ಹೂವಿನಹಡಗಲಿ: ನಿವೇಶನದ ಇ-ಸ್ವತ್ತು ನೀಡುವಂತೆ ಒತ್ತಾಯಿಸಿ ವೃದ್ಧೆಯೊಬ್ಬರು ಶುಕ್ರವಾರ ಹಿರೇಹಡಗಲಿ ಗ್ರಾಪಂ ಮುಂದೆ ಧರಣಿ ನಡೆಸಿದರು.
ಗ್ರಾಮದ 2ನೇ ವಾರ್ಡ್ ನಿವಾಸಿ ಪಿ.ಎಂ.ಪಾರ್ವತಮ್ಮ ಕಳೆದ 3 ವರ್ಷದಿಂದ ಗ್ರಾಮದ ಸಂತೆ ಬಜಾರ್ ಸಮೀಪವಿರುವ ನಿವೇಶನಕ್ಕೆ ಇ-ಸ್ವತ್ತು ನೀಡುವಂತೆ ಗ್ರಾಪಂಗೆ ಅರ್ಜಿ ಸಲ್ಲಿಸುತ್ತಾ ಬಂದಿದ್ದಾರೆ. ಆದರೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ನನ್ನ ನಿವೇಶನಕ್ಕೆ ಇ-ಸ್ವತ್ತು ನೀಡುವವರೆಗೂ ನಾನು ಗ್ರಾಪಂ ಮುಂದೆ ಧರಣಿ ನಡೆಸುವುದಾಗಿ ಪಾರ್ವತಮ್ಮ ಗ್ರಾಪಂ ಮುಂದೆ ಧರಣಿ ಕುಳಿತರು. ಪಿಡಿಒ ಶಂಭುಲಿಂಗನಗೌಡ ಆಗಮಿಸಿ ಇ-ಸ್ವತ್ತು ಮಾಡಿಕೊಡುವುದಾಗಿ ತಿಳಿಸಿದ ನಂತರ ಪ್ರತಿಭಟನೆ ಹಿಂಪಡೆದರು. ಸಿಪಿಐ ದೀಪಕ್ ಬೂಸರೆಡ್ಡಿ, ಪಿಎಸ್‌ಐ ಭರತ್ ಪ್ರಕಾಶ ಭೇಟಿ ನೀಡಿದ್ದರು.