ಇಸ್ರೇಲ್ ಮಾದರಿ ಕೃಷಿಯಿಂದ ಲಾಭ

ರಾಣೆಬೆನ್ನೂರ: ಸ್ಥಳೀಯವಾಗಿ ರೈತರು ಇಸ್ರೇಲ್ ಮಾದರಿಯ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವುದರಿಂದ ಕಡಿಮೆ ವೆಚ್ಚದಲ್ಲಿ ಹೆಚ್ಚು ಆದಾಯ ಗಳಿಸಲು ಸಾಧ್ಯವಿದೆ ಎಂದು ಬ್ಯಾಡಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.
ತಾಲೂಕಿನ ಹುಲ್ಲತ್ತಿ ಗ್ರಾಮದಲ್ಲಿ ತೋಟಗಾರಿಕೆ ಇಲಾಖೆ, ಕೃಷಿ ಮಹಾವಿದ್ಯಾಲಯ ಮತ್ತು ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ವೀಳ್ಯದೆಲೆ ಬೆಳೆ ಕುರಿತ ವಿಚಾರ ಸಂಕಿರಣ ಮತ್ತು ಪಪ್ಪಾಯಿ ಬೆಳೆಯ ಬಗೆಗೆ ರೈತರಿಗೆ ಮಂಗಳವಾರ ಏರ್ಪಡಿಸಿದ್ದ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ನೂತನ ತಂತ್ರಜ್ಞಾನ ಮತ್ತು ವಿಜ್ಞಾನವನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳಲು ರೈತರಿಗೆ ಸೂಕ್ತ ತರಬೇತಿ ಅವಶ್ಯವಿದೆ. ಇಂತಹ ಶಿಬಿರಗಳಿಂದ ನೀರಿನ ಬಳಕೆ, ರೋಗಗಳ ಹತೋಟಿ ಮತ್ತಿತರ ಮಾಹಿತಿಗಳು ಲಭ್ಯವಾಗುತ್ತವೆ. ಹೊನ್ನತ್ತಿ ಸುತ್ತಲಿನಲ್ಲಿ ಬೆಳೆದ ವೀಳ್ಯದ ಎಲೆ ಹೊರ ರಾಷ್ಟ್ರಗಳಿಗೆ ರಪ್ತು ಮಾಡಲಾಗುತ್ತಿತ್ತು. ಕೆಲ ವರ್ಷಗಳ ಹಿಂದೆ ಅಂತರ್ಜಲ ಕುಸಿತದ ಪರಿಣಾಮ ಬೆಳೆ ನಾಶವಾಗುವ ಹಂತಕ್ಕೆ ತಲುಪಿತ್ತು. ಕೆರೆಗೆ ನೀರು ತುಂಬಿಸುವ ಯೋಜನೆ ಕೈಗೊಂಡ ತರುವಾಯ ಮತ್ತೆ ಅಂತರ್ಜಲ ಹೆಚ್ಚಳವಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಲ್ಲಿನ ವಿಳ್ಯದೆಲೆ ಪ್ರತಿನಿಧಿಸಲಿದೆ ಎಂದರು.
ವೀಳ್ಯದೆಲೆ ಬೆಳೆಯ ತಾಂತ್ರಿಕ ಕೈಪಿಡಿ ಬಿಡುಗಡೆ ಮಾಡಿದ ಜಿಪಂ ಸದಸ್ಯ ಏಕನಾಥ ಭಾನುವಳ್ಳಿ, ಕೃಷಿಯಲ್ಲಿ ಅಧ್ಯಯನ ಮಾಡಿದ ತಜ್ಞರನ್ನು ಕರೆಸಿ ಶಿಬಿರ ಏರ್ಪಡಿಸಿರುವುದು ಸ್ವಾಗತಾರ್ಹ. ರಾಜ್ಯ ಸರ್ಕಾರ ತೋಟಗಾರಿಕೆ ಬೆಳೆಗಳಿಗೆ ಅನೇಕ ಸೌಲಭ್ಯಗಳನ್ನು ಒದಗಿಸುತ್ತಿದೆ. ಸಬ್ಸಿಡಿ ರೂಪದಲ್ಲಿ ಅನೇಕ ಸವಲತ್ತುಗಳನ್ನು ಪೂರೈಸುತ್ತಿದೆ. ರೈತರು ಇದರ ಸದುಪಯೋಗ ಪಡೆಯಬೇಕು ಎಂದರು. ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಪಿ. ಅಶೋಕ, ಕೃಷಿ ಮಹಾವಿದ್ಯಾಲಯದ ಸಸ್ಯ ರೋಗ ತಜ್ಞ ಡಾ. ರವಿಕುಮಾರ, ಮಣ್ಣು ತಜ್ಞ ಡಾ. ಕುಮಾರ, ತೋಟಗಾರಿಕೆ ಸಹಾಯಕ ಪ್ರಾಧ್ಯಾಪಕ ಡಾ. ಡಿ.ಕೆ. ಹರೀಶ ಉಪನ್ಯಾಸ ನೀಡಿದರು. ಗ್ರಾಪಂ ಅಧ್ಯಕ್ಷ ಬಸಪ್ಪ ಫಕೀರಪ್ಪ ಪೂಜಾರ ಅಧ್ಯಕ್ಷತೆ ವಹಿಸಿದ್ದರು. ತಾಪಂ ಅಧ್ಯಕ್ಷೆ ಗೀತಾ ವಸಂತ ಲಮಾಣಿ, ಉಪಾಧ್ಯಕ್ಷೆ ಕಸ್ತೂರವ್ವ ಚಿನ್ನಪ್ಪ ಹೊನ್ನಾಳಿ, ಸದಸ್ಯ ಭರಮಪ್ಪ ಉರ್ವಿು, ಎಪಿಎಂಸಿ ಸದಸ್ಯ ಬಸವರಾಜ ಸವಣೂರ, ಪಿಎಲ್​ಡಿ ಬ್ಯಾಂಕ್ ಸದಸ್ಯ ವೀರಣ್ಣ ಬಜ್ಜಿ, ಶಂಕರಪ್ಪ ಮಾಕನೂರ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಸ್.ಪಿ. ಭೋಗಿ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ನೂರ್​ಆಹ್ಮದ್ ಹಲಗೇರಿ ಇದ್ದರು. ಯಕ್ಲಾಸಪುರ ಜನನಿ ಜಾನಪದ ಕಲಾ ವೇದಿಕೆಯ ಪರಶುರಾಮ ಬಣಕಾರ ತಂಡದವರು ನಾಡಗೀತೆ, ರೈತ ಗೀತೆ ಹಾಡಿದರು.