ಈ ಬಾರಿ ಮಾವಿನ ಫಸಲು ಅರ್ಧ

ಮುಂಡಗೋಡ: ತಾಲೂಕಿನಲ್ಲಿ ನವೆಂಬರ್​ನಲ್ಲಿ ಸುರಿದ ಹಿಂಗಾರು ಮಳೆಯಿಂದ ಕಸಿ ಕಟ್ಟಿದ ಮೂರ್ನಾಲ್ಕು ವರ್ಷದ ಹಾಗೂ 15-20 ವರ್ಷದ ಮಾವಿನ ಗಿಡಗಳು ಮಾತ್ರ ಶೇ. 50ರಷ್ಟು ಹೂವು ಬಿಟ್ಟಿವೆ. ಅದಕ್ಕಿಂತ ಹಳೆಯ ಗಿಡಗಳು ಹೂವು ಬಿಟ್ಟಿಲ್ಲ.

ಕಳೆದ ವರ್ಷಕ್ಕೆ ಹೋಲಿಸಿದರೆ ತಾಲೂಕಿನಲ್ಲಿ ಈ ವರ್ಷ ಮಾವಿನ ಫಸಲು ಕಡಿಮೆಯಾಗಬಹುದು. ನವೆಂಬರ್​ನಲ್ಲಿ ಹಿಂಗಾರು ಮಳೆ ಜಾಸ್ತಿಯಾಗಿ ಹೂವು ಬಿಟ್ಟಿಲ್ಲ. ಸೂಕ್ತವಾದ ಹವಾಮಾನ, ಪಡುವಣ ಗಾಳಿ ಬಿಟ್ಟಿರುವುದರಿಂದ ಹೂಗಳಿಗೆ ಪೂರಕವಾದ ವಾತಾವರಣವಿದೆ. ಅಲ್ಲದೆ, ಬೂದಿ ರೋಗವೂ ಕಾಣಿಸಿಕೊಂಡಿಲ್ಲ. ಆದರೆ, ಹೂವು ಬಿಡದಿರುವುದು ಅಚ್ಚರಿಗೆ ಕಾರಣವಾಗಿದೆ. ಈ ಮೊದಲು ನೈಸರ್ಗಿಕ ವಿಕೋಪದಿಂದ ಗಿಡಗಳು ಹಾನಿಗೆ ಒಳಗಾಗುತ್ತಿದ್ದವು. ಆದರೆ, ಹೂ ಬಿಡುವುದು ಕಡಿಮೆಯಾಗಿರಲಿಲ್ಲ.

ಮುಂಡಗೋಡ ತಾಲೂಕಿನಲ್ಲಿ 1599 ಎಕರೆ (800ಹೆಕ್ಟೇರ್) ಮಾವು ಬೆಳೆಯಲಾಗಿದೆ. ತಾಲೂಕಿನ ಪಾಳಾ ಗ್ರಾಮದಲ್ಲಿ ಮಣ್ಣಿನ ಗುಣ ಮತ್ತು ಹವಾಮಾನದ ಪೂರಕ ವಾತಾವರಣ ಇರುವುದರಿಂದ ಇಲ್ಲಿ ಆಪೂಸ್, ರಸಪುರಿ, ತೋತಾಪುರಿ ಹಣ್ಣುಗಳನ್ನು ಹೆಚ್ಚಾಗಿ ಬೆಳೆಯುತ್ತಾರೆ. ಆದರೆ, ಅಲ್ಲಿಯೂ ಈ ಬಾರಿ ಗಿಡಗಳು ಹೂ ಕಡಿಮೆ ಬಿಟ್ಟಿವೆ.

ನನ್ನ ಮೂರು ಮಾವಿನ ತೋಟಗಳ ಪೈಕಿ ಒಂದು ತೋಟದಲ್ಲಿ ಗಿಡಗಳು ಹೂ ಬಿಟ್ಟಿವೆ. ಈವರೆಗೆ ಗಿಡಗಳಲ್ಲಿ ಬಿಟ್ಟ ಹೂಗಳಿಗೇನೂ ಹಾನಿಯಾಗಿಲ್ಲ. ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಮಾವು ಬೆಳೆಗಾರರಿಗೆ ಯೋಗ್ಯ ಮಾರುಕಟ್ಟೆಯಾಗಬೇಕಾದರೆ ತಾಲೂಕಿಗೊಂದು ಶೈತ್ಯಾಗಾರ ಅಥವಾ ಸಂಗ್ರಹ ಘಟಕ ನಿರ್ವಿುಸಬೇಕು.

| ಶಂಕ್ರಣ್ಣ ಜಿಗಳೇರ ಕಲಕೊಪ್ಪ, ಮಾವು ಬೆಳೆದ ರೈತ

ಕಳೆದ ವರ್ಷ ಮಾವು ಬೇಗ ಹೂ ಬಿಟ್ಟಿತ್ತು. ಈ ವರ್ಷ ತಡವಾಗಿದೆ. ಮೋಡ ಮುಸುಕಿದ ವಾತಾವರಣವಿದ್ದರೆ ಬೂದಿ ರೋಗ ಹರಡುವ ಸಾಧ್ಯತೆ ಇದೆ. ಈವರೆಗೆ ರೋಗ ಕಂಡುಬಂದಿಲ್ಲ. ಅನುಕೂಲಕರ ವಾತಾವರಣವಿದೆ. ಹಳೆಯ ಗಿಡಗಳು ತಡವಾಗಿ ಹೂ ಬಿಡುತ್ತಿವೆ. ಈ ಸಂದರ್ಭದಲ್ಲಿ ಕೀಟನಾಶಕ ಮತ್ತು ಶಿಲೀಂದ್ರ ನಾಶಕಗಳನ್ನು ಸಿಂಪಡಿಸಬೇಕು. ರೈತರು ಮಧ್ಯವರ್ತಿಗಳಿಗೆ ಫಸಲು ಗುತ್ತಿಗೆ ಕೊಡುವುದನ್ನು ಬಿಟ್ಟು, ನೇರವಾಗಿ ಮಾರಾಟ ನಡೆಸಬೇಕು.

| ಬಿ. ನಾಗಾರ್ಜುನಗೌಡ, ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ