ಉತ್ತರ ಕನ್ನಡ ಜಿಲ್ಲಾದ್ಯಂತ ಹದ್ದುಬಸ್ತು

ಕಾರವಾರ: ಲೋಕಸಭಾ ಚುನಾವಣೆಯಲ್ಲಿ ಅಕ್ರಮ ತಡೆಯಲು ಜಿಲ್ಲೆಯಲ್ಲಿ 30 ಚೆಕ್​ಪೋಸ್ಟ್​ಗಳನ್ನು ತೆರೆಯಲಾಗಿದ್ದು, ಇದುವರೆಗೆ 20 ಕಡೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಕೆ. ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂತಾರಾಜ್ಯ ಹಾಗೂ ಸೂಕ್ಷ್ಮ ಚೆಕ್​ಪೋಸ್ಟ್​ಗಳಿಗೆ ಅಳವಡಿಸಲಾದ ಸಿಸಿ ಕ್ಯಾಮರಾದ ದೃಶ್ಯಾವಳಿಗಳನ್ನು ಚುನಾವಣಾ ನಿಯಂತ್ರಣ ಕೊಠಡಿಯಲ್ಲಿ ವೀಕ್ಷಿಸುವ ವ್ಯವಸ್ಥೆ ಮಾಡಲಾಗಿದೆ.

ಅಲ್ಲದೆ, ನಗರ ಸ್ಥಳೀಯ ಸಂಸ್ಥೆಗಳ ವತಿಯಿಂದ ಜಿಲ್ಲೆಯ ವಿವಿಧ ನಗರಗಳಲ್ಲಿ ಒಟ್ಟು 206 ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಎಲ್ಲ ಕ್ಯಾಮರಾಗಳ ಫೂಟೇಜ್​ಗಳನ್ನು ಸಂಗ್ರಹಿಸಿಡಲಾಗುವುದು ಎಂದರು.

ಜಿಲ್ಲೆಯಲ್ಲಿ ರಚಿಸಲಾಗಿರುವ 30 ಚೆಕ್​ಪೋಸ್ಟ್ ಗಳಲ್ಲಿ 174 ತಂಡಗಳು ದಿನದ 24 ಗಂಟೆಯೂ ಮೂರು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿವೆ.

ಈ ಎಲ್ಲವೂ ಸಂಯುಕ್ತ ತನಿಖಾ ತಂಡಗಳಾಗಿದ್ದು ಪೊಲೀಸ್, ಅರಣ್ಯಾಧಿಕಾರಿಗಳು, ಅಬಕಾರಿ, ಕಂದಾಯ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ಪ್ರತಿ

ತಂಡದಲ್ಲಿ ಚೆಕ್​ಪೋಸ್ಟ್​ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.

ಸಿ ವಿಜಿಲ್ ಆಪ್ : ಚುನಾವಣೆಯ ಅಕ್ರಮಗಳ ಕುರಿತು ದೂರು ನೀಡುವ ಸಲುವಾಗಿ ಸೀ ವಿಜಿಲ್ ಎಂಬ ಆಪ್ ಸಿದ್ಧಪಡಿಸಲಾಗಿದೆ. ಆಂಡ್ರಾಯ್್ಡ ಮೊಬೈಲ್​ಗಳಿಗೆ ಸಪೋರ್ಟ್ ಮಾಡುವ ಈ ಆಪ್​ನಲ್ಲಿ ಲೈವ್ ಫೋಟೋ ಹಾಗೂ ವಿಡಿಯೋಗಳನ್ನು ಅಪ್​ಲೋಡ್ ಮಾಡಿ ಮಾಹಿತಿ ನೀಡಬಹುದು. ತಾಸಿನ ಒಳಗೆ ದೂರಿಗೆ ಸ್ಪಂದನೆ ದೊರೆಯಲಿದೆ ಎಂದರು.

ಸುವಿಧಾ ಆಪ್ : ಚುನಾವಣೆಯಲ್ಲಿ ಪಕ್ಷಗಳಿಗೆ ವಿವಿಧ ಅನುಮತಿ ನೀಡಲು ಸುವಿಧಾ ಎಂಬ ತಂತ್ರಾಂಶವಿದ್ದು, ಅದರಲ್ಲಿ ಅರ್ಜಿ ಸಲ್ಲಿಸಿದ 24 ಗಂಟೆಯಲ್ಲಿ ಪರವಾನಗಿ ನೀಡಲಾಗುವುದು. ಪರವಾನಗಿ ನೀಡುವ ಅಧಿಕಾರವನ್ನು ಕ್ಷೇತ್ರದ 8 ಸಹಾಯಕ ಚುನಾವಣಾಧಿಕಾರಿಗಳಿಗೆ ಒದಗಿಸಲಾಗಿದೆ ಎಂದರು. ತರಬೇತಿನಿರತ ಐಎಎಸ್ ಅಧಿಕಾರಿ ದಿಲೀಷ್ ಸಸಿ ತಂತ್ರಾಂಶಗಳ ಕುರಿತು ಮಾಹಿತಿ ನೀಡಿದರು. ಅಪರ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೇರ್, ನಗರಸಭೆ ಪೌರಾಯುಕ್ತ ಎಸ್.ಯೋಗೇಶ್ವರ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ಹಿರಿಯ ನಾಗರಿಕರಿಗೆ ಅವಕಾಶ: ಸಿಇಒ ಕರ್ನಾಟಕ ಎಂಬ ವೆಬ್​ಸೈಟ್ ಮೂಲಕ ಮತಗಟ್ಟೆಯ ಹುಡುಕಾಟ, ಮತದಾರರ ಪಟ್ಟಿಯಲ್ಲಿ ಹೆಸರಿದೆಯೇ ಎಂಬ ಮಾಹಿತಿ ಪಡೆಯಬಹುದು. ಅಲ್ಲದೆ, ಅಂಗವಿಕಲ ಮತದಾರರು ತಮಗೆ ಬೇಕಾದ ವ್ಹೀಲ್ ಚೇರ್ ಮುಂತಾದ ಸೌಲಭ್ಯ ನೋಂದಣಿ ಮಾಡಿಕೊಳ್ಳಬಹುದು. ಹಿರಿಯ ನಾಗರಿಕರಿಗೆ ಮತಗಟ್ಟೆಯಲ್ಲಿ ವಿಶೇಷ ಸೌಲಭ್ಯ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹರೀಶ ಕುಮಾರ್ ತಿಳಿಸಿದರು.

ಪರೀಕ್ಷೆ ಪಾಸಾಗ್ಬೇಕು
ಕಾರವಾರ:
ಚುನಾವಣಾ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳೂ ಈ ಸಂಬಂಧ ನಡೆಸುವ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ತಿಳಿಸಿದರು. ಜಿಲ್ಲಾ ರಂಗಮಂದಿರದಲ್ಲಿ ನಡೆದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರವಾರ ಮಾಸ್ಟರ್ ಟ್ರೈನರ್​ಗಳಿಗೆ ಹಮ್ಮಿಕೊಳ್ಳಲಾಗಿದ್ದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಲೋಕಸಭೆ ಚುನಾವಣೆಗೆ ನಿಯೋಜನೆಗೊಂಡ ಮತಗಟ್ಟೆ ಅಧಿಕಾರಿಗಳು ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳು ಜಿಲ್ಲಾಡಳಿತ ನಡೆಸುವ ಚುನಾವಣಾ ಪರೀಕ್ಷೆಯಲ್ಲಿ ಕಡ್ಡಾಯವಾಗಿ ಉತ್ತೀರ್ಣವಾಗಬೇಕು. ಮೊದಲ ಪ್ರಯತ್ನದಲ್ಲಿ ಉತ್ತೀರ್ಣರಾಗುವುದು ಒಳಿತು, ಕೊನೆಯ ಪಕ್ಷ ಎರಡನೇ ಹಂತದಲ್ಲಿ ಕಡ್ಡಾಯವಾಗಿ ಉತ್ತೀರ್ಣರಾಗಲೇಬೇಕು ಎಂದು ಸೂಚಿಸಿದ್ದಾರೆ. ಪ್ರಸ್ತುತ ತರಬೇತಿಯಲ್ಲಿ ಎಲ್ಲ ಮಾಸ್ಟರ್ ಟ್ರೈನರ್​ಗಳು ಶ್ರದ್ಧೆಯಿಂದ ತರಬೇತಿ ಮತ್ತು ಪ್ರಯೋಗದಲ್ಲಿ ಭಾಗವಹಿಸಿ ಶೇ.100ರಷ್ಟು ಕಲಿಯಲೇಬೇಕು. ನಂತದ ಮಾಸ್ಟರ್ ಟ್ರೈನರ್​ಗಳು ಸೆಕ್ಟರ್ ಅಧಿಕಾರಿಗಳಿಗೆ ತರಬೇತಿ ನೀಡಬೇಕು ಹಾಗೂ ಸೆಕ್ಟರ್ ಅಧಿಕಾರಿಗಳು ಮತಗಟ್ಟೆ ಅಧಿಕಾರಿಗಳು ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ನೀಡಬೇಕು. ನಂತರ ಅಪರ ಜಿಲ್ಲಾಧಿಕಾರಿಗಳು ಹಾಗೂ ತರಬೇತಿ ನೋಡಲ್ ಅಧಿಕಾರಿಗಳು ಪರೀಕ್ಷೆ ತೆಗೆದುಕೊಳ್ಳುವರು ಎಂದರು. ಜಿಪಂ ಸಿಇಒ ಎಂ.ರೋಷನ್ ಮಾತನಾಡಿ, ಪ್ರತಿ ಮತಗಟ್ಟೆಗಳಲ್ಲಿ ಹಾಗೂ ಆಯಾ ಸೆಕ್ಟರ್ ಹಂತದಲ್ಲಿ ಕ್ಷೇಮಾಧಿಕಾರಿಗಳನ್ನು ನೇಮಿಸಲಾಗಿದೆ. ಚುನಾವಣಾ ಕರ್ತವ್ಯದಲ್ಲಿರುವ ಅಧಿಕಾರಿಗಳ ಊಟ, ವಸತಿ ಸೌಲಭ್ಯಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಇರಲಿದೆ. ಅವುಗಳನ್ನು ಉತ್ತಮವಾಗಿ ನಿರ್ವಹಿಸಬೇಕು ಎಂದರು. ರಾಜ್ಯಮಟ್ಟದ ಮಾಸ್ಟರ್ ಟ್ರೈನರ್ ಎನ್.ಜಿ. ನಾಯಕ್ ತರಬೇತಿ ನೀಡಿದರು. ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆರು ಮಾಸ್ಟರ್ ಟ್ರೈನರ್​ಗಳಂತೆ 48 ಮಂದಿ ಮಾಸ್ಟರ್ ಟ್ರೈನರ್​ಗಳು ತರಬೇತಿಯಲ್ಲಿ ಇವಿಎಂ ಜೋಡಣೆ, ಮತಗಟ್ಟೆ ಶಿಸ್ತು, ಸೇರಿ ವಿವಿಧ ಪ್ರಾಯೋಜಿತ ತರಬೇತಿಗಳನ್ನು ಪಡೆದರು.