ಈಗಿರುವ ನೀರಾವರಿ ಯೋಜನೆ ತಾತ್ಕಾಲಿಕ

ಚನ್ನಪಟ್ಟಣ: ತಾಲೂಕಿನ ಕೆರೆಗಳನ್ನು ತುಂಬಿಸುವುದೇ ದೊಡ್ಡ ವಿಚಾರ ಎಂದು ಕೆಲವರು ಹೇಳಿಕೊಳ್ಳುತ್ತಿದ್ದರು. ಈಗ ಕ್ಷೇತ್ರದಲ್ಲಿ ಇರುವ ನೀರಾವರಿ ಯೋಜನೆ ತಾತ್ಕಾಲಿಕ. ಕಾವೇರಿ ನಿರ್ವಹಣಾ ಮಂಡಳಿ ರಚನೆಯಾಗಿರುವ ಹಿನ್ನೆಲೆ ಇಗ್ಗಲೂರು ಬ್ಯಾರೇಜ್​ಗೆ ಕೆಆರ್​ಎಸ್ ನಾಲೆಗಳಿಂದ ನೀರು ಬರುವುದಿಲ್ಲ. ಈ ಸಂಗತಿಯನ್ನು ಗಮನದಲ್ಲಿರಿಸಿಕೊಂಡು ದೇವೇಗೌಡ ಬ್ಯಾರೇಜ್​ಗೆ ಶಾಶ್ವತ ಜಲಮೂಲ ಸೃಷ್ಟಿಸುವ ಯೋಜನೆ ಸಿದ್ಧಪಡಿಸಲಾಗಿದೆ ಎಂದು ಸಿಎಂ ಕುಮಾರಸ್ವಾಮಿ ತಿಳಿಸಿದರು.

ತಾಲೂಕಿನ ಜಿಪಂ ಕ್ಷೇತ್ರವಾರು ಜನತಾದರ್ಶನ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿ, ಇಗ್ಗಲೂರು ಡ್ಯಾಂ ಕಟ್ಟಿದ್ದು ಯಾರು ಎಂಬುದು ಎಲ್ಲರಿಗೂ ಗೊತ್ತು. ನನ್ನ ಅವಧಿಯಲ್ಲಿ ಕೆರೆಗಳು ತುಂಬಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಹಿಂದಿನ 3-4 ವರ್ಷಗಳ ಅವಧಿಯಲ್ಲಿ ಪ್ರತಿ ವರ್ಷ ಎಷ್ಟೆಷ್ಟು ಕೆರೆಗಳನ್ನು ತುಂಬಲಾಗಿದೆ ಎಂಬ ದಾಖಲೆ ನನ್ನ ಬಳಿ ಇದೆ ಎಂದು ವಿರೋಧಿಗಳಿಗೆ ಟಾಂಗ್ ನೀಡಿದರು.

ನೀರಾವರಿ ಯೋಜನೆ ವಿಚಾರದಲ್ಲಿ ಡ್ರಾಮಾ ನಡೆದಿದೆ, ವರ್ಷದಲ್ಲಿ 25 ಕೆರೆಗಳಿಗೆ ಮಾತ್ರವೇ ನೀರು ಬಿಟ್ಟಿದ್ದಾರೆ. ಆದರೆ, ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಅಕ್ಕೂರು ಗ್ರಾಮಸ್ಥರು ನೂರಾರು ದೂರು ನೀಡಿದ್ದೀರಿ, ಈ ತಾಲೂಕಿನ ಎಲ್ಲ ಏತ ನೀರಾವರಿ ಯೋಜನೆ, ಕನಕಪುರ ತಾಲೂಕಿನ ಕೆಲ ಕೆರೆಗಳನ್ನು ತುಂಬಿಸಿರುವ ಯೋಜನೆಗಳು ಕೇವಲ ತಾತ್ಕಾಲಿಕ ವ್ಯವಸ್ಥೆಯಾಗಿದೆ ಎಂದರು.

ಇಡೀ ಜಿಲ್ಲೆಗೆ ನೀರಾವರಿ: ಸತ್ತೆಗಾಲದಿಂದ ಇಗ್ಗಲೂರಿನ ದೇವೇಗೌಡ ಬ್ಯಾರೇಜ್​ಗೆ ಗುರುತ್ವಾಕರ್ಷಣ ಬಲದ ಮೂಲಕ ನೀರು ತರುವ 300 ಕೋಟಿ ರೂ. ಅಂದಾಜು ವೆಚ್ಚದ ಮೊದಲ ಯೋಜನೆ ಈಗಾಗಲೇ ಚಾಲನೆಗೊಂಡಿದೆ. ಎರಡನೇ ಹಂತದಲ್ಲಿ ಕಣ್ವ ನಂತರ ವೈ.ಜಿ.ಗುಡ್ಡ, ಮಂಚನಬಲೆ ಜಲಾಶಯಗಳಿಗೆ ನೀರು ತುಂಬಿಸುವ ಮೂಲಕ ಇಡೀ ಜಿಲ್ಲೆಯನ್ನು ಸಮಗ್ರ ನೀರಾವರಿಗೆ ಒಳಪಡಿಸುವುದು ನನ್ನ ಗುರಿಯಾಗಿದೆ. ಇದಕ್ಕಾಗಿ ಒಟ್ಟು 540 ಕೋಟಿ ರೂ. ಯೋಜನೆ ರೂಪಿಸಲಾಗಿದೆ ಎಂದರು.

ಕ್ಷೇತ್ರದ ಅಭಿವೃದ್ಧಿ ಆತಂಕ ಬೇಡ: ರಾಜ್ಯದಲ್ಲಿ ನಡೆದ ಚುನಾವಣೆಗಳು ಇನ್ನಿತರ ಕಾರಣಗಳಿಂದ ಹಳ್ಳಿಗಳಿಗೆ ಭೇಟಿ ನೀಡಲು ಸಾಧ್ಯವಾಗಲಿಲ್ಲ. ಹಲವು ಒತ್ತಡಗಳ ನಡುವೆ ಆಡಳಿತ ನಡೆಸುತ್ತಿದ್ದೇನೆ. ಎಲ್ಲವನ್ನೂ ವಿವರಿಸಿ ಹೇಳಲಾಗದು. ಆದರೆ, ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಆತಂಕ ಪಡಬೇಕಾಗಿಲ್ಲ. ಮುಂದಿನ ನಾಲ್ಕೈದು ತಿಂಗಳಲ್ಲಿ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಅಧಿಕಾರಿಗಳಿಗೆ ಎಚ್ಚರಿಕೆ: ಕಂದಾಯ ಇಲಾಖೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಇಂದು ಸಲ್ಲಿಕೆಯಾದ ಅರ್ಜಿಗಳಲ್ಲಿ ಕಂದಾಯ ಇಲಾಖೆಗೆ ಸೇರಿದ ಅರ್ಜಿಗಳೇ ಸಾಕಷ್ಟಿವೆ. ಖಾತೆ ಪೋಡಿ ಮಾಡಿಕೊಳ್ಳಲು ಜನರನ್ನು ಅಲೆದಾಡಿಸುತ್ತಿರುವುದು ಗಮನಕ್ಕೆ ಬಂದಿದೆ. ಇಂದೇ ಒಂದಿಬ್ಬರು ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದುಕೊಂಡಿದ್ದೆ. ಆದರೆ, ಮತ್ತೊಮ್ಮೆ ಅವಕಾಶ ನೀಡುತ್ತಿದ್ದೇನೆ. ಕಂದಾಯ ಇಲಾಖೆ ಸೇರಿ ಎಲ್ಲ ಇಲಾಖೆ ಅಧಿಕಾರಿಗಳು ಕೆಲಸ ಮಾಡಬೇಕು, ಇಲ್ಲವಾದಲ್ಲಿ ಅಮಾನತು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಜಿಲ್ಲೆಯಲ್ಲೂ ವಾಸ್ತವ್ಯ: ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಇದ್ದ ಪರಿಸ್ಥಿತಿಯೇ ಬೇರೆ, ಈಗಿನ ಪರಿಸ್ಥಿತಿ ಬೇರೆ. ಮೈತ್ರಿ ಸರ್ಕಾರ ಯಾವಾಗಬೇಕಾದರೂ ಬೀಳಬಹುದು ಎಂದು ಕೆಲವರು ಕಾಯುತ್ತಿದ್ದಾರೆ. ಜನತೆ ಹಾಗೂ ಅಧಿಕಾರಿ ವರ್ಗಕ್ಕೆ ಸರ್ಕಾರದ ಮೇಲೆ ವಿಶ್ವಾಸ ಮೂಡಿಸಬೇಕಾದ ಜವಾಬ್ದಾರಿಯಿದೆ. ಜನರು ಇಟ್ಟಿದ್ದ ನಂಬಿಕೆ ಕಳೆದುಕೊಳ್ಳುವ ಕೆಲಸ ಮಾಡಿದ್ದೇನೆ ಎಂಬ ಕೊರಗು ಇದೆ. ಹೀಗಾಗಿ ಉತ್ತರ ಕರ್ನಾಟಕದಿಂದ ಮತ್ತೆ ಗ್ರಾಮ ವಾಸ್ತವ್ಯ ಅರಂಭಿಸಲಾಗುತ್ತಿದ್ದು, ಮುಂದಿನ ದಿನದಲ್ಲಿ ಜಿಲ್ಲೆಯಲ್ಲೂ ನಡೆಸಲಾಗುವುದು ಎಂದು ಘೊಷಿಸಿದರು.

ನನಗೇ ಅರ್ಜಿ ನೀಡಬೇಕಿಲ್ಲ: ಹಲವಾರು ಇಲಾಖೆಗಳಿಗೆ ಸಂಬಂಧಪಟ್ಟಂತೆ ಅಕ್ಕೂರು ಜಿಪಂ ವ್ಯಾಪ್ತಿಯಲ್ಲೇ 1,001 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಎಲ್ಲ ಅರ್ಜಿಗಳನ್ನು ಪರಿಶೀಲಿಸಿ, ಸಮಸ್ಯೆ ಬಗೆಹರಿಸಲಾಗುವುದು. ಜನರು ನನಗೇ ಅರ್ಜಿ ನೀಡಬೇಕಿಲ್ಲ, ಕಚೇರಿಯಲ್ಲಿ ನೀಡಿದ ಅರ್ಜಿಗಳನ್ನು ವಿಲೇವಾರಿ ಮಾಡಲಾಗುವುದು. ನನ್ನ ಗೃಹ ಕಚೇರಿಯಲ್ಲಿ ಯಾರು ಬೇಕಾದರೂ ಬಂದು ಅರ್ಜಿಗೆ ಸಂಬಂಧಿಸಿದ ಮಾಹಿತಿ ಪಡೆದುಕೊಳ್ಳಬಹುದು ಎಂದರು.

ವೃದ್ಧಾಪ್ಯ ವೇತನ 2 ಸಾವಿರ ರೂ.ಗೆ ಹೆಚ್ಚಳ: ವಿಧವಾ ವೇತನ ಹೆಚ್ಚಳ ಮಾಡಲು ಕೆಲ ಮಹಿಳೆಯರು ಮನವಿ ಮಾಡಿದ್ದಾರೆ, ಈಗಾಗಲೇ ತಿಂಗಳಿಗೆ ಸಾವಿರ ರೂ. ನೀಡುತ್ತಿರುವ ಪಿಂಚಣಿಯನ್ನು ಮುಂದಿನ ವರ್ಷದಿಂದ 2 ಸಾವಿರ ರೂ.ಗಳಿಗೆ ಹೆಚ್ಚಿಸಲಾಗುವುದು. ಮುಂದಿನ ಹಂತದಲ್ಲಿ ವಿಧವೆಯರಿಗೂ ಈ ಸೌಲಭ್ಯವನ್ನು ವಿಸ್ತರಿಸಲಾಗುವುದು ಎಂದರು.

25 ಸಾವಿರ ಕೋಟಿ ರೂ. ಸಾಲಮನ್ನಾ: ಒಂದೇ ವರ್ಷದಲ್ಲಿ ರಾಜ್ಯ ರೈತರ 25 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದ್ದೇನೆ. ದೇಶದ ಇತಿಹಾಸದಲ್ಲೇ ಯಾವ ಮುಖ್ಯಮಂತ್ರಿಯೂ ಇಷ್ಟೊಂದು ಮೊತ್ತದ ಸಾಲಮನ್ನಾ ಮಾಡಿಲ್ಲ. ಮೊನ್ನೆ ದೆಹಲಿಯಲ್ಲಿ ಆಂಧ್ರಪ್ರದೇಶದ ನೂತನ ಸಿಎಂ ಜಗನ್ ಮೋಹನ್ ಅವರ ಮನೆಗೆ ಹೋಗಿದ್ದೆ, ಈ ವಿಚಾರವನ್ನು ಪ್ರಸ್ತಾಪಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಚಂದ್ರಬಾಬು ನಾಯ್ಡು 14 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಲು ಸಾಧ್ಯವಾಗಿಲ್ಲ ಎಂದು ಪ್ರಸ್ತಾಪಿಸಿದ್ದಾಗಿ ಸಿಎಂ ಕುಮಾರಸ್ವಾಮಿ ಸಭೆಗೆ ತಿಳಿಸಿದರು.

ಸಭೆಯಲ್ಲಿ ಜಿಪಂ ಅಧ್ಯಕ್ಷ ನಾಗರಾಜು, ಉಪಾಧ್ಯಕ್ಷೆ ವೀಣಾಚಂದ್ರು, ತಾಪಂ ಅಧ್ಯಕ್ಷ ಹರೂರು ರಾಜಣ್ಣ, ಅಕ್ಕೂರು ಜಿಪಂ ಸದಸ್ಯ ಗಂಗಾಧರ್, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಇನ್ನೂ ಮುಂತಾದವರು ಉಪಸ್ಥಿತರಿದ್ದರು.