ನವದೆಹಲಿ: ದೇಶದ ನಾನಾ ಭಾಗಗಳಲ್ಲಿ ಭಯೋತ್ಪಾದಕ ಕೃತ್ಯ ನಡೆಸಲು ಸಂಚು ರೂಪಿಸಿದ್ದ ಉಗ್ರರ ಜಾಲವೊಂದನ್ನು ತಮಿಳುನಾಡು ಪೊಲೀಸರು ಭೇದಿಸಿದ್ದು ಈ ಸಂಬಂಧ ಎಂಟು ಉಗ್ರರನ್ನು ಬಂಧಿಸಿದ್ದಾರೆ. ಐವರನ್ನು ತಮಿಳುನಾಡು ಹಾಗೂ ಮೂವರನ್ನು ಬೆಂಗಳೂರಿನಿಂದ ಬಂಧಿಸಲಾಗಿದೆ. ಬಂಧಿತರನ್ನು ಚೆನ್ನೈನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಅವರನ್ನು ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಲಾಗಿದೆ.
ಬೆಂಗಳೂರಿನಲ್ಲಿ ಬಂಧಿಸಿದವರನ್ನು ಮಹಮದ್ ಹನೀಫ್ ಖಾನ್ (29), ಇಮ್ರಾನ್ ಖಾನ್ (32), ಮತ್ತು ಮಹಮದ್ ಜೈದ್ (24) ಎಂದು ಗುರುತಿಸಲಾಗಿದೆ. ತಮಿಳುನಾಡು ಪೊಲೀಸ್ನ ಕ್ಯೂ ಬ್ರಾಂಚ್ನವರು ಕರ್ನಾಟಕ ಪೊಲೀಸರು ಹಾಗೂ ಇತರ ಸಂಸ್ಥೆಗಳ ನೆರವಿನಿಂದ ಅವರನ್ನು ಬಂಧಿಸಿದ್ದಾರೆ. ಧರ್ಮಯುದ್ಧ (ಜಿಹಾದ್) ನಡೆಸಲು ಕೆಲ ಮೂಲಭೂತವಾದಿ ಶಕ್ತಿಗಳು ಪ್ರಯತ್ನಿಸುತ್ತಿವೆ ಎಂಬ ಬೇಹುಗಾರಿಕೆ ವರದಿಗಳನ್ನು ಆದರಿಸಿ ಈ ಕಾರ್ಯಾಚರಣೆ ನಡೆಸಲಾಗಿದೆ.