ಉಗ್ರ ದಾಳಿಗೆ ಭುಗಿಲೆದ್ದ ಆಕ್ರೋಶ

ವಿಜಯವಾಣಿ ಸುದ್ದಿಜಾಲ ಬೀದರ್
ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪೂರದಲ್ಲಿ ಉಗ್ರರು ನಡೆಸಿರುವ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) 44 ಯೋಧರ ಬರ್ಬರ ಹತ್ಯೆಗೆ ಬೀದರ್ ಜಿಲ್ಲೆಯಲ್ಲೂ ಆಕ್ರೋಶ ಭುಗಿಲೆದ್ದಿದೆ. ಜಮ್ಮು-ಕಾಶ್ಮೀರ ಸೇರಿ ದೇಶದ ವಿವಿಧೆಡೆಗಳಲ್ಲಿ ಆಗಾಗ್ಗೆ ಅಟ್ಟಹಾಸ ಮೆರೆಯುತ್ತಿರುವ ಪಾ(ಪಿ)ಕಿಸ್ತಾನ ಪೋಷಿತ ಉಗ್ರರ ದಮನಕ್ಕೆ ಇದು ಸಕಾಲ ಎಂಬ ಒತ್ತಡದ ಕೂಗು ಕೇಳಿಬಂದಿದೆ.
ನಗರ ಸೇರಿ ಜಿಲ್ಲಾದ್ಯಂತ ವಿವಿಧ ಸಂಘ-ಸಂಸ್ಥೆಗಳಿಂದ ಹುತಾತ್ಮರಿಗೆ ಗೌರವ ನಮನ ಸಲ್ಲಿಸಲಾಗಿದೆ. ನಾನಾ ಕಡೆ ಕ್ಯಾಂಡಲ್ ಮಾರ್ಚ್​ ನಡೆಸಿ ವೀರರಿಗೆ ಶೃದ್ಧಾಂಜಲಿ ಅರ್ಪಿಸಿ ಸೆಲ್ಯೂಟ್ ಹೊಡೆಲಾಯಿತು. ಬೀದರ್ ನಗರದ ವಿವಿಧ ವೃತ್ತಗಳಿಂದ ಮಧ್ಯಾಹ್ನದಿಂದ ಸಂಜೆವರೆಗೂ ಸಂತಾಪ ಸಭೆ ನಡೆದವು. ಮೇಣದ ಬತ್ತಿ ಪ್ರಜ್ವಲಿಸಿ ಅಗಲಿದ ವೀರರಿಗೆ ಗೌರವ ಸಲ್ಲಿಸಲಾಯಿತು. ಮಕ್ಕಳು, ಮಹಿಳೆಯರು ಸಹ ಪಾಲ್ಗೊಂಡಿರುವುದು ವಿಶೇಷವಾಗಿತ್ತು.
ದೇಶದಲ್ಲಿ ಉಗ್ರರ ಅಟ್ಟಹಾಸ ಜಾಸ್ತಿಯಾಗಿದೆ. ಹೊರಗಿನ ಹಾಗೂ ಒಳಗಿನ ಶಕ್ತಿಗಳು ಉಗ್ರರಿಗೆ ನೆರವು ನೀಡುತ್ತಿರುವುದನ್ನು ಸರ್ಕಾರ ಗಂಭೀರ ಪರಿಗಣಿಸಬೇಕಿದೆ. ಉಗ್ರ ಸಂಘಟನೆಗಳಿಗೆ ಮಟ್ಟ ಹಾಕುವ ಜತೆಗೆ ದೇಶದಲ್ಲೇ ಇದ್ದು ಉಗ್ರರ ಬೆಂಬಲಕ್ಕೆ ನಿಂತ ದೇಶ ವಿರೋಧಿಗಳಿಗೆ ಮೊದಲು ಗುರುತಿಸಿ ಗುರುತಿಸಿ ದಂಡಿಸಬೇಕಿದೆ. ದೇಶದಿಂದ ಉಗ್ರರ ನಿರ್ಮೂಲನೆಗೆ ಸರ್ಕಾರ ಪಣ ತೊಡಬೇಕು. ಬೇರು ಸಮೇತ ಇದನ್ನು ಕಿತ್ತು ಹಾಕಲು ಎಲ್ಲ ಕಠಿಣ ಕ್ರಮ ಕೈಗೊಳ್ಳಬೇಕು. ಈ ವಿಷಯದಲ್ಲಿ ಇನ್ನೂ ವಿಳಂಬ ಬೇಡ ಎಂದು ಆಗ್ರಹಿಸಲಾಯಿತು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವತಿಯಿಂದ ನಗರದ ಅಂಬೇಡ್ಕರ್ ವೃತ್ತದ ಹತ್ತಿರ ಸಂತಾಪ ಸಭೆ ನಡೆಸಲಾಯಿತು. ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ರೇವಣಸಿದ್ದ ಜಾಡರ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಅನಂದ ಡೋಂಬಾಳೆ, ಅರವಿಂದ ಸುಂದಾಳಕರ, ಅನಿಲ ಚೌದ್ರಿ, ಮಮತಾ ಕೇನಡಿಕರ್, ಸಪ್ನಾ ಕುಲಕರ್ಣಿ ಇತರರಿದ್ದರು.ವಿವಿಧ ಕಾಲೇಜುಗಳು ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡ ಮೇಣದ ಬತ್ತಿ ಪ್ರಜ್ವಲಿಸಿ ನಮನ ಸಲ್ಲಿಸಿದರು.
ಭಗತಸಿಂಗ್ ಯುಥ್ ಬ್ರಿಗೇಡ್ನಿಂದ ಕ್ಯಾಂಡಲ್ ಮಾರ್ಚ್​ ನಡೆಯಿತು. ಪ್ರಣಾಮ್ ಶಹಿದಾನು ಘೋಷಣೆಯೊಂದಿಗೆ ಯುವಕರು ಹೆಜ್ಜೆ ಹಾಕಿದರು. ಸಂಘದ ಪ್ರಮುಖ ಜಸ್ಪ್ರೀತಸಿಂಗ್ ಮೊಂಟಿ, ಬಿಜೆಪಿ ಯುವ ಮುಖಂಡ ಗುರುನಾಥ ರಾಜಗೀರಾ ಸೇರಿ ಅನೇಕರಿದ್ದರು. ಯುವರಾಷ್ಟ್ರ ಸಂಘಟನೆ ಮತ್ತು ಸ್ಪರ್ಶ ಬ್ರಿಗೇಡ್ನಿಂದ ರಾಮ ಚೌಕ್ ಹತ್ತಿರ ಶ್ರದ್ಧಾಂಜಲಿ ಸಭೆ ನಡೆಯಿತು. ಪ್ರಮುಖರಾದ ಜಗದೀಶ ಬಿರಾದಾರ, ಡಾ.ಲೋಕೇಶ, ಧನರಾಜ ರೆಡ್ಡಿ, ಪಿಎಸ್ಐ ಕೃಷ್ಣಕುಮಾರ, ರೇವಣಸಿದ್ದಪ್ಪ ಜಲಾದೆ, ವೀರೂಪಾಕ್ಷ ಗಾದಗಿ, ಮಲ್ಲಿಕಾಜರ್ುನ ಔದತಪುರ, ಶಿವಕುಮಾರ. ಸಚಿನ್ ಇತರರಿದ್ದರು. ಅನೇಕ ಮಕ್ಕಳು ಪಾಲ್ಗೊಂಡು ಮೇಣದ ಬತ್ತಿ ಪ್ರಜ್ವಲಿಸಿದರು.
ಬಿಜೆಪಿಯಿಂದ ನಗರದ ಬಸವೇಶ್ವರ ವೃತ್ತದ ಹತ್ತಿರ ಮೇಣದ ಬತ್ತಿ ಪ್ರಜ್ವಲಿಸಿ ಹುತಾತ್ಮರಿಗೆ ಗೌರವ ಸಲ್ಲಿಸಲಾಯಿತು. ಜಿಲ್ಲಾಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ, ಮುಖಂಡ ಬಾಬು ವಾಲಿ, ಈಶ್ವರಸಿಂಗ್ ಠಾಕೂರ್, ರೇವಣಸಿದ್ದಪ್ಪ ಜಲಾದೆ, ಕೈಲಾಸನಾಥ ಕಾಜಿ, ಹಣಮಂತ ಬುಳ್ಳಾ, ರಾಜು ಚಿದ್ರಿ, ಸುರೇಶ ಮಾಶೆಟ್ಟಿ, ವೀರೂ ದಿಗ್ವಾಲ್ ಇತರರಿದ್ದರು. ಕೆಇಬಿ ಎದುರಿನ ಶ್ರೀರಾಮ ಸೇನಾ ಕಚೇರಿಯಲ್ಲಿ ಸೇನಾ ಅಧ್ಯಕ್ಷ ವೀರಶೆಟ್ಟಿ ಖ್ಯಾಮಾ ಹಾಗೂ ಪ್ರಮುಖರು ಹುತಾತ್ಮರಿಗೆ ಶೃದ್ಧಾಂಜಲಿ ಅರ್ಪಿಸಿದರು.