ಉಗ್ರರ ಪೈಶಾಚಿಕ ಕೃತ್ಯಕ್ಕೆ ವ್ಯಾಪಕ ಖಂಡನೆ

ಹಾವೇರಿ: ಇಲ್ಲಿಯ ಬಿಜೆಪಿ ಕಾರ್ಯಾಲಯದಲ್ಲಿ ಕಾರ್ಯಕರ್ತರು ಮೌನಾಚರಣೆ ನಡೆಸುವ ಮೂಲಕ ಕಾಶ್ಮೀರದಲ್ಲಿ ಉಗ್ರರ ದಾಳಿಗೆ ವೀರ ಮರಣ ಹೊಂದಿದ ಯೋಧರಿಗೆ ಗೌರವ ಸಲ್ಲಿಸಿದರು.

ಜಿಲ್ಲಾಧ್ಯಕ್ಷ ಶಿವರಾಜ ಸಜ್ಜನರ ಮಾತನಾಡಿ, ಸೈನಿಕರ ಹತ್ಯೆ ತುಂಬ ದುಃಖದ ಸಂಗತಿಯಾಗಿದೆ. ಪಾಕಿಸ್ತಾನ ಪೋಷಿತ ಜೈಷ್ ಏ ಮೊಹ್ಮದ್ ಉಗ್ರಗಾಮಿ ಸಂಘಟನೆಯು ಭಾರತೀಯ ಯೋಧರನ್ನು ಹತ್ಯೆ ಮಾಡುವ ಮೂಲಕ ದುಷ್ಕೃತ್ಯ ಮೆರೆದಿದೆ. ಕೂಡಲೇ ಅವರ ವಿರುದ್ಧ ಸಮರ ಸಾರಬೇಕು. ಉಗ್ರರಿಗೆ ತಕ್ಕ ಪಾಠ ಕಲಿಸಬೇಕು ಎಂದು ಆಗ್ರಹಿಸಿದರು.

ವಿಭಾಗೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಜಯತೀರ್ಥ ಕಟ್ಟಿ, ಮಾಜಿ ಶಾಸಕ ಯು.ಬಿ. ಬಣಕಾರ, ನಂಜುಂಡೇಶ ಕಳ್ಳೇರ, ಸಂತೋಷ ಆಲದಕಟ್ಟಿ, ಮುತ್ತಯ್ಯ ಕಿತ್ತೂರಮಠ, ಷಣ್ಮುಖ ಮಳ್ಳಿಮಠ, ಶಿವಲಿಂಗಪ್ಪ ತಲ್ಲೂರ ಮತ್ತಿತರರಿದ್ದರು.

ವಕೀಲರಿಂದ ಪ್ರತಿಭಟನೆ: ಯೋಧರ ಹತ್ಯೆ ಖಂಡಿಸಿ ಜಿಲ್ಲಾ ವಕೀಲರ ಸಂಘದ ನೇತೃತ್ವದಲ್ಲಿ ವಕೀಲರು ಶುಕ್ರವಾರ ಕಲಾಪದಿಂದ ದೂರ ಉಳಿದು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಜಿಲ್ಲಾ ನ್ಯಾಯಾಲಯದಿಂದ ಹೊಸಮನಿ ಸಿದ್ದಪ್ಪ ವೃತ್ತದವರೆಗೆ ಮೆರವಣಿಗೆ ನಡೆಸಿದ ವಕೀಲರು, ಕೆಲಹೊತ್ತು ವಾಹನ ಸಂಚಾರ ತಡೆದು ಉಗ್ರರ ವಿರುದ್ಧ ಧಿಕ್ಕಾರ ಕೂಗಿದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ.ಸಿ. ಪಾವಲಿ, ವಕೀಲರಾದ ಪಿ.ಎಂ. ಬೆನ್ನೂರು, ಎ.ಸಿ. ನೀರಲಗಿ, ವಿ.ಎಸ್. ಗೊಡ್ಡೆಮ್ಮಿ, ಸಿ.ಎಂ. ಸುರಳಿಹಳ್ಳಿ, ಪರಶುರಾಮ ಅಗಡಿ ಮತ್ತಿತರರಿದ್ದರು.

ಪಾಕಿಸ್ತಾನ ವಿರುದ್ಧ ಕ್ರಮಕ್ಕೆಆಗ್ರಹ

ಯೋಧರ ಹತ್ಯೆ ಖಂಡಿಸಿ, ಪಾಕಿಸ್ತಾನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಕೇಸರಿ ಯುವ ಸೇನೆ ಜಿಲ್ಲಾ ಘಟಕದ ವತಿಯಿಂದ ಶುಕ್ರವಾರ ಹಾವೇರಿ ತಹಸೀಲ್ದಾರ್ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿಪತ್ರ ರವಾನಿಸಲಾಯಿತು.

ಜಿಹಾದಿಗಳ ದಾಳಿಯಿಂದ ಭಾರತ ನಲುಗಿದೆ. ಮತಾಂಧರಿಗೆ ತಕ್ಕ ಶಿಕ್ಷೆ ಆಗಬೇಕು. ಪಾಕಿಸ್ತಾನಕ್ಕೆ ಪಾಠ ಕಲಿಸಬೇಕು. ವೀರ ಮರಣ ಹೊಂದಿದ ಸೈನಿಕರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಸಂತೋಷ ಬೈಲಪ್ಪನವರ, ಮಧುಕೇಶ್ವರ ಹಂದ್ರಾಳ, ನವೀನ ದೊಡ್ಡಣ್ಣನವರ, ಭರತ ಸಾವಂತ, ಮಂಜು ಬಾಳಕ್ಕನವರ, ಮಂಜು ಬೆಳಗಲ್, ರವಿ ಸಂಚನಗೌಡ್ರ, ಹೊನ್ನಪ್ಪ ಅಗಸಿಬಾಗಿಲದ, ಇತರರು ಉಪಸ್ಥಿತರಿದ್ದರು.

ಮೊಂಬತ್ತಿ ಹಚ್ಚಿ ಶ್ರದ್ಧಾಂಜಲಿ

ಜಮ್ಮು- ಕಾಶ್ಮೀರದಲ್ಲಿ ಸಿಆರ್​ಪಿಎಫ್ ಯೋಧರ ವಾಹನದ ಮೇಲೆ ಉಗ್ರರು ನಡೆಸಿದ ಪೈಶಾಚಿಕ ಕೃತ್ಯಕ್ಕೆ
ಹಾನಗಲ್ಲ ಪಟ್ಟಣದಲ್ಲಿ ಖಂಡನೆ ವ್ಯಕ್ತವಾಯಿತು. ಘಟನೆಯಲ್ಲಿ ಹುತಾತ್ಮರಾದ ಯೋಧರಿಗೆ ಪಟ್ಟಣದ ಚಾವಡಿ ಕ್ರಾಸ್​ನಲ್ಲಿ ಸಾರ್ವಜನಿಕರು ಗುರುವಾರ ರಾತ್ರಿ ಮೊಂಬತ್ತಿ ಹಚ್ಚಿ ಶ್ರದ್ಧಾಂಜಲಿ ಅರ್ಪಿಸಿದರು.

ಉದಯ ನಾಸಿಕ, ರವಿಚಂದ್ರ ಪುರೋಹಿತ, ಪ್ರಶಾಂತ ಮುಚ್ಚಂಡಿ, ಸಂಜು ಬೇದ್ರೆ ಮಾತನಾಡಿ, ಎರಡು ದಶಕಗಳ ಇತಿಹಾಸದಲ್ಲಿ ಇಂಥ ಘೊರ ಘಟನೆ ಜರುಗಿರಲಿಲ್ಲ. ಘಟನೆಗೆ ಕಾರಣವಾದ ಪಾಕಿಸ್ತಾನದೊಂದಿಗೆ ಯಾವುದೇ ಸಂಬಂಧ ಉಳಿಸಿಕೊಳ್ಳಬಾರದು. ಆಕ್ರಮಣಕ್ಕೆ ಆಕ್ರಮಣವೇ ಉತ್ತರವಾಗಬೇಕು. ಪ್ರಧಾನಿಗಳು ತಪ್ಪಿತಸ್ಥ ದೇಶದ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಸನ್ನದ್ಧವಾಗಬೇಕು ಎಂದು ಆಗ್ರಹಿಸಿದರು.

ಪ್ರವೀಣ ಸುಲಾಖೆ, ಚೇತನ್ ಬೆಂಡಿಗೇರಿ, ಆನಂದ ಗಾಜಿಪೂರ, ಮನೋಜ ಕಲಾಲ, ಪ್ರಶಾಂತ ಕಂಕಾಳೆ, ಎಚ್.ಪ್ರವೀಣಕುಮಾರ, ಗುರುರಾಜ ನಿಂಗೋಜಿ ಇತರರು ಪಾಲ್ಗೊಂಡಿದ್ದರು.

ಕಲಾಪದಿಂದ ದೂರವುಳಿದ ವಕೀಲರು: ನ್ಯಾಯವಾದಿಗಳ ಸಂಘದ ಸದಸ್ಯರು ಶುಕ್ರವಾರ ಕಲಾಪದಿಂದ ದೂರವುಳಿದು ನ್ಯಾಯಾಲಯದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ, ಮಹಾತ್ಮಾ ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಿರ್ವಿುಸಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು.

ಹುತಾತ್ಮ ಯೋಧ ಮಂಡ್ಯದ ಎಚ್. ಗುರು ಅವರ ಕುಟುಂಬಕ್ಕೆ ವಕೀಲರ ಸಂಘ ಸಾರ್ವಜನಿಕರಿಂದ ವಂತಿಗೆ ಸಂಗ್ರಹಿಸಿ 1 ಲಕ್ಷ ರೂ. ನೆರವು ನೀಡಲು ತೀರ್ವನಿಸಿತು. ಇದೇ ಸಂದರ್ಭದಲ್ಲಿ 25 ಸಾವಿರ ರೂಪಾಯಿ ಸಂಗ್ರಹಿಸಲಾಯಿತು. ಮಂಡ್ಯಕ್ಕೆ ತೆರಳಿ ಯೋಧನ ಕುಟುಂಬಕ್ಕೆ ಸಾಂತ್ವನ ಹೇಳಿ ಹಣ ತಲುಪಿಸಲು ವಕೀಲರ ಸಂಘ ನಿರ್ಣಯಿಸಿದೆ.

ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಎಸ್.ಎಂ. ಕೋತಂಬ್ರಿ, ರವಿಬಾಬು ಪೂಜಾರ, ರಾಜು ಗೌಳಿ, ರವಿ ವಡೆಯರ, ಕೆ.ಜಿ. ಸವದತ್ತಿ, ಬಿ.ಎಸ್. ಅಕ್ಕಿವಳ್ಳಿ, ರಂಗನಾಥ ಅಕ್ಕಿವಳ್ಳಿ, ಪ್ರಶಾಂತ ಕಾಮನಹಳ್ಳಿ, ಆರ್.ಎಸ್. ತಳವಾರ, ಎಸ್.ಟಿ. ಕಾಮನಳ್ಳಿ, ಪಿ.ಎಸ್. ಕತ್ಲೇರ, ಬಿ.ಎಸ್. ಕುಲಕರ್ಣಿ, ರವಿ ಕಲಾಲ, ಜಗದೀಶ ಕೊಂಡೋಜಿ ಇತರರು ಇದ್ದರು.