ಉತ್ತಮ ಭಾವನೆ ಬೆಳೆಸಲು ಸಂಗೀತ ಸಹಕಾರಿ

ನೆಲಮಂಗಲ: ಮನುಷ್ಯನಲ್ಲಿ ಸದ್ಭಾವನೆ ಬೆಳೆಸುವಲ್ಲಿ ಸಂಗೀತ ಕಾರ್ಯಕ್ರಮ ಸಹಕಾರಿ ಎಂದು ಬೇವೂರು ಮಠದ ಶ್ರೀ ಮೃತ್ಯುಂಜಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ಪಟ್ಟಣದ ಪವಾಡ ಶ್ರೀ ಬಸವಣ್ಣ ದೇವರಮಠದಲ್ಲಿ ಶನಿವಾರ ಆಯೋಜಿಸಿದ್ದ ಸಂಗೀತ ಸಿಂಚನಾ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂಗೀತಕ್ಕೆ ಶತಮಾನಗಳ ಇತಿಹಾಸವಿದೆ. ಸಂಗೀತದಿಂದ ಒತ್ತಡಗಳನ್ನು ದೂರಮಾಡಿ ಮನಸ್ಸಿನ ಭಾವನೆ ಪರಿಶುದ್ಧವಾಗಿರಿಸಿಕೊಂಡು ನೆಮ್ಮದಿ ಜೀವನಕ್ಕೆ ನೆರವಾಗುತ್ತದೆ ಎಂದರು.

ಈ ನಿಟ್ಟಿನಲ್ಲಿ ಪ್ರತಿ ತಿಂಗಳ ಹುಣ್ಣಿಮೆಯಂದು ಸಂಗೀತ ಸಿಂಚನಾ ಶೀರ್ಷಿಕೆಯಡಿ ಕಾರ್ಯಕ್ರಮ ಆಯೋಜಿಸಿ ಸಂಗೀತ ಕಲಾವಿದರಿಗೆ ವೇದಿಕೆ ಕಲ್ಪಿಸಿಕೊಡುತ್ತಿರುವುದು. ಸಮಾಜದ ವಿವಿಧ ಸ್ತರಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಸಮಾಜ ಮುಖಿ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುತ್ತಿರುವ ಶ್ರೀಮಠದ ಕಾರ್ಯ ಪ್ರಸಂಶನೀಯ ಎಂದರು.

ಬೆಂಗಳೂರು ಗುರುವಣ್ಣ ದೇವರಮಠದ ಶ್ರೀ ನಂಜುಂಡ ಸ್ವಾಮೀಜಿ ಮಾತನಾಡಿ, ಮಾನವನ ಅತಿಯಾಸೆ, ವ್ಯಾಮೋಹಗಳಿಂದಾಗಿ ನೆಮ್ಮದಿ ಇಲ್ಲದಂತಾಗಿದೆ. ಆದ್ದರಿಂದ ಯಶಸ್ವಿ ಜೀವನ ನಿರ್ವಹಣೆಗೆ ಅವಶ್ಯವಿರುವ ಧರ್ಮ, ಸಂಸ್ಕೃತಿ ಸಂಸ್ಕಾರ ಅಳವಡಿಸಿಕೊಂಡು ಅನೇಕ ಸಂಕಷ್ಟಗಳಿಂದ ಪಾರಾಗಬೇಕು ಎಂದರು.

ತಾಲೂಕಿನಾದ್ಯಂತ ಗ್ರಾಮೀಣಭಾಗದ ಆರೋಗ್ಯ ಸಹಾಯಕಿಯರು, ಅಂಗನವಾಡಿ ಕಾರ್ಯಕರ್ತೆಯರು, ಅರ್ಚಕರನ್ನು ಸನ್ಮಾನಿಸಲಾಯಿತು.

ಸಾನ್ನಿಧ್ಯವಹಿಸಿದ ಶ್ರೀ ಸಿದ್ದಲಿಂಗಸ್ವಾಮೀಜಿ ತರಕಾರಿ ವರ್ತಕರ ಸಂಘದ ಪದಾಧಿಕಾರಿಗಳು ಮತ್ತು ಸಂಗೀತ ಸಿಂಚನಾ ನಡೆಸಿಕೊಟ್ಟ ಬೆಂಗಳೂರು ಜೀವಸ್ವರ ಸಂಗೀತ ಅಕಾಡೆಮಿ ಕಲಾವಿದರನ್ನು ಮಠದಿಂದ ಗೌರವಿಸಿದರು.

ಚೆನ್ನಪಟ್ಟಣ ವಿರಕ್ತಮಠದ ಶ್ರೀ ಶಿವರುದ್ರ ಸ್ವಾಮೀಜಿ, ಅಕ್ಕನ ಬಳಗದ ಪದಾಧಿಕಾರಿಗಳಾದ ಜಗದಾಂಬಾ, ಪ್ರೇಮಮ್ಮ, ನಿರ್ಮಲಾ ಜಯದೇವಯ್ಯ, ಗೌರಮ್ಮ, ಪ್ರಾಂಶುಪಾಲ ಎಂ.ಆರ್.ವೀರಪ್ಪಾಜಿ, ಶಿಕ್ಷಕ ಗುರುಮೂರ್ತಿ, ಅಭಿಲಾಷ್, ಮುಖಂಡ ರುದ್ರೇಶಯ್ಯ ಇದ್ದರು.