ಈ ಸಲವಾದರೂ ಗದಗ ಜಿಲ್ಲೆಗೆ ಸಿಗಬೇಕು ಆದ್ಯತೆ

ವಿಜಯವಾಣಿ ವಿಶೇಷ ಗದಗ: ಮುಖ್ಯಮಂತ್ರಿ ಕುಮಾರಸ್ವಾಮಿ ಶುಕ್ರವಾರ ಮಂಡಿಸಲಿರುವ ಬಜೆಟ್ ಬಗ್ಗೆ ಜಿಲ್ಲೆಯ ಜನರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕಳೆದ ವರ್ಷ ಜು. 5ರಂದು ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರ ಮಂಡಿಸಿದ್ದ ಮೊದಲ ಬಜೆಟ್ ಅತ್ಯಂತ ನಿರಾಶಾದಾಯಕವಾಗಿತ್ತು. ಹೀಗಾಗಿ, ಈ ವರ್ಷವಾದರೂ ಜಿಲ್ಲೆಗೆ ಪೂರಕವಾಗುವಂತಹ ಯೋಜನೆಗಳನ್ನು ನೀಡುತ್ತಾರೆಂದು ಜನರು ಎದುರು ನೋಡುತ್ತಿದ್ದಾರೆ.

ಗದಗ, ಕೊಪ್ಪಳ, ಚಿತ್ರದುರ್ಗ ಮತ್ತು ಕೋಲಾರ ಜಿಲ್ಲೆಯಲ್ಲಿ ಇಸ್ರೇಲ್ ಮಾದರಿಯ ಕೃಷಿ ಅಳವಡಿಸಲು 150 ಕೋಟಿ ರೂ. ಅನುದಾನ ಮೀಸಲಿರಿಸುವುದಾಗಿ ಹಾಗೂ ಗದಗ ವೈದ್ಯಕೀಯ ಮಹಾವಿದ್ಯಾಲಯದಲ್ಲಿ 450 ಹಾಸಿಗೆಗಳುಳ್ಳ ಆಸ್ಪತ್ರೆಯನ್ನು ನಿರ್ವಿುಸುವ ಭರವಸೆಯನ್ನು ಮಾತ್ರ ಕಳೆದ ಬಜೆಟ್​ನಲ್ಲಿ ನೀಡಲಾಗಿತ್ತು. ಆದರೆ, ಇಸ್ರೇಲ್ ಮಾದರಿಯ ಕೃಷಿ ಪದ್ಧತಿ ಕುರಿತು ಜಿಲ್ಲೆಯಲ್ಲಿ ಯಾವುದೇ ಕೆಲಸ – ಕಾರ್ಯಗಳು ನಡೆಯಲಿಲ್ಲ. ಇದರಿಂದ ಜಿಲ್ಲೆಯ ಜನರು ಸಮ್ಮಿಶ್ರ ಸರ್ಕಾರದ ಕಾರ್ಯವೈಖರಿಗೆ ತೀವ್ರ ಅಸಮಾಧಾನಗೊಂಡಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಉದ್ದೇಶಪೂರ್ವಕವಾಗಿ ಬರದ ಜಿಲ್ಲೆಯನ್ನು ನಿರ್ಲಕ್ಷಿ್ಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಗದಗ ವೈದ್ಯಕೀಯ ಮಹಾವಿದ್ಯಾಲಯದ 450 ಹಾಸಿಗೆ ಆಸ್ಪತ್ರೆ ನಿರ್ಮಾಣ ಯೋಜನೆಯು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗಲೇ ಘೊಷಣೆಯಾಗಿತ್ತು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮತ್ತೊಮ್ಮೆ ತಮ್ಮ ಬಜೆಟ್​ನಲ್ಲಿ ಘೊಷಿಸಿಕೊಂಡರು. ಆಸ್ಪತ್ರೆ ಕಾಮಗಾರಿ ಭರದಿಂದ ಸಾಗಿರುವುದು ಸಮಾಧಾನಕರ ಸಂಗತಿಯಾಗಿದೆ.

ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚು ಅನುದಾನ ಮೀಸಲಿಡಬೇಕು. ಅಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕು. ಲಕ್ಷೆ್ಮೕಶ್ವರ, ಗಜೇಂದ್ರಗಡ ನೂತನ ತಾಲೂಕುಗಳಿಗೆ ಮೂಲಸೌಕರ್ಯ ಒದಗಿಸಲು ವಿಶೇಷ ಅನುದಾನ ನೀಡಬೇಕು. ತಾಲೂಕು ಕೇಂದ್ರಕ್ಕೆ ಅಗತ್ಯವಿರುವ ಕಚೇರಿಗಳ ಸ್ವಂತ ಕಟ್ಟಡ ಹಾಗೂ ಇತರೆ ಅಭಿವೃದ್ಧಿ ಕಾರ್ಯಕ್ಕೆ ಅನುದಾನ ಬಿಡುಗಡೆ ಮಾಡಬೇಕು. ಮಹದಾಯಿ, ಕಳಸಾ- ಬಂಡೂರಿ ಯೋಜನೆ ಸಮಸ್ಯೆಯನ್ನು ಶೀಘ್ರ ಇತ್ಯರ್ಥಪಡಿಸಿ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಜನರಿಗೆ ಕುಡಿಯುವ ನೀರು ಮತ್ತು ಜಮೀನಿಗೆ ನೀರು ಹರಿಸುವ ಕುರಿತು ಚಿಂತನೆ ನಡೆಸಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಸಿಂಗಟಾಲೂರು ಏತ ನೀರಾವರಿ ಯೋಜನೆಯಡಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡಬೇಕು. ಯೋಜನೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ವಿಶೇಷ ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ವಿವಿಧೆಡೆ ಜಿಂಕೆ ಹಾವಳಿ ಹೆಚ್ಚಾಗಿದ್ದು, ಈ ವರ್ಷವಾದರೂ ಜಿಂಕೆ ವನ ನಿರ್ವಿುಸುವ ಕುರಿತು ಕ್ರಮ ಕೈಗೊಳ್ಳಬೇಕು ಎಂಬುದು ಜನರ ಒತ್ತಾಸೆಯಾಗಿದೆ.

ಕಪ್ಪತಗುಡ್ಡ ಅಭಿವೃದ್ಧಿಪಡಿಸಲಿ:ಜಿಲ್ಲೆಯ ಹಲವಾರು ಬೇಡಿಕೆಗಳ ಕಡೆಗೆ ಸರ್ಕಾರ ಗಮನ ಹರಿಸದಿರುವುದು ಜನರಿಗೆ ಬೇಸರ ತರಿಸಿದೆ. ಅಲ್ಲದೆ, ಜಿಲ್ಲೆಯ ಅಭಿವೃದ್ಧಿ ಕಡೆಗೆ ನಿರ್ಲಕ್ಷ್ಯ ತಾಳಿರುವುದು ಸರಿಯಲ್ಲ ಎಂಬ ಚರ್ಚೆಗಳು ನಡೆಯುತ್ತಿವೆ. ಮುಖ್ಯವಾಗಿ ಕಪ್ಪತಗುಡ್ಡವನ್ನು ಹಿಂದಿನ ಸರ್ಕಾರ ಸಂರಕ್ಷಣಾ ಅರಣ್ಯ ಪ್ರದೇಶ ಎಂದು ಘೊಷಣೆ ಮಾಡಿತ್ತು. ಆದರೆ, ಅಭಿವೃದ್ಧಿಗೆ ಆದ್ಯತೆ ನೀಡಲಿಲ್ಲ. ಈ ಸರ್ಕಾರದಲ್ಲಿ ಕಪ್ಪತಗುಡ್ಡ ಅಭಿವೃದ್ಧಿಗೆ ಪೂರಕವಾಗಿ ಅನುದಾನ ನೀಡಬೇಕು ಹಾಗೂ ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಪಡಿಸುವ ಕಡೆಗೆ ಗಮನ ಹರಿಸಬೇಕು. ಕಪ್ಪತಗುಡ್ಡ ಪ್ರಾಧಿಕಾರ ರಚಿಸಬೇಕು. ಆ ಮೂಲಕ ಅಲ್ಲಿರುವ ಅಪರೂಪದ ಸಸ್ಯ ಸಂಪತ್ತನ್ನು ಬಳಸಿಕೊಳ್ಳಬೇಕು ಎಂಬುದು ಜನರ ಹೆಬ್ಬಯಕೆಯಾಗಿದೆ.

—-

ಗದಗ ಜಿಲ್ಲೆಗೆ ಶೂನ್ಯ ಕೊಡುಗೆ :ಕಳೆದ ಸಲ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಂಡಿಸಿದ್ದ ಮುಂಗಡಪತ್ರದಲ್ಲಿ ಹೊಸದು ಏನೇನೂ ಇರಲಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಮಂಡಿಸಿದ್ದ ಹಳೆಯ ಬಜೆಟ್ ಅನ್ನೇ ಓದಿದ್ದರು. ಎರಡನೇ ಬಜೆಟ್​ನಲ್ಲಾದರೂ ಬರದ ಜಿಲ್ಲೆಗೆ ವಿಶೇಷ ಅನುದಾನ ನೀಡಬೇಕು. ಈಗಾಗಲೇ ಇಸ್ರೇಲ್ ಮಾದರಿ ಕೃಷಿ ಪದ್ಧತಿ ಜತೆಗೆ ಕಪ್ಪತಗುಡ್ಡ ಸಂರಕ್ಷಣೆ ಮಾಡುವುದು ಹಾಗೂ ಮೂಲಸೌಕರ್ಯ ಒದಗಿಸಲು ಅನುದಾನ ನೀಡಬೇಕು.

| ಅನಿಲ ಮೆಣಸಿನಕಾಯಿ, ಬಿಜೆಪಿ ಮುಖಂಡ ಗದಗ