ಇ-ವಾಹನಕ್ಕೆ ಬ್ರೇಕ್, ಆಟೋ ಕ್ಷೇತ್ರ ನಿರಾಳ

ನವದೆಹಲಿ: ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಆಟೋಮೊಬೈಲ್ ಉದ್ಯಮಕ್ಕೆ ನೆರವು ನೀಡುವ ದೃಷ್ಟಿಯಿಂದ ಎಲೆಕ್ಟ್ರಿಕ್ ವಾಹನಗಳ ಕಡ್ಡಾಯ ಮಾರಾಟ ಮತ್ತು ನೋಂದಣಿ ನಿಯಮವನ್ನು ಕೆಲವು ತಿಂಗಳು ಮುಂದೂಡಲು ಕೇಂದ್ರ ಸರ್ಕಾರ ಬಯಸಿದೆ.

2023ರ ಬಳಿಕ ಅಂತರ್​ದಹನ ಇಂಜಿನ್ ಹೊಂದಿರುವಂತಹ ತ್ರಿಚಕ್ರ ವಾಹನ ಹಾಗೂ 2025ರ ಬಳಿಕ 150 ಸಿಸಿಗಿಂತ ಕಡಿಮೆ ಇಂಜಿನ್ ಸಾಮರ್ಥ್ಯ ಹೊಂದಿರುವ ದ್ವಿಚಕ್ರ ವಾಹನಗಳ ಉತ್ಪಾದನೆ ಮತ್ತು ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು ಎಂದು ಸರ್ಕಾರ ಆದೇಶ ಹೊರಡಿಸಿದೆ. ಇದರಿಂದ ಆಟೋಮೊಬೈಲ್ ಕ್ಷೇತ್ರ ತತ್ತರಿಸಿತು. ವಾಹನಗಳ ಮಾರಾಟ ಗಣನೀಯವಾಗಿ ಕುಸಿಯಿತು, ಉತ್ಪಾದನೆ ಕಡಿಮೆ ಮಾಡಲಾಯಿತು. ಇದರಿಂದ ನಿರುದ್ಯೋಗದ ಸಮಸ್ಯೆ ಹೆಚ್ಚಾಗತೊಡಗಿತು. ಹೀಗಾಗಿ ಆಟೋಮೊಬೈಲ್ ಕ್ಷೇತ್ರಕ್ಕೆ ಉತ್ತೇಜನ ನೀಡಲು ಚಿಂತಿಸಿದ ಸರ್ಕಾರ, ಇ-ವಾಹನ ಕಡ್ಡಾಯಕ್ಕೆ ಪೂರಕವಾಗಿ ಪೆಟ್ರೊಲ್, ಡೀಸೆಲ್ ವಾಹನಗಳ ನೋಂದಣಿ ಶುಲ್ಕ ಹೆಚ್ಚಳ ಸೇರಿ ಹಲವು ಕ್ರಮಗಳನ್ನು ಘೋಷಿಸಿತು. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಅಂತರ್​ದಹನ ಇಂಜಿನ್ ಕಾರುಗಳ ನೋಂದಣಿ ಶುಲ್ಕವನ್ನು -ಠಿ; 600ರಿಂದ 5 ಸಾವಿರಕ್ಕೆ ಹೆಚ್ಚಿಸುವುದಾಗಿ ಕರಡು ಅಧಿಸೂಚನೆ ಹೊರಡಿಸಿತ್ತು. ಇದನ್ನು ಐದಾರು ತಿಂಗಳು ಮುಂದೂಡಲು ಸರ್ಕಾರ ಬಯಸಿದೆ ಎಂದು ಮೂಲಗಳು ತಿಳಿಸಿವೆ.

ಈ ರೀತಿ ನಿಯಮಗಳನ್ನು ವೇಗವಾಗಿ ಹೇರುತ್ತಿರುವುದರಿಂದಾಗಿ ಆಟೋಮೊಬೈಲ್ ಕ್ಷೇತ್ರದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಹಣಕಾಸು ಹಾಗೂ ಬೃಹತ್ ಕೈಗಾರಿಕೆ ಸಚಿವಾಲಯದ ಜತೆ ಈ ಬಗ್ಗೆ ಸಭೆ ನಡೆಸಿದ್ದ ಆಟೋಮೊಬೈಲ್ ಉದ್ಯಮದ ಪ್ರಮುಖರು, ಸರ್ಕಾರ ಎಲೆಕ್ಟ್ರಿಕ್ ವಾಹನ ಮಾರಾಟಕ್ಕೆ ಹೆಚ್ಚು ಒತ್ತಡ ತರುತ್ತಿರುವುದರಿಂದ ದಾಖಲೆ ಪ್ರಮಾಣದಲ್ಲಿ ಉದ್ಯಮ ನಷ್ಟಕ್ಕೆ ಸಿಲುಕಿದೆ. ವಾಹನಗಳ ಉತ್ಪಾದನೆ ಮತ್ತು ಮಾರಾಟ ಇಳಿಕೆಯಾಗಿದ್ದು, ಇದರಿಂದಾಗಿ ಲಕ್ಷಾಂತರ ಉದ್ಯೋಗಿಗಳು ಕೆಲಸ ಕಳೆದು ಕೊಂಡಿದ್ದಾರೆಂದು ಅಹವಾಲು ಹೇಳಿಕೊಂಡಿದ್ದರು.

ವಾಹನ ಖರೀದಿ ಕುಸಿತ

ಕಳೆದ 9 ತಿಂಗಳಿನಿಂದ ಪ್ರಯಾಣಿಕರ ವಾಹನಗಳ ಮಾರಾಟದಲ್ಲಿ ಗಣನೀಯ ಇಳಿಕೆಯಾಗಿದೆ. ಶೇ. 30.98ರಷ್ಟು ಮಾರಾಟ ಇಳಿಕೆಯಾಗಿದೆ. ಕಾರುಗಳ ಮಾರಾಟ ಶೇ. 35.95ರಷ್ಟು ತಗ್ಗಿದೆ ಎಂದು ಭಾರತೀಯ ಆಟೋಮೊಬೈಲ್ ತಯಾರಕರ ಸೊಸೈಟಿ ವರದಿ ತಿಳಿಸಿದೆ.

Leave a Reply

Your email address will not be published. Required fields are marked *