ಇವಿಎಂನಲ್ಲಿ ಅಡಗಿದ ಭವಿಷ್ಯ

ರಾಮನಗರ: ತೀವ್ರ ಕುತೂಹಲ ಮೂಡಿಸಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮತದಾರರ ತೀರ್ಪು ಯಾವುದೇ ಅಹಿತಕರ ಘಟನೆಗಳಿಗೆ ಸಾಕ್ಷಿಯಾಗದೆ ಮತಯಂತ್ರ ಸೇರಿದೆ.

ಸಚಿವ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ ಸ್ಪರ್ಧೆಯಲ್ಲಿರುವ ಕಾರಣ ಹೈವೋಲ್ಟೇಜ್ ಕ್ಷೇತ್ರವಾಗಿ ಗುರುತಿಸಿಕೊಂಡಿರುವ ಕ್ಷೇತ್ರದ ಮತದಾನ ಗುರುವಾರ ಯಾವುದೇ ಅಹಿತಕರ ಘಟನೆಗೆ ಸಾಕ್ಷಿಯಾಗದೆ ಶಾಂತಿಯುತವಾಗಿ ಮುಕ್ತಾಯ ಕಂಡಿದ್ದು, ಒಟ್ಟಾರೆಯಾಗಿ ಸುಮಾರು ಶೇ. 70ರಷ್ಟು ಮತದಾನವಾಗಿದೆ.

ಆರಂಭದಲ್ಲಿ ಕೊಂಚ ಮಂದಗತಿಯಲ್ಲಿ ಸಾಗಿದ ಮತದಾನ ಬಿಸಿಲು ಏರುತ್ತಿದ್ದಂತೆ ಚುರುಕು ಪಡೆಯಿತು. ಮೊದಲ ಎರಡು ಗಂಟೆಗಳ ಅವಧಿಯಲ್ಲಿ ಶೇ.5.93 ರಷ್ಟು ಮತದಾನ ಮಾತ್ರ ನಡೆದಿತ್ತು. ಆದರೆ ಬಿಸಿಲೇರುತ್ತಿದ್ದಂತೆ ಕಾವು ಪಡೆದ ಮತದಾನ 11 ಗಂಟೆಗೆ ಶೇ.20.17 ರಷ್ಟು, ಮಧ್ಯಾಹ್ನ 1 ಗಂಟೆ ವೇಳೆ ಶೇ. 30.38ರಷ್ಟು ಆಯಿತು. ಗ್ರಾಮೀಣ ಭಾಗದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ್ದರಿಂದ ಸಂಜೆ 5 ಗಂಟೆ ವೇಳೆ ಶೇ.61.94ರಷ್ಟು ದಾಖಲಾಯಿತು. ಅಂತಿಮವಾಗಿ ಶೇ.70ರಷ್ಟು ಮತದಾನ ಲೋಕಸಮರದಲ್ಲಿ ದಾಖಲಾಯಿತು.

ಗುಂಪು ಸಾಮಾನ್ಯ: ಮತದಾರರನ್ನು ಓಲೈಸಲು ಮತಕೇಂದ್ರದ ಬಳಿಯೇ ಮತ ಕೇಳುವುದಕ್ಕೆ ಚುನಾವಣೆ ಆಯೋಗ ಬ್ರೇಕ್ ಹಾಕಿದ್ದರಿಂದ ಯಾವುದೇ ಅಕ್ರಮ ನಡೆಯಲು ಅವಕಾಶವಾಗಲಿಲ್ಲ. 144ನೇ ವಿಧಿಯನ್ವಯ ನಿಷೇಧಾಜ್ಞೆ ಜಾರಿಗೊಳಿಸಿದ್ದರೂ ಅಲ್ಲಲ್ಲಿ ಪಕ್ಷಗಳ ಕಾರ್ಯಕರ್ತರು ಗುಂಪುಗೂಡಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು.

ಮತಯಂತ್ರಗಳು ಸೇಫ್: ಮತದಾನ ಪೂರ್ಣಗೊಳ್ಳುತ್ತಿದ್ದಂತೆ ಆಯಾ ವಿಧಾನಸಭೆ ಕ್ಷೇತ್ರಗಳಲ್ಲಿ ಮತ ಯಂತ್ರಗಳ ಮಸ್ಟರಿಂಗ್ ಕಾರ್ಯ ಪೂರ್ಣಗೊಳಿಸಿ ರಾತ್ರಿ ಪೊಲೀಸ್ ಭದ್ರತೆಯಲ್ಲಿ ನಗರದ ಹೊರಭಾಗದಲ್ಲಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಸ್ಟ್ರಾಂಗ್ ರೂಂನಲ್ಲಿ ಇರಿಸಲಾಯಿತು. ಭದ್ರತೆಗಾಗಿ ಸ್ಥಳೀಯ ಪೊಲೀಸರು ಹಾಗೂ ಅರೆ ಸೇನಾಪಡೆ ಸಿಬ್ಬಂದಿ ನಿಯೋಜಿಸಲಾಗಿದೆ.

ಉತ್ಸಾಹದಿಂದ ಮತದಾನ: ರಜೆ ಮೂಡಿನಲ್ಲಿದ್ದ ಜನತೆಗೆ ಬುಧವಾರ ಸಂಜೆ ಅಲ್ಲಲ್ಲಿ ಸುರಿದ ಮಳೆ ತಂಪೆರೆದ ಹಿನ್ನೆಲೆಯಲ್ಲಿ ಮತದಾನ ಪ್ರಕ್ರಿಯೆ 7 ಗಂಟೆಗೆ ಆರಂಭಗೊಂಡರೂ ಮತಕೇಂದ್ರದತ್ತ ಜನ ಸುಳಿಯಲಿಲ್ಲ. ಮತ ಕೇಂದ್ರಗಳ ಬಳಿ ಹಿರಿಯರು ಕಿರಿಯರೆನ್ನದೆ ಮತದಾರರು ಉತ್ಸಾಹದಿಂದ ಮತದಾನ ಮಾಡುತ್ತಿದ್ದ್ದುದು ಕಂಡು ಬಂತು.

ಇವಿಎಂನಲ್ಲಿ ತಾಂತ್ರಿಕ ದೋಷ: ಲೋಕ ಚುನಾವಣೆಯಲ್ಲೂ ಮತಯಂತ್ರ ದೋಷ ಸಾಮಾನ್ಯವಾಗಿತ್ತು. ರಾಮನಗರದ ಬಳೆಪೇಟೆಯ ಮತಗಟ್ಟೆ ಸಂಖ್ಯೆ 77, ಐಜೂರಿನ ವಾಟರ್ ಟ್ಯಾಂಕ್ ವೃತ್ತದ ಬಳಿ ಇರುವ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿಯಲ್ಲಿನ ಮತಗಟ್ಟೆ ಸಂಖ್ಯೆ 64, ಕನಕಪುರದ ಕೆರಳಾಳುಸಂದ್ರ ಗ್ರಾಮದ ಮತಗಟ್ಟೆ ಸೇರಿ ಹಲವು ಕಡೆ ಮತದಾನ ಆರಂಭದಲ್ಲಿಯೇ ಮತಯಂತ್ರಗಳು ಕೈಕೊಟ್ಟವು. ತಕ್ಷಣವೇ ಕಾರ್ಯಪ್ರವೃತ್ತರಾದ ಮತಗಟ್ಟೆ ಅಧಿಕಾರಿಗಳು ಮತಯಂತ್ರಗಳನ್ನು ಸರಿಪಡಿಸಿದ ಪರಿಣಾಮ ಹೆಚ್ಚಿನ ಸಮಯ ವ್ಯರ್ಥವಾಗದೆ ಮತದಾನ ಸರಾಗವಾಗಿ ನಡೆಯಿತು.

ಮೊಬೈಲ್ ಬಳಕೆಗಿಲ್ಲ ಅಡ್ಡಿ: ಚುನಾವಣಾ ಆಯೋಗ ಮತಕೇಂದ್ರಕ್ಕೆ ಮತದಾರರು ಮೊಬೈಲ್ ಒಯ್ಯುವುದನ್ನು ನಿಷೇಧಿಸಿದ್ದರು. ಆದರೆ, ಬಹುತೇಕ ಮತಕೇಂದ್ರಗಳಲ್ಲಿ ನಿಯೋಜನೆಗೊಂಡಿದ್ದ ಭದ್ರತಾ ಸಿಬ್ಬಂದಿಯಾಗಲೀ, ಮತಗಟ್ಟೆ ಅಧಿಕಾರಿಗಳಾಗಲೀ ಮತದಾರರು ಮೊಬೈಲ್ ಒಯ್ಯುವುದನ್ನು ತಡೆಯುವಲ್ಲಿ ವಿಫಲರಾದರು. ಅಲ್ಲದೆ, ತಮಗೂ ಅದಕ್ಕೂ ಸಂಬಂಧವೇ ಇಲ್ಲದಂತೆ ಮಾಮೂಲಿನಂತಿದ್ದರು.

ಗುರುತಿನ ಚೀಟಿಯೂ ಬೇಕಿಲ್ಲ!: ಚನ್ನಪಟ್ಟಣ ಮತ್ತು ಕನಕಪುರ ವಿಧಾನಸಭೆ ಕ್ಷೇತ್ರಗಳು ಸೇರಿ ಅನೇಕ ಕಡೆಗಳಲ್ಲಿ ಮತದಾರರಿಗೆ ನೀಡಲಾಗಿದ್ದ ಮತದಾರರ ಫೋಟೋ ಸಹಿತ ಚೀಟಿಯನ್ನೇ ಗುರುತಿನ ಚೀಟಿ ಎಂದು ಮತಗಟ್ಟೆ ಅಧಿಕಾರಿಗಳು ಮತದಾನಕ್ಕೆ ಅವಕಾಶ ಮಾಡಿಕೊಟ್ಟ ಪ್ರಸಂಗಗಳು ನಡೆದಿವೆ. ಕನಕಪುರ ತಾಲೂಕಿನ ಕಚ್ಚುವನಹಳ್ಳಿಯಲ್ಲಿ ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಅದು ನಡೆಯಲ್ವಾ, ಮತ ಹಾಕಿ ಹೋಗಲಿ ಬಿಡಿ ಎಂದು ಹೇಳುವ ಮೂಲಕ, ಮತದಾನಕ್ಕೆ ಆಯೋಗ ನಿಗದಿಪಡಿಸಿದ್ದ 18 ಗುರುತಿನ ಚೀಟಿಗಳಲ್ಲಿ ಯಾವುದೂ ಅಗತ್ಯವಿಲ್ಲ ಎನ್ನುವಂತೆ ವರ್ತಿಸಿದ್ದಾರೆ. ಇದೇ ರೀತಿ ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಬೇವೂರ ಜಿಪಂ ವ್ಯಾಪ್ತಿಯಲ್ಲೂ ನಡೆದಿದೆ.

ಹುಲಿಕಲ್​ನಲ್ಲಿ ಸಾಲುಮರದ ತಿಮ್ಮಕ್ಕ: ಕುದೂರು: ಮಾಗಡಿ ತಾಲೂಕು ಕುದೂರು ಹೋಬಳಿ ಹುಲಿಕಲ್​ನಲ್ಲಿ ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ ಮತ ಚಾಲಾಯಿಸಿದರು. ದತ್ತು ಮಗನ ಜತೆ ಹುಲಿಕಲ್​ನ ಮತದಾನ ಕೇಂದ್ರಕ್ಕೆ ಬಂದು ಉತ್ಸಾಹದಿಂದಲೇ ಮತ ಚಲಾಯಿಸಿದರು. ಮತದಾನವು ಈ ದೇಶದ ಪ್ರತಿಯೊಬ್ಬ ಪ್ರಜೆಯ ಹಕ್ಕು. ಉತ್ತಮ ಸಮಾಜ ಮತ್ತು ದೇಶದ ನಿರ್ವಣಕ್ಕಾಗಿ ಎಲ್ಲರೂ ಸೂಕ್ತ ಅಭ್ಯರ್ಥಿಗೆ ಮತ ಹಾಕಬೇಕು. ನಾನು ಎಲ್ಲ ಚುನಾವಣೆಯಲ್ಲೂ ತಪ್ಪದೇ ಮತ ಚಲಾಯಿಸಿದ್ದೇನೆ ಎಂದು ಹೇಳಿದರು.

ಡಿಸಿ ಅಭಿನಂದನೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸುಮಾರು ಶೇ.70ರಷ್ಟು ಮತದಾನವಾಗಿದೆ. 2014ರ ಲೋಕಸಭೆ ಚುನಾವಣೆಯಲ್ಲಿ ಒಟ್ಟಾರೆ ಶೇ. 66.46ರಷ್ಟು ಮತದಾನವಾಗಿತ್ತು. ಈ ಬಾರಿ ಕ್ಷೇತ್ರ ಚುನಾವಣಾಧಿಕಾರಿ ಮತ್ತು ಸ್ವೀಪ್ ಸಮಿತಿ ಸತತ ಪರಿಶ್ರಮ ಫಲವಾಗಿ ಮತದಾನ ಪ್ರಮಾಣ ಶೇ.70ಕ್ಕೆ ತಲುಪಿದೆ ಎಂದು ಕ್ಷೇತ್ರ ಚುನಾವಣಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ. ಇದಕ್ಕಾಗಿ ಎಲ್ಲ ಚುನಾವಣಾ ಸಿಬ್ಬಂದಿ ಹಾಗೂ ಉತ್ಸಾಹದಿಂದ ಬಂದು ಮತದಾನ ಮಾಡಿದ ಮತದಾರರಿಗೆ ಅಭಿನಂದನೆ ತಿಳಿಸಿದರು.

Leave a Reply

Your email address will not be published. Required fields are marked *