ಇಳಿಕೆಯತ್ತ ಉಳ್ಳಾಗಡ್ಡಿ ದರ

ಹುಬ್ಬಳ್ಳಿ: ಕಳೆದೊಂದು ತಿಂಗಳಿಂದ ಸ್ಥಳೀಯ ಉಳ್ಳಾಗಡ್ಡಿ ದರ ಇಳಿಮುಖವಾಗಿಯೇ ಸಾಗುತ್ತಿದ್ದು, ಬೆಳೆಗಾರರು ಸಂಕಷ್ಟ ಎದುರಿಸುವಂತಾಗಿದೆ.

ಉತ್ತರ ಕರ್ನಾಟಕದ ಪ್ರಮುಖ ಉಳ್ಳಾಗಡ್ಡಿ ಮಾರುಕಟ್ಟೆ ಹುಬ್ಬಳ್ಳಿಯ ಅಮರಗೋಳ ಶ್ರೀ ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ತಮ್ಮ ಉತ್ಪನ್ನಕ್ಕೆ ಒಂದಿಷ್ಟು ಹೆಚ್ಚಿನ ದರ ಸಿಗುತ್ತದೆ ಎಂದು ನಂಬಿ ಬರುವ ಬೇರೆ ಜಿಲ್ಲೆಯ ಉಳ್ಳಾಗಡ್ಡಿ ಬೆಳೆಗಾರರಿಗೆ ನಿತ್ಯವೂ ನಿರಾಸೆಯಾಗುತ್ತಿದೆ. ಅದರಲ್ಲೂ ಸೋಮವಾರದ ಹರಾಜಿನಲ್ಲಿ ಅತ್ಯುತ್ತಮ ಉಳ್ಳಾಗಡ್ಡಿಗೆ ಕ್ವಿಂಟಾಲ್​ಗೆ 400, 500 ರೂ. ಕೂಗಿರುವುದು ರೈತರನ್ನು ಕಂಗೆಡಿಸಿದೆ.

ಹುಬ್ಬಳ್ಳಿ ಮಾರುಕಟ್ಟೆಗೆ ಮಂಗಳವಾರ ಉಳ್ಳಾಗಡ್ಡಿ ಆವಕವೂ ಕಡಿಮೆಯಾಗಿತ್ತು. 5200 ಕ್ವಿಂಟಾಲ್ ಬಂದಿತ್ತು. ಅದು ಪ್ರತಿ ಕ್ವಿಂಟಾಲ್​ಗೆ 300 ರೂ.ನಿಂದ 1400 ರೂ. ಮಾರಾಟವಾಗಿದೆ. ಮಾದರಿ ಧಾರಣೆ 780 ರೂ. ಇತ್ತು.

ಧಾರವಾಡ ಜಿಲ್ಲೆಯಲ್ಲಿ ಈ ಬಾರಿ ಉಳ್ಳಾಗಡ್ಡಿ ಹೆಚ್ಚು ಬೆಳೆದಿಲ್ಲ. ಆದರೆ, ಪಕ್ಕದ ಬಾಗಲಕೋಟೆ, ವಿಜಯಪುರ, ಬೆಳಗಾವಿ ಸೇರಿ ವಿವಿಧ ಜಿಲ್ಲೆಗಳಿಂದ ರೈತರು ಉಳ್ಳಾಗಡ್ಡಿ ತರುತ್ತಿದ್ದಾರೆ. ಅಲ್ಲಿಂದ ತೆಗೆದುಕೊಂಡು ಬಂದ ವಾಹನ ಬಾಡಿಗೆಯೂ ದಕ್ಕುತ್ತಿಲ್ಲ ಎಂದು ಬೆಳೆಗಾರರು ನೋವಿನಿಂದ ಹೇಳಿದರು.

ಬಿತ್ತನೆ, ರಸಗೊಬ್ಬರ, ಸೇರಿ ಇತರೆ ಖರ್ಚು ಮಾಡಿ ಬೆಳೆದಿರುವ ಉಳ್ಳಾಗಡ್ಡಿ ಕನಿಷ್ಠ ಪಕ್ಷ 1500 ರೂ. ದರಕ್ಕೆ ಮಾರಾಟವಾದರೆ ಒಂದಿಷ್ಟು ಲಾಭ ಬರಲಿದೆ. ಆದರೆ, ಕಳೆದ ಕೆಲ ದಿನಗಳಿಂದ ಒಂದು ಸಾವಿರ ರೂ.ಗಿಂತಲೂ ಕಡಿಮೆಗೆ ಮಾರಾಟವಾಗುತ್ತಿದೆ

ನಾಸಿಕ್ ಉಳ್ಳಾಗಡ್ಡಿ: ಮಹಾರಾಷ್ಟ್ರದ ನಾಸಿಕ್, ಪುಣೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉಳ್ಳಾಗಡ್ಡಿ ಬೆಳೆಯಲಾಗಿದೆ. ಅಲ್ಲಿ ರಸಗೊಬ್ಬರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ಬಳಸುವುದರಿಂದ ಇಳುವರಿಯೂ ಜಾಸ್ತಿ, ಉಳ್ಳಾಗಡ್ಡಿ ಗಾತ್ರವೂ ಕರ್ನಾಟಕದ ಉಳ್ಳಾಗಡ್ಡಿಗಿಂತ ದೊಡ್ಡದು. ಅಲ್ಲದೆ ದಿನ ಕಳೆದಂತೆ ಅದಕ್ಕೆ ಉತ್ತಮ ಬಣ್ಣ ಬರುತ್ತದೆ. ಹಾಗಾಗಿ ಅದಕ್ಕೆ ಬೇಡಿಕೆ ಹೆಚ್ಚು ಎನ್ನುತ್ತಾರೆ ಮಾರುಕಟ್ಟೆ ತಜ್ಞರು.

ಸದ್ಯ ನಾಸಿಕ್ ಮಾರುಕಟ್ಟೆಯಲ್ಲಿ ಉಳ್ಳಾಗಡ್ಡಿ ದರ ಕಡಿಮೆ ಇದೆ. ಕೆಲ ಖರೀದಿದಾರರು ಅಲ್ಲಿಗೂ ಹೊರಟಿದ್ದಾರೆ. ಇದು ಸ್ಥಳೀಯ ಉಳ್ಳಾಗಡ್ಡಿಗೆ ಬೇಡಿಕೆ ಕುಸಿಯಲು ಕಾರಣವಾಗಿದೆ. ಅದಕ್ಕಾಗಿ ದರವೂ ಇಳಿಮುಖವಾಗಿದೆ ಎನ್ನುತ್ತಾರೆ ವ್ಯಾಪಾರಸ್ಥರು.

ಮಧ್ಯವರ್ತಿಗಳ ಕಪಿಮುಷ್ಠಿಯಲ್ಲಿ: ಸದ್ಯ ಹುಬ್ಬಳ್ಳಿ ಮಾರುಕಟ್ಟೆಯಲ್ಲಿ ಉಳ್ಳಾಗಡ್ಡಿ ದರ ಕಡಿಮೆ ಇದೆ. ಬಹುಶಃ ಡಿಸೆಂಬರ್ ವೇಳೆಗೆ ನಾಸಿಕ್ ಉಳ್ಳಾಗಡ್ಡಿಯೂ ಹುಬ್ಬಳ್ಳಿಗೆ ಲಗ್ಗೆ ಇಡುವ ಸಾಧ್ಯತೆ ಇದ್ದು, ಆಗ ಸ್ಥಳೀಯ ಉಳ್ಳಾಗಡ್ಡಿಗೆ ಇನ್ನಷ್ಟು ದರ ಕಡಿಮೆಯಾಗುವ ಆತಂಕ ಇದೆ ಎನ್ನಲಾಗಿದೆ. ಇನ್ನೊಂದೆಡೆ ಮಧ್ಯವರ್ತಿಗಳ ಕಪಿಮುಷ್ಠಿಯಲ್ಲಿ ರೈತರು ಸಿಲುಕಿದ್ದಾರೆ. ಕೆಲವೊಮ್ಮೆ ಏಕಾಏಕಿ ದರ ಇಳಿಸಿ ರೈತರಿಗೆ ವಂಚಿಸುವ ಜಾಲವೂ ಇಲ್ಲಿದೆ ಎಂಬ ದೂರುಗಳು ಇವೆ. ಎಲ್ಲೋ ಒಂದೆರಡು ಲಾಟ್​ಗಳಿಗೆ ಸಾವಿರ ರೂ. ದರ ಕೂಗುವ ಮಧ್ಯವರ್ತಿಗಳು, ನಂತರ ಬಹುತೇಕ ಲಾಟ್​ಗಳಿಗೆ 500 ರೂ. ಇಲ್ಲವೇ ಅದಕ್ಕಿಂತ ಕಡಿಮೆ ದರ ನಿಗದಿ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ.