ಉತ್ತಮ ಶಿಕ್ಷಣ ಪಡೆದು ಭವಿಷ್ಯ ರೂಪಿಸಿಕೊಳ್ಳಿ

ವಿಜಯವಾಣಿ ಸುದ್ದಿಜಾಲ ಹುಮನಾಬಾದ್
ವಿದ್ಯಾರ್ಥಿಗಳು ತಮ್ಮ ಜೀವನ ರೂಪಿಸಿಕೊಳ್ಳಲು ಹಾಗೂ ಗುರಿ ಸಾಧಿಸಲು ಉತ್ತಮ ಶಿಕ್ಷಣ ಪಡೆಯಬೇಕು ಎಂದು ನಾಗಿಣಿ ಧಾರಾವಾಹಿ ನಟಿ ದೀಪಿಕಾ ದಾಸ್ ಹೇಳಿದರು.

ಹಳ್ಳಿಖೇಡ (ಬಿ)ದ ಜೈ ವರಲಕ್ಷ್ಮೀ ಮಾತಾ ಶಿಕ್ಷಣ ಸಂಸ್ಥೆಯ ಸರಸ್ವತಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ 16ನೇ ವಾರ್ಷಿಕೋತ್ಸವ ಹಾಗೂ ಚಿಣ್ಣರ ಮೇಳ ಉದ್ಘಾಟಿಸಿದ ಅವರು, ನಾಗನಾಥ ಸ್ವಾಮಿ ದೇವಸ್ಥಾನದಿಂದ ಹಳ್ಳಿಖೇಡ (ಬಿ) ಗ್ರಾಮ ತನ್ನದೇ ಆದ ವೈಶಿಷ್ಟ್ಯ ಹೊಂದಿದೆ. ಸರಸ್ವತಿ ಶಾಲೆಯಲ್ಲಿ ಆಡಳಿತ ಮಂಡಳಿ ಹಾಗೂ ಶಿಕ್ಷಕರ ಪರಿಶ್ರಮದಿಂದ ಉತ್ತಮ ಶಿಕ್ಷಣ ನೀಡುತ್ತಿರುವುದು ವಿದ್ಯಾಥರ್ಿಗಳ ಸಾಧನೆ ಸಾಕ್ಷಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕರಡ್ಯಾಳದ ಶ್ರೀ ಚನ್ನಬಸವ ಗುರುಕುಲ ವಿಜ್ಞಾನ ಪಿಯು ಕಾಲೇಜಿನ ಪ್ರಾಚಾರ್ಯ ಬಸವರಾಜ ಮೋಳಕೇರೆ ಮಾತನಾಡಿ, ಹಳ್ಳಿಖೇಡ(ಬಿ) ಶಿಕ್ಷಣ ಕಾಶಿ ಎಂದರೂ ತಪ್ಪಾಗದು. ಹಿಂದೆ ಇಲ್ಲಿನ ವಿದ್ಯಾರ್ಥಿಗಳು ಅನ್ಯ ಜಿಲ್ಲೆಗಳಿಗೆ ಹೋಗಿ ವ್ಯಾಸಂಗ ಮಾಡುತ್ತಿದ್ದರು. ಆದರೀಗ ಇಲ್ಲೇ ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಂಡಿದ್ದು, ಇಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ ಎಂದರು.

ಸಾನ್ನಿಧ್ಯ ವಹಿಸಿದ್ದ ರಾಜೇಶ್ವರದ ಶ್ರೀ ರುದ್ರಮುನಿ ಶಿವಾಚಾರ್ಯ ಮಾತನಾಡಿ, ಇಂದಿನ ಪರಿಸ್ಥಿತಿಯಲ್ಲಿ ಸಂಸ್ಕಾರಯುತ ಶಿಕ್ಷಣದ ಅಗತ್ಯ ಇರುವುದನ್ನು ಮನಗಂಡ ಅಧ್ಯಕ್ಷ ದೇವರಾಜ ಹೊಡಮನಿ ಹಾಗೂ ಆಡಳಿತ ಮಂಡಳಿ ಮತ್ತು ಶಿಕ್ಷಕರು ಪರಿಣಾಮಕಾರಿ ಬೋಧನೆಯತ್ತ ಹೆಜ್ಜೆ ಇಟ್ಟಿದ್ದಾರೆ ಎಂದು ಶ್ಲಾಘಿಸಿದರು.

ಸ್ಥಳೀಯ ಚಿಕ್ಕಮಠದ ಶ್ರೀ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ, ಬ್ರಹ್ಮಕುಮಾರಿಯ ಸುಮನ್ ಬಹೇನ್ ನೇತೃತ್ವ, ಸಂಸ್ಥೆ ಅಧ್ಯಕ್ಷ ದೇವರಾಜ ಹೊಡಮನಿ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಮುಖ್ಯಾಧಿಕಾರಿ ಮೀನಾಕುಮಾರಿ ಬೋರಾಳಕರ್, ಕಾರ್ಯನಿರ್ವಹಕ ಅಭಿಯಂತರ ಸುನೀಲ ಪ್ರಭಾ, ಬ್ರಿಮ್ಸ್ ವೈದ್ಯಾಧಿಕಾರಿ ಡಾ.ಉದಯ ಪಾಟೀಲ್, ಸಾಹಿತಿ ಸುರೇಂದ್ರ ಹೊಡಮನಿ, ಪ್ರಮುಖರಾದ ರಾಜಲಿಂಗಬಶೆಟ್ಟಿ, ನಾಗೇಂದ್ರ ಸೋರಾಳೆ ಇತರರಿದ್ದರು.

ಮುಖ್ಯಗುರು ಶೋಭಾ ಕಾಡೋದೆ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕಿ ನಿರ್ಮಲಾ ಶೇರಿ ಸ್ವಾಗತಿಸಿದರು. ಕಾರ್ಯದರ್ಶಿ ವೀರಶೆಟ್ಟಿ ಹೊಡಮನಿ ವಂದಿಸಿದರು. ಜ್ಯೋತಿ ಸಜ್ಜನ ನಿರೂಪಣೆ ಮಾಡಿದರು. ಎಸ್ಎಸ್ಎಲ್ಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಹಾಗೂ ಉತ್ತಮ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.