ದೆ ಮಾಡಲು ಸಾಧ್ಯವಿರುತ್ತಿತ್ತು? ದೇವರು ಮನುಷ್ಯರೂ ಕೂಡಿಯೇ ಎದ್ದಿರುತ್ತಿದ್ದರು. ದೇವರನ್ನು ಹೊತ್ತು ಮೆರೆಸಿ ಅವನ ಧ್ಯಾನ ಮಾಡುತ್ತಾ ರಾತ್ರಿ ಕಳೆಯುತ್ತಿದ್ದರು. ಈಗಲೂ ಈ ಕುಣಿತ ನೋಡಲೆಂದೇ ನಾನು ಶಿವರಾತ್ರಿಗೆ ಊರಿಗೆ ಹೋಗುವುದುಂಟು.

ಮುಂದಿನ ಮುಖ್ಯ ಹಬ್ಬವೇ ಯುಗಾದಿ. ಇದೇ ನಮಗೆಲ್ಲಾ ಹೊಸ ವರ್ಷದ ಆದಿ. ಶಿಶಿರದಲ್ಲಿ ಗಿಡಮರಗಳು ಹಳೆಯ ಬದುಕಿಗೆ ವಿದಾಯ ಹೇಳಿ ಚೈತ್ರದಲ್ಲಿ ಹೊಸ ಉಲ್ಲಾಸ ಪಡೆಯುವುದು ಪ್ರಕೃತಿಯ ನಡೆ. ಇದೇ ಯುಗಾದಿಯ ಪರಿಕಲ್ಪನೆ. ಹಾಗೆ ನೋಡಿದರೆ ಮಾನವನ ಬದುಕು ಪ್ರಕೃತಿಯ ಜೊತೆ ಹೆಣೆದುಕೊಂಡೇ ರೂಪಿತವಾಗಿತ್ತು. ಪ್ರಕೃತಿಯ ಲಯಕ್ಕನುಗುಣವಾಗಿಯೇ ಮನುಷ್ಯನ ಬದುಕಿನ ವಿನ್ಯಾಸವೂ ಇದ್ದಿತು. ಈಗ ಆ ಲಯ ತಪ್ಪಿದಂತಿದೆ. ಇದು ಮುಂಗಾರಿನ ಸಮಯ. ಹಿಂದಿನ ವರ್ಷದ ಬೇಸಾಯದ ಚಟುವಟಿಕೆ ಮುಗಿದು, ವಿಶ್ರಾಂತಿ ಪಡೆದು ರೈತ ಸಮುದಾಯ ಹೊಸ ವರುಷದ ಚಟುವಟಿಕೆಗೆ ಸಿದ್ಧವಾಗುವ ಕಾಲ. ಕೆಲವೊಮ್ಮೆ ಯುಗಾದಿಯಂದೇ ಮಳೆಯ ಆಗಮನವೂ ಆಗುತ್ತಿದ್ದುದುಂಟು. ಆಗ ರೈತಸಮುದಾಯ ಹೊನ್ನಾರು ಕಟ್ಟಿ ಹೊಸ ವರ್ಷದ ಬೇಸಾಯಕ್ಕೆ ಮುನ್ನುಡಿ ಬರೆಯುತ್ತಿದ್ದರು. ಹೊನ್ನಾರಿನ ಪರಿಕಲ್ಪನೆಯೇ ಅದ್ಭುತ. ಅದು ಉತ್ಸಾಹ ಹಾಗೂ ಪಾವಿತ್ರ್ಯದ ಸಂಗಮ. ಜೊತೆಗೆ ಸಹಬಾಳ್ವೆಯ ಭಾವವೂ ಅದರಲ್ಲಿ ಸೇರಿಕೊಂಡಿದೆ. ನಮ್ಮ ಹಳ್ಳಿಯ ಬದುಕಿನ ಜೀವನ ವಿಧಾನದಲ್ಲೇ ಸಮುದಾಯದ ಮನೋಭಾವ ಬೆರೆತುಹೋಗಿತ್ತು. ಸಂತೋಷ, ಸಂಭ್ರಮ, ದುಃಖ ಯಾವುದೇ ಇರಲಿ ಅವುಗಳನ್ನು ಹಂಚಿಕೊಂಡು ಅನುಭವಿಸಬೇಕೆನ್ನುವುದು ಅಲ್ಲಿಯ ಜೀವನ ತತ್ವವಾಗಿತ್ತು.

ಚೈತ್ರ ಶುದ್ಧ ಪಾಡ್ಯಮಿ ನಮಗೆ ಹೊಸ ವರುಷದ ಮೊದಲ ದಿನ. ಆ ದಿನ ಹಬ್ಬ ಆಚರಿಸಿ, ಮಾರನೆಯ ದಿನ ಚಟುವಟಿಕೆಗೆ ತೊಡಗುವುದು. ಹೀಗಾಗಿ ಮಾರನೆಯ ದಿನವೂ ಹಬ್ಬವೇ! ಅದನ್ನು ತೊಡಗುವಿಕೆಯ ಹಬ್ಬವೆಂದು ಕರೆಯುತ್ತಿದ್ದರು. ಯುಗಾದಿಯೆಂದರೆ ಅಭ್ಯಂಜನ, ಹೊಸಬಟ್ಟೆ, ಹೋಳಿಗೆಯ ಸಂಭ್ರಮ. ಹೊಸ ಹೊಸ ಸಂಕಲ್ಪಗಳ ಆಶಯ. ಅಂದಿನ ನಮ್ಮ ನಡವಳಿಕೆ ಸದ್ಭಾವದಿಂದ ಕೂಡಿದ್ದರೆ ಇಡೀ ವರ್ಷ ಹಾಗೆಯೇ ಇರುತ್ತದೆ ಎಂಬ ಶ್ರದ್ಧೆ. ನಮ್ಮ ಜಾನಪದದಲ್ಲಿ ಒಂದು ನಂಬಿಕೆಯಿದೆ. ಶಿವ ಪಾರ್ವತಿ ಲೋಕಸಂಚಾರ ಮಾಡುತ್ತಿರುತ್ತಾರಂತೆ. ನಾವು ಇಲ್ಲಿ ಏನು ಭಾವಿಸಿಕೊಂಡರೂ ಅದಕ್ಕೆ ಅವರು ಅಸ್ತು ಎನ್ನುತ್ತಾರಂತೆ. ಅಂದರೆ ಒಳ್ಳೆಯದನ್ನು ಅಂದುಕೊಂಡರೆ ಅದಕ್ಕೆ ಅವರ ಅಸ್ತು. ಕೆಟ್ಟದ್ದು ಭಾವಿಸಿದರೆ ಅದಕ್ಕೂ ಅವರ ಅಸ್ತು. ನಾವು ಭಾವಿಸಿದಂತೆ ನಮ್ಮ ಬದುಕು. ಸದಾ ಒಳ್ಳೆಯದನ್ನು ಭಾವಿಸಬೇಕೆಂಬುದು ಇದರ ತಾತ್ಪರ್ಯ. ಕಾಯಾ, ವಾಚಾ, ಮನಸಾ ಎಂಬುದರ ಅರ್ಥವೂ ಇದೆ. ಕ್ರಿಯೆಯಲ್ಲಿ ಮೊದಲು ಕೆಟ್ಟದ್ದನ್ನು ನಿಯಂತ್ರಿಸಬೇಕು. ನಂತರ ಕೆಟ್ಟದ್ದು ಮಾತನಾಡುವುದನ್ನೂ ನಿಲ್ಲಿಸಲು ಪ್ರಯತ್ನಿಸಬೇಕು. ಕಡೆಗೆ ಮನಸ್ಸಿನಲ್ಲಿ ಕೆಟ್ಟದ್ದು ಸುಳಿಯದಂತೆ ಮನೋನಿಗ್ರಹ ಸಾಧಿಸಬೇಕು. ಇದೇ ಸಾತ್ವಿಕತೆಯ ಸಾಧನೆ. ಇಂತಹ ಸಾಧನೆಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವಂತೆ ನಮ್ಮ ಜೀವನ ವಿಧಾನವಿತ್ತು. ನಮ್ಮ ಹಬ್ಬಗಳ ಆಚರಣೆಯೂ ಕೆಲವು ಮೌಲ್ಯಗಳ ಪ್ರತಿಪಾದನೆಯಾಗಿತ್ತು. ಪುತಿನ ಹೇಳುತ್ತಿದ್ದಂತೆ ಹಬ್ಬಗಳು ನಮ್ಮ ದಿನನಿತ್ಯದ ಏಕತಾನತೆಗೆ ಹೊಸ ಚೈತನ್ಯ ನೀಡುವ ಸಂಭ್ರಮಗಳು. ಸಹಬಾಳ್ವೆಯನ್ನು ಕಲಿಸುವ ಸಾಧನಗಳು. ಸಾಮಾಜಿಕ ಸಾಮರಸ್ಯವನ್ನು ಸಾಧಿಸುವ ಉಪಾಯಗಳು.

ಈಗ ಹೊಸವರ್ಷದ ಆಚರಣೆಯ ಪರಿಕಲ್ಪನೆ ಬದಲಾಗಿದೆ. ಯುಗಾದಿ ಬದಲಿಗೆ ಜನವರಿ ಮೊದಲ ದಿನ ಹೊಸ ವರ್ಷವೆಂಬ ಭಾವ ಮೂಡಿದೆ. ಋತುಗಳಿಗನುಗುಣವಾಗಿದ್ದ ದಿನಮಾನದ ಪರಿಕಲ್ಪನೆ ಈಗ ಕ್ಯಾಲೆಂಡರಿನ ಹಾಳೆಗಳನ್ನು ಅವಲಂಬಿಸಿ ರೂಪುಗೊಂಡಿದೆ. ಇದು ಮನುಷ್ಯ ಪ್ರಕೃತಿಯಿಂದ ದೂರವಾಗುತ್ತಿರುವ ರೀತಿಯೂ ಹೌದು. ಪ್ರಕೃತಿಯನ್ನು ಧಿಕ್ಕರಿಸಿ ಬದುಕುತ್ತೇನೆ ಎನ್ನುವುದು ಆಧುನಿಕ ಬದುಕಿನ ಜೀವನ ಲಯ. ಬದಲಾವಣೆ ಜೀವಂತಿಕೆಯ ಸೂಚನೆ. ಯಾವುದೇ ಜೀವನ್ಮುಖೀ ಸಮಾಜ ಕಾಲಕಾಲಕ್ಕೆ ಬದಲಾಗುತ್ತಾ ಹೋಗುತ್ತದೆ. ಅದನ್ನು ನಾವು ಗೊಣಗಾಡದೆ ಒಪ್ಪಿಕೊಳ್ಳುವುದು ಸುಸಂಸ್ಕೃತ ಮನಸ್ಸಿನ ಲಕ್ಷಣ. ಆದರೆ ಬದಲಾವಣೆಯ ಪರಿಣಾಮಗಳ ಬಗ್ಗೆಯೂ ಚಿಂತಿಸಬೇಕಾದ್ದು ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಅತ್ಯಗತ್ಯ.

ಮಾಧ್ಯಮಗಳ ಪ್ರಭಾವದಿಂದಾಗಿ ಹೊಸ ವರ್ಷಾಚರಣೆ ಈಗ ಪ್ರಾಮುಖ್ಯತೆ ಪಡೆದುಕೊಂಡಿದೆ. ಅದು ಒಂದು ಮಹತ್ವದ ಘಟನೆಯೆಂಬಂತೆ ಮಾಧ್ಯಮಗಳು ಬಿಂಬಿಸುತ್ತಿವೆ. ಅನೇಕರು ಅದಕ್ಕಾಗಿ ಆಚರಣೆಯ ಪೂರ್ವಸಿದ್ಧತೆಯನ್ನೂ ಮಾಡಿಕೊಳ್ಳುತ್ತಾರೆ. ಹೊಸ ವರ್ಷವನ್ನು ಉತ್ಸಾಹದಿಂದ ಬರಮಾಡಿಕೊಳ್ಳಬೇಕೆನ್ನುವುದು ಈ ಆಚರಣೆಯ ಹಿಂದಿನ ಆಶಯ. ಆಶಯವೇನೋ ಒಳ್ಳೆಯದೇ. ಹಾಗೆ ನೋಡಿದರೆ ನಮ್ಮೆಲ್ಲ ಆಶಯಗಳು ಸಕಾರಾತ್ಮಕವಾಗಿಯೇ ಇರುತ್ತವೆ. ಸರಳ ಉದಾಹರಣೆ ನೀಡುವುದಾದರೆ ಕೆಟ್ಟವರಾಗಬೇಕೆಂದು ಯಾರಿಗಾದರೂ ಆಸೆಯಿರುತ್ತದೆಯೇ? ಎಲ್ಲರಿಂದ ಒಳ್ಳೆಯವನೆನ್ನಿಸಿಕೊಳ್ಳಬೇಕೆಂಬುದೇ ಎಲ್ಲರ ಆಶಯ. ಆದರೆ ಆಶಯವನ್ನು ಆಚರಣೆಗೆ ತರುವಾಗ ನೀಚರಾಗಿಬಿಡುವ ಬಗೆಯೇ ಬದುಕಿನ ವಿಸ್ಮಯ. ಆಶಯ ಹಾಗೂ ಆಚರಣೆಯ ನಡುವಿನ ಅಂತರ ವಿವೇಕಕ್ಕೆ ಸಂಬಂಧಿಸಿದಂಥದು.

ಹೊಸ ವರ್ಷದ ಆಚರಣೆ ಈಗ ಪಡೆದುಕೊಳ್ಳುತ್ತಿರುವ ಸ್ವರೂಪ ನಾಗರಿಕ ಸಮಾಜಕ್ಕೆ ಶೋಭೆ ತರುವ ರೀತಿಯಲ್ಲಿಲ್ಲ. ಪತ್ರಿಕಾ ವರದಿಗಳನ್ನು ಗಮನಿಸಿ ಹೇಳುವು ದಾದರೆ ಅಸಭ್ಯವರ್ತನೆ ಇಂತಹ ಸಂದರ್ಭದಲ್ಲಿ ಸಾಮಾನ್ಯ ಎನ್ನುವಂತಾಗಿದೆ. ಕುಡಿದ ಮತ್ತಿನಲ್ಲಿ ಏನೆಲ್ಲ ಮಾಡಬಹುದು ಎಂಬುದು ಊಹೆಗೂ ಮೀರಿದ್ದು. ಕೊಲೆಯೂ ನಡೆದಿದೆ ಎಂದರೆ ಉತ್ಸಾಹದ ಸ್ವರೂಪವನ್ನು ಹೇಗೆ ವಿವರಿಸುವುದು?

ಮೊದಲು ‘ಹಬ್ಬ’ ಎಂದು ಕರೆಯುತ್ತಿದ್ದುದು ಈಗ ‘ಪಾರ್ಟಿ’ ಎಂದು ಕರೆಯಲ್ಪಡುತ್ತದೆ. ‘ಹುಟ್ಟುಹಬ್ಬ’ ‘ಬರ್ತ್‌ಡೇ ಪಾರ್ಟಿ’ಯಾದದ್ದು ಹೀಗೆ. ಇದು ಕೇವಲ ಹೆಸರಿನ ಬದಲಾವಣೆಯಲ್ಲ, ಆಚರಣೆಯ ವಿಧಾನದ ಬದಲಾವಣೆಯೂ ಹೌದು. ಲಾರೆನ್ಸ್ ಹೇಳುವ ಹಾಗೆ ಒಂದು ವೃತ್ತಿಯನ್ನು ಬಿಟ್ಟು ಮತ್ತೊಂದು ವೃತ್ತಿಯನ್ನು ಮಾಡುತ್ತೇವೆಂದರೆ ಅದು ಕೇವಲ ವೃತ್ತಿಯ ಬದಲಾವಣೆೆಯಲ್ಲ, ಜೀವನ ವಿಧಾನದ ಬದಲಾವಣೆ. ಇದೂ ಹಾಗೆಯೇ! ಯುಗಾದಿ ಹಬ್ಬಕ್ಕೂ ಹೊಸವರ್ಷದ ಪಾರ್ಟಿಗೂ ಅಗಾಧ ಅಂತರವಿದೆ. ಹಬ್ಬವೆಂದರೆ ಉತ್ಸಾಹ ನಿಜ, ಆದರೆ ಅದಕ್ಕೆ ಒಂದು ಚೌಕಟ್ಟಿದೆ. ಆದರೆ ಪಾರ್ಟಿಯೆಂದರೆ ಉತ್ಸಾಹದ ಜೊತೆಗೆ ಎಲ್ಲ ಬಗೆಯ ಉಲ್ಲಂಘನೆ ಎಂದಾಗಿದೆ. ಇಲ್ಲದಿದ್ದರೆ ಪೊಲೀಸರ ಉಸ್ತುವಾರಿಯಲ್ಲಿ ಹೊಸ ವರ್ಷವನ್ನು ಆಚರಿಸಬೇಕೆ? ಸಂಭ್ರಮ ಸ್ವೇಚ್ಛಾಚಾರವಾದರೆ ಇಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆತ್ಮಸಂಯಮವಿರದ ಯಾವುದೇ ಆಚರಣೆಯೂ ಆತ್ಮಹತ್ಯೆಗೆ ಹಾದಿ ಮಾಡಿಕೊಟ್ಟಂತೆಯೇ ಸರಿ. ಮೊದಮೊದಲು ನಾನೂ ಈ ಹೊಸ ವರ್ಷದ ಪಾರ್ಟಿಗಳಲ್ಲಿ ಭಾಗವಹಿಸುತ್ತಿದ್ದೆ. ಆದರೆ ಅದರ ಸ್ವರೂಪ ನನ್ನಂಥವನಿಗಲ್ಲ ಎಂದು ನನಗನ್ನಿಸುವುದಿರಲಿ, ಪಾರ್ಟಿಯನ್ನು ವ್ಯವಸ್ಥೆ ಮಾಡಿದವರಿಗೇ ನಾನು ಅಲ್ಲಿಗೆ ಹೊಂದುವುದಿಲ್ಲ ಅನ್ನಿಸತೊಡಗಿತು. ಹೀಗಾಗಿ ಕ್ರಮೇಣ ಅದರಿಂದ ದೂರವುಳಿದೆ ಅಥವಾ ಅವರೇ ನನ್ನನ್ನು ದೂರ ಮಾಡಿದರು. ಆ ನಂತರ ಮನೆಯಲ್ಲೇ ನಮ್ಮ ಕುಟುಂಬ ಸದಸ್ಯರೇ ಹಬ್ಬದ ರೀತಿಯಲ್ಲಿ ಅದನ್ನು ಆಚರಿಸತೊಡಗಿದೆವು. ಆದರೆ ಈ ವರ್ಷ ನನ್ನ ಹಳೆಯ ಹಿರಿಯ ವಿದ್ಯಾರ್ಥಿಯೊಬ್ಬರು ಹೊಸ ವರ್ಷದ ಆರಂಭದಲ್ಲಿ ಅವರ ಜೊತೆಗಿರಬೇಕೆಂದು ಬಯಸಿದರು. ಪ್ರೀತಿಯ ಒತ್ತಾಯ, ಪಾರ್ಟಿಯಲ್ಲವೆಂಬ ಭರವಸೆ, ಹೀಗಾಗಿ ಒಪ್ಪಿದೆ.

ರಾತ್ರಿ 10 ಗಂಟೆಗೆ ಅವರ ಮನೆಯಲ್ಲಿ ಕೆಲವು ಆಪ್ತರು ಸೇರಿದೆವು. ಹಬ್ಬದ ಅಡುಗೆ ಮಾಡಿಸಿದ್ದರು. ಒಳ್ಳೆಯ ಊಟ, ಜೊತೆಗೆ ಹರಟೆ. ಟಿವಿಯ ಅಬ್ಬರವಿರಲಿಲ್ಲ. ಹನ್ನೆರಡಾಗುತ್ತಿದ್ದಂತೆ ಅಲ್ಲಿದ್ದ ಎಲ್ಲರಿಗೂ ಒಂದೊಂದು ಸ್ವೆಟರ್ ಉಡುಗೊರೆ ನೀಡಿ, ಅದನ್ನು ಹಾಕಿಕೊಂಡು ಒಂದು ರೌಂಡ್ ಕಾರಿನಲ್ಲಿ ಹೋಗಿಬರುವುದೆಂದು ಸೂಚಿಸಿದರು. ಒಂದೆರಡು ಕಾರಿನಲ್ಲಿ ಹತ್ತಾರು ಜನ ಗೆಳೆಯರ ಕುಟುಂಬದ ಸದಸ್ಯರು. ನಮ್ಮ ಹಿಂದೆ ಒಂದು ಲಗ್ಗೇಜ್ ಆಟೋ. ಅದರ ತುಂಬ ಸುಮಾರು ಇನ್ನೂರಕ್ಕೂ ಹೆಚ್ಚು ಹೊಸ ರಗ್ಗು ಹಾಗೂ ಸ್ವೆಟರ್‌ಗಳು. ಗಲ್ಲಿ ಗಲ್ಲಿಗಳಲ್ಲಿ ನಮ್ಮ ಸವಾರಿ. ಬೀದಿ ಬದಿ ಫುಟ್‌ಪಾತ್‌ನಲ್ಲಿ ಮಲಗಿದ್ದವರಿಗೆ ಹೊಸ ರಗ್ಗು ಹೊದಿಸಿ ನಮ್ಮ ಪಯಣ. ಹಾಗೇ ಬಸ್ಸುನಿಲ್ದಾಣ, ರೈಲುನಿಲ್ದಾಣದತ್ತ… ಅಲ್ಲಿಯೂ ಛಳಿಯಲ್ಲಿ ನಡುಗುತ್ತಾ ಮಲಗಿದ್ದ ಜೀವಗಳಿಗೆ ರಗ್ಗು ಹೊದಿಸುವ ಕೆಲಸ. ಎಚ್ಚರವಿದ್ದ ಅನಾಥ ಜೀವಗಳಿಗೆ ಸ್ವೆಟರ್ ಉಡುಗೊರೆ. ಸುಮಾರು ನಾಲ್ಕು ಗಂಟೆಯವರೆಗೆ ಹೀಗೆ ನಗರದ ಬೇರೆ ಬೇರೆ ಭಾಗಗಳಲ್ಲಿ ಸುತ್ತಾಡಿದೆವು. ಯಾರಿಗೂ ನಮ್ಮ ಈ ಕ್ರಿಯೆ ಮುಜುಗರವಾಗದಂತೆ ಎಚ್ಚರ ವಹಿಸಿದ್ದೆವು. ಕೆಲವರ ಕಂಗಳಲ್ಲಿ ಕಂಡ ಸಂತೋಷದ ಬೆಳಕು ಹೊಸ ವರ್ಷದ ಭರವಸೆಯ ಬೆಳ್ಳಿಗೆರೆಯಂತಿತ್ತು. ಹೊಸ ವರುಷ ಹೀಗೆ ಬೆಚ್ಚನೆಯ ಬೆಳಕಾಗಿ ಆರಂಭವಾಯಿತು. ಇದೂ ಸಹ ಹೊಸ ವರ್ಷವನ್ನು ಬರಮಾಡಿಕೊಳ್ಳುವ ಒಂದು ಸಾಧ್ಯತೆ ಅನ್ನಿಸಿತು. ಇಂಥವರ ಸಂತತಿ ಹೆಚ್ಚಲಿ ಎಂದು ಮನಸ್ಸಿನಲ್ಲೇ ಮೌನವಾಗಿ ಪ್ರಾರ್ಥಿಸಿದೆ.

(ಲೇಖಕರು ಖ್ಯಾತ ವಿಮರ್ಶಕರು)

Leave a Reply

Your email address will not be published. Required fields are marked *

Back To Top