ಈ ಸ್ವತ್ತು ಮುಕ್ತ ಗ್ರಾಮಕ್ಕೆ ತಾಕೀತು

ಹಾವೇರಿ: ವಸತಿ ಯೋಜನೆಯ ಫಲಾನುಭವಿಗಳಿಗೆ ಈ ಸ್ವತ್ತು ಉತಾರ ನೀಡಲು ಶೀಘ್ರವೇ ಆಯಾ ತಾಲೂಕಿನಲ್ಲಿರುವ ಸರ್ವೆಯರ್​ಗಳಿಗೆ ಪಂಚಾಯಿತಿಗಳನ್ನು ವಿಂಗಡಿಸಿ ಸರ್ವೆ ಮಾಡಿ ಈ ಸ್ವತ್ತು ಉತಾರಗಳು ಲಭಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಸಂಸದ ಶಿವಕುಮಾರ ಉದಾಸಿ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿ.ಪಂ. ಸಭಾಭವನದಲ್ಲಿ ಶುಕ್ರವಾರ ಜರುಗಿದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ(ದಿಶಾ)ತ್ರೖೆಮಾಸಿಕ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ಸಭೆಯಲ್ಲಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹಾಗೂ ದಿಶಾ ಸಮಿತಿ ಸದಸ್ಯರು, ಗ್ರಾ.ಪಂ.ಗಳಲ್ಲಿ ಈ ಸ್ವತ್ತು ಉತಾರಗಳಿಲ್ಲದೇ ವಸತಿ ಯೋಜನೆಯ ಫಲಾನುಭವಿಗಳಿಗೆ ಬ್ಯಾಂಕ್ ಸಾಲ ಸೌಲಭ್ಯಗಳು ದೊರೆಯುತ್ತಿಲ್ಲ. ಇದರಿಂದ ವಸತಿ ಯೋಜನೆಗೆ ಹಿನ್ನಡೆಯಾಗುತ್ತಿದೆ. ಕಂದಾಯ ಇಲಾಖೆಯಿಂದ ಪೋಡಿ ಮುಕ್ತ ಗ್ರಾಮಗಳನ್ನು ಮಾಡಿದಂತೆ ಈ ಸ್ವತ್ತು ಮುಕ್ತ ಗ್ರಾ.ಪಂ.ಗಳನ್ನು ಮಾಡಲು ಅಭಿಯಾನ ನಡೆಸಬೇಕು ಎಂದು ಸೂಚಿಸಿದರು.ಆಗ ಸಂಸದರು, ಕಂದಾಯ ಇಲಾಖೆಯಿಂದ ಜಿಲ್ಲೆಯ ಪ್ರತಿಯೊಂದು ತಾಲೂಕಿನಲ್ಲಿರುವ ಸರ್ವೆಯರಗಳು ಹಾಗೂ ಗ್ರಾ.ಪಂ.ಗಳ ಲೆಕ್ಕ ತೆಗೆದು ಅವರಿಗೆ ತಲಾ ಇಂತಿಷ್ಟು ಎಂದು ಗ್ರಾ.ಪಂ.ಗಳನ್ನು ಹಂಚಿಕೆ ಮಾಡಿ, ಶೀಘ್ರದಲ್ಲಿಯೇ ಈ ಸ್ವತ್ತು ಮುಕ್ತ ಗ್ರಾಮಗಳನ್ನು ಮಾಡಬೇಕು. ಇದಕ್ಕೆ ಅವಶ್ಯವಿರುವ ಸಿಬ್ಬಂದಿ ಪಡೆಯಲು ಸರ್ಕಾರಕ್ಕೂ ಪ್ರಸ್ತಾವನೆ ಸಲ್ಲಿಸಿ ಎಂದರು. ಜಿ.ಪಂ. ಉಪಕಾರ್ಯದರ್ಶಿ ಜಿ. ಗೋವಿಂದಸ್ವಾಮಿ ಮಾತನಾಡಿ, ಈಗಾಗಲೇ ಈ ಸ್ವತ್ತು ಮುಕ್ತ ಗ್ರಾ.ಪಂ.ಗಳನ್ನು ಮಾಡಲು ಮಾದರಿಯಾಗಿ ಕಾಕೋಳ ಹಾಗೂ ಘಾಳಪೂಜಿ ಗ್ರಾ.ಪಂ.ಗಳನ್ನು ಆಯ್ಕೆಗೊಳಿಸಲಾಗಿದೆ. ಶೀಘ್ರದಲ್ಲಿಯೇ ಇನ್ನಷ್ಟು ಗ್ರಾ.ಪಂ.ಗಳಲ್ಲಿ ಈ ಕಾರ್ಯಕ್ರಮ ರೂಪಿಸಲಾಗುವುದು ಎಂದರು.

ನರೇಗಾ ಯೋಜನೆಯಲ್ಲಿನ ಹಣ ರಿಕವರಿ ಮಾಡಿ:

ನರೇಗಾ ಯೋಜನೆಯಲ್ಲಿ ಅವ್ಯವಹಾರವಾಗಿರುವ ಕುರಿತು ಸಾಮಾಜಿಕ ಲೆಕ್ಕ ಪರಿಶೋಧನೆಯಲ್ಲಿ 1.86 ಕೋಟಿ ರೂ.ಗಳ ರಿಕವರಿಗೆ ಸೂಚಿಸಲಾಗಿದೆ. ಇದನ್ನು ಶೀಘ್ರದಲ್ಲಿಯೇ ರಿಕವರಿ ಮಾಡಬೇಕು. ನರೇಗಾ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಸಂಸದರು ಸೂಚಿಸಿದರು.

ಅಂಚೆ ಕಚೇರಿಗಳಲ್ಲಿ ಸಕಾಲದಲ್ಲಿ ಮಾಸಾಶನ ಸಿಗುತ್ತಿಲ್ಲ ಎಂಬ ಆರೋಪಗಳಿವೆ. ಕೂಡಲೇ ಅಂಚೆ ಕಚೇರಿ ಅಧಿಕಾರಿಗಳ ಸಭೆ ಕರೆದು ಸರಿಪಡಿಸಬೇಕು ಎಂದು ಸಂಸದರು ಸೂಚಿಸಿದರು.

ಅಂತ್ಯ ಸಂಸ್ಕಾರ ಯೋಜನೆಯಲ್ಲಿ ನಾಲ್ಕೈದು ತಿಂಗಳಿನಿಂದ ಹಣ ನೀಡಿಲ್ಲ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ದೂರಿದರು. ಆಗ ಸಂಸದರು ಮಾತನಾಡಿ, ಈ ಯೋಜನೆಯನ್ವಯ ವ್ಯಕ್ತಿ ಮೃತಪಟ್ಟ ನಾಲ್ಕೈದು ದಿನಗಳಲ್ಲಿ ಹಣ ಸಿಗಬೇಕು. ನೀವು ವರ್ಷಗಟ್ಟಲೇ ಅಲೆದಾಡಿಸುವುದು ಸರಿಯಲ್ಲ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಜಿ.ಪಂ. ಸಿಇಒ ಕೆ. ಲೀಲಾವತಿ, ಜಿ.ಪಂ. ಅಧ್ಯಕ್ಷ ಎಸ್.ಕೆ. ಕರಿಯಣ್ಣನವರ ವಿವಿಧ ಇಲಾಖೆಯ ಅಧಿಕಾರಿಗಳಿದ್ದರು.

ಆದೇಶಪತ್ರ ವಿಳಂಬಕ್ಕೆ ಆಕ್ರೋಶ

ಪ್ರಧಾನ ಮಂತ್ರಿ ಗ್ರಾಮೀಣ ಆವಾಸ ಯೋಜನೆಯ ಪ್ರಗತಿ ಪರಿಶೀಲಿಸಿದ ಸಂಸದರು ಕಾಮಗಾರಿಯ ಆದೇಶಪತ್ರ ನೀಡಲು ವಿಳಂಬ ಧೋರಣೆ ತೋರಿದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈಗಾಗಲೇ ಗ್ರಾ.ಪಂ.ಗಳಲ್ಲಿ 66,3442 ಮನೆಗಳಿಗೆ ಜಿಪಿಎಸ್ ಆಗಿದ್ದು, ಅವುಗಳನ್ನು ತಾ.ಪಂ.ನಿಂದ ಅನುಮೋದಿಸಿ ಜಿ.ಪಂ.ಗೆ ಕಳುಹಿಸಬೇಕು. ಅಲ್ಲಿಂದ ನಿಗಮಕ್ಕೆ ಕಳುಹಿಸಿ ಜನೆವರಿ ತಿಂಗಳಲ್ಲಿ ಕನಿಷ್ಠ 50 ಸಾವಿರ ಫಲಾನುಭವಿಗಳಿಗೆ ಆದೇಶಪತ್ರ ನೀಡಲು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ನಿಮ್ಮ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡುವುದಾಗಿ ಶಿವಕುಮಾರ ಉದಾಸಿ ಎಚ್ಚರಿಸಿದರು.

ಗುಂಟೆವಾರು ಖರೀದಿಗೆ ಅವಕಾಶ ಕಲ್ಪಿಸಿ

ಸಭೆಯಲ್ಲಿ ಹೊಂಕಣ ಗ್ರಾ.ಪಂ. ಅಧ್ಯಕ್ಷರು, ಗ್ರಾಮೀಣ ಭಾಗಗಳಲ್ಲಿ ಮನೆ ಮತ್ತು ಕಣ ನಿರ್ಮಾಣ ಮಾಡಿಕೊಳ್ಳಲು ಜಾಗದ ಅಭಾವವಿದೆ. ಗ್ರಾಮದ ಪಕ್ಕದಲ್ಲಿನ ಜಮೀನುಗಳ ರೈತರು 1-2 ಗುಂಟೆ ಜಾಗವನ್ನು ನೀಡುವುದಕ್ಕೆ ಸಿದ್ಧರಿದ್ದರೂ ಅದರ ಖರೀದಿ ನೊಂದಣಿ ಮಾಡಿಸಿಕೊಳ್ಳುವುದಕ್ಕೆ ಸರ್ಕಾರದಿಂದ ಅವಕಾಶವಿಲ್ಲ. ಈ ಕಾರಣಕ್ಕಾಗಿ ಬಡ ಜನತೆ ನಿವೇಶನಗಳಿಂದ ವಂಚಿತರಾಗುತ್ತಿದ್ದಾರೆ ಎಂದರು. ಆಗ ಸಂಸದ ಉದಾಸಿ, 1-5 ಗುಂಟೆ ಒಳಗಿನ ಜಾಗದ ಖರೀದಿಗೆ ಅವಕಾಶ ಕಲ್ಪಿಸಿಕೊಡುವುದಕ್ಕೆ ಸರ್ಕಾರಕ್ಕೆ ಪತ್ರ ಬರೆದು ವಿವರಣೆ ಕೇಳುವಂತೆ ಜಿ.ಪಂ. ಸಿಇಒಗೆ ಸೂಚಿಸಿದರು.