ಗುತ್ತಲ: ವಿರಾಜ ಸೇವೆಯಲ್ಲಿರುವ ಭಗವಂತ, ಏಕಾಂತ ಸೇವೆಯಲ್ಲಿರುವ ಭಗವಂತ, ರಥಾರೂಢ ಭಗವಂತನ ದರ್ಶನ ಮಾಡಿದರೆ ಪುನರ್ಜನ್ಮ ಎನ್ನುವುದು ಇರುವುದಿಲ್ಲ. ಪಾಪಗಳು ಪರಿಹಾರವಾಗಿ, ಪುಣ್ಯಗಳು ಲಭಿಸಿ ಭಗವಂತನ ಶ್ರೇಷ್ಠ ಅನುಗ್ರಹವಾಗುತ್ತದೆ ಎಂದು ಮಂತ್ರಾಲಯ ಮಠದ ಪೀಠಾಧೀಪತಿ ಸುಬುಧೇಂದ್ರ ತೀರ್ಥ ಶ್ರೀಗಳು ಹೇಳಿದರು.
ಸಮೀಪದ ಹೊಸರಿತ್ತಿಯ ಧೀರೇಂದ್ರತೀರ್ಥ ಪಾದಂಗಳವರ 235ನೇ ಆರಾಧನಾ ಮಹೋತ್ಸವದ ಅಂಗವಾಗಿ ಭಾನುವಾರ ಉತ್ತರಾರಾಧನೆ ಕಾರ್ಯಕ್ರಮದ ಅಂಗವಾಗಿ ರಥೋತ್ಸವಕ್ಕೆ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು.
ಹೊಸರಿತ್ತಿ ಕ್ಷೇತ್ರದಲ್ಲಿ ಧೀರೇಂದ್ರ ಸ್ವಾಮಿಗಳು ವಿರಾಜಮಾನರಾಗಿ, ರಾಘವೇಂದ್ರ ಸ್ವಾಮಿಗಳ ಅನುಗ್ರಹವನ್ನು ಸಮಸ್ತ ಸದ್ಭಕ್ತರಿಗೂ ದಯಪಾಲಿಸುತ್ತಿದ್ದಾರೆ. ಮೂಲ ರಾಮದೇವರು ರಥಾರೂಢರಾಗಿ ಸಕಲ ಭಕ್ತರನ್ನು ತಮ್ಮ ಕೃಪಾ ದೃಷ್ಟಿಯಿಂದ ಪುನೀತರನ್ನಾಗಿ ಮಾಡಲಿದ್ದಾರೆ ಎಂದರು.
ಸಕಲರೂ ತಮ್ಮ ತಮ್ಮ ಧರ್ಮ, ಭಕ್ತಿ ಮಾರ್ಗದಲ್ಲಿ ನಡೆಯಬೇಕು, ಅಂದಾಗ ಮಾತ್ರ ಜೀವನದಲ್ಲಿ ಶಾಂತಿ ನೆಮ್ಮದಿ ಪಡೆಯಲು ಸಾಧ್ಯ. ಲೋಕದಲ್ಲಿ ಕರೋನಾದಂತ ಅನೇಕ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗುತ್ತಿವೆ. ಇಂತಹ ಸಂದರ್ಭದಲ್ಲಿ ಕಮಲಾನಾಥನ ವಾಯುವ್ಯ ದೇವರ ವಿಶೇಷ ಅನುಗ್ರಹದಿಂದ ಎಲ್ಲ ರೋಗಗಳು ನಿವಾರಣೆಯಾಗುತ್ತವೆ ಎಂದರು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಪೂರ್ಣ ಕುಂಭ ಹೊತ್ತ ಮಹಿಳೆಯರು, ಮಹಿಳೆಯರ ಕೋಲಾಟದೊಂದಿಗೆ ರಥೋತ್ಸವವು ವಿಜೃಂಭಣೆಯಿಂದ ಜರುಗಿತು.