ಉಗ್ರರ ದಾಳಿಗೆ ತಕ್ಕ ಶಾಸ್ತಿ

ಶಿರಸಿ:ಪಾಕಿಸ್ತಾನದ ನೆಲದಲ್ಲಿರುವ ಉಗ್ರರ ನೆಲೆಗಳ ಮೇಲೆ ಭಾರತೀಯ ವಾಯುಸೇನೆ ಕೈಗೊಂಡ ದಾಳಿ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಸಂಭ್ರಮಾಚರಣೆ ಮಾಡಿದರು.
ಇಲ್ಲಿಯ ಹಳೆಯ ಬಸ್ ನಿಲ್ದಾಣ ವೃತ್ತದಲ್ಲಿ ಸೇರಿದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಕೇಂದ್ರ ಸರ್ಕಾರದ ದಿಟ್ಟ ಹೆಜ್ಜೆಗೆ ಸಂತಸ ವ್ಯಕ್ತಪಡಿಸಿದರು. ಪಾಕಿಸ್ತಾನವು ಭಾರತದಿಂದ ಅನೇಕ ಬಾರಿ ಪೆಟ್ಟು ತಿಂದರೂ ತನ್ನ ತಪ್ಪನ್ನು ಸರಿಪಡಿಸಿಕೊಳ್ಳುತ್ತಿಲ್ಲ. ಕಾಶ್ಮೀರದ ಪುಲ್ವಾಮಾದಲ್ಲಿ ಭಾರತದ ಸೇನಾ ವಾಹನದ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಗೆ ಇದು ತಕ್ಕ ಉತ್ತರ. ವೈರಿ ರಾಷ್ಟ್ರ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿರುವ ಪ್ರಧಾನಿ ಮೋದಿ ನಮ್ಮೆಲ್ಲರ ಹೆಮ್ಮೆ ಎಂದರು.
ನಗರದ ಪ್ರಮುಖ ರಸ್ತೆಗಳಲ್ಲಿ ತಮಟೆ ಬಾರಿಸುತ್ತ ಮೆರವಣಿಗೆ ನಡೆಸಿದ ಬಿಜೆಪಿ ಕಾರ್ಯಕರ್ತರು ಭಾರತೀಯ ಸೈನಿಕರ ಪರವಾಗಿ ಘೊಷಣೆ ಕೂಗಿದರು. ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ರೇಖಾ ಹೆಗಡೆ, ನಗರ ಘಟಕದ ಅಧ್ಯಕ್ಷ ಗಣಪತಿ ನಾಯ್ಕ, ಗ್ರಾಮೀಣ ಘಟಕದ ಅಧ್ಯಕ್ಷ ಆರ್.ವಿ. ಹೆಗಡೆ ಚಿಪಗಿ, ನಂದನ ಸಾಗರ, ಬಿಜೆಪಿ ಯುವ ಘಟಕದ ಅಧ್ಯಕ್ಷ ವಿಶಾಲ ಮರಾಠೆ, ರಮಾಕಾಂತ ಭಟ್ ಇತರರಿದ್ದರು.
ಸಂಘ- ಸಂಸ್ಥೆಗಳಿಂದ ವಿಜಯೋತ್ಸವ
ಭಟ್ಕಳ: ಭಾರತೀಯ ವಾಯು ಸೇನೆಯ ಯುದ್ಧ ವಿಮಾನಗಳು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ದಾಳಿ ನಡೆಸಿ, ಉಗ್ರರ ಅಡಗುತಾಣಗಳನ್ನು ಧ್ವಂಸಗೊಳಿಸಿದ್ದರಿಂದ ತಾಲೂಕಿನ ವಿವಿಧ ಸಂಘ- ಸಂಸ್ಥೆಗಳು ವಿಜಯೋತ್ಸವ ಆಚರಿಸಿದವು.
ಭಟ್ಕಳದ ಪುರಸಭೆ ಎದುರು ಸೇರಿದ ಸಾವರ್ಬಜನಿಕರು ಭಾರತ ಮಾತಾ ಕೀ ಜೈ ಎಂಬ ಘೊಷಣೆ ಕೂಗುತ್ತ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಭಟ್ಕಳ ಸರ್ಕಲ್ ಬಳಿ ಬಿಜೆಪಿ ಪದಾಧಿಕಾರಿಗಳು ವಿಜಯೋತ್ಸವ ಆಚರಿಸಿದರು. ಜಯ ಕರ್ನಾಟಕ ಸಂಘದ ತಾಲೂಕು ಅಧ್ಯಕ್ಷ ಸುಧಾಕರ ನಾಯ್ಕ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಶ್ರೀಕಾಂತ ನಾಯ್ಕ, ಆಟೋ ಚಾಲಕ- ಮಾಲೀಕರ ಸಂಘದ ಅಧ್ಯಕ್ಷ ಕೃಷ್ಣಾ ನಾಯ್ಕ, ಮಣಿ ಪೂಜಾರಿ, ಲಕ್ಷ್ಮಣ ನಾಯ್ಕ, ಜಗದೀಶ ವಿವೇಕ ಇತರರು ಇದ್ದರು.
ಬಿಜೆಪಿಯಿಂದ ಸಂಭ್ರಮಾಚರಣೆ
ಹಳಿಯಾಳ: ಭಾರತೀಯ ವಾಯುಸೇನೆ ಪಾಕಿಸ್ಥಾನದಲ್ಲಿ ನಡೆಸಿದ ಏರ್ ಸರ್ಜಿಕಲ್ ಸ್ಟ್ರೈಕ್​ನಲ್ಲಿ ಉಗ್ರರನ್ನು ಸೆದೆಬಡಿದ ಹಿನ್ನೆಲೆಯಲ್ಲಿ ಬಿಜೆಪಿ ಘಟಕವು ಪಟ್ಟಣದೆಲ್ಲೆಡೆ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿತು.
ಶಿವಾಜಿ ವೃತ್ತ, ಮುಖ್ಯ ಬೀದಿಯಲ್ಲಿ ಪಡ್ನೀಸ್ ವೃತ್ತ, ವನಶ್ರೀ ವೃತ್ತದಲ್ಲಿ ಪಟಾಕಿ, ಸಿಡಿ ಮದ್ದು ಹಚ್ಚಿ ಬಣ್ಣದೋಕುಳಿ ಆಡಿ ಸಂಭ್ರಮಿಸಿದರು. ಘಟಕದ ಅಧ್ಯಕ್ಷ ಶಿವಾಜಿ ನರಸಾನಿ, ಪುರಸಭೆ ಸದಸ್ಯ ಚಂದ್ರು ಕಮ್ಮಾರ, ಅನಿಲ್ ಮುತ್ನಾಳ, ವಿಲಾಸ ಯಡವಿ, ವಿಜಯ ಭೂಬಾಟೆ, ಉಮೇಶ ದೇಶಪಾಂಡೆ, ಉಲ್ಲಾಸ ಬಿಡಿಕರ ಮೊದಲಾದವರು ಪಾಲ್ಗೊಂಡಿದ್ದರು.