Thursday, 15th November 2018  

Vijayavani

ಆ್ಯಂಬಿಡೆಂಟ್ ಕೋಟಿ ಕೋಟಿ ಡೀಲ್ ಪ್ರಕರಣ - ಕೆಲವೇ ಕ್ಷಣಗಳಲ್ಲಿ ಜಾಮೀನು ಅರ್ಜಿ ತೀರ್ಪು- ಬಿಡುಗಡೆಯಾಗ್ತಾರಾ ಗಣಿಧಣಿ..?        ನಾನು ಸಕ್ಕರೆ, ಮಾಧ್ಯಮಗಳು ಇರುವೆ - ನಾನು ಹೋದ್ಕಡೆ ನನ್ನನ್ನೇ ಹಿಂಬಾಲಿಸುತ್ತಾರೆ -  ಜಂಭ ಕೊಚ್ಚಿಕೊಂಡ ನಟಿ ಶ್ರುತಿ        ನಮ್ಮ ತಂದೆನೂ ಬ್ರಾಹ್ಮಣರನ್ನ ಸೋಲಿಸಿದ್ರು - ನಾನೂ ಈಗ ಬ್ರಾಹ್ಮಣರ ವ್ಯಕ್ತಿಯನ್ನು ಸೋಲಿಸಿದ್ದೇನೆ - ಸಿದ್ದು ನ್ಯಾಮಗೌಡ ಹೇಳಿಕೆ        ಮಹದಾಯಿ ನದಿ ನೀರು ಹಂಚಿಕೆ ವಿಚಾರ - ಇದೇ 17ರಂದು ಸರ್ವೆ ಪಕ್ಷ ಸಭೆ ಕರೆ ಸಿಎಂ- ಬಿಎಸ್​ವೈ, ದಿನೇಶ್​ ಗುಂಡೂರಾವ್​ಗೆ ಪತ್ರ        ರಫೇಲ್ ಖರೀದಿ ಅವ್ಯವಹಾರ ಆರೋಪ - ಸುದೀರ್ಘ 5 ಗಂಟೆಗಳ ಕಾಲ ನಡೆದ ವಿಚಾರಣೆ ಮುಕ್ತಾಯ - ತೀರ್ಪು ಕಾಯ್ದಿರಿಸಿದ ಸುಪ್ರೀಂ        ವೈಟ್​​ಹೌಸ್​​ನಲ್ಲಿ ದೀಪಾವಳಿ ಸಂಭ್ರಮ - ದೀಪ ಬೆಳಗಿ ಹಿಂದುಗಳಿಗೆ ಶುಭಕೋರಿದ ಟ್ರಂಪ್ - ಮೋದಿ ನನ್ನ ಸ್ನೇಹಿತ ಎಂದ ಟ್ರಂಪ್​       
Breaking News

ಈ ವಾರದ ನಿಮ್ಮ ಭವಿಷ್ಯ ಹೇಗಿದೆ ನೋಡಿ

Sunday, 18.03.2018, 3:04 AM       No Comments

ಮೇಷ

ಮೇಧಾವಿಗಳು ನೀವು ಎಂಬುದರ ಬಗ್ಗೆ ಎರಡು ಮಾತಿಲ್ಲ. ಆದರೂ ಅವಸರದಿಂದಾಗಿ ಒಮ್ಮೆಗೇ ಸ್ಪೋಟಕ ಪರಿಸ್ಥಿತಿ ನಿರ್ವಿುಸಿಕೊಳ್ಳಲು ಮುಂದಾಗುತ್ತೀರಿ. ಮಿತ್ರರೇ ಆಗಿದ್ದು ಒಂದೆಡೆ ಅನುಕೂಲಕರ ಎಂದು ತಿಳಿದಾಗಲೂ ಸರ›ನೆ ನಿಮ್ಮ ವಿರುದ್ಧ ತಂತ್ರ ಹೂಡುವ ಕೆಲಸವನ್ನು ಈ ಹತ್ತಿರದ ಜನ ಮಾಡಿಬಿಡುತ್ತಾರೆ ಎಂಬ ಅರಿವು ಇರಲಿ. ಮಿತ್ರರು (ಹಾಗೆ ತೋರಿಸಿಕೊಳ್ಳುವವರು ಎನ್ನಿ) ಬಿಸಿತುಪ್ಪದಂತಾಗುವ ಸಮಯ ಇದು. ಉಗುಳಲಾಗದು, ನುಂಗಲೂ ಆಗದು. ವೀರಭದ್ರ ಸ್ವಾಮಿಯನ್ನು ಸ್ತುತಿಸಿ. ನಿರೀಕ್ಷಿತ ಕೆಲಸದಲ್ಲಿ ಯಶ.

ಶುಭದಿಕ್ಕು: ಈಶಾನ್ಯ, ಶುಭಸಂಖ್ಯೆ: 4

ವೃಷಭ

ಈಗ ಕಾಲದ ಘಟ್ಟ ಹಲವು ರೀತಿಯಲ್ಲಿ ಒಳಿತುಗಳನ್ನು ಒದಗಿಸಲು ಹಿಂದೇಟು ಹಾಕಬಹುದು. ನಿಮ್ಮ ಪಾಲಿಗೆ ದಡ್ಡರನ್ನು ನಿರ್ಲಕ್ಷಿಸಲಾಗದ ದೊಡ್ಡ ಶಿಕ್ಷೆ ಸಿಗಬಹುದು. ತಲೆ ತಿನ್ನುತ್ತಾರೆ. ಚಾತುರ್ಯದಿಂದ ಇವರನ್ನು ಸಾಗಹಾಕಿ. ಕಾಲದ ರೀತಿಯೇ ಹಾಗೆ. ಅನುಕೂಲ ಕಲ್ಪಿಸುವಾಗ ಅದು ನಿಮ್ಮನ್ನು ಮಗುವಿನಂತೆ ಆರೈಕೆ ಮಾಡುತ್ತದೆ. ಅನುಕೂಲವಿರದ ಕಾಲ ಶಿರೋ ವೇದನೆಯನ್ನು, ಜಿಗುಪ್ಸೆಯನ್ನು ತರುತ್ತದೆ. ದಶರಥ ಮಹಾರಾಜ ವಿರಚಿತ ಶನೈಶ್ಚರ ಸ್ತೋತ್ರ ಪಠಿಸಿ. ಹಲವು ವಾಮಶಕ್ತಿಗಳಿಂದ ನಿಮಗೆ ಮುಕ್ತಿ ಸಾಧ್ಯ.

ಶುಭದಿಕ್ಕು: ಪಶ್ಚಿಮ, ಶುಭಸಂಖ್ಯೆ: 7

ಮಿಥುನ

ನಿಮಗೆ ಕೆಲವು ಪ್ರವಾಸಗಳು ಗಂಟು ಬೀಳಬಹದು. ವಾಣಿಜ್ಯ ವಿಚಾರಗಳನ್ನು ಸೂಕ್ತವಾಗಿ ತಿಳಿದು ವ್ಯಾಪಾರದ ಸಂಬಂಧವಾದ ಪ್ರವಾಸವನ್ನು ಸದುಪಯೋಗಪಡಿಸಿಕೊಳ್ಳಿ. ಆರೋಗ್ಯದ ಬಗೆಗೆ ಎಚ್ಚರ ಇರಲಿ. ವೃಥಾ ಭಯಪಡುವ ಅವಕಾಶಗಳಿಲ್ಲ. ದ್ರೋಣಪುಷ್ಪವನ್ನು ಗಂಧಾಕ್ಷತೆ ಜತೆಗೆ ದತ್ತಾತ್ರೇಯನಿಗೆ ಅರ್ಪಿಸಿ. ಕೆಲವು ಹೊಸ ಜನರ ಸಂಪರ್ಕ ನಿಮ್ಮ ಪಾಲಿಗೆ ಸಿಗುವ ಸಾಧ್ಯತೆ ಅಧಿಕ. ತಿಳಿಯದಿರುವ ಅನೇಕ ವಿಷಯಗಳನ್ನು ಹೊಸಬರಿಂದ ತಿಳಿದುಕೊಳ್ಳಿ. ಮುಂದಿನ ದಿನಗಳಲ್ಲಿ ಲಾಭದ ಅಂಶ ವೃದ್ಧಿಗೆ ಇವು ಸಹಾಯಕ್ಕೆ ಬರಬಹುದಾಗಿದೆ.

ಶುಭದಿಕ್ಕು: ನೈಋತ್ಯ, ಶುಭಸಂಖ್ಯೆ: 9

ಕಟಕ

ಮಾತುಕತೆಯಿಂದ ಕೆಲವು ಕಿರಿಕಿರಿಗಳನ್ನು, ವ್ಯಾಜ್ಯಗಳನ್ನು ನಿವಾರಿಸಿಕೊಳ್ಳಲು ಹೇರಳ ಅವಕಾಶಗಳು ಲಭ್ಯ. ನೀಲಿ ಹೂವಿನಿಂದ ನಾಗಾರಾಧನೆ ಮಾಡಿ. ವಿಷದೋಷ, ವಿಷ ಕಕ್ಕುವ ಜನರಿಂದ ಮುಕ್ತಿ ಸಿಗಲು ಸಾಧ್ಯ. ನಿಮ್ಮ ಉತ್ಕರ್ಷದ ಒಂದು ಮಹತ್ವದ ಅಂಶ ಕೇವಲ ಕೆಲವೇ ವ್ಯಕ್ತಿಗಳ ಕಾರಣಕ್ಕಾಗಿ ನಿಮ್ಮ ಸಹಾಯಕ್ಕೆ ಕೂಡಿ ಬರಲಾರದು. ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ. ಮಿಕ್ಕಿದ್ದನ್ನು ದೇವರಿಗೆ ಬಿಡಿ. ದೊಡ್ಡ ಬಂಡವಾಳ ತೊಡಗಿಸುವ ವಹಿವಾಟುಗಳು ಸದ್ಯ ಬೇಡ. ಸಕಲ ಧುರಿತ ನಿವಾರಕ ಷಣ್ಮುಖನನ್ನು ಆರಾಧಿಸಿ. ಯಶಸ್ಸಿದೆ.

ಶುಭದಿಕ್ಕು: ದಕ್ಷಿಣ, ಶುಭಸಂಖ್ಯೆ: 2

ಸಿಂಹ

ಪ್ರಯತ್ನಗಳನ್ನೆಲ್ಲ ಸಾಕಷ್ಟು ನಡೆಸುತ್ತಿದ್ದೀರಿ. ಆದರೂ ಕೆಲವನ್ನು ಕಷ್ಟಪಟ್ಟು ನಿಯಂತ್ರಿಸಬಹುದು. ಸಮುದ್ರದ ಉಪ್ಪನ್ನು ನಿಮ್ಮ ಮನೆಯ ನೈಋತ್ಯ ಭಾಗದಲ್ಲಿ ಚೆಲ್ಲಿ. (ಒಂದರ್ಧ ಗ್ರಾಮಿನಷ್ಟು) ಹುಟ್ಟುವ ಸೂರ್ಯನನ್ನು (ಒಂದು ಅಥವಾ ಎರಡು ಸೆಕೆಂಡ್ ಕಾಲ ಮಾತ್ರ) ದಿಟ್ಟಿಸಿ ಸೂರ್ಯ ಜಪ ಜಪಿಸಿ. ಪಂಚಮುಖಿ ಹನುಮಂತ ಕವಚ ಓದಿ. ನಿಮ್ಮ ಅಂತರ್ಗತ ಶಕ್ತಿಗೆ ಹೊಸ ರಭಸ ಸಿಕ್ಕು ಅನೇಕ ಯಶಸ್ಸುಗಳನ್ನು ಪಡೆಯುತ್ತೀರಿ.

ಶುಭದಿಕ್ಕು: ಪಶ್ಚಿಮ, ಶುಭಸಂಖ್ಯೆ: 7

ಕನ್ಯಾ

ಯಾವುದೇ ರೀತಿಯಲ್ಲೂ ನಿಮ್ಮ ಒಬ್ಬರ ಬಲವೇ ಸಾಕಾಗದು. ಮನೆಯ ಸಮಾಚಾರಗಳಿರಲಿ, ಸಾಮಾಜಿಕ ಜೀವನದ ವಿಚಾರಗಳ ಬಗೆಗೇ ಇರಲಿ ಮನೆಯ ಮಂದಿಯೊಡನೆ ಮಾತನಾಡಿ. ಬಾಳಸಂಗಾತಿಯೂ ನಿಮ್ಮ ಬೆಂಬಲಕ್ಕೆ ನಿಲ್ಲಲು ಈಗ ಅನುಕೂಲವಿದೆ. ಕೊಂಕು ಮಾತನಾಡುವ ಜನರನ್ನು ಮುಗುಳ್ನಗೆಯಿಂದಲೇ ನಿಯಂತ್ರಿಸಿ. ಇಂಥವರ ಜತೆ ಮಾತು ಉಪಯೋಗಕ್ಕೆ ಬಾರದು. ಕೆಲವು ಸಲ ಮೌನವೇ ದೊಡ್ಡ ಆಯುಧ. ಮಾತು ಬೇಡ ಎಂದಲ್ಲ. ಮಾತಿನ ಬಗೆಗಿನ ಗೌರವ ಕೊಡುವ ಮಂದಿಯನ್ನು ಗುರುತಿಸಿಕೊಳ್ಳಿ. ಗಣಪತಿ ಸ್ತುತಿ ಕ್ಷೇಮಕರ.

ಶುಭದಿಕ್ಕು: ಉತ್ತರ, ಶುಭಸಂಖ್ಯೆ: 4

ತುಲಾ

ಹೊಯ್ದಾಡುವ ಪರಿಸ್ಥಿತಿಯನ್ನು ನಿಯಂತ್ರಿಸಲು ನಿಮ್ಮ ರಾಶ್ಯಾಧಿಪ ಶುಕ್ರನ ಸ್ಥಿತಿಗತಿ ಪೂರ್ತಿಯಾದ ಶಕ್ತಿಯನ್ನು ಪಡೆದಿರದು. ಶನೈಶ್ಚರನು ಅಭೂತಪೂರ್ವ ಧೈರ್ಯವನ್ನು ತುಂಬುತ್ತಾನೆ. ವಿಶೇಷವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು, ಸಾಮಾಜಿಕ ಜೀವನದಲ್ಲಿ ವಿಶೇಷವಾದ ಸ್ಥಾನಮಾನ, ರಾಜಕೀಯ ಮಹತ್ವಾಕಾಂಕ್ಷೆಗಳ ಬಗೆಗೆ ಒಂದಿಷ್ಟು ಹೆಚ್ಚಿನ ಬೆಂಬಲ ಇತ್ಯಾದಿಗಳ ಬಗೆಗೆ ನಿಮ್ಮ ಮನಸ್ಸಿಗೆ ಹಿತ ತರುವ ವರ್ತಮಾನಕ್ಕೆ ವೇದಿಕೆ ಸಜ್ಜಾಗಿದೆ. ಬುಧನು ಪೂರ್ತಿಯಾಗಿ ನಿಮಗೆ ಸಹಕರಿಸಬಲ್ಲ. ಬೌದ್ಧಿಕ ಸಿದ್ಧಿ ಲಭ್ಯ. ರುದ್ರನನ್ನು ಆರಾಧಿಸಿ. ಕ್ಷೇಮ.

ಶುಭದಿಕ್ಕು: ಈಶಾನ್ಯ, ಶುಭಸಂಖ್ಯೆ: 1

ವೃಶ್ಚಿಕ

ಚಾತುರ್ಯದಿಂದ ವ್ಯವಹರಿಸಿ. ನೀವು ದುರ್ಬಲರಾಗಿದ್ದೀರಿ ಎಂದು ಅನ್ಯರು ತಿಳಿದಾಗ ಮನಸ್ಸಿನಲ್ಲೇ ನಗುವ ವಿಚಾರ ನಿಮಗೆ ಕರಗತವಾಗಲಿ. ಸೂಕ್ತ ಸಮಯ ಬಂದಾಗ ಚೆನ್ನಾಗಿ ಸೆಡ್ಡು ಹೊಡೆದು ನಿಲ್ಲುವುದರಿಂದ ಅನುಕೂಲವಾಗುತ್ತದೆ. ಪ್ರವಾಹದ ವಿರುದ್ಧ ಈಜತೊಡಗಿದ್ದೇನೆಯೆ ಎಂಬ ಅನುಮಾನ ಬರುತ್ತಿರುತ್ತದೆ. ಶನೈಶ್ಚರ ಸ್ವಾಮಿಯು ಚಂದ್ರನ ಜತೆ ನೇರವಾಗಿ ಮನಸ್ತಾಪಗಳನ್ನು ಇಟ್ಟುಕೊಂಡ ಪರಿಣಾಮದಿಂದಾಗಿ ಸುಲಭವಾಗಿ ಆಗಬೇಕಾದ ಕೆಲಸ ವಿಳಂಬವಾಗುತ್ತಿರುತ್ತದೆ. ನರಸಿಂಹನನ್ನು ಸ್ತುತಿಸಿ.

ಶುಭದಿಕ್ಕು: ವಾಯವ್ಯ, ಶುಭಸಂಖ್ಯೆ: 9

ಧನು

ನಿಮ್ಮ ಪಾಲಿಗೆ ಗುರುಬಲವೂ ಇಲ್ಲದ ಸ್ಥಿತಿ, ಸಾಡೇಸಾತಿ ಕಾಟದ ಸಂದರ್ಭ ಹೀಗೆ ಎರಡೂ ಒಂದೇ ಕಾಲದ ತೊಂದರೆ ಎದುರಿಸುವಂತೆ ನಿಮ್ಮನ್ನು ಬಿಸಿಯಾದ ಜಾಗದಲ್ಲಿ ನಿಲ್ಲಿಸಿದೆ. ಶರಣಾಗತ ರಕ್ಷಕನಾದ ಶ್ರೀ ಭಗವಾನ್ ಮಹಾವಿಷ್ಣುವನ್ನು ಆರಾಧಿಸಿ. ಜತೆ ಜತೆಗೆ ಶಿವ ಸಹಸ್ರ ನಾಮಾವಳಿ ಪಠಣದಿಂದಾಗಿ ವಿಷಮಯ ಸಂದರ್ಭಗಳನ್ನು ಎದುರಿಸಿ ಗೆಲ್ಲುವ ಪವಾಡ ಪ್ರದರ್ಶಿಸುತ್ತೀರಿ. ನಿಜ, ದಳ್ಳುರಿಯಿದೆ. ಆದರೆ ಮನೋಬಲದಲ್ಲಿ ನೀವು ಅದ್ವಿತೀಯರು. ನಿಧಾನವಾಗಿ ನಿಮ್ಮ ಮನೋಭಿಲಾಷೆಗಳನ್ನು ಪೂರೈಸಿಕೊಳ್ಳಿ.

ಶುಭದಿಕ್ಕು: ದಕ್ಷಿಣ, ಶುಭಸಂಖ್ಯೆ: 6

ಮಕರ

ಶನೈಶ್ಚರನೇ ವಿರುದ್ಧವಾಗಿದ್ದಾನೆ. ವರ್ಚಸ್ಸಿಗೆ ತೂಕ ಕೊಡಬೇಕಾದ ಸ್ವಾಮಿ ಚಂದ್ರನ ಜತೆಗಿನ ಜಗಳದಿಂದಾಗಿ ನಿಮಗೆ ನೀಡಬೇಕಾದ ಗಮನವನ್ನು ಅವನಿಗೆ ನಿಮ್ಮ ಬಗೆಗಾಗಿ ನೀಡಲಾಗುತ್ತಿಲ್ಲ. ಹೀಗಾಗಿ, ತಾಯಿ ದುರ್ಗೆಯನ್ನು, ಸಕಲ ಚರಾಚರಗಳ ಶಕ್ತಿಯನ್ನು ಕ್ಷಣಮಾತ್ರಕ್ಕೆ ಶೂನ್ಯವಾಗಿಸಬಲ್ಲ ವಾಯು ಜೀವೋತ್ತಮ ಮಾರುತಿಯನ್ನು ಆರಾಧಿಸಿ. ನಿಮ್ಮ ಕಷ್ಟದ ಪ್ರಮಾಣವನ್ನು ನಿಯಂತ್ರಿಸುವ ಸಂಜೀವಿನಿ ಶಕ್ತಿ ಹನುಮಂತನಿಗಿದೆ. ಕಷ್ಟಗಳ ನಡುವೆಯೂ ಬೆಂಕಿಯಲ್ಲಿ ಅರಳಿದ ಹೂವಾಗಬಲ್ಲಿರಿ ನೀವು.

ಶುಭದಿಕ್ಕು: ಆಗ್ನೇಯ, ಶುಭಸಂಖ್ಯೆ: 3

ಕುಂಭ

ನಿಮ್ಮ ಅನೇಕ ಸಂಪನ್ನವಾದ ಕಾರ್ಯಕ್ರಮಗಳನ್ನು ನಿರಾಳವಾಗಿ ನೀವು ಮಾಡಿ ಮುಗಿಸಬಹುದು. ಆದರೆ ನಿಮ್ಮ ಮಿತಿಯ ಬಗೆಗೂ ಅರಿವಿರಲಿ. ಇಲ್ಲದಿದ್ದರೆ ಟೀಕೆಗಳನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ಆನೆಯ ಎದುರು ಬಂದು ನಾಯಿ ಕೂಗಾಡಿದಂತೆ. ಆನೆಯ ಹಣೆಬರಹ ಈ ಕೂಗನ್ನು ಕೇಳಿಸಿಕೊಳ್ಳಬೇಕೇ ವಿನಾ ಅದರ ಹಿಡಿತಕ್ಕೆ ಸಿಗದ ದೂರವನ್ನು ನಾಯಿ ಉಳಿಸಿಕೊಳ್ಳುತ್ತದೆ. ಜೀವನದಲ್ಲೂ ಎಲ್ಲ ರೀತಿಯ ಅರಿಷ್ಟ ಪ್ರಾಣಿಗಳು ಮನುಷ್ಯ ರೂಪದಲ್ಲಿ ಇರುತ್ತಾರೆ. ಸಾವಧಾನದಿಂದ ಎದುರಿಸಿ. ಷಣ್ಮುಖನನ್ನು ಸ್ತುತಿಸಿ.

ಶುಭದಿಕ್ಕು: ನೈಋತ್ಯ ಶುಭಸಂಖ್ಯೆ: 5

ಮೀನ

ನಿಮ್ಮನ್ನು ಯಶಸ್ಸಿನ ಶಿಖರದಿಂದ ಕೆಳಗಿಳಿಸಲು ಯಾರಿಂದಲೂ ಸಾಧ್ಯವಿಲ್ಲ. ಸಕಾರಾತ್ಮಕ ಕೆಲಸ ಕಾರ್ಯಗಳನ್ನು ಮಾಡಿ ಮುಗಿಸುವ ಶ್ರಮವಿಲ್ಲದ ಕಾಯಕ ನಿಮಗೆ ಇಷ್ಟದ ವಿಚಾರ. ಆದರೂ ವಿರೋಧಿಗಳು ನಿಮ್ಮನ್ನು ನಿಮಗೆ ವಾಸ್ತವವಾಗಿ ದಕ್ಕಬೇಕಾದ ಕೆಲವು ಗಟ್ಟಿಯಾದ ವಿಚಾರಗಳನ್ನು ನೀವು ತಲುಪಲಾಗದಂತೆ ಅಡೆತಡೆ ತರುತ್ತಾರೆ. ಸಮಂಜಸವಾದುದನ್ನೇ ಮಾಡುವ ನಿಮ್ಮ ಹಟ ಅವರಿಗೆ ಸೇರಿಬರದು. ಆದರೂ ನಿಮ್ಮ ಗುರಿ ಬಿಡಬೇಡಿ. ಪಶುಪತಿಯಾದ ಶಿವನನ್ನು ಸ್ತುತಿಸಿ. ಒಳಿತಿದೆ.

ಶುಭದಿಕ್ಕು: ಪೂರ್ವ, ಶುಭಸಂಖ್ಯೆ: 8

Leave a Reply

Your email address will not be published. Required fields are marked *

Back To Top