ಈ ಗಂಡುಬೀರಿಯನ್ನು ಯಾವುದಕ್ಕೆ ಹೋಲಿಸುವುದು?

ಅಮೆಜಾನ್ ನದಿಯೇ ಒಂದು ವಿಸ್ಮಯಲೋಕ. ಅದರ ನದೀಗುಂಟ ಸಾಗುವುದೆಂದರೆ ಸಾವನ್ನು ಬೆನ್ನಿಗೆ ಕಟ್ಟಿಕೊಂಡಂತೆ. ಉಕ್ಕುಕ್ಕಿ ಹರಿಯುವ ನದಿ, ಆನಕೊಂಡಾ, ಮಾಂಸಭಕ್ಷಕ ಫಿರಾನಾ ಮೀನು, ಎಲೆಕ್ಟ್ರಿಕ್ ಈಲ್. ಅದರ ಜತೆಗೆ ವೈರಿಗಳ ತಲೆಯನ್ನೇ ಕೊರಳ ಹಾರವನ್ನಾಗಿ ಮಾಡಿಕೊಳ್ಳುವ ಜುವಾರೋ ಬುಡಕಟ್ಟು ಜನ. ಈ ಕಾರಣದಿಂದಲೇ ಚಾರ್ಲ್ಸ್ ಡಾರ್ವಿನ್ ಇದನ್ನು ಪ್ರಕೃತಿಯ ಪ್ರಯೋಗಶಾಲೆ ಎಂದಿದ್ದನಂತೆ.

‘ಬೆಳಗ್ಗೆ ಮನೆಯಲ್ಲಿ ಏನು ನಾಷ್ಟಾ ಮಾಡಿದ್ರಿ’ ಅಂತ ಕೇಳಿದರು ಯಾರೋ.

ಹೌದೂ… ಬೆಳಗ್ಗೆ ನಾನು ಏನು ತಿಂದೆ?

ಥತ್ತರಿಕೆ

ನೆನಪೇ ಆಗಲಿಲ್ಲ. ಈ ಪ್ರಶ್ನೆ ಕೇಳಿದವರಿಗೆ ಉತ್ತರ ತಿಳಕೊಳ್ಳಲೇಬೇಕು ಅನ್ನೋ ತೀವ್ರ ಧಾವಂತ ಏನೂ ಇರಲಿಲ್ಲ. ಆದರೂ…

ಬೆಳಗ್ಗೆ ನಾನೇ ತಿಂದದ್ದು ಸಂಜೆ ನನಗೇ ಮರೆತುಹೋಗೋದಾ? ಹಠಕ್ಕೆ ಬಿದ್ದೆ. ನನ್ನ ಮರೆವಿನ ಕತ್ತಲ ಬಾವಿಯೊಳಕ್ಕೆ ಪಾತಾಳಗರಡಿ ಇಳಿಸಿ ಐದಾರು ನಿಮಿಷ ತಡಕಾಡಿದ ಮೇಲೆ ತಿಳೀತು-

ನಾನು ಬೆಳಗ್ಗೆ ತಿಂದದ್ದು ಅಕ್ಕಿರೊಟ್ಟಿ!

ನಿಮಗೂ ಇಂಥ ಅನುಭವ ಆಗಿರುತ್ತೆ. ನಮ್ಮ ಮನಸ್ಸು ಯಾವುದನ್ನ ನೆನಪಿಟ್ಟುಕೊಳ್ಳುತ್ತೆ, ಯಾವುದನ್ನು ಮರೆತುಬಿಡುತ್ತೆ ಗೊತ್ತೇ ಆಗೋದಿಲ್ಲ. ಯಾವುದೋ ಕ್ಷುಲ್ಲಕ, ಕ್ಷುದ್ರ ವಿಷಯವನ್ನು ಜೀವಮಾನವಿಡೀ ನೆನಪಿಟ್ಟುಕೊಂಡಿರುತ್ತೆ. ಮತ್ತಾವುದೋ ಮಹತ್ವದ ವಿಷಯ ಅದು ನಡೆದ ಮಾರನೇ ದಿನಕ್ಕೇ ಮರೆತುಹೋಗಿರುತ್ತೆ.

ನಾನು ಐದನೇ ಕ್ಲಾಸು ಓದುತ್ತಿದ್ದಾಗ ನಮ್ಮೂರ ಕುಳ್ಳಪ್ಪನ ಮನೆ ಪಕ್ಕದಲ್ಲಿ ಅಷ್ಟಗಲಕ್ಕೆ ಹಬ್ಬಿಕೊಂಡಿದ್ದ ಕುಂಬಳಗಿಡದ ಹತ್ತಿರ ನಲವತ್ತೆಂಟು ಪೈಸೆ ಸಿಕ್ಕಿದ್ದು. ಅದರಲ್ಲಿ ಮೂರು ಹತ್ತು ಪೈಸೆ, ಮೂರು ಐದು ಪೈಸೆ, ಒಂದು ಎರಡು ಪೈಸೆ ಮತ್ತೊಂದು ತಾಮ್ರದ ಒಂದು ಪೈಸೆ ಈ ವಿವರ ಕೂಡಾ ನೆನಪಿದೆ. ಆದರೆ ನಿನ್ನೆ ಬೆಳಗ್ಗೆ ನಮ್ಮ ಪೇಪರಿನ ಹುಡುಗ ಕೊಟ್ಟ ನೂರ ಇಪ್ಪತ್ತೋ ಮೂವತ್ತೋ ರೂಪಾಯಿಯನ್ನು ಅದೆಲ್ಲಿಟ್ಟೆನೋ ಗೊತ್ತಿಲ್ಲ.

ಅದೇ ನಾನು ಮಿಡಲ್ ಸ್ಕೂಲಿನಲ್ಲಿ ಓದುತ್ತಿದ್ದಾಗ ನಮ್ಮ ಮಾದಯ್ಯ ಮೇಷ್ಟ್ರು ಹಾಕಿಕೊಂಡು ಬರುತ್ತಿದ್ದ ತೆಳು ನೀಲಿಬಣ್ಣದ ಸಣ್ಣ ಚೌಕಳಿಯ ಅರದೋಳಿನ ಟೆರಿಲಿನ್ ಷರ್ಟು ಈಗಲೂ ಕಣ್ಣಿಗೆ ಕಟ್ಟಿದಂತೆ ನೆನಪಿದೆ. ಆದರೆ ಮೊನ್ನೆ ನನ್ನ ಶ್ರೀಮತಿ ಉಟ್ಟುಕೊಂಡಿದ್ದ ಸೀರೆಯನ್ನು ‘ಯಾರದ್ದು ಈ ಸೀರೆ?’ ಅಂತ ಕೇಳಿ ಚೆನ್ನಾಗಿ ಬಯ್ಯಿಸಿಕೊಂಡೆ. ಯಾಕೆಂದರೆ ಆ ಸೀರೆ ನಾನೇ ತಂದಿದ್ದದ್ದು!

ನಾನು ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ನಮಗೆ ಭೂಗೋಳ ಪಾಠ ಮಾಡುತ್ತಿದ್ದ ಪಾರ್ವತಿ ಮೇಡಂ ‘ಜಗತ್ತಿನ ಅತಿ ಉದ್ದವಾದ ನದಿ ಈಜಿಪ್ಟಿನ ನೈಲ್ ನದಿ, ಪ್ರಪಂಚದ ಅತಿ ದೊಡ್ಡ ನದಿ ದಕ್ಷಿಣ ಅಮೆರಿಕದ ಅಮೆಜಾನ್ ನದಿ. ಅಮೆಜಾನ್ ನದಿಯನ್ನು ಗಂಡುಬೀರಿ ನದಿ ಎಂದು ಕರೆಯುತ್ತಾರೆ’- ಹೀಗಂತ ಪಾಠ ಮಾಡಿದ್ದು ನನಗೆ ಅಕ್ಷರಕ್ಷರ ನೆನಪಿದೆ. ನಾವು ಆಗ ಕೂತಿದ್ದ ಕ್ಲಾಸ್ರೂಂ, ಬೆಂಚು, ಟೇಬಲ್ಲು, ಕುರ್ಚಿ, ಗೋಡೆಗೆ ತೂಗುಹಾಕಿದ್ದ ಬೋರ್ಡ, ಮ್ಯಾಪು. ಅಷ್ಟೇಕೆ ಪಾರ್ವತಿ ಮೇಡಂ ಉಟ್ಟುಕೊಳ್ಳುತ್ತಿದ್ದ ಸೀರೆಯ ಡಿಸೈನು, ಉದ್ದಜಡೆ, ಅಗಲ ಕುಂಕುಮ, ದಪ್ಪ ಹಿಮ್ಮಡಿಯ ಚಪ್ಪಲಿ- ಇಂಥಾ ಯಾವ್ಯಾವುದೋ ವಿವರಗಳು ಈಗಲೂ ನೆನಪಿನಲ್ಲಿದೆ. ಈ ಮಧ್ಯೆ ನಾನು ಓದಿದ, ಕೇಳಿದ ಎಷ್ಟೋ ವಿಷಯಗಳು, ಭೇಟಿಯಾದ ಎಷ್ಟೋ ವ್ಯಕ್ತಿಗಳು ನನ್ನ ನೆನಪಿನ ಕೋಶದಲ್ಲಿ ಒಂದಿಷ್ಟೂ ಕುರುಹನುಳಿಸದೆ ಮರೆವಿನ ಮಹಾಪ್ರಪಾತಕ್ಕೆ ಬಿದ್ದು ಲಯವಾಗಿ ಬಿಟ್ಟಿದ್ದಾರೆ, ಇರಲಿ.

ಜಗತ್ತಿನ ಅತಿದೊಡ್ಡ ನದಿ ದಕ್ಷಿಣ ಅಮೆರಿಕದ ಅಮೆಜಾನ್ ನದಿ. ಅಮೆಜಾನ್ ನದಿಯನ್ನು ‘ಗಂಡುಬೀರಿ ನದಿ’ ಎಂದು ಕರೆಯುತ್ತಾರೆ ಅಂತ ನಮ್ಮ ಪಾರ್ವತಿ ಮೇಡಂ ಹೇಳುತ್ತಿದ್ದರಲ್ಲ, ಆ ಕಾಲಕ್ಕೆ ನಾನು ನೋಡಿದ್ದುದು ಕಾವೇರಿ ನದಿಯನ್ನು ಮಾತ್ರ. ಅದರಲ್ಲೂ ತುಂಬಿ ಹರಿಯುವ ಕಾವೇರಿಯಲ್ಲ. ಕವಿಗಳು ಹಾಡುವಂಥ ಕಲಕಲ ಹರಿಯುವ, ಜುಳುಜುಳು ನಾದಮಾಡುವ ಕಾವೇರಿಯನ್ನಷ್ಟೇ ನಾನು ನೋಡಿದ್ದುದು. ಇಡೀ ಪ್ರಪಂಚಕ್ಕೆ ದೊಡ್ಡ ನದಿ ಅಂದರೆ ಅದು ನಮ್ಮ ಕಾವೇರಿ ನದಿಯ ಎಷ್ಟು ಪಾಲು ದೊಡ್ಡದಿರಬಹುದು? ಎಂದು ಕಲ್ಪಿಸಿಕೊಳ್ಳಲು ಪ್ರಯತ್ನಿಸಿದೆನಾದರೂ ಈ ಹಳ್ಳಿಹೈದನ ಕಲ್ಪನಾಶಕ್ತಿ ಕೋಳಿಹುಂಜ ಹಾರಾಡಿದಂತೆ ಬಹಳ ಎತ್ತರ ಹಾರಲಾರದೆ ನೆಲಕ್ಕಿಳಿದು ಬಿಡುತ್ತಿತ್ತು. ‘ಅಮೆಜಾನ್ ಎಷ್ಟು ದೊಡ್ಡ ನದಿ ಅಂದರೆ ಅದರಲ್ಲಿ ಹಡಗುಗಳು ಓಡಾಡುತ್ತವೆ’ ಎಂದು ಮೇಡಂ ಹೇಳಿದರಾದರೂ ‘ಹಡಗು’ ಅನ್ನುವುದು ಎಷ್ಟು ದೊಡ್ಡದು ಅನ್ನುವ ಯಾವ ಕಲ್ಪನೆಯೂ ಇರದಿದ್ದುದರಿಂದ ಅಮೆಜಾನ್ಗೆ ಈ ಗಮಾರನ ಬುದ್ಧಿಗೆ ಅಷ್ಟು ದೊಡ್ಡದಾಗಿ ಗೋಚರವಾಗಲು ಸಾಧ್ಯವೇ ಆಗಿರಲಿಲ್ಲ. ಆದರೂ ‘ಅಮೆಜಾನ್ ಜಗತ್ತಿನ ಅತಿ ದೊಡ್ಡ ನದಿ. ಅದನ್ನು ಗಂಡುಬೀರಿ ನದಿ ಎಂದು ಕರೆಯುತ್ತಾರೆ’ ಅನ್ನುವ ಈ ಮಾತು ಯಾವ್ಯಾವಾಗಲೋ ತಲೆಯೊಳಕ್ಕೆ ಸುಳಿಸುಳಿದು ಹೋಗುತ್ತಿತ್ತು.

ಮೊನ್ನೆ ನಮ್ಮ ಎಸ್.ಎಲ್.ಭೈರಪ್ಪನವರು ‘ನಾನು ಅಮೆಜಾನ್ ಟೂರಿಗೆ ಹೋಗ್ತಾ ಇದ್ದೀನಿ ಕೃಷ್ಣೇಗೌಡ್ರೆ’ ಅಂದಾಗ ಥಟ್ಟನೆ ನಮ್ಮ ಹೈಸ್ಕೂಲು, ಪಾರ್ವತಿ ಮೇಡಮ್ಮು ಎಲ್ಲಾ ಏಕಕಾಲಕ್ಕೆ ನೆನಪಾಯಿತು. ಕೆಲವೇ ದಿನಗಳ ಹಿಂದೆ ಅಮೆಜಾನ್ ನದಿ ಕೆಲವು ಕಡೆಗಳಲ್ಲಿ ಹನ್ನೆರಡು ಕಿಲೋಮೀಟರ್ ಅಗಲಕ್ಕೆ ಹರಿಯುತ್ತದೆ ಅಂತ ಎಲ್ಲೋ ಓದಿ ಅಷ್ಟಗಲದ ಒಂದು ನದಿಯನ್ನು ಕಲ್ಪಿಸಿಕೊಳ್ಳಲಾಗದೆ ತತ್ತರಿಸಿಬಿಟ್ಟಿದ್ದೆ.

‘ಹೃದಯದಲಿ ಇದೇನಿದೂ ನದಿಯೊಂದು ಓಡಿದೆ…’ ಅಂತ ಅಣ್ಣಾವ್ರ ಸಿನಿಮಾಕ್ಕೆ ಹಾಡು ಬರೆದ ಚಿ. ಉದಯಶಂಕರ್ಗೆ,

‘ಹರಿಯುವ ನದಿಯ ನೋಡುತ ನಿಂತೆ

ಅಲೆಗಳು ಕುಣಿದಿತ್ತೂ

ಕಲ ಕಲ ಕಲ ಕಲ ಮಂಜುಳ ಗಾನವು

ಕಿವಿಗಳ ತುಂಬಿತ್ತು’

ಅಂತ ಬಿ.ಕೆ. ಸುಮಿತ್ರ ಕಂಠಕ್ಕೆ ಹಾಡು ನೀಡಿದ ಆರ್.ಎನ್. ಜಯಗೋಪಾಲ್ ಅವರಿಗೆ ಅಮೆಜಾನಿನ ರುದ್ರಸೌಂದರ್ಯ ನೆನಪಿಗೂ ಬಂದಿರಲಿಕ್ಕಿಲ್ಲ. ಆಗ ಅವರ ಹೃದಯದಲ್ಲಿ ಹರಿಯುವುದು ಸಣ್ಣಸಣ್ಣ ಬಂಡೆಗಳ ಕೆಲ ಬಲದಲ್ಲೋ, ಅಗಲಗಲ ಮರಳ ಹಾಸಿನ ಮೇಲೋ ತೊದಲುಲಿಯುತ್ತಾ ಹರಿವ ಕಾವೇರಿಯೋ, ತುಂಗೆಯೋ, ನೇತ್ರಾವತಿಯೋ, ಕಪಿಲೆಯೋ ಅಷ್ಟೇ.

ಆದರೆ ಅಮೆಜಾನ್ ಅಂದರೆ ಅದಲ್ಲವೇ ಅಲ್ಲ. ಪರ್ವತಗಳಲ್ಲಿ ಹಿಮಾಲಯ ಹೇಗೋ, ಕಣಿವೆಗಳಲ್ಲಿ ಗ್ರಾಂಡ್ ಕ್ಯಾನಿಯನ್ ಹೇಗೋ ಅಮೆಜಾನ್ ಹಾಗೆ. ‘ಭವ್ಯತೆ’ ಅಂದರೇನು ಅಂತ ಭವ್ಯತಾಮೀಮಾಂಸೆಯಲ್ಲಿ ಒಂದು ಮಾತು ಬರುತ್ತದೆ. ‘ಯಾವುದನ್ನು ನೋಡಿದಾಗ ನಮ್ಮದೊಂದು ವ್ಯಕ್ತಿತ್ವ, ನಮ್ಮದೊಂದು ಆಕಾರ, ನಮ್ಮದೊಂದು ಅಸ್ತಿತ್ವ ಎಲ್ಲವೂ ಇಲ್ಲವಾಗಿಬಿಡುತ್ತದೋ, ಯಾವುದು ನಮ್ಮ ಅಸ್ತಿತ್ವವನ್ನು ತೊತ್ತಳದುಳಿದು ತಾನೇ ತಾನಾಗಿ ವಿಜೃಂಭಿಸಿ ಬಿಡುತ್ತದೋ ಅದು ಭವ್ಯತೆ’. ನಾನಿನ್ನೂ ಅಮೆಜಾನ್ ನದಿಯನ್ನು ನೋಡಿಲ್ಲ. ಆದರೆ ಅದರ ವಿವರಗಳನ್ನು ಓದಿದರೆ, ಕೇಳಿದರೆ ಅದನ್ನು ನೋಡಿಯೇ ತೀರಬೇಕು ಎಂಬ ಹಂಬಲ ಕೋಡಿವರಿಯುತ್ತದೆ. ಅಮೆಜಾನನ್ನು ನೋಡಿಯೇ ಬರೆಯುವುದು ಸೂಕ್ತ ಹೌದು (ನೋಡಿದರೂ ಅದನ್ನೆಷ್ಟು ನೋಡಿಯೇನು? ಬೊಗಸೆಯಲ್ಲಿ ಸಾಗರವನ್ನು ನೋಡಿದಂತೆ!). ಆದರೆ ಮೈ ಜುಮ್ಮೆನ್ನಿಸುವ ಅಮೆಜಾನಿನ ವಿವರಗಳನ್ನು ಬರೆದರೆ ಅದು ಈ ಅಂಕಣಕ್ಕೆ ಅಳವಡಬಹುದೇ ಎಂಬ ಕುತೂಹಲಕ್ಕಷ್ಟೇ ಬರೆಯುತ್ತಿರುವೆ.

ಪ್ರಪಂಚದ ಅತೀಉದ್ದವಾದ ನದಿ ಆಫ್ರಿಕಾಖಂಡದಲ್ಲಿ ಹರಿಯುವ ನೈಲ್ ನದಿ. ಅದರ ಉದ್ದ 4,415 ಮೈಲುಗಳು. ಅದಕ್ಕಿಂತ 145 ಮೈಲು ಕಡಿಮೆಯಷ್ಟೇ ಅಮೆಜಾನ್. ಇದರ ಉದ್ದ 4,000 ಮೈಲು. ಅಥವಾ 6,400 ಕಿಲೋಮೀಟರ್. ಅಂದರೆ ಭಾರತದ ಉತ್ತರ-ದಕ್ಷಿಣ ಉದ್ದ ಇದೆಯಲ್ಲ(3214 ಕಿಮೀ) ಅದರ ಎರಡರಷ್ಟು. ಸರಿ, ಉದ್ದದಲ್ಲಿ ಅಮೆಜಾನ್, ನೈಲ್ ನದಿಗೆ ಎರಡನೆಯದಾದರೂ ಅಮೆಜಾನಿನ ರುದ್ರ ಭವ್ಯತೆಯನ್ನು, ರೂಕ್ಷ ವೈಶಾಲ್ಯವನ್ನು ಜಗತ್ತಿನಲ್ಲಿ ಇನ್ನಾವುದರೊಂದಿಗೂ ಹೋಲಿಸುವುದಕ್ಕೆ ಸಾಧ್ಯವಿಲ್ಲ. ಇಷ್ಟೆಲ್ಲ ವಿಜ್ಞಾನ, ತಂತ್ರಜ್ಞಾನ ಮುಂದುವರಿದಿರುವ ಈ ಕಾಲದಲ್ಲಿ ಈ ನದಿಯನ್ನು ಪಳಗಿಸಿಕೊಳ್ಳುವುದು ಮನುಷ್ಯಮಾತ್ರರಿಗೆ ಸಾಧ್ಯವಾಗಿಲ್ಲ. ಸುಮ್ಮನೆ ಹೋಲಿಕೆಗೆಂದು ನಮ್ಮ ದೇಶದ ನದಿಗಳ ಉದ್ದ ಎಷ್ಟೆಂದು ಹೇಳುತ್ತೇನೆ ಕೇಳಿ. ಬ್ರಹ್ಮಪುತ್ರಾ ನದಿ- 2,900 ಕಿ.ಮೀ., ಗಂಗೆ- 2,525 ಕಿ.ಮೀ., ಯಮುನಾ-1,376 ಕಿ.ಮೀ., ಗೋದಾವರಿ-1,465

ಕಿ.ಮೀ. ಮತ್ತು ನಮ್ಮ ಕಾವೇರಿ 765 ಕಿ.ಮೀ.

ಅಮೆಜಾನ್ ನದಿಯಲ್ಲಿ ಎಷ್ಟು ನೀರು ಹರಿಯುತ್ತದೆ ಅಂದರೆ ಅದರಲ್ಲಿ ಒಂದು ದಿನ ಹರಿಯುವ ನೀರು ನಮ್ಮ ಇಡೀ ಭಾರತದ ವ್ಯವಸಾಯ, ಕೈಗಾರಿಕೆ, ಗೃಹಬಳಕೆ ಎಲ್ಲಕ್ಕೂ ಒಂದು ವರ್ಷಕ್ಕೆ ಸಾಕಾಗುತ್ತದೆಯಂತೆ. ದಿನಕ್ಕೆ ಈ ನದಿ ಅಟ್ಲಾಂಟಿಕ್ ಸಮುದ್ರಕ್ಕೆ ಸುರಿಯುವ ನೀರಿನ ಪ್ರಮಾಣ ಎಂಭತ್ತು ಟ್ರಿಲಿಯನ್ ಗ್ಯಾಲನ್ಗಳಷ್ಟು. ಹೌದು, ಈ ಟ್ರಿಲಿಯನ್ ಗ್ಯಾಲನ್ ಅಂದರೆ ನಮಗೆ ಗೊತ್ತಾಗುವುದಿಲ್ಲ. ಹೀಗೆ ಹೇಳೋಣ, ಅಮೆಜಾನ್ ನದಿಯೊಂದರಲ್ಲಿ ಹರಿಯುವ ನೀರು ಪ್ರಪಂಚದ ಎಂಟು ಮಹಾನದಿಗಳಲ್ಲಿ ಹರಿಯುವ ಒಟ್ಟು ನೀರಿಗೆ ಸಮ! ಅದನ್ನೂ ಕಲ್ಪಿಸಿಕೊಳ್ಳಲಾಗದಿದ್ದರೆ ಇಲ್ಲಿ ಕೇಳಿ- ಆಂಡೀಸ್ ಪರ್ವತಗಳಲ್ಲಿ ಹುಟ್ಟುವ ಈ ನದಿ ಪೂರ್ವಾಭಿಮುಖವಾಗಿ 6,400 ಕಿ.ಮೀ. ಹರಿದು ಅಟ್ಲಾಂಟಿಕ್ ಸಮುದ್ರ ಸೇರುತ್ತದೆಯಲ್ಲ, ಅಲ್ಲಿ ನದಿಯ ಅಗಲ ಎಂಭತ್ತು ಮೈಲಿ! ಅಲ್ಲಿ ಹರಿಯುವ ಸಿಹಿನೀರು ಸಮುದ್ರದ ನೀರಿಗೆ ಎಷ್ಟು ಜೋರಾಗಿ ಒದೆಯುತ್ತದೆಯೆಂದರೆ, ಸಮುದ್ರದ ಮೇಲೆ 150 ಮೈಲಿಯಷ್ಟು ದೂರ ಉಪ್ಪು ನೀರೇ ಸಿಗುವುದಿಲ್ಲ. ಅಷ್ಟುದ್ದಕ್ಕೂ ಅಮೆಜಾನಿನ ಸಿಹಿನೀರೇ!! ಜಗತ್ತಿನಲ್ಲಿ ಒಟ್ಟು ಹರಿಯುವ ನೀರಿನ ಶೇಕಡಾ ಇಪ್ಪತ್ತು ಭಾಗ ಅಮೆಜಾನ್ ನದಿಯೊಂದರಲ್ಲೇ ಹರಿಯುತ್ತದೆಯಂತೆ! ಕಲ್ಪನೆಗೆ ಸಾಧ್ಯವಾ ಹೇಳಿ. ಈ ಗಂಡುಬೀರಿಯನ್ನು ಯಾವುದಕ್ಕೆ ಹೋಲಿಸುವುದು?!

ಆಂಡೀಸ್ ಪರ್ವತಗಳು ಅಂದರೆ ನಮ್ಮ ಹಿಮಾಲಯದಂತೇ ಸಾವಿರಾರು ಚದರ ಮೈಲುಗಳ ವಿಸ್ತಾರಕ್ಕೆ ಹಬ್ಬಿರುವ ಪರ್ವತಗಳ ಶ್ರೇಣಿ. ಇಲ್ಲಿ ಅಮೆಜಾನ್ ಮೈಲುಗಟ್ಟಲೆ ಉದ್ದದ ಕೊರಕಲು ಕಣಿವೆಗಳನ್ನು ಸೃಷ್ಟಿ ಮಾಡಿಕೊಂಡು ಹರಿಯುತ್ತದೆ. ಇಲ್ಲಿ ಎರಡು ಮೂರು ಮೈಲು ವಿಸ್ತಾರದ ನದಿ ಕೆಲವೊಮ್ಮೆ ನೂರಿನ್ನೂರು ಮೀಟರ್ಗಳಷ್ಟು ಕಿರಿದಾದ ಕೊರಕಲುಗಳಲ್ಲಿ ನುಗ್ಗುವಾಗ ಅದರ ವೇಗ, ಆರ್ಭಟ, ಆಸ್ಪೋಟ ಅದೆಷ್ಟು ಭಯಾನಕವಾಗಿರಬಹುದೆಂದು ಸಾಧ್ಯವಾದರೆ ಊಹಿಸಿಕೊಳ್ಳಿ. 1524ರಲ್ಲಿ ಆಂಡೀಸ್ ಪರ್ವತ ಶ್ರೇಣಿಯಲ್ಲಿ ಚಿನ್ನದ ನಗರ ಎಲ್ಡರಾಡೋ ಹುಡುಕಿ ಹೊರಟ ಫ್ರಾನ್ಸಿಸ್ಕೋ ಡಿ ಒರೆಲಾನ ಅನ್ನುವ ಸ್ಪಾನಿಷ್ ಯೋಧ ಅಮೆಜಾನ್ ನದಿಯ ಮಾರ್ಗವಾಗಿ ಹೋಗಿ ಅಟ್ಲಾಂಟಿಕ್ ಸಮುದ್ರ ಸೇರಿದನಂತೆ. ಅಮೆಜಾನ್ ನದೀಗುಂಟ ಪ್ರಯಾಣ ಮಾಡಿದ ಈತನೇ ಮೊದಲ ಯುರೋಪಿಯನ್. ಅಲ್ಲಿ ನದಿ ದಂಡೆಯಿಂದ ಈತನ ಮೇಲೆ ದಾಳಿ ಮಾಡಿದ ಅಲ್ಲಿಯ ಕಾಡುಜನರ ಹೆಂಗಸರ ಸೈನ್ಯ ನೋಡಿ ಒರೆಲಾನ ತಾನು ಸಾಗುತ್ತಿದ್ದ ಆ ನದಿಗೆ ಅಮೆಜಾನ್ ಅಂತ ಕರೆದ. ಅಮೆಜಾನ್ ಅಂದರೆ ಗಂಡುಬೀರಿ ಎಂದು ಅರ್ಥವಂತೆ. ಈ ನದಿ ಸಮಭಾಜಕ ವೃತ್ತದ ಸಮೀಪವೇ ಹರಿಯುವುದರಿಂದ ಇಲ್ಲಿ ಮಳೆ ಜಾಸ್ತಿ. ಜೊತೆಗೆ ಆಂಡೀಸ್ ಪರ್ವತ ಶ್ರೇಣಿಗಳಲ್ಲಿನ ಹಿಮಬಂಡೆಗಳು ಕರಗಿ ಕರಗಿ ನೀರಾಗಿ ನದಿಗೆ ಹರಿಯುತ್ತದೆ. ಈ ಪ್ರದೇಶದಲ್ಲಿ ಮಳೆ ಜಾಸ್ತಿಯಾದದ್ದರಿಂದ ಕಾಡುಗಳೂ ತುಂಬಾ ನಿಬಿಡ, ದಟ್ಟ. ಈ ಅಮೆಜಾನಿನ ಕಾಡುಗಳು ಬರಿಯ ಕಾಡುಗಳಲ್ಲ, ಇದು ಹಸುರಿನ ಅಘೊರ ನರಕ ಎಂದು ಇಲ್ಲಿಗೆ ಮೊದಲು ಕಾಲಿಟ್ಟ ಯುರೋಪಿಯನ್ ನಾವಿಕರು ಕರೆದಿದ್ದಾರೆ. ಈಗಲೂ ಅಮೆಜಾನಿನ ಕಾಡುಗಳೊಳಕ್ಕೆ ಸೂರ್ಯನೇ ಇಣುಕಲು ಹೆದರುತ್ತಾನೆಂದರೆ ಇನ್ನು ನರಮನುಷ್ಯರ ಪಾಡೇನು?

ಅಮೆಜಾನ್ ಅನ್ನುವುದು ಒಂದೇ ಪಾತ್ರದಲ್ಲಿ ಹರಿಯುವ ನದಿಯ ಹರಿವಲ್ಲ. ಇದು ಆಂಡೀಸ್ ಪರ್ವತದಲ್ಲಿ ಹುಟ್ಟಿ ಅಟ್ಲಾಂಟಿಕ್ ಸಮುದ್ರ ಸೇರುವವರೆಗೆ ಸಾವಿರಾರು ದೊಡ್ಡ, ಚಿಕ್ಕ ನದಿಗಳು ಇದರೊಳಕ್ಕೆ ಬಂದು ಸೇರುತ್ತವೆ. ಹೀಗೆ ಸೇರುವ ಬಹಳಷ್ಟು ಉಪನದಿಗಳು ನಮ್ಮ ಗಂಗಾ, ಯಮುನಾ, ಬ್ರಹ್ಮಪುತ್ರಾ ನದಿಗಳಿಗಿಂತ ದೊಡ್ಡವು. ಆದ್ದರಿಂದ ದಕ್ಷಿಣ ಅಮೆರಿಕ ಖಂಡದ ಅರ್ಧಭಾಗ ಅಮೆಜಾನ್ ನದಿಯ ಜಲಾನಯನ ಪ್ರದೇಶವಾಗಿದೆ. ಸುಮಾರು ಎಪ್ಪತ್ತು ದಶಲಕ್ಷ ಚದರ ಕಿಲೋಮೀಟರ್ ಅಂದರೆ ನಮ್ಮ ಭಾರತ ದೇಶದ ಒಟ್ಟು ವಿಸ್ತೀರ್ಣದ (33 ಲಕ್ಷ ಚದರ ಕಿಲೋಮೀಟರ್) ಎರಡರಷ್ಟಕ್ಕೂ ಹೆಚ್ಚು.

ಅಮೆಜಾನ್ ಜಲಾನಯನ ಪ್ರದೇಶದಲ್ಲಿ ಯಾವಾಗಲೂ ಒಂದಲ್ಲ ಒಂದು ಕಡೆ ಮಳೆ ಸುರಿಯುವುದರಿಂದ ನದಿಯ ನೀರು ಸದಾ ಕೆಂಪಾಗಿ ಅಂದರೆ ನಮ್ಮ ಟೀ ಬಣ್ಣದಲ್ಲಿ ಹರಿಯುತ್ತದೆ. ಅಮೆಜಾನ್ ಮತ್ತು ಅದರ ಉಪನದಿಗಳು ತುಂಬಾ ಆಳಕ್ಕೂ ಅಗಲಕ್ಕೂ ಉದ್ದಕ್ಕೂ ಇರುವುದರಿಂದ ಈ ನದಿಗಳಲ್ಲಿ ದೊಡ್ಡ ದೊಡ್ಡ ಹಡಗುಗಳೇ ಸಂಚರಿಸುತ್ತವೆ. ಈ ನದಿ ಉಪನದಿಗಳ ಜಲಮಾರ್ಗಗಳಲ್ಲಿ ಹಡಗುಗಳು ಸಂಚರಿಸಬಹುದಾದ ಮಾರ್ಗವೇ ಒಟ್ಟು ಹದಿನಾರು ಸಾವಿರ ಮೈಲು ಇದೆಯಂತೆ.

ಅಮೆಜಾನಿನ ದಂಡೆಗಳು ಎಷ್ಟು ಅಸ್ತವ್ಯಸ್ತ ಅಂದರೆ ಇಲ್ಲಿ ಯಾವ ನದಿ ಎಲ್ಲಿ ಸಂಗಮವಾಗುತ್ತದೆ ಎಂದು ಹೇಳುವುದೇ ಸಾಧ್ಯವಿಲ್ಲ. ಉದ್ದಕ್ಕೂ ಕಾಡನ್ನು ಕೊರೆದು ಅದರೊಳಗೆಲ್ಲಾ ನುಗ್ಗಿ ಹರಿದಾಡುವ ನೀರು ಆಚೆಯ ದಡ ಕಾಣದಂಥ ವಿಸ್ತಾರ, ಪ್ರತಿಬಾರಿಯೂ ಪಾತ್ರ ಬದಲಿಸಿ ಹರಿಯುವ ಅಮೆಜಾನಿನ ಉಪನದಿಗಳು- ಹೀಗಾಗಿ ಅಮೆಜಾನನ್ನು ಒಂದು ನೋಟಕ್ಕೆ ಕಣ್ತುಂಬಿಕೊಳ್ಳುವುದೇ ಸಾಧ್ಯವಾಗುವುದಿಲ್ಲ.

ಅಮೆಜಾನ್ ನದೀಗುಂಟ ಪ್ರವಾಸ ಮಾಡಬೇಕೆನ್ನುವ ಸಾಹಸಿಗೆ ಸಾವು ಬೆನ್ನಿಗೇ ನಿಂತಿರುತ್ತದೆ. ಮನುಷ್ಯ ಪ್ರವೇಶಕ್ಕೆ ಅಸಾಧ್ಯವಾದ ಆ ನರಕಸದೃಶ ನಿಬಿಡ ಕಾಡುಗಳು! ಅಲ್ಲಿಯ ಜೌಗು ಪ್ರದೇಶದಲ್ಲಿ ನಿಧಾನ ತೆವಳುವ ಅರ್ಧಟನ್ನು ತೂಗುವ ನಲವತ್ತು ಅಡಿಗಿಂತಲೂ ಉದ್ದವಾದ ‘ಆನಕೊಂಡಾ’ ಹಾವುಗಳು. ನೀರಿನೊಳಕ್ಕೆ ಇಳಿದರೆ ಕ್ಷಣಮಾತ್ರದಲ್ಲಿ ಆಕ್ರಮಣ ಮಾಡಿ ಮೂಳೆಗಳವರೆಗೂ ಮಾಂಸವನ್ನು ಹಿಸಿ ಹಿಸಿದು ತಿನ್ನುವ ಮಾಂಸಭಕ್ಷಕ ಫಿರಾನಾ ಮೀನುಗಳು. ಮನುಷ್ಯರನ್ನೇ ಹಿಡಿದು ಎಳೆದೊಯ್ಯಬಲ್ಲಷ್ಟು ಶಕ್ತಿಶಾಲಿಯಾಗಿರುವ ಹನ್ನೆರಡು ಅಡಿ ಉದ್ದನೆಯ ಹದ್ದಿನ ಮೀನುಗಳು, ತಮ್ಮ ಮೈಯಲ್ಲೇ ವಿದ್ಯುತ್ ಉತ್ಪಾದಿಸಿ, ಶೇಖರಿಸಿಕೊಂಡಿರುವ ಎಲೆಕ್ಟ್ರಿಕ್ ಈಲ್ ಎಂಬ ನರಭಕ್ಷಕ ಜಲಚರ- ಇವನ್ನೆಲ್ಲಾ ನೋಡಿ ಆಗಲೇ ಚಾರ್ಲ್ಸ್ ಡಾರ್ವಿನ್ ಹೇಳಿದನಂತೆ- ‘ಇದೊಂದು ಪ್ರಕೃತಿಯ ಪ್ರಯೋಗ ಶಾಲೆ. ಹೊಸ ಹೊಸ ಮೃಗ, ಪಕ್ಷಿ, ತರು, ಲತೆಗಳನ್ನು ಪ್ರಕೃತಿ ಉತ್ಪಾದಿಸುತ್ತಿರುವ ಕಾರ್ಖಾನೆ’. ಅಮೆಜಾನಿನ ಒಂದು ಉಪನದಿ ‘ಉಕಾಯಲಿ’ ಜಲಾನಯನ ಪ್ರದೇಶವನ್ನು ‘ಇಂಡಿಯನ್’ ಎಂತಲೇ ಕರೆಯುತ್ತಾರಂತೆ. ಅಲ್ಲಿ ಹೊರಜಗತ್ತಿನ ಸಂಪರ್ಕವೇ ಇರದ ‘ಅನಾಗರಿಕ’ ಕಾಡು ಬುಡಕಟ್ಟು ಜನ ಇದ್ದಾರೆ. ಅವರಲ್ಲಿ ಅತ್ಯಂತ ಕ್ರೂರಿಗಳೂ, ಕಠೋರರೂ ಅಂದರೆ ‘ಜುವಾರೋ’ ಬುಡಕಟ್ಟಿನವರು. ಇವರು ವೈರಿಗಳ ತಲೆ ಕತ್ತರಿಸಿ ಆ ತಲೆಯನ್ನು ಅದ್ಯಾವುದೋ ಕಾಡಿನ ಗಿಡಮೂಲಿಕೆಗಳ ಸಹಾಯದಿಂದ ಸಣ್ಣ ಚೆಂಡಿನ ಗಾತ್ರಕ್ಕೆ ಕುಗ್ಗಿಸಿ ಕಂಠಾಭರಣ ಮಾಡಿಕೊಂಡು ಧರಿಸುತ್ತಾರಂತೆ ಎಷ್ಟೋ ಪ್ರವಾಸಿಗಳು, ಮತಪ್ರಚಾರಕರು ಅಲ್ಲಿಗೆ ಹೋಗಿ ಅವರ ಕೊರಳ ಕಂಠಾಭರಣವಾಗಿದ್ದಾರಂತೆ!

ನಮ್ಮ ಪೂರ್ಣಚಂದ್ರ ತೇಜಸ್ವಿಯವರು ಅವರ ಮಿಲೇನಿಯಮ್ ಸಿರೀಸ್ನಲ್ಲಿ ಈ ಅಮೆಜಾನ್ ನದಿಯ ಬಗ್ಗೆ ಇನ್ನೂ ವಿವರವಾಗಿ ಬರೆದಿದ್ದಾರೆ. ಅದನ್ನು ಓದಿ. ಭೈರಪ್ಪನವರು ಸಿಗುವಂತಿದ್ದರೆ, ಅವರಿಗೆ ನಿಮ್ಮೊಡನೆ ಮಾತನಾಡುವ ಮೂಡ್ ಇದ್ದರೆ ಅವರು ಮತ್ತಷ್ಟು ವಿವರ ಹೇಳಿಯಾರು. ಆಧುನಿಕರು ನಿಮ್ಮ ಗೂಗಲ್ ಗೆಳೆಯನ ಮೊರೆ ಹೋಗಿ ವಿಷಯ ಸಂಗ್ರಹಿಸಿ. ಈ ಜಗತ್ತಿನಲ್ಲಿ ಅದೆಷ್ಟು ಭೀಕರ ಭವ್ಯ ವಿಸ್ಮಯಗಳಿವೆ ಅಲ್ಲವಾ? ನಮ್ಮ ಕ್ಷುದ್ರತೆ ಅರಿವಾಗಲು ನಾವು ಇಂಥದನ್ನೆಲ್ಲಾ ನೋಡಬೇಕು. ಸಾಧ್ಯವಾಗದಿದ್ದರೆ ಓದಬೇಕು. ಏನಂತೀರಿ?

Leave a Reply

Your email address will not be published. Required fields are marked *