ಇಷ್ಟಾರ್ಥ ಈಡೇರಿಸುವ ವನದೇವಿ

ಗೋಣಿಕೊಪ್ಪಲು: ಅಮ್ಮತ್ತಿ-ಕಾರ್ಮಾಡು ಗ್ರಾಮದ ಚೌಡೇಶ್ವರಿ ಬೇಡುವುದನ್ನು ಕೊಡುವ ದೇವಿ ಎಂಬ ನಂಬಿಕೆ ಸ್ಥಳೀಯರಲ್ಲಿದ್ದು, ಶಕ್ತಿ ದೇವತೆ ಎಂದು ಚೌಡೇಶ್ವರಿಯನ್ನು ಪೂಜಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಬೇರೆ ಧರ್ಮೀಯರು ಕೂಡ ಈ ದೇವಿಯನ್ನು ನೆನೆದು ಪರಿಹಾರ ಕಂಡುಕೊಂಡಿದ್ದಾರೆ.

ಕಾಡಿನೊಳಗೆ ಉದ್ಭವವಾಗಿರುವ ಕಾರಣ ವನದೇವಿ ಚೌಡೇಶ್ವರಿ ಎಂದು ಕರೆಯಲಾಗುತ್ತಿದ್ದು, ಶತಮಾನದ ಇತಿಹಾಸ ಹೊಂದಿರುವ ಈ ದೇವಿಯ ಸ್ಥಾನವನ್ನು ಸ್ಥಳೀಯರು ಕಡೆಗಣಿಸಿದ ಕಾರಣ ಗ್ರಾಮಸ್ಥರು ಕಷ್ಟ ಅನುಭವಿಸಿದರು. ಕಷ್ಟಗಳ ಪರಿಹಾರ ಕಂಡುಕೊಳ್ಳಲು ಮತ್ತೆ ದೇವಿಯನ್ನು ಪೂಜಿಸುವ ಮಟ್ಟಕ್ಕೆ ತಲುಪುವಂತೆ ಮಾಡಿದೆ ಎಂದು ಸ್ಥಳೀಯರು ಹೇಳುತ್ತಾರೆ. ಪ್ರಸ್ತುತ ಅಮ್ಮತ್ತಿ-ಕಾರ್ಮಾಡು ಹಾಗೂ ಸುತ್ತಮುತ್ತಲ ಗ್ರಾಮದ ಭಕ್ತರಿಗೆ ವರವ ಕೊಡುವ ದೇವಿಯಾಗಿ ಹೆಸರು ಪಡೆದುಕೊಳ್ಳುವಂತಾಗಿದೆ. ಪರಿಹಾರ ಕಂಡುಕೊಳ್ಳುತ್ತಿರುವ ಭಕ್ತರು ಪೂಜಿಸುವ ಮೂಲಕ ದೇವಿಯ ಆರಾಧಿಸುತ್ತಿದ್ದಾರೆ.

ಉಡುಗೊರೆ ಜಾಗದಲ್ಲಿ ಚೌಡೇಶ್ವರಿ: ಕೊಡಗು ರಾಜನ ಆಳ್ವಿಕೆ ಸಂದರ್ಭ ಲಿಂಗಾಯತ ಸಮುದಾಯಕ್ಕೆ ಸುಮಾರು 45 ಎಕರೆ ಜಾಗವನ್ನು ಉಡುಗೊರೆಯಾಗಿ ನೀಡಿದ್ದ ಈ ಜಾಗದಲ್ಲಿ ದೇವಿ ಉದ್ಭವಗೊಂಡಿದ್ದಳು. ಇದೇ ಜಾಗದಲ್ಲಿ ಉದ್ಭವ ಮೂರ್ತಿಯನ್ನು ಗ್ರಾಮಸ್ಥರು ಈಗಲೂ ಪೂಜಿಸುತ್ತಿದ್ದಾರೆ. ಸುತ್ತ ಕಾಡು ತೋಟವಾಗಿ ಪರಿವರ್ತಿಸಿಕೊಂಡಿದೆ. ದೇವಿಯನ್ನು ಪೂಜಿಸುವ ಭಕ್ತರು ಸುತ್ತಲೂ ಮನೆ ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಾರೆ.
ಮಡಿಲು ತುಂಬಿದ ಚೌಡೇಶ್ವರಿ: ಚೌಡೇಶ್ವರಿ ದೇವಿಯ ಶಕ್ತಿಯ ಬಗ್ಗೆ ಸ್ಥಳೀಯ ಭಕ್ತರು ಹೇಳುವಂತೆ ಮಕ್ಕಳಿಲ್ಲದ ದಂಪತಿಗೆ ಮಗುವನ್ನು ಕರುಣಿಸಿದೆ. ಸುಮಾರು 7-8 ವರ್ಷ ಮಕ್ಕಳಿಲ್ಲದೆ ನೊಂದಿದ್ದ ದಂಪತಿ ದೇವಿಯನ್ನು ಪೂಜಿಸಿದರೆ ಮಕ್ಕಳ ಭಾಗ್ಯ ದೊರೆಯುತ್ತದೆ ಎಂಬ ನಂಬಿಕೆ ಇದೆ.

ಜೀವಜಲ ಕರುಣಿಸಿದ ದೇವಿ: ದೇವಸ್ಥಾನ ಸಮೀಪವಿದ ವ್ಯಕ್ತಿಯೊಬ್ಬರು ಕೊಳವೆಬಾವಿ ಕೊರೆಸಿದರೂ ನೀರು ದೊರಕುತ್ತಿರಲಿಲ್ಲ. ಯುವಕನ ಮೇಲೆ ಬಂದ ದೇವಿಯ ದರ್ಶನ ಪಡೆದು ಬೇಡಿಕೊಂಡಿದ್ದರಿಂದ ನೀರು ದೊರೆತು ಸಮಸ್ಯೆ ಪರಿಹಾರ ಮಾಡಿಕೊಟ್ಟಿರುವುದು ಕೂಡ ದೇವಿಯ ವಿಶೇಷತೆಯಾಗಿದೆ.

ಉದ್ಯೋಗ ಇಲ್ಲದವರಿಗೆ ಉದ್ಯೊಗ, ಕೇಸ್‌ಗಳ ಪರಿಹಾರ ಕೂಡ ಇಲ್ಲಿ ಕಂಡವರಿದ್ದಾರೆ. ಅನಾರೋಗ್ಯದಿಂದ ನಡೆಯಲು ಆಗದ ಭಕ್ತರೊಬ್ಬರು ಇಲ್ಲಿ ಪರಿಹಾರ ಕಂಡುಕೊಂಡಿದ್ದಾರೆ. ದೇವಿಯ ಸುತ್ತಲೂ ಬದುಕು ಸಾಗಿಸುತ್ತಿರುವ ಜನತೆ ಈ ದೇವಿಯನ್ನು ಪೂಜಿಸುವುದರಿಂದ ಶೈಕ್ಷಣಿಕವಾಗಿ ಮುಂದುವರಿಯುತ್ತಿದ್ದಾರೆ. ಉದ್ಯೋಗ ಗಿಟ್ಟಿಸಿಕೊಂಡು ಬದುಕು ಸಾಗಿಸುತ್ತಿದ್ದಾರೆ ಎನ್ನುತ್ತಾರೆ ಸ್ಥಳೀಯರು.

ಮಹಿಳೆಯರೆ ಹೆಚ್ಚು: ಇಲ್ಲಿ ಮಹಿಳೆಯರು ಹೆಚ್ಚು ಪರಿಹಾರ ಕಂಡುಕೊಂಡಿದ್ದಾರೆ. ಇದರ ಫಲವಾಗಿ ದೇವಿಗೆ ಬಳೆಯನ್ನು ಕಾಣಿಕೆಯಾಗಿ ನೀಡುತ್ತಾರೆ. ದೇವಿಗೆ ಸೀರೆ ಧರಿಸಿ ಹಾಗೂ ದೀಪ ಹಚ್ಚಿ ಹರಕೆ ತೀರಿಸುತ್ತಾರೆ.
ಶುಕ್ರವಾರ ಪೂಜೆ: ಪ್ರತಿ ಶುಕ್ರವಾರ ಪೂಜೆ ನಡೆಯುತ್ತದೆ. ಬೆಳಗ್ಗೆ 7 ರಿಂದ 10 ಗಂಟೆವರೆಗೆ ದೇವಿಯ (ಯುವಕನ ಮೇಲೆ ಬರುವ ದೇವಿ) ದರ್ಶನ ನಡೆಯುತ್ತದೆ. ಈ ಸಂದರ್ಭ ಕುರುತಿ ಪೂಜೆ, ಕುಂಕುಮಾರ್ಚನೆ, ಶತ್ರು ಸಂಹಾರ, ತಡೆ ಒಡೆಯುವುದು, ದೃಷ್ಟಿ ತೆಗೆಯುವುದು, ಕಲಶ ಪೂಜೆ, ಪ್ರಾರ್ಥನೆ, ವಾಹನ ಪೂಜೆ, ನೈವಿದ್ಯ, ಪ್ರಸಾದ ವಿತರಣೆ ಹಾಗೂ ಅನ್ನದಾನ ನಡೆಯುತ್ತದೆ. ದೇವಸ್ಥಾನ ಸಮಿತಿ ಅಧ್ಯಕ್ಷರಾಗಿ ನರಸಯ್ಯ, ಉಪಾಧ್ಯಕ್ಷರಾಗಿ ವಿ.ಎನ್.ರಾಜು ಕಾರ್ಯನಿರ್ವಹಿಸುತ್ತಿದ್ದಾರೆ.

ಸಾವು ತಪ್ಪಿಸಿದ ದೇವಿ: ಆಚರಣೆಯಂತೆ ಗ್ರಾಮದಲ್ಲಿ ಪೂಜಿಸುತ್ತಿದ್ದ ದೇವಿಯನ್ನು ಕಡೆಗಣನೆ ಮಾಡಿದ ಕಾರಣ ಗ್ರಾಮದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿತ್ತು. ದೇವಿಯ ಆರಾಧನೆ ನಂತರ ಸಾವಿನ ಸಂಖ್ಯೆ ಕಡಿಮೆಯಾಯಿತು ಎಂದು ಸ್ಥಳೀಯ ನಿವಾಸಿ ಅಭಿಜಿತ್ ಹೇಳುತ್ತಾರೆ. ಪ್ರತಿ ಮೂರು ತಿಂಗಳಿಗೊಮ್ಮೆ 3 ಸಾವು ನಿರಂತರವಾಗಿ ನಡೆಯುತ್ತಿತ್ತು. ಇದರಿಂದ ಭಯಗೊಂಡ ಗ್ರಾಮಸ್ಥರು ದೇವಿಯ ಸ್ಥಾನ ಶುದ್ಧಗೊಳಿಸಿ ಪೂಜಿಸಲು ಆರಂಭಿಸಿದರು. ನಂತರದ ದಿನಗಳಲ್ಲಿ ಸಾವಿನ ಪರಿಹಾರ ಕಂಡುಕೊಳ್ಳಲಾಯಿತು.

ನಾಗನ ಸ್ಥಾನ ಗುಳಿಗ: ಇಲ್ಲಿ ದೇವಿಯೊಂದಿಗೆ ಗಣಪತಿ, ಗುಳಿಗ ಹಾಗೂ ನಾಗನ ಸ್ಥಾನವಿದೆ. ಹಿಂದೆ ಈ ಸ್ಥಾನದಲ್ಲಿ ಬೃಹತ್ ಎತ್ತರದಲ್ಲಿ ಬಿದಿರು ಬೆಳೆದಿತ್ತು. ಅದರ ಬುಡಕ್ಕೆ ಸ್ಥಳೀಯರೊಬ್ಬರು ಬೆಂಕಿ ಹಚ್ಚಿದ್ದರಿಂದ ಬಿದಿರು ನಾಶವಾಗಿತ್ತು. ನಂತರದ ದಿನಗಳಲ್ಲಿ ಬೆಂಕಿಯಿಟ್ಟ ವ್ಯಕ್ತಿಗೆ ತೊಂದರೆ ಅನುಭವಿಸಿ ಮೃತಪಟ್ಟಿದ್ದರು. ಇದೀಗ ಅದೇ ಸ್ಥಳದಲ್ಲಿ ದೊಡ್ಡದಾದ ಹುತ್ತವಿದೆ. ಇದನ್ನು ನಾಶವಾಗದಂತೆ ರಕ್ಷಿಸಿಕೊಂಡು ಪೂಜಿಸಲಾಗುತ್ತಿದೆ. ಇಲ್ಲಿ ಹಾವು ಕಾಣಿಸಿಕೊಳ್ಳುವುದರಿಂದ ಸುಬ್ರಹ್ಮಣ್ಯನ ಸ್ಥಾನ ಎಂದು ಪೂಜಿಸಲಾಗುತ್ತಿದೆ. ವನದೇವತೆ ಎಂಬ ಕಾರಣಕ್ಕೆ ಛಾವಣಿ ಹೊದಿಕೆ ಕೂಡ ಈ ದೇವಿಗಿಲ್ಲ. ಮಳೆ, ಗಾಳಿ, ಬಿಸಿಲು ತಾಗುವಂತೆ ಮೂರ್ತಿ ಇದೆ.

ಮಾರ್ಗ: ಇಲ್ಲಿಗೆ ಗೋಣಿಕೊಪ್ಪದಿಂದ 10 ಕಿ.ಮೀ ದೂರವಿದ್ದು, ವಿರಾಜಪೇಟೆಯಿಂದ 11 ಕಿ.ಮೀ. ಗೋಣಿಕೊಪ್ಪದಿಂದ ಪಾಲಿಬೆಟ್ಟ ರಸ್ತೆ ಮೂಲಕ ಹೊಸೂರು ಹಾಗೂ ಕಳತ್ಮಾಡು ರಸ್ತೆಯಲ್ಲಿ, ಪಾಲಿಬೆಟ್ಟದಿಂದ ಅಮ್ಮತ್ತಿ ರಸ್ತೆಯಲ್ಲಿ ತೆರಳಬಹುದಾಗಿದೆ. ಜಿಲ್ಲಾ ಕೇಂದ್ರ ಮಡಿಕೇರಿಯಿಂದ 43 ಕಿ.ಮೀ. ದೂರವಿದೆ.

Leave a Reply

Your email address will not be published. Required fields are marked *