ಬಾಗಲಕೋಟೆ: ಈ ನೆಲದ ಋಣ ಹಾಗೂ ತಂದೆ ತಾಯಿಯ ಋಣ ನಮ್ಮ ಮೇಲಿದೆ. ಇಂದಿನ ಪೀಳಿಗೆಯವರ ವೃತ್ತಿ ಗಂಭೀರತೆ ಹಾಗೂ ವೃತ್ತಿ ಗೌರವ ಮುಖ್ಯವಾಗಿದೆ ಎಂದು ಕರ್ನಾಟಕ ಆಡಳಿತ ನ್ಯಾಯಮಂಡಳಿಯ ಚರ್ಮೇನ್, ನ್ಯಾಯಮೂರ್ತಿ ಆರ್.ಬಿ.ಬೂದಿಹಾಳ ಹೇಳಿದರು.
ನಗರದ ಬಿವಿವಿ ಸಂಘದ ಎಸ್.ಸಿ.ನಂದಿಮಠ ಕಾನೂನು ಮಹಾವಿದ್ಯಾಲಯದ ಸಭಾಭವನದಲ್ಲಿ ಶನಿವಾರ ಜಿ.ಎಸ್.ಛಬ್ಬಿ ಅಸೋಸಿಯೇಟ್ಸ್ ಸಹಯೋಗದಲ್ಲಿ ನಿವೃತ್ತ ನ್ಯಾಯಾಧೀಶ ದಿ.ಜಿ.ಎಚ್.ಛಬ್ಬಿ ಸಂಸ್ಮರಣಾ ದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದಿ.ಜಿ.ಎಚ್.ಛಬ್ಬಿ ಹಾಗೂ ಕೆ.ಎಸ್..ದೇಶಪಾಂಡೆ ವಕೀಲರು ಇಬ್ಬರು ನಮ್ಮ ಗುರುಗಳಾಗಿದ್ದವರು. ಅವರ ಮಾರ್ಗದರ್ಶನದಲ್ಲಿ ನಾವೆಲ್ಲಾ ಬೆಳೆಸಿದ್ದೇವೆ. ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಕಾನೂನು ವಿದ್ಯಾರ್ಥಿಗಳಿಗೆ ಆಳವಾದ ಅಧ್ಯಯನ ಮುಖ್ಯವಾಗಿದೆ. ಕ್ಲಾಸ್‌ನಲ್ಲಿ ಹೇಳುವ ಪಾಠವನ್ನು ನೀವೂ ಮನನ ಮಾಡಿಕೊಳ್ಳಬೇಕು. ವೃತ್ತಿಯಲ್ಲಿ ಜಾಗೃತರಾಗಿ ಕಾರ್ಯ ನಿರ್ವಹಿಸಿ ಜೊತೆಗೆ ನಿಮ್ಮ ವೃತ್ತಿ ಬಗ್ಗೆ ಗಂಭೀರತೆ ಹಾಗೂ ಗೌರವ ಇರಲಿ. ಈ ನೆಲದ ತಂದೆ ತಾಯಿಯ ಋಣ ನಮ್ಮ ಮೇಲಿದೆ ಎನ್ನುವುದು ನಾವು ಮರೆಯಬಾರದು ಎಂದರು.
ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಮಾತನಾಡಿ, ಕರ್ಮಯೋಗಿಯಂತೆ ಕಾರ್ಯ ನಿರ್ವಹಿಸಿದ ಪರಿಣಾಮ ಎಸ್.ಸಿ.ನಂದಿಮಠ ಕಾನೂನು ಮಹಾವಿದ್ಯಾಲಯ ಇಂದು ಮಾದರಿ ಮಹಾವಿದ್ಯಾಲಯವಾಗಿದೆ. ಕಾನೂನು ಪದವಿ ಪಡೆಯುವ ವಿದ್ಯಾರ್ಥಿಗಳು ಜ್ಞಾನಾರ್ಜನೆಗೆ ಹೆಚ್ಚಿನ ಒತ್ತು ನೀಡಬೇಕು. ಬ್ರಿಟಿಷ್ ಕಾನೂನು ಮತ್ತು ಭಾರತೀಯ ಕಾನೂನಿನಲ್ಲಿ ಸಾಕಷ್ಟು ವ್ಯತ್ಯಾಸಗಳ ಬಗ್ಗೆ ತಿಳಿಸಿದರು.
ಕಾಲೇಜುಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಗುರುಬಸವ ಸೂಳಿಬಾವಿ, ಮಹಾವಿದ್ಯಾಲಯ ಪ್ರಾಚಾರ್ಯ ಡಾ.ಎಂ.ಪಿ.ಚಂದ್ರಿಕಾ, ಶ್ರೀನಿವಾಸ್ ಛೆಬ್ಬಿ ಇದ್ದರು. ಮಂಜುಳಾ ಕರೋಡಗಿ ಪ್ರಾರ್ಥಿಸಿದರು, ಡಾ.ಸುಧಿಂದ್ರ ವಂದಿಸಿದರು, ಎನ್.ಎಂ.ದೇಸಾಯಿ ನಿರೂಪಿಸಿದರು.