ಇಳೆಗೆ ತಂಪೆರೆದ ವರುಣ

ಶಿರಸಿ: ಶಿರಸಿ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸೋಮವಾರ ಸಂಜೆ ಉತ್ತಮ ಮಳೆಯಾಗಿದೆ. ಅರ್ಧ ಗಂಟೆಗೂ ಅಧಿಕ ಮಳೆಯಾದ ಕಾರಣ ಕೆಲವೆಡೆ ಚರಂಡಿಗಳು ತುಂಬಿ ಹರಿದಿವೆ. ಸಂಜೆ 5.30ರ ವೇಳೆ ಗುಡುಗಿನೊಂದಿಗೆ ಮಳೆ ಆರಂಭಗೊಂಡಿದೆ. ಇದರಿಂದಾಗಿ ಸಿದ್ಧತೆ ಇಲ್ಲದೇ ಹೊರ ಬಂದಿದ್ದ ಸಾರ್ವಜನಿಕರು ಅಂಗಡಿಗಳ ಎದುರು ನಿಂತು ಮಳೆ ಕಡಿಮೆಯಾಗುವವರೆಗೆ ಕಾಯುವಂತಾಯಿತು. ನಗರ ಮತ್ತು ಗ್ರಾಮಿಣ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯಗೊಂಡಿತ್ತು.

ಅಲ್ಲದೆ, ಮುಂಡಗೋಡ ಸಿದ್ದಾಪುರ ತಾಲೂಕಿನಲ್ಲೂ ಮಳೆ ಸುರಿದಿದೆ.

ಹಲವೆಡೆ ಅಪಾರ ನಷ್ಟ: ದಾಂಡೇಲಿ ನಗರದಲ್ಲಿ ಸಂಜೆ ಸುರಿದ ಮಳೆ ದೊಡ್ಡ ಅವಾಂತರ ಸೃಷ್ಟಿಸಿತು. ಹಲವೆಡೆ ಮರ, ವಿದ್ಯುತ್ ಕಂಬಗಳು ಧರೆಗೆ ಉರುಳಿದವು, ಹಾಲಮಡ್ಡಿ ಭಾಗದಲ್ಲಿ 110 ಕೆ.ವಿ.ಯ ನಾಲ್ಕು ಮುಖ್ಯ ವಿದ್ಯುತ್ ಸರಬರಾಜು ಟಾವರ್​ಗಳು ನೆಲಕಚ್ಚಿವೆ.

ಮಾವು ಬೆಳೆಗೆ ಹಾನಿ: ಹಳಿಯಾಳ ತಾಲೂಕಿನ ಗ್ರಾಮಾಂತರ ಭಾಗದಲ್ಲಿ ಮಳೆಯಾದ ಬಗ್ಗೆ ವರದಿಯಾಗಿದೆ ಮುರ್ಕವಾಡ ಹಾಗೂ ಕಲಘಟಗಿ ರಸ್ತೆಯ ಮಾರ್ಗದಲ್ಲಿರುವ ಗ್ರಾಮಗಳಲ್ಲಿ ಭಾರಿ ಮಳೆಯಾಗಿದೆ. ಮಾವಿನ ಬೆಳೆಗೆ ಅಪಾರ ಪ್ರಮಾಣದ ಹಾನಿಯುಂಟಾಗಿದೆ ಎಂದು ಮಾವು ಬೆಳೆಗಾರರು ಹೇಳುತ್ತಿದ್ದಾರೆ. ಹಾಗೇ ಹೊನ್ನಾವರ ತಾಲೂಕಿನಾದ್ಯಂತ ಸಂಜೆ ಮಳೆಯಾದ ಬಗ್ಗೆ ವರದಿಯಾಗಿದೆ.