ಉತ್ತಮ ಚಿಂತನೆ

ಜಲವಿವಾದಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಏಕೈಕ ಶಾಶ್ವತ ನ್ಯಾಯಮಂಡಳಿಯನ್ನು ರಚಿಸುವ ಕುರಿತಾದ ಮಸೂದೆ ಈಚೆಗೆ ಲೋಕಸಭೆಯಲ್ಲಿ ಮಂಡನೆಯಾಗಿದೆ. ಈ ಮಸೂದೆ ಕಾನೂನಾಗುವ ದಾರಿ ಇನ್ನೂ ದೂರವಿದೆ ಎಂಬುದು ನಿಜವಾದರೂ, ಇದೊಂದು ಉತ್ತಮ ಚಿಂತನೆ ಎಂದು ಧಾರಾಳವಾಗಿ ಹೇಳಬಹುದು. ದೇಶದ ಹಲವು ರಾಜ್ಯಗಳು ಜಲವಿವಾದಗಳಲ್ಲಿ ಸಿಲುಕಿಕೊಂಡು ತೊಳಲಾಡುತ್ತಿರುವ ಹಾಗೂ ಕೆಲವೊಮ್ಮೆ ವಿವಾದ ವಿವಿಧ ಹಂತಗಳ ಕೋರ್ಟ್​ವೆುಟ್ಟಿಲೇರಿ ಕೇಂದ್ರ ಸರ್ಕಾರವೂ ಒಂದು ಪಕ್ಷವಾಗುವ ಸನ್ನಿವೇಶಗಳ ಹಿನ್ನೆಲೆಯಲ್ಲಿ ಇಂಥದೊಂದು ನ್ಯಾಯಮಂಡಳಿಯ ಪರಿಕಲ್ಪನೆ ಸ್ವಲ್ಪ ಆಶಾವಾದ ತರುವಂಥದು. ನೀರು ಭಾವನಾತ್ಮಕ ವಿಷಯವೂ ಆಗಿರುವುದರಿಂದಾಗಿ ಇಂಥ ವಿವಾದಗಳಲ್ಲಿ ಹಿಂಸಾಚಾರಗಳು, ಪ್ರಾಣಹಾನಿ, ಆಸ್ತಿಪಾಸ್ತಿ ನಷ್ಟ ಸಂಭವಿಸಿದ ಉದಾಹರಣೆಗಳೂ ಇವೆ. ಕರ್ನಾಟಕ ಹಾಗೂ ತಮಿಳುನಾಡಿನ ನಡುವೆ ದಶಕಗಳಿಂದ ಇರುವ ಕಾವೇರಿ ಜಲ ಹಂಚಿಕೆ ವಿವಾದವನ್ನು ಇಲ್ಲಿ ಪ್ರಾತಿನಿಧಿಕವಾಗಿ ಉದಾಹರಿಸಬಹುದು. ದೇಶವೊಂದರ ರಾಜ್ಯಗಳ ನಡುವೆ ವಿವಾದಗಳು ಇರಬಾರದು ಎಂಬುದು ಆದರ್ಶದ ಮಾತಾದರೂ, ವಾಸ್ತವದಲ್ಲಿ ಹಾಗಿರುವುದು ಕಷ್ಟ. ಆದರೂ ವಿವಾದಗಳಿದ್ದಲ್ಲಿ ಪರಸ್ಪರ ಮಾತುಕತೆ ಮೂಲಕ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವುದು ಪ್ರಜಾಪ್ರಭುತ್ವದಲ್ಲಿ ವಿವೇಕಯುತ ಮಾರ್ಗ. ಅಂಥ ಸಂದರ್ಭದಲ್ಲಿ ಇಂಥ ನ್ಯಾಯಮಂಡಳಿಗಳು ಉತ್ತಮ ವೇದಿಕೆಯಾಗಿ ಕಾರ್ಯನಿರ್ವಹಿಸುವಂತಾಗಬೇಕು. ಸದ್ಯ ಎಂಟು ನ್ಯಾಯಮಂಡಳಿಗಳು ಅಸ್ತಿತ್ವದಲ್ಲಿದ್ದು, ಬೇರೆ ಬೇರೆ ಜಲವಿವಾದಗಳ ವಿಚಾರಣೆಯಲ್ಲಿ ಹೈರಾಣಾಗಿವೆ. ಇದರಿಂದ ವಿಳಂಬವೂ ಆಗುತ್ತಿದೆ. ಹೀಗಾಗಿ ವಿವಾದದ ಉಭಯ ಪಕ್ಷಗಾರರಿಗೂ ಸಮಯ ಹಾಗೂ ಹಣದ ನಷ್ಟವಾಗುತ್ತಿದೆ; ಆಯಾ ರಾಜ್ಯದಲ್ಲಿ ಕೈಗೊಳ್ಳಲು ಬಯಸುವ ಅಭಿವೃದ್ಧಿ ಯೋಜನೆಗಳಿಗೂ ಹಿನ್ನಡೆಯಾಗುತ್ತಿ್ತೆ. ಜಲ ನ್ಯಾಯಮಂಡಳಿಗಳು ನೀಡುವ ತೀರ್ಪಿನ ಬಗ್ಗೆ ಆಕ್ಷೇಪಗಳು ವ್ಯಕ್ತವಾಗುವುದೂ ಹೊಸದೇನಲ್ಲ. ಇಂಥ ಸನ್ನಿವೇಶ ತಪ್ಪಿಸಲೆಂದು, ಮಸೂದೆಯಲ್ಲಿ ವಿವಾದ ನಿರ್ಣಯ ಸಮಿತಿ ರಚನೆಯ ಪ್ರಸ್ತಾಪ ಮಾಡಲಾಗಿದೆ. ಈ ಸಮಿತಿಯು ಮೊದಲು ವಿವಾದದ ಪಕ್ಷಗಾರರ ನಡುವಣ ಭಿನ್ನಾಭಿಪ್ರಾಯವನ್ನು ಬಗೆಹರಿಸುವ ಪ್ರಯತ್ನ ನಡೆಸುತ್ತದೆ. ಸಂಧಾನದ ಮೂಲಕ ವಿವಾದ ಬಗೆಹರಿಯುವ ಸಾಧ್ಯತೆಯಿದ್ದಲ್ಲಿ ಇದರಿಂದ ಅನುಕೂಲವಾಗುತ್ತದೆ. ಅಲ್ಲಿ ಬಗೆಹರಿಯದಿದ್ದಲ್ಲಿ ವಿವಾದವನ್ನು ನ್ಯಾಯಮಂಡಳಿಗೆ ಕಳಿಸಲಾಗುತ್ತದೆ. ಇದರ ಜತೆಗೆ, ಅಂತಾರಾಜ್ಯ ನದಿಗಳು, ಅವುಗಳ ನೀರಿನ ಹಂಚಿಕೆ ಇತ್ಯಾದಿ ಬಗ್ಗೆ ಸಮಗ್ರವಾಗಿ ಅಂಕಿಅಂಶ ಮಾಹಿತಿ ಕಲೆಹಾಕಲು ಒಂದು ಸಂಸ್ಥೆಯನ್ನೂ ರಚಿಸಲಾಗುತ್ತದೆ. ಇದರಿಂದ ಜಲ ನ್ಯಾಯಮಂಡಳಿಯ ಕೆಲಸ ಹಗುರವಾಗುತ್ತದೆ.

ಮಸೂದೆಯಲ್ಲಿರುವ ಇನ್ನೊಂದು ಗಮನಾರ್ಹ ಅಂಶವೆಂದರೆ, ಕಾಲಮಿತಿಯಲ್ಲಿ ವಿವಾದ ಇತ್ಯರ್ಥಪಡಿಸಬೇಕೆಂಬುದು. ಹಲವು ವಿವಾದಗಳು ದಶಕಗಳೇ ಸಂದರೂ ಬಗೆಹರಿಯದಿರುವುದರಿಂದ ಇದೊಂದು ಉತ್ತಮ ಉಪಕ್ರಮವೆನ್ನಬಹುದು. ಒಂದು ವಿವಾದದ ಪರಿಹಾರಕ್ಕೆ ನಾಲ್ಕೂವರೆ ವರ್ಷಗಳ ಗರಿಷ್ಠ ಕಾಲಮಿತಿಯನ್ನು ಹಾಕಲಾಗಿದೆ. ಸದ್ಯ ಇಂಥ ಯಾವುದೇ ಕಾಲಮಿತಿಯಿಲ್ಲ ಎಂಬುದನ್ನು ನಾವು ಗಮನಿಸಬೇಕು. ನೀರು ರಾಜ್ಯ ವಿಷಯಪಟ್ಟಿಯಲ್ಲಿ ಬರುವುದರಿಂದ, ಇಂಥದೊಂದು ಮಸೂದೆ ತರುವ ಮುನ್ನ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳ ಅಭಿಪ್ರಾಯ ಪಡೆಯಬೇಕಿತ್ತೇ ಎಂಬ ಜಿಜ್ಞಾಸೆಯೂ ಇದೆ. ಹೀಗಿದ್ದರೂ, ಈ ಉದ್ದೇಶಕ್ಕಾಗಿ ಕಾನೂನು ರಚಿಸುವ ಅಧಿಕಾರವನ್ನು ಸಂವಿಧಾನದ 262ನೇ ವಿಧಿಯು ಕೇಂದ್ರ ಸರ್ಕಾರಕ್ಕೆ ನೀಡುತ್ತದೆ. ಉದ್ದೇಶ ಉತ್ತಮವಾಗಿರುವಾಗ, ಇಬ್ಬರಿಗೂ ಪ್ರಯೋಜನಕಾರಿಯಾಗಿರುವಾಗ ಅದಕ್ಕೆ ವಿರೋಧ ವ್ಯಕ್ತವಾಗಲಾರದು ಎಂದು ಭಾವಿಸಬಹುದು.

Leave a Reply

Your email address will not be published. Required fields are marked *