ಮೈಸೂರು: ಆಸ್ತಿ ನೋಂದಣಿಗೆ ಕಡ್ಡಾಯವಾಗಿರುವ ಇ-ಖಾತಾ ಮಾಡಿಕೊಡಲು ಲಂಚ ತೆಗೆದುಕೊಳ್ಳುತ್ತಿದ್ದ ಸಂದರ್ಭದಲ್ಲೇ ಮೈಸೂರು ಮಹಾನಗರ ಪಾಲಿಕೆ ದ್ವಿತೀಯ ದರ್ಜೆ ಸಹಾಯಕ(ಎಸ್ಡಿಎ) ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.
ಜಯನಗರ ರೈಲ್ವೆ ಗೇಟ್ ಬಳಿ ಇರುವ ಪಾಲಿಕೆಯ ವಲಯ ಕಚೇರಿ 2ರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶೈಲೇಶ್ ಸಿಕ್ಕಿ ಬಿದ್ದಿರುವ ನೌಕರ. ಆಸ್ತಿ ಖರೀದಿ, ಮಾರಾಟ ಅಥವಾ ವರ್ಗಾವಣೆ ಸಂದರ್ಭದಲ್ಲಿ ನಿರ್ಣಾಯಕ ದಾಖಲೆಯಾಗಿರುವ ಎಲೆಕ್ಟ್ರಾನಿಕ್ ಖಾತಾಗೆ ಹೆಚ್ಚಿನ ಬೇಡಿಕೆ ಬಂದಿದ್ದು, ಇದನ್ನು ಪಡೆಯಲು ಮಧುವನ ಚಂದ್ರು ಎಂಬುವರು ಅರ್ಜಿ ಸಲ್ಲಿಸಿದ್ದಾರೆ.
ಇದನ್ನು ಮಾಡಿಕೊಡಲು ಶೈಲೇಶ್ 8 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದಾರೆ. ಮೊದಲ ಕಂತಾಗಿ 3 ಸಾವಿರ ರೂ. ಸ್ವೀಕರಿಸಿದ್ದರು. ಬಳಿಕ ಈ ವಿಷಯವಾಗಿ ಅರ್ಜಿದಾರರು ಲೋಕಾಯುಕ್ತ ಪೊಲೀಸರಿಗೆ ದೂರು ಕೊಟ್ಟಿದ್ದರು.
ದೂರು ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸರು ಕಾರ್ಯಪ್ರವೃತ್ತರಾದರು. ಪಾಲಿಕೆ ವಲಯ ಕಚೇರಿ 2ರಲ್ಲಿ ಬಾಕಿ ಹಣ 5 ಸಾವಿರ ರೂಪಾಯಿಯನ್ನು ಮಧುವನ ಚಂದ್ರು ಅವರಿಂದ ಶೈಲೇಶ್ ಸ್ವೀಕರಿಸುತ್ತಿದ್ದರು. ಈ ಸಂದರ್ಭದಲ್ಲಿ ದಾಳಿ ಮಾಡಿದ ಲೋಕಾಯುಕ್ತ ಪೊಲೀಸರು ಹಣ ಸಹಿತ ಈತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಲೋಕಾಯುಕ್ತ ಇನ್ಸ್ಪೆಕ್ಟರ್ಗಳಾದ ಬಿ.ವಿ.ರೂಪಾಶ್ರೀ, ಟಿ.ಅಶೋಕ್ ಕುಮಾರ್, ಸಿಬ್ಬಂದಿ ಮೋಹನ್, ಗುರುಪ್ರಸಾದ್, ಮೋಹನ್ಗೌಡ, ನೇತ್ರಾವತಿ, ತ್ರಿವೇಣಿ, ವೀಣಾ, ಶೇಖರ್ ಅವರು ಈ ಕಾರ್ಯಾಚರಣೆಯಲ್ಲಿದ್ದರು.