Saturday, 17th November 2018  

Vijayavani

ಮೈಸೂರು ಪಾಲಿಕೆಯಲ್ಲಿ ದೋಸ್ತಿ ತಂತ್ರ - ಮಾತುಕತೆ ಯಶಸ್ವಿ - 2 ವರ್ಷ ಕಾಂಗ್ರೆಸ್, 3 ವರ್ಷ ಜೆಡಿಎಸ್​​ಗೆ        ಮೀಸಲಾತಿ ವಿಚಾರದಲ್ಲಿ ದೋಸ್ತಿಗಳೇ ಗರಂ - ಸಿಎಂ ಎಚ್​​ಡಿಕೆಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ        ಅನಂತ್ ನಿಧನದಿಂದಾಗಿರೋ ನಷ್ಟ ಭರಿಸಲು ಸರ್ಕಸ್ - ರಾಜ್ಯ ಬಿಜೆಪಿ ಸಂಸದರಿಗೆ ಸಿಗುತ್ತಾ ಸಚಿವ ಭಾಗ್ಯ        ಇಂದು ಮಹದಾಯಿ ಕುರಿತು ಸರ್ವಪಕ್ಷ ಸಭೆ - ಮುಂದಿನ ಕ್ರಮದ ಬಗ್ಗೆ ನಡೆಯಲಿದೆ ಮಹತ್ವದ ಚರ್ಚೆ        ಇಂದು ಶಬರಿಮಲೆ ಬಾಗಿಲು ಮತ್ತೆ ಓಪನ್ - ಮಹಿಳೆಯರಿಗೆ ದರ್ಶನ ಸಿಗುತ್ತೋ? ಸಿಗಲ್ವೋ..?       
Breaking News

ಉತ್ತರ ಪ್ರದೇಶದಲ್ಲಿ ಸ್ಕ್ಯಾಮ್ ವಿರುದ್ಧ ಸ್ಪರ್ಧೆ

Sunday, 05.02.2017, 4:00 AM       No Comments

ಮೇರಠ್: ಉತ್ತರಪ್ರದೇಶದ ಹಣೆಬರಹ ಬದಲಾಗಲು ಸರ್ಕಾರವನ್ನು ಬದಲಾಯಿಸಿ ಎಂದು ಕರೆ ನೀಡುವ ಮೂಲಕ ಪ್ರಚಾರ ಆರಂಭಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಜ್ಯದಲ್ಲಿ ಬಿಜೆಪಿ ಸ್ಕ್ಯಾಮ್​ಹಗರಣ)-ಸಮಾಜವಾದಿ ಪಕ್ಷ, ಕಾಂಗ್ರೆಸ್, ಅಖಿಲೇಶ್ ಹಾಗೂ ಮಾಯಾವತಿ ವಿರುದ್ಧ ಸ್ಪರ್ಧಿಸುತ್ತಿದೆ. ರಾಜಕೀಯ ಪ್ರೇರಣೆಯಿಂದ ರಾಜ್ಯದಲ್ಲಿ ಹಂತಕರು, ಗೂಂಡಾಗಳ ಸಂಖ್ಯೆ ಹೆಚ್ಚಾಗಿದೆ. ಇಂತಹವರ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನನ್ನನ್ನು ಪ್ರಧಾನಿಯನ್ನಾಗಿಸಿದ ಉತ್ತರಪ್ರದೇಶಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧನಿದ್ದೇನೆ. ಕೇಂದ್ರ ಸರ್ಕಾರ ರಾಜ್ಯದ ಅಭಿವೃದ್ಧಿಗಾಗಿ ಹಣ ಬಿಡುಗಡೆ ಮಾಡಿದರೂ, ಅದು ಬಡವರನ್ನು ತಲುಪುತ್ತಿಲ್ಲ. ಜನರಿಗೆ ವೈದ್ಯಕೀಯ ಸೌಕರ್ಯ ಒದಗಿಸುವ ಸಲುವಾಗಿ ಉತ್ತರ ಪ್ರದೇಶ ಸರ್ಕಾರಕ್ಕೆ 4,000 ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು. ಅದರಲ್ಲಿ 250 ಕೋಟಿ ರೂಪಾಯಿ ಕೂಡ

ಉಪಯೋಗಿಸಿಕೊಂಡಿಲ್ಲ. ನಂತರ, ಈ ಮೊತ್ತವನ್ನು ನಾವು 7,000 ಕೋಟಿ ರೂಪಾಯಿಗೇರಿಸಿದೆವು. ಅದರಲ್ಲಿ ಕೇವಲ 280 ಕೋಟಿ ರೂ. ಬಳಕೆಯಾಗಿದೆ. ಸಮಾಜವಾದಿ ಪಕ್ಷ ಕೇವಲ ವೋಟ್​ಬ್ಯಾಂಕ್ ರಾಜಕೀಯ ಮಾಡುತ್ತಿದೆ. ಉತ್ತರಪ್ರದೇಶದ ಹಣೆಬರಹ ಬದಲಾಗಬೇಕಾದಲ್ಲಿ ಸರ್ಕಾರವೇ ಬದಲಾಗಬೇಕು. ದೇಶದ ಮೊದಲ ಸ್ವಾತಂತ್ರ್ಯ ಹೋರಾಟ 1857ರಲ್ಲಿ ಮೇರಠ್​ನಿಂದಲೇ ಆರಂಭಗೊಂಡಿತ್ತು. ಇಂದು ರಾಜ್ಯ ಬಡತನದ ವಿರುದ್ಧ ಹೋರಾಡುತ್ತಿದೆ ಎಂದರು.

ಅಖಿಲೇಶ್ ತಿರುಗೇಟು: ಉತ್ತರಪ್ರದೇಶದ ಔರೈಯಾದಲ್ಲಿ ಪ್ರಚಾರ ನಡೆಸುತ್ತಿದ್ದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಪ್ರಧಾನಿ ಮೋದಿ ಟೀಕೆಗೆ ಕೂಡಲೇ ಪ್ರತಿಕ್ರಿಯಿಸಿದ್ದು, ಸ್ಕ್ಯಾಮ್ ಎಂದರೆ ‘ಸೇವ್ ಕಂಟ್ರಿ ಫ್ರಂ ಅಮಿತ್ ಷಾ ಆಂಡ್ ಮೋದಿ’ ಎಂದು ಎದುರೇಟು ನೀಡಿದ್ದಾರೆ. ಇದು, ಪ್ರಚಾರ ಕಣದಲ್ಲಿರುವ ಅಖಿಲೇಶ್ ಬೆಂಬಲಿಗರಲ್ಲಿ ಹುರುಪು ತುಂಬಿದೆ.

ಕೇಂದ್ರ ಬಜೆಟ್​ನಲ್ಲಿ ಅನುದಾನ

ಕೇಂದ್ರ ಸರ್ಕಾರ ಪ್ರಸಕ್ತ ಬಜೆಟ್​ನಲ್ಲಿ ಉತ್ತರಪ್ರದೇಶದ ರೈಲ್ವೆ ಯೋಜನೆಗಳಿಗೆ 7,000 ಕೋಟಿ ರೂ. ಅನುದಾನ ಘೊಷಿಸಿದೆ. ಇದು ಯುಪಿಎ ಸರ್ಕಾರ 2009ರಿಂದ 2014ರ ಅವಧಿಯ ನೀಡಿದ ಅನುದಾನ(ಅಂದಾಜು 1,109 ಕೋಟಿ ರೂ.)ಕ್ಕಿಂತ 6,000 ಕೋಟಿ ರೂ. ಹೆಚ್ಚಿದೆ ಎನ್ನಲಾಗಿದೆ. 2,000 ಕಿ.ಮೀ. ಹೊಸ ರೈಲ್ವೆ ಹಳಿಗಳ ಜೋಡಣೆ ಹಾಗೂ ವಿಸ್ತರಣೆಗೆ ಮೀಸಲಿರಿಸಲಾಗಿದೆ. 431 ಕಿ.ಮೀ. ಹೊಸ ಮಾರ್ಗ, ವ್ಯಾಪ್ತಿ ವಿಸ್ತರಣೆಗೆ ಅನುಮತಿ ದೊರೆತಿದೆ. ಈ ಎಲ್ಲ ಯೋಜನೆಗಳಿಗೆ 8,500 ಕೋಟಿ ವೆಚ್ಚವಾಗುತ್ತದೆ. ಇದು 1,000 ಕೋಟಿ ರೂ. ವೆಚ್ಚದ 1,371 ಕಿ.ಮೀ. ದೂರದವರೆಗೆ ವಿದ್ಯುತ್ ಸಂಪರ್ಕ ಯೋಜನೆಯನ್ನು ಕೂಡ ಒಳಗೊಂಡಿದೆ.

 ಜಾರಕಿಹೊಳಿಗೆ ರಕ್ಷಣೆ ಏಕೆ?

‘ನೋಟು ನಿಷೇಧ ನಿರ್ಧಾರವನ್ನು ವಿರೋಧಿಸುವ ಕಾಂಗ್ರೆಸ್​ಗೆ ಒಂದು ಪ್ರಶ್ನೆ ಕೇಳುತ್ತೇನೆ. ಕರ್ನಾಟಕದಲ್ಲಿ ಅವರ ಪಕ್ಷದ ಸಚಿವರ ಮನೆಯಲ್ಲೇ 150 ಕೋಟಿ ರೂ. ಸಿಕ್ಕಿದ್ದಕ್ಕೆ ಕಾರಣವೇನು? ಇಷ್ಟಿದ್ದರೂ ಅವರ ವಿರುದ್ಧ ಸರ್ಕಾರ ಈವರೆಗೂ ಕ್ರಮಕೈಗೊಳ್ಳದೇ ಇರುವುದೇಕೆ?’. ಇದು ಕಾಂಗ್ರೆಸ್ ನಾಯಕರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ನಡೆಸಿದ ವಾಕ್ಪ್ರಹಾರ. ಶನಿವಾರ ಉತ್ತರಪ್ರದೇಶದ ಮೇರಠ್​ನಲ್ಲಿ ಬಿಜೆಪಿ ಪ್ರಚಾರ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕದ ಸಣ್ಣ ಕೈಗಾರಿಕಾ ಸಚಿವರಾದ ರಮೇಶ್ ಜಾರಕಿಹೊಳಿ ನಿವಾಸದ ಮೇಲೆ ನಡೆದ ಐಟಿ ದಾಳಿ ಪ್ರಕರಣವನ್ನು ಮುಂದಿಟ್ಟುಕೊಂಡು ವಾಗ್ದಾಳಿ ನಡೆಸಿದರು. ಜ.23ರಂದು ಜಾರಕಿಹೊಳಿ ಅವರ ಗೋಕಾಕ್, ಬೆಳಗಾವಿ ಹಾಗೂ ಬೆಂಗಳೂರಿನ ನಿವಾಸಗಳ ಮೇಲೆ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳ ತಂಡ ಬ್ಯಾಂಕ್ ಖಾತೆಗಳಲ್ಲಿದ್ದ ಹಣದ ಜತೆಗೆ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿತ್ತು.

-ಏಜೆನ್ಸೀಸ್

Leave a Reply

Your email address will not be published. Required fields are marked *

Back To Top