ನರಗುಂದ: ಗುಣಮಟ್ಟದ ಶಿಕ್ಷಣದಿಂದ ವಿದ್ಯಾರ್ಥಿ ಜೀವನಕ್ಕೆ ಬೇಕಾದ ಇಡೀ ಸರ್ವಸ್ವವನ್ನೇ ಪಡೆದುಕೊಳ್ಳಬಹುದು ಎಂದು ನವೋದಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಿ.ವಿ. ಸೋಮಾಪೂರ ಹೇಳಿದರು.
ಪಟ್ಟಣದ ಅಧ್ಯಾಪಕನಗರ ಬಡಾವಣೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ನವೋದಯ ಶಿಕ್ಷಣ ಸಂಸ್ಥೆಯ ಪ್ರಾಥಮಿಕ, ಪ್ರೌಢ, ಸಂಯುಕ್ತ ಪದವಿ ಪೂರ್ವ ಕಾಲೇಜ್ ವಿದ್ಯಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ನವೋದಯ ಶಿಕ್ಷಣ ಸಂಸ್ಥೆಯಲ್ಲಿ ಗ್ರಾಮೀಣ ಪ್ರದೇಶದ ಹಲವಾರು ಬಡ ಮಕ್ಕಳು ಪ್ರವೇಶಾತಿ ಪಡೆದುಕೊಂಡಿದ್ದಾರೆ. ಎಲ್ಲರಿಗೂ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದರಿಂದ ಉನ್ನತ ಸಾಧನೆಗೈದು ಉತ್ತಮ ಬದುಕು ರೂಪಿಸಿಕೊಳ್ಳಲು ಸಹಕಾರಿಯಾಗಿದೆ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಗುರುನಾಥ ಹೂಗಾರ ಮಾತನಾಡಿ, ಸರ್ಕಾರಿ ಶಾಲೆ ಮಕ್ಕಳಿಗೆ ಸಾಕಷ್ಟು ಶೈಕ್ಷಣಿಕ ಸೌಲಭ್ಯ ನೀಡುತ್ತಿರುವ ಸರ್ಕಾರ ಪ್ರತಿಯೊಬ್ಬರ ಏಳಿಗೆಗೆ, ಜ್ಞಾನಾರ್ಜನೆಗಾಗಿ ಶ್ರಮಿಸುತ್ತಿದೆ. ಅರ್ಹರು ಯೋಜನೆಗಳ ಲಾಭ ಪಡೆದು ದೇಶಕ್ಕೆ ಕೀರ್ತಿ ತರುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ವಿ.ಕೆ. ಗುಡಿಸಾಗರ, ಬಸವರಾಜ ಸಾಬಳೆ, ಎಚ್.ವಿ. ಹುಚರಡ್ಡಿ, ಎಸ್.ವಿ. ಸೋಮಾಪೂರ, ಫಕೀರಪ್ಪ ಜೋಗಣ್ಣವರ ಮಾತನಾಡಿದರು. ಕಳೆದ ವರ್ಷ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ಪ್ರವೀಣ ಹುಚರಡ್ಡಿ, ಕೃಷ್ಣ ಲಿಂಗಧಾಳ, ನವೋದಯ ಶಾಲೆ ಪ್ರಾಚಾರ್ಯ ಆರ್.ಎಸ್. ಪವಾರ, ಶಿಕ್ಷಕ ಚವಡಿ, ಎಚ್.ಎಂ. ಕುಂಬಾರ, ಐ.ಎಂ. ತಹಸೀಲ್ದಾರ್, ಇತರರಿದ್ದರು.