ಇ-ಡಿಜಿಟಲೀಕರಣದತ್ತ ಸರ್ಕಾರಿ ಶಾಲೆ

ಚಿಕ್ಕಬಳ್ಳಾಪುರ:  ಗುಣಮಟ್ಟದ ಶಿಕ್ಷಣ ಒದಗಿಸಲು ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಗಳನ್ನು ಹಂತ ಹಂತವಾಗಿ ಡಿಜಿಟಲೀಕರಣಗೊಳಿಸಲಾಗುತ್ತಿದೆ ಎಂದು ಜಿಪಂ ಅಧ್ಯಕ್ಷ ಎಚ್.ವಿ.ಮಂಜುನಾಥ್ ಹೇಳಿದರು.

ಜಿಪಂ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರಿನ ರೋಟರಿ ದಕ್ಷಿಣ ವಿಭಾಗದ ಸಂಸ್ಥೆ ಹಾಗೂ ಟಾಟಾ ಪವರ್ ಸೋಲಾರ್ ಸಂಸ್ಥೆ ಸೋಮವಾರ ಹಮ್ಮಿಕೊಂಡಿದ್ದ ಶಾಲೆಗಳಿಗೆ ಮೊಬೈಲ್ ಪೊ›ಜೆಕ್ಟರ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಖಾಸಗಿ ಶಾಲೆಗಳು ಆಧುನಿಕ ತಂತ್ರಜ್ಞಾನ ಮತ್ತು ಹೊಸ ಭೋದನಾ ತಂತ್ರ ಅಳವಡಿಸಿಕೊಂಡು ಶಿಕ್ಷಣ ನೀಡುವ ಮೂಲಕ ಪಾಲಕರು ಮತ್ತು ಮಕ್ಕಳನ್ನು ಆಕರ್ಷಿಸುತ್ತಿವೆ. ಇದಕ್ಕೆ ಸಮರ್ಥ ಪೈಪೋಟಿ ನೀಡಲು ಬಡ ಮಕ್ಕಳು ಹೆಚ್ಚಿಗೆ ವ್ಯಾಸಂಗ ಮಾಡುವ ಸರ್ಕಾರಿ ಶಾಲೆಗಳಿಗೂ ಸವಲತ್ತು ಒದಗಿಸಬೇಕಾಗಿದೆ. ಇದಕ್ಕೆ ಸ್ವಯಂ ಸೇವಾ ಸಂಸ್ಥೆಗಳ ಸಹಕಾರ ಅಗತ್ಯವಿದೆ. ರೋಟರಿ ಸಂಸ್ಥೆ ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಿರುವುದು ಶ್ಲಾಘನೀಯ ಎಂದರು.

ಶಾಲೆಗಳ ಡಿಜಿಟಲೀಕರಣವು ಪರಿಣಾಮಕಾರಿ ಕಲಿಕೆಗೆ ಸಹಕಾರಿ. ಇದರಿಂದ ಉತ್ತಮ ಫಲಿತಾಂಶ ಕಾಣಬಹುದು. ಹಾಗೆಯೇ ಶಿಕ್ಷಕರಿಗೂ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಪಿ.ಅನಿರುಧ್ ಶ್ರವಣ್ ಮಾತನಾಡಿ, ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯ ಕೊರತೆಯಿದೆ. ಇದಕ್ಕೆ ವಿವಿಧ ಯೋಜನೆಗಳಲ್ಲಿ ಅನುದಾನ ನೀಡಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಎಲ್ಲ ಸರ್ಕಾರಿ ಶಾಲೆಗಳಲ್ಲೂ ಸಿಸಿ ಕ್ಯಾಮರಾ ಅಳವಡಿಸುವಂತಾಗಲು ಸೂಕ್ತ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.

ರೋಟರಿ ಸಂಸ್ಥೆ ಅಧ್ಯಕ್ಷ ಎಚ್.ಆರ್.ಸುರೇಶ್ ಮಾತನಾಡಿ, ಸ್ವಯಂ ಸೇವಾ ಸಂಸ್ಥೆಗಳು ಶೈಕ್ಷಣಿಕ ಅಭಿವೃದ್ಧಿಗೆ ಅಗತ್ಯ ನೆರವು ನೀಡಲು ಮುಂದೆ ಬರುತ್ತಿವೆ. ಅಧಿಕಾರಿಗಳು ಸಕಾಲದಲ್ಲಿ ಸಮಸ್ಯೆಗಳನ್ನು ಗಮನಕ್ಕೆ ತಂದಾಗ ಬಗೆಹರಿಸಲು ಸಾಧ್ಯವಾಗುತ್ತದೆ ಎಂದರು.

ಸ್ಥಾಯಿ ಸಮಿತಿ ಅಧ್ಯಕ್ಷರಾದ ನರಸಿಂಹಮೂರ್ತಿ, ಎನ್.ಪವಿತ್ರಾ, ರೋಟರಿ ಸಂಸ್ಥೆ ಯೋಜನಾ ಮುಖ್ಯಸ್ಥ ಶ್ರೀಧರ್, ಜಿಲ್ಲಾ ಪಾಲಕ ನಾಗೇಂದ್ರ ಪ್ರಸಾದ್, ಪ್ರತಿನಿಧಿ ಶ್ರೀನಿವಾಸಮೂರ್ತಿ, ಟಾಟಾ ಪವರ್ ಸೋಲಾರ್ ಸಂಸ್ಥೆಯ ಮುಖ್ಯಸ್ಥರಾದ ಎನ್.ಮುರಳಿ, ಶ್ರೀನಾಥ್ ಮತ್ತಿತರರಿದ್ದರು.

100 ಪ್ರೊಜೆಕ್ಟರ್ ವಿತರಣೆ :  ಮೊದಲ ಹಂತದಲ್ಲಿ ಜಿಲ್ಲೆಯ 71 ಸರ್ಕಾರಿ ಪ್ರೌಢಶಾಲೆ, 20 ವಿವಿಧ ಇಲಾಖೆಯ ವಸತಿ ಪ್ರೌಢಶಾಲೆಗಳಿಗೆ 100 ಮೊಬೈಲ್ ಪೊ›ಜೆಕ್ಟರ್ ವಿತರಿಸಲಾಗುತ್ತಿದೆ. ಇದನ್ನು ಒಂದೆಡೆ ಅಳವಡಿಸುವುದರ ಬದಲು ಬೇರೆ ಬೇರೆ ಕೊಠಡಿಗೂ ಸುಲಭವಾಗಿ ತೆಗೆದುಕೊಂಡು ಹೋಗಬಹುದು. ಜತೆಗೆ ಪಠ್ಯ ವಿಷಯಕ್ಕೆ ಸಂಬಂಧಿಸಿದಂತೆ ವಿಶೇಷ ಸಾಫ್ಟ್​ವೇರ್ ರೂಪಿಸಿದ್ದು, ವಿವರಣೆಯ ಧ್ವನಿ ಮುದ್ರಿಕೆ, ಚಿತ್ರ ಸಮೇತ ಉದಾಹರಣೆ ಹೊಂದಿದೆ.