ಧಾರವಾಡ: ಭಾರತೀಯ ಜೈನ್ ಮಿಲನ್ ವಲಯ 8ರ ವತಿಯಿಂದ ಆಯೋಜಿಸಿದ್ದ 2019- 20ನೇ ಸಾಲಿನ ರಾಜ್ಯ ಮಟ್ಟದ ಜಿನ ಭಜನಾ ಸ್ಪರ್ಧೆಯ ಅಂತಿಮ ಸುತ್ತಿನ ಸ್ಪರ್ಧೆಗಳು ಭಾನುವಾರ ನಡೆದವು. ಕಿರಿಯರ ವಿಭಾಗದಲ್ಲಿ ಬೆಂಗಳೂರಿನ ನಾದ ತಂಡ ಪ್ರಥಮ ಬಹುಮಾನ ಪಡೆದು 15,000 ರೂ. ನಗದನ್ನು ತನ್ನದಾಗಿಸಿಕೊಂಡಿತು. ಹಿರಿಯರ ವಿಭಾಗದಲ್ಲಿ ಮಂಗಳೂರು ವಿಭಾಗದ ಉಜಿರೆಯ ಶುಕ್ಲ ತಂಡ ಪ್ರಥಮ ಬಹುಮಾನ 35,000 ರೂ. ನಗದನ್ನು ಗೆದ್ದುಕೊಂಡಿತು.
ಇಲ್ಲಿನ ಸತ್ತೂರಿನ ಡಾ. ಡಿ. ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಧರ್ಮಸ್ಥಳ ಹೆಗ್ಗಡೆ ಪರಿವಾರ ಸಂಯೋಜಿಸಿದ್ದ 2 ದಿನಗಳ ಜಿನ ಭಜನಾ ಸ್ಪರ್ಧೆಯ ವಿಜೇತ ತಂಡಗಳಿಗೆ ಭಾನುವಾರ ಸಂಜೆ ಏರ್ಪಡಿಸಿದ್ದ ಸಮಾರಂಭದಲ್ಲಿ ಚಲನಚಿತ್ರ ರಂಗದ ಹಿರಿಯ ನಟ ರಮೇಶ ಭಟ್ ಹಾಗೂ ಹಿನ್ನೆಲೆ ಗಾಯಕಿ ಅರ್ಚನಾ ಉಡುಪ ಬಹುಮಾನ ವಿತರಿಸಿದರು.
ಹಿರಿಯ ನಟ ರಮೇಶ ಭಟ್ ಬಹುಮಾನ ವಿತರಿಸಿ ಮಾತನಾಡಿ, ಭಜನೆ ಭಾರತೀಯ ಪುರಾತನ ಕಲೆ. ಭಗವಂತನ ನಾಮಸ್ಮರಣೆಯಿಂದ ಮುಕ್ತಿ ಸಿಗುತ್ತದೆ. ಇಂದು ಎಲ್ಲರ ಬಳಿ ಹಣ, ಆಸ್ತಿ ಇರಬಹುದು. ಆದರೆ ನೆಮ್ಮದಿ ಇಲ್ಲ. ಭಜನಾ ಪರಂಪರೆಯ ಮರುಸೃಷ್ಟಿಗೆ ಗಟ್ಟಿ ಹೆಜ್ಜೆ ಇಟ್ಟಿರುವ ಧರ್ಮಸ್ಥಳದ ಹೆಗ್ಗಡೆ ಪರಿವಾರದ ಕಾರ್ಯ ಶ್ಲಾಘನೀಯ ಎಂದರು.
ಖ್ಯಾತ ಗಾಯಕಿ ಅರ್ಚನಾ ಉಡುಪ ಮಾತನಾಡಿ, ಮನುಷ್ಯ ಮನುಷ್ಯತ್ವವನ್ನು ಮರೆತು ಅಡ್ಡ ದಾರಿ ಹಿಡಿಯುತ್ತಿದ್ದಾನೆ. ಸಂಸ್ಕಾರ ಉಳಿಸಿ ಸತ್ಪಥ ತೋರುವ ಸಂಸ್ಕೃತಿಯ ಜಾಡು ಹಿಡಿಯುವ ಪ್ರಯತ್ನವೇ ಭಜನಾ ಸ್ಪರ್ಧೆ. ಭಜನೆಯಿಂದ ಮನೋವಿಕಸನವಾಗುತ್ತದೆ ಎಂದರು.
ಹೇಮಾವತಿ ವಿ. ಹೆಗ್ಗಡೆ ಮಾತನಾಡಿ, ಭಜನೆಗೆ ಹೊಸ ಕಲ್ಪನೆ ಕೊಡುವ ಯತ್ನವೇ ಜಿನ ಭಜನಾ ಸ್ಪರ್ಧೆ. ಇದರಿಂದ ಚೈತನ್ಯ, ಒಗ್ಗಟ್ಟು, ಉತ್ಸಾಹ ಇಮ್ಮಡಿಯಾಗುತ್ತದೆ. ವ್ಯಕ್ತಿತ್ವ, ಚಾರಿತ್ರ್ಯ ನಡವಳಿಕೆ ಬದಲಾವಣೆಯಾಗುತ್ತದೆ. ಶುಭ ಚಿಂತನೆಯಿಂದ ಕ್ರಾಂತಿಕಾರಿ ಬದಲಾವಣೆ ಸಾಧ್ಯ. ಅಭಿರುಚಿಯಿಂದ ಶ್ರದ್ಧೆ ಬರುತ್ತದೆ. ಸಂಕಲ್ಪದಲ್ಲೂ ಹಿಂಸೆ ಮಾಡದವರು ಜೈನರು. ತಮ್ಮತನವನ್ನು ಉಳಿಸಿಕೊಂಡು ಮುಂದುವರಿದರೆ ಗೌರವಕ್ಕೆ ಚ್ಯುತಿ ಬಾರದು ಎಂದರು.
ಎಸ್ಡಿಎಂ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ನಿರಂಜನಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪದ್ಮಲತಾ ನಿರಂಜನ ಕುಮಾರ್, ಸುರೇಂದ್ರಕುಮಾರ್, ಅನಿತಾ ಸುರೇಂದ್ರಕುಮಾರ್, ಸುಪ್ರಿಯಾ ಹರ್ಷೆಂದ್ರಕುಮಾರ್, ಪುಷ್ಪರಾಜ್ ಜೈನ್, ಇತರರು ವೇದಿಕೆಯಲ್ಲಿದ್ದರು.
ಡಾ. ಅನಿಲ ಹಾಗೂ ಶ್ರುತಿ ನಿರ್ವಹಿಸಿದರು. ಭಜನಾ ಸ್ಪರ್ಧೆಗೆ ಸಹಕಾರ ನೀಡಿದ ಎಸ್ಡಿಎಂ ಸಂಸ್ಥೆಯ ಸಿಬ್ಬಂದಿ ಹಾಗೂ ವಿವಿಧ ತಾಂತ್ರಿಕ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.
ವಿಜೇತ ತಂಡಗಳ ವಿವರ
ಕಿರಿಯರ ವಿಭಾಗದಲ್ಲಿ ಪಾರ್ಶ್ವನಾಥ ಭಜನಾ ಮಂಡಳಿ ಜಮಖಂಡಿ ವಿಭಾಗ ದ್ವಿತೀಯ ಬಹುಮಾನ ಪಡೆದರೆ, ಜಯ ಧವಳ ಮೂಡುಬಿದರೆ ತೃತೀಯ, ಜ್ಞಾನ ಸುಧಾ ಹೊರನಾಡು ತಂಡ ಸಮಾಧಾನಕರ ಬಹುಮಾನವನ್ನು ಹಂಚಿಕೊಂಡವು.
ಹಿರಿಯರ ವಿಭಾಗದಲ್ಲಿ ಶ್ರೀ ಕುಂತುನಾಥ ಭಜನಾ ಮಂಡಳಿ ಕುಂಚನೂರ ಜಮಖಂಡಿ ದ್ವಿತೀಯ, ಶ್ರೀ ಶಾಂತಿನಾಥ ಭಜನಾ ಸಂಘ ಛಬ್ಬಿ ತೃತೀಯ ಹಾಗೂ ಶ್ರೀ ಗೊಮ್ಮಟೇಶ್ವರ ತಂಡ ಮಂಗಳೂರು ಮತ್ತು ಶ್ರೀ ಸಮ್ಯಕ್ ಪ್ರಜ್ಞಾ ಮಹಿಳಾ ಮಂಡಳ ಧಾರವಾಡ ತಂಡಗಳು ಸಮಾಧಾನಕರ ಬಹುಮಾನ ಪಡೆದವು. ಬೆಂಗಳೂರಿನ ಸ್ವರಾಭಿಷೇಕ ತಂಡ ಉತ್ತಮ ಸಾಹಿತ್ಯ ಪ್ರಶಸ್ತಿ ಪಡೆಯಿತು.