ನರಗುಂದ: ಕಳಸಾ-ಬಂಡೂರಿ ನಾಲಾ ತಿರುವು ಯೋಜನೆಗೆ ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿರುವುದು ಉತ್ತರ ಕರ್ನಾಟಕ ಭಾಗದ ಎಲ್ಲ ರೈತರಿಗೂ ಹರ್ಷ ತಂದಿದೆ ಎಂದು ಕಳಸಾ ಬಂಡೂರಿ ಹೋರಾಟಗಾರ ವಿಜಯ ಕುಲಕರ್ಣಿ ಹೇಳಿದರು.
ಈ ಕುರಿತು ವಿಜಯವಾಣಿಯೊಂದಿಗೆ ಮಾತನಾಡಿದ ಅವರು, ಖಾನಾಪೂರ ತಾಲೂಕಿನ ಕಣಕುಂಬಿ ಗ್ರಾಮದ ಬಳಿಯಿರುವ ಮಹದಾಯಿ ನದಿಗೆ ಅಣೆಕಟ್ಟೆ ನಿರ್ವಿುಸಿ, ಆ ಮೂಲಕ ಮಲಪ್ರಭಾ ನದಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ 1.72 ಟಿಎಂಸಿ ನೀರನ್ನು ಕಳಸಾ ನಾಲೆಗೆ ತಿರುಗಿಸುವ ಈ ಮಹತ್ವದ ಯೋಜನೆಗೆ ರಾಜ್ಯ ಸರ್ಕಾರ ಸೋಮವಾರ ಆಡಳಿತಾತ್ಮಕ ಅನುಮೋದನೆ ನೀಡಿದೆ. ಅದರಂತೆ ಖಾನಾಪೂರ ತಾಲೂಕಿನ ನೆರಸೆ ಗ್ರಾಮದ ಬಳಿಯ ಬಂಡೂರಿ ಹಳ್ಳಕ್ಕೆ ಅಣೆಕಟ್ಟೆ ನಿರ್ವಿುಸಿಕೊಂಡು ಕಾಲುವೆ ಮೂಲಕ 2.18 ಟಿಎಂಸಿ ನೀರನ್ನು ಮಲಪ್ರಭಾ ನದಿಗೆ ತಿರುಗಿಸುವ ಬಂಡೂರಿ ನಾಲಾ ಯೋಜನೆಗೂ ಅನುಮೋದನೆ ನೀಡಿದ್ದು, ಈ ಭಾಗದ ರೈತರ ಬಹು ದಿನಗಳ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ.
ಕಳೆದ 22 ವರ್ಷಗಳ ರೈತರ ಹೋರಾಟಕ್ಕೆ ಸ್ಪಂದಿಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು, ಕಳಸಾ-ಬಂಡೂರಿ ಕುಡಿಯುವ ನೀರಿನ ಯೋಜನೆಗಳ ವಿಸõತ ವರದಿಗೆ ತಾತ್ವಿಕವಾಗಿ ಆಡಳಿತಾತ್ಮಕ ಅನುಮೋದನೆ ನೀಡಿರುವುದು ಸ್ವಾಗತಾರ್ಹ. ಒಟ್ಟು 885 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಯನ್ನು ರಾಜ್ಯ ಸರ್ಕಾರ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಇದರಿಂದ ಉತ್ತರ ಕರ್ನಾಟಕ ಭಾಗದ 4 ಜಿಲ್ಲೆ 9 ತಾಲೂಕಿನ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದರು.