ಎನ್.ಆರ್.ಪುರ: ಜನವರಿಯಲ್ಲಿ ಜಿಲ್ಲೆಯಲ್ಲಿ 1,75,88,515 ಮಹಿಳಾ ಪ್ರಯಾಣಿಕರು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸಿದ್ದಾರೆ. ಫೆಬ್ರವರಿಯಲ್ಲಿ ಜನವರಿಗಿಂತ 10 ಲಕ್ಷಕ್ಕೂ ಹೆಚ್ಚು ಮಹಿಳಾ ಪ್ರಯಾಣಿಕರು ಸಂಚರಿಸಿದ್ದಾರೆ. ಇದರಿಂದ ಸಾರಿಗೆ ಸಂಸ್ಥೆ ಆದಾಯ ಹೆಚ್ಚಾಗಿದೆ ಎಂದು ಚಿಕ್ಕಮಗಳೂರು ಸಾರಿಗೆ ನಿಲ್ದಾಣಾಧಿಕಾರಿ ಸುರೇಶ್‌ನಾಯ್ಕ ತಿಳಿಸಿದರು.
ಮಂಗಳವಾರ ತಾಪಂನಲ್ಲಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯಲ್ಲಿ ಮಾಹಿತಿ ನೀಡಿ, ಕೊಪ್ಪ, ಶೃಂಗೇರಿ, ಎನ್.ಆರ್.ಪುರ, ಚಿಕ್ಕಮಗಳೂರು ನಾಲ್ಕೂ ತಾಲೂಕುಗಳಿಂದ ಮಹಿಳಾ ಪ್ರಯಾಣಿಕರು ಸಂಚರಿಸಿದ್ದಾರೆ. ಮಾರ್ಚ್, ಏಪ್ರಿಲ್ ನಂತರ ಪ್ರಯಾಣಿಕರ ಸಂಚಾರ ಹೆಚ್ಚಾಗುತ್ತದೆ. ಈಗ ಮಕ್ಕಳಿಗೆ ಪರೀಕ್ಷಾ ಸಮಯವಾದರೂ ಬಹಳಷ್ಟು ಮಂದಿ ಸಂಚರಿಸಿದ್ದಾರೆ. ಪ್ರಯಾಣಿಕರಲ್ಲಿ ಶೃಂಗೇರಿ, ಧರ್ಮಸ್ಥಳ, ಹೊರನಾಡು ಕ್ಷೇತ್ರಗಳಿಗೆ ತೆರಳಿದ ಜನರೇ ಅಧಿಕವಾಗಿದ್ದಾರೆ ಎಂದರು.
20 ತಿಂಗಳಿನಿಂದ 60.41 ಕೋಟಿ ರೂ. ಆದಾಯ ಗಳಿಸಿದೆ. ಜನವರಿವರೆಗೆ ಜಿಲ್ಲೆಯಲ್ಲಿ ಒಟ್ಟು 3,46,59,466 ಮಹಿಳೆಯರು ಪ್ರಯಾಣಿಸಿದ್ದಾರೆ. ದಿನೇ ದಿನೆ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಮಕ್ಕಳಿಗೆ ಪರೀಕ್ಷೆ ಮುಗಿದ ಬಳಿಕ ಪ್ರಯಾಣಿಕರ ಸಂಖ್ಯೆ ನಿಯಂತ್ರಿಸುವುದೇ ಸಾರಿಗೆ ಸಿಬ್ಬಂದಿಗೆ ಸವಾಲಾಗುತ್ತದೆ. ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದ್ದು, ಭರ್ತಿಗಾಗಿ ಸರ್ಕಾರ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ ಎಂದು ತಿಳಿಸಿದರು.
ಆಹಾರ ನಿರೀಕ್ಷಕ ಗಣಪತಿ ಮಾತನಾಡಿ, ಅನ್ನಭಾಗ್ಯ ಯೋಜನೆಯಡಿ 247 ಅರ್ಜಿಗಳು ತಿರಸ್ಕೃತವಾಗಿವೆ. ಇವುಗಳು ಇಕೆವೈಸಿ ಮಾಡಿಸದೆ ಇರುವುದರಿಂದ ಬ್ಲಾಕ್ ಆಗಿವೆ. ಈ ಕಾಡ್‌ರ್ರ್ಗಳು ಅಂಗವಿಕಲರು, ಬೆಡ್ ರೋಗಿಗಳು, ವಯಸ್ಸಾದವರ ಕಾರ್ಡ್‌ಗಳಾಗಿವೆ. ಸರ್ಕಾರ ೆ.28ರ ತನಕ ಅವಕಾಶ ನೀಡಿದೆ. ಅಷ್ಟರೊಳಗೆ ನ್ಯಾಯಬೆಲೆ ಅಂಗಡಿಗೆ ಬರಲು ಸಾಧ್ಯ ಇಲ್ಲದವರ ಕುಟುಂಬಸ್ಥರು ಆಧಾರ್ ಕಾರ್ಡ್ ಹಾಗೂ ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರುವ ಮೊಬೈಲ್ ನಂಬರನ್ನು ತಂದು ಇಕೆವೈಸಿ ಮಾಡಿಸಬೇಕು. ಮಾರ್ಚ್‌ನಲ್ಲಿ ಹಣ ಸಂದಾಯವಾಗುತ್ತದೆ ಎಂದು ತಿಳಿಸಿದರು.
ಸಿಡಿಪಿಒ ವೀರಭದ್ರಯ್ಯಮಾಜಿಗೌಡ್ರ ಮಾತನಾಡಿ, ಗೃಹಲಕ್ಷ್ಮಿ ಯೋಜನೆಯಡಿ 16,620 ಲಾನುಭವಿಗಳಿದ್ದು, 16,027 ಜನ ಲಾನುಭವಿಗಳಿಗೆ ಸರ್ಕಾರದ ಹಣ ಜಮೆ ಆಗುತ್ತಿದೆ. ಅಕ್ಟೋಬರ್‌ವರೆಗೂ ಹಣ ಜಮೆ ಆಗಿದೆ. ನವೆಂಬರ್‌ನಿಂದ ಹಣ ಜಮೆ ಆಗಿಲ್ಲ. ಇನ್ನೆರಡು ದಿನಗಳಲ್ಲಿ ಹಣ ಸಂದಾಯವಾಗಲಿದೆ. 593 ಜನರಲ್ಲಿ ಕೆಲವರು ಹೊರದೇಶದಲ್ಲಿದ್ದವರು, ಪುರುಷರು ಕುಟುಂಬದ ಮುಖ್ಯಸ್ಥರಾಗಿರುವವರು, ಇನ್ನು ಕೆಲವರ ಹೆಬ್ಬೆಟ್ಟು ತೆಗೆದುಕೊಳ್ಳದೆ ಇರುವುದರಿಂದ ಬಾಕಿ ಇವೆ ಎಂದು ಸಭೆಗೆ ತಿಳಿಸಿದರು.
ಮೆಸ್ಕಾಂ ಎಇಇ ಗೌತಮ್ ಮಾತನಾಡಿ, ಹೊಸ ವಿದ್ಯುತ್ ಸಂಪರ್ಕ ಪಡೆದವರೂ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಸಂಪರ್ಕ ಪಡೆದು ಮೊದಲ ಬಿಲ್ ಬಂದ ನಂತರದಿಂದ 58 ಯೂನಿಟ್ ವಿದ್ಯುತ್ ಉಚಿತವಾಗಿ ದೊರಕಲಿದೆ ಎಂದು ತಿಳಿಸಿದರು.
ತಾಪಂ ಇಒ ಎಚ್.ಡಿ.ನವೀನ್‌ಕುಮಾರ್ ಮಾತನಾಡಿ, ಯಾವುದೇ ಭೇದ ಇಲ್ಲದೆ ಎಲ್ಲರಿಗೂ ಸಮಾನವಾದ ಸೌಲಭ್ಯ ದೊರಕುವ ಉತ್ತಮ ಯೋಜನೆ ಗೃಹಜ್ಯೋತಿಯಾಗಿದೆ ಎಂದರು.
ಕರೊನಾಕ್ಕೂ ಮುಂಚೆ ಶೃಂಗೇರಿಯಿಂದ ಎನ್.ಆರ್.ಪುರ ಮಾರ್ಗವಾಗಿ ತರೀಕೆರೆಗೆ ಸರ್ಕಾರಿ ಬಸ್ ಸಂಚರಿಸುತ್ತಿತ್ತು. ಆದರೆ ಈಗ ಸಂಚಾರವಿಲ್ಲ. ಇದರಿಂದ ಕುವೆಂಪು ವಿಶ್ವ ವಿದ್ಯಾಲಯಕ್ಕೆ ಹೋಗುವ ವಿದ್ಯಾರ್ಥಿಗಳು, ಉಪನ್ಯಾಸಕರು, ಶಿಕ್ಷಕರು, ತರೀಕೆರೆ ನ್ಯಾಯಾಲಯಕ್ಕೆ ಹೋಗುವವರಿಗೆ ತೊಂದರೆಯಾಗಿದೆ. ಪರೀಕ್ಷಾ ಸಮಯದಲ್ಲಂತೂ ಭಾರಿ ಸಮಸ್ಯೆ ಆಗುತ್ತದೆ. ಆದ್ದರಿಂದ ಕೂಡಲೇ ಬೆಳಗ್ಗೆ ಶೃಂಗೇರಿಯಿಂದ ತರೀಕೆರೆಗೆ, ಸಂಜೆ ತರೀಕೆರೆಯಿಂದ ಶೃಂಗೇರಿಗೆ ಬಸ್ ಸೇವೆ ಒದಗಿಸಬೇಕು ಎಂದು ಸಮಿತಿ ಸದಸ್ಯ ರಘು ಒತ್ತಾಯಿಸಿದರು. ನಿಲ್ದಾಣಾಧಿಕಾರಿ ಸುರೇಶ್‌ನಾಯ್ಕ ಮಾತನಾಡಿ, ಕರೊನಾಕ್ಕಿಂತ ಮುಂಚೆ ಕೋಲಾರ, ಚಿಂತಾಮಣಿ ಬಸ್‌ಗಳು ಈ ಮಾರ್ಗದಲ್ಲಿ ಸಂಚರಿಸುತ್ತಿದ್ದವು. ಕರೊನಾ ಸಂದರ್ಭದಲ್ಲಿ ಪ್ರಯಾಣಿಕರಿಲ್ಲದೆ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಈ ಮಾರ್ಗಕ್ಕೆ ಬಸ್ ಸಂಚಾರದ ಅವಶ್ಯಕತೆ ಬಗ್ಗೆ ಮನವಿಯನ್ನು ಸಮಿತಿ ಮೂಲಕ ಸಲ್ಲಿಸಿದಲ್ಲಿ ಮೇಲಾಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ ಎಂದರು. ರಘು ಮಾತನಾಡಿ, ಈ ಬಗ್ಗೆ ಶಾಸಕರಿಗೆ ಮನವಿ ಸಲ್ಲಿಸಿದ್ದು, ನಿಮ್ಮ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ. ಸರ್ಕಾರಿ ಬಸ್‌ಗಳು ಸಂಚರಿಸುವ ಸಮಯದ ಪಟ್ಟಿ ನೀಡಬೇಕು. ಪ್ರಯಾಣಿಕರಿಗೆ ಸರ್ಕಾರಿ ಬಸ್‌ಗಳ ಸಮಯವೇ ತಿಳಿದಿಲ್ಲ. ಸಮಯಕ್ಕೆ ಸರಿಯಾಗಿ ಬಸ್‌ಗಳು ಸಂಚಾರ ಮಾಡಬೇಕು. ಬಸ್ ವೇಳಾಪಟ್ಟಿ ನೀಡಿ, ಬಸ್‌ಸ್ಟ್ಯಾಂಡ್, ಜನ ವಸತಿ ಪ್ರದೇಶಗಳಲ್ಲಿ ಭಿತ್ತರಿಸಿದರೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದರು.
ಸದಸ್ಯರಾದ ಜಯರಾಮ, ಜಿ.ನಾಗರಾಜ್, ಬೆಸಿಲ್, ಇಸ್ಮಾಯಿಲ್, ಕ್ಷೇತ್ರಕುಮಾರ್, ಅಪೂರ್ವಾ, ಹೂವಮ್ಮ, ರಘು, ಜಯರಾಮ, ದೇವರಾಜ್, ಅರುಣ ಪೂಜಾರಿ, ಸೈಯದ್‌ಶಫೀರ್‌ಅಹಮ್ಮದ್, ತಾಪಂ ಇಒ ಎಚ್.ಡಿ.ನವೀನ್‌ಕುಮಾರ್, ಅಧಿಕಾರಿಗಳು ಇದ್ದರು.