ಇಲ್ಲೇನಿದ್ದರೂ ಇಬ್ಬರ ನಡುವೆ ಹಣಾಹಣಿ!

ಹಾವೇರಿ: 17ನೇ ಲೋಕಸಭೆ ಚುನಾವಣೆ ಮಹಾಸಮರಕ್ಕೆ ಹಾವೇರಿ ಲೋಕಸಭೆ ಕ್ಷೇತ್ರ ಸಜ್ಜಾಗಿದೆ. ಕ್ಷೇತ್ರದಲ್ಲಿ ಇದುವರೆಗೆ ನಡೆದ 16 ಚುನಾವಣೆಗಳಲ್ಲಿಯೂ ಮೂರನೇಯವರು ಮೂಲೆಗುಂಪಾಗಿದ್ದಾರೆ. ಏನಿದ್ದರೂ ಇಲ್ಲಿ ನೇರ ಸ್ಪರ್ಧೆ ಎಂಬಂತಾಗಿದೆ. ಚುನಾವಣೆಗೆ ಸ್ಪರ್ಧಿಸಿದ್ದ ರಾಜಕೀಯ ಪಕ್ಷ ಹಾಗೂ ಪಕ್ಷೇತರ ಸೇರಿ 96 ಅಭ್ಯರ್ಥಿಗಳ ಠೇವಣಿ ಇದುವರೆಗೆ ಜಪ್ತು ಆಗಿದೆ.

1952ರಿಂದ 2014ರವರೆಗೆ ನಡೆದ 16 ಲೋಕಸಭೆ ಚುನಾವಣೆಗಳಲ್ಲಿ 14 ಬಾರಿ ನೇರ ಸ್ಪರ್ಧೆ ನಡೆದರೆ ಎರಡು ಬಾರಿ ಮಾತ್ರ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಆರಂಭದಲ್ಲಿ ಕಾಂಗ್ರೆಸ್ ಹಾಗೂ ಜನತಾದಳ ಪರಿವಾರದ ಅಭ್ಯರ್ಥಿಗಳ ನಡುವೆ ನೇರ ಪೈಪೋಟಿ ಏರ್ಪಟ್ಟಿದ್ದರೆ, ಒಂದೂವರೆ ದಶಕದಿಂದ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆದಿದೆ.

2 ಬಾರಿ ಮಾತ್ರ ತ್ರಿಕೋನ ಸ್ಪರ್ಧೆ:
1998ರ ಚುನಾವಣೆಯಲ್ಲಿ ಲೋಕಶಕ್ತಿಯ ಬಿ.ಎನ್. ಮೆಣಸಿನಕಾಯಿ 3,27,839 ಮತ ಗಳಿಸಿ ಆಯ್ಕೆಯಾದ ಸಮಯದಲ್ಲಿ ಕಾಂಗ್ರೆಸ್​ನ ಪ್ರೊ. ಐ.ಜಿ. ಸನದಿ 2,41,865 ಹಾಗೂ ಜನತಾದಳದಿಂದ ಸ್ಪರ್ಧಿಸಿದ್ದ ಬಸವರಾಜ ಶಿವಣ್ಣನವರ 1,26,722 ಮತ ಗಳಿಸಿದ್ದರು. 1996ರಲ್ಲಿ ಕಾಂಗ್ರೆಸ್​ನ ಪ್ರೊ. ಐ.ಜಿ. ಸನದಿ ಆಯ್ಕೆಯಾದ ವೇಳೆ ಜನತಾದಳದ ಅಭ್ಯರ್ಥಿ ಬಿ.ಎಂ. ಮೆಣಸಿನಕಾಯಿ, ಬಿಜೆಪಿ ಅಭ್ಯರ್ಥಿ ಬಿ.ಜಿ. ಬಣಕಾರ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟು, ಸನದಿಯವರು 1,96,677, ಮೆಣಸಿನಕಾಯಿ ಅವರು 1,87,068, ಬಿ.ಜಿ. ಬಣಕಾರರು 1,85,789 ಮತ ಗಳಿಸಿ ತುರುಸಿನ ಸ್ಪರ್ಧೆಗೆ ಕಾರಣವಾಗಿದ್ದರು. ಈ ಎರಡು ಚುನಾವಣೆಗಳಲ್ಲಿ ಮಾತ್ರ ತ್ರಿಕೋನ ಸ್ಪರ್ಧೆ ನಡೆದಿದ್ದು ಬಿಟ್ಟರೆ ಇನ್ನುಳಿದ ಚುನಾವಣೆಗಳಲ್ಲಿ ನೇರ ಸ್ಪರ್ಧೆ ನಡೆದಿದೆ.

ನೇರ ಹಣಾಹಣಿ:
1952ರಲ್ಲಿ ಕಾಂಗ್ರೆಸ್​ನ ಟಿ.ಆರ್. ನೇಸ್ವಿ, ಕಿಸಾನ್ ಮಜ್ದೂರ ಪ್ರಜಾಪಾರ್ಟಿ(ಕೆಎಂಪಿಪಿ)ಯಿಂದ ಕಣಕ್ಕಿಳಿದಿದ್ದ ಸಿದ್ದಪ್ಪ ಹೊಸಮನಿ ನಡುವೆ ನೇರ ಸ್ಪರ್ಧೆಯಿತ್ತು. ನೇಸ್ವಿ ಶೇ. 60.27ರಷ್ಟು ಮತ ಪಡೆದರೆ, ಹೊಸಮನಿ ಶೇ. 39.73ರಷ್ಟು ಮತಗಳಿಸಿದ್ದರು. 1957ರಲ್ಲಿಯೂ ಟಿ.ಆರ್. ನೇಸ್ವಿ ಶೇ. 68.68ರಷ್ಟು, ಪಕ್ಷೇತರ ಅಭ್ಯರ್ಥಿ ಕೆ.ಎಸ್. ಪಾಟೀಲ ಶೇ. 31.32ರಷ್ಟು ಮತ ಗಳಿಸಿದ್ದರು. 1962ರಿಂದ 1980ರವರೆಗೆ ನಡೆದ ಐದು ಚುನಾವಣೆಗಳಲ್ಲಿ ಕಾಂಗ್ರೆಸ್​ನ ಎಫ್.ಎಚ್. ಮೊಹಸೀನ ಅವರದ್ದೇ ಆಟ. ಇವರಿಗೆ ಎದುರಾಗಿ ನಿಂತ ದಳ ಪರಿವಾರ ಹಾಗೂ ಕಾಂಗ್ರೆಸ್​ನ ಬಂಡಾಯ ಗುಂಪಿನ ಅಭ್ಯರ್ಥಿಗಳು ಮೊಹಸೀನ ಅವರು ಪಡೆದ ಶೇಕಡಾವಾರು ಮತಗಳ ಅರ್ಧದಷ್ಟು ಮತಗಳನ್ನು ಪಡೆಯಲೂ ಸಾಧ್ಯವಾಗಲಿಲ್ಲ. ಪಕ್ಷೇತರ ಅಭ್ಯರ್ಥಿಗಳಂತೂ ಶೇ. 2ರಷ್ಟು ಮತಗಳನ್ನು ಪಡೆಯಲಾಗದೇ ಠೇವಣಿ ಕಳೆದುಕೊಂಡಿದ್ದಾರೆ.

1984ರ ಚುನಾವಣೆಯಲ್ಲಿ ಕಾಂಗ್ರೆಸ್​ನ ಎ.ಎ. ಅಜೀಜ್ ಶೇಟ್ ಶೇ. 53.13ರಷ್ಟು ಮತ ಗಳಿಸಿ ಆಯ್ಕೆಯಾದರೆ, ಜನತಾ ಪಕ್ಷದಿಂದ ಕಣಕ್ಕಿಳಿದಿದ್ದ ಅಬ್ದುಲ್ ನಜೀರಸಾಬರು ಶೇ. 41.26ರಷ್ಟು ಮತ ಗಳಿಸಿ ನೇರ ಸ್ಪರ್ಧೆ ನೀಡಿದ್ದರು. ಈ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದ 13 ಜನ ಪಕ್ಷೇತರರು ಶೇ. 1ರಷ್ಟು ಮತ ಗಳಿಸದ ಪರಿಣಾಮ ಅವರೆಲ್ಲರ ಠೇವಣಿ ಜಪ್ತಾಗಿತ್ತು.

1989ರಲ್ಲಿಯೂ ಕಾಂಗ್ರೆಸ್​ನ ಬಿ.ಎಂ. ಮುಜಾಹೀದ ಹಾಗೂ ಜನತಾದಳದ ಬಿ.ಜಿ. ಬಣಕಾರ ನಡುವೆ ನೇರ ಪೈಪೋಟಿ ನಡೆಯಿತು. ಮುಜಾಹೀದ ಶೇ. 51.02, ಬಣಕಾರ ಶೇ. 46.08 ಮತ ಪಡೆದರೆ, ಜನತಾಪಕ್ಷದ ಎಂ.ಎಸ್. ಹುಂಬರವಾಡಿ, ಪಕ್ಷೇತರರಾದ ಎಸ್.ಎಚ್. ಓಲೇಕಾರ, ನಿಸಾರ್​ಅಹ್ಮದ ಮೌಲ್ವಿ ಠೇವಣಿ ಕಳೆದುಕೊಂಡರು.

1991ರಲ್ಲಿ ಕಾಂಗ್ರೆಸ್​ನ ಬಿ.ಎಂ. ಮುಜಾಹೀದ ಶೇ. 46.76 ಮತ ಗಳಿಸಿ ಆಯ್ಕೆಯಾದರೆ, ಬಿಜೆಪಿಯಿಂದ ಕಣಕ್ಕಿಳಿದಿದ್ದ ಬಿ.ಜಿ. ಬಣಕಾರರು ಶೇ. 31ರಷ್ಟು ಮತ ಗಳಿಸಿ ಮುಜಾಹೀದಗೆ ಪೈಪೋಟಿ ಒಡ್ಡಿದ್ದರು. ಜನತಾದಳದ ಅಭ್ಯರ್ಥಿ ಡಾ. ಬಿ.ಜಿ. ಪಾಟೀಲ ಅವರು ಶೇ. 15.93 ಮತ ಗಳಿಸಿದ್ದನ್ನು ಬಿಟ್ಟರೆ, ಕಣದಲ್ಲಿದ್ದ ಇನ್ನುಳಿದ ಲೋಕದಳ, ಪಿಬಿಐ ಹಾಗೂ ಪಕ್ಷೇತರ ಅಭ್ಯರ್ಥಿಗಳು ಸೇರಿ ಒಟ್ಟು 25 ಜನರ ಠೇವಣಿ ಮರಳಿ ಬರಲಿಲ್ಲ.

1999ರಲ್ಲಿ ಪ್ರೊ. ಐ.ಜಿ. ಸನದಿ ಶೇ. 46 ಮತ ಗಳಿಸಿ ಆಯ್ಕೆಯಾದರು. ಅವರ ಪ್ರತಿಸ್ಪರ್ಧಿ ಸಂಯುಕ್ತ ಜನತಾದಳದ ಬಿ.ಎನ್. ಮೆಣಸಿನಕಾಯಿ ಶೇ. 41ರಷ್ಟು ಮತ ಗಳಿಸಿದ್ದರು. ಜೆಡಿ(ಎಸ್)ನ ಎನ್. ಬಸವರಾಜ ಶೇ. 13ರಷ್ಟು ಮತಗಳಿಸಲು ಮಾತ್ರ ಯಶ ಕಂಡರು.

2004ರ ಚುನಾವಣೆಯಲ್ಲಿ ಬಿಜೆಪಿಯ ಮಂಜುನಾಥ ಕುನ್ನೂರ ಶೇ. 51.20ರಷ್ಟು ಮತ ಗಳಿಸಿ ಆಯ್ಕೆಯಾದರು. ಅವರ ಎದುರಾಳಿ ಕಾಂಗ್ರೆಸ್​ನ ಐ.ಜಿ. ಸನದಿ ಶೇ. 34ರಷ್ಟು ಮತ ಗಳಿಸಿ ಠೇವಣಿ ಉಳಿಸಿಕೊಂಡರೆ ಜೆಡಿಎಸ್, ಕೆಎನ್​ಡಿಪಿ, ಬಿಎಸ್​ಪಿ, ಪಕ್ಷೇತರ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ.

2009ರಲ್ಲಿ ಧಾರವಾಡ ದಕ್ಷಿಣ ಲೋಕಸಭೆ ಕ್ಷೇತ್ರವು ಹಾವೇರಿ ಕ್ಷೇತ್ರವಾಗಿ ಬದಲಾದ ನಂತರ ನಡೆದ ಮೊದಲ ಚುನಾವಣೆಯಲ್ಲಿಯೂ ಬಿಜೆಪಿಯ ಶಿವಕುಮಾರ ಉದಾಸಿ ಹಾಗೂ ಕಾಂಗ್ರೆಸ್​ನ ಸಲೀಂ ಅಹ್ಮದ ನಡುವೆ ನೇರ ಸ್ಪರ್ಧೆ ನಡೆದಿದೆ. ಉದಾಸಿ ಶೇ. 49,36, ಸಲೀಂ ಅಹ್ಮದ ಶೇ. 39.27 ಮತ ಗಳಿಸಿದರೆ, ಕಣದಲ್ಲಿದ್ದ ಜೆಡಿಎಸ್​ನ ಶಿವಕುಮಾರಗೌಡ ಪಾಟೀಲ ಸೇರಿ 10 ಅಭ್ಯರ್ಥಿಗಳ ಠೇವಣಿ ಜಪ್ತಾಗಿದೆ.

2014ರ ಚುನಾವಣೆಯಲ್ಲಿ 2ನೇ ಬಾರಿಗೆ ಬಿಜೆಪಿಯಿಂದ ಶಿವಕುಮಾರ ಉದಾಸಿ 5,66,790 ಮತ ಗಳಿಸಿ ಆಯ್ಕೆಯಾದರು. ಪ್ರತಿಸ್ಪರ್ಧಿ ಸಲೀಂ ಅಹ್ಮದ್ 4,79,219 ಮತ ಗಳಿಸಿ ಸೋಲುಕಂಡರು. ಕಣದಲ್ಲಿದ್ದ ಜೆಡಿಎಸ್ ಅಭ್ಯರ್ಥಿ ರವಿ ಮೆಣಸಿನಕಾಯಿ ಸೇರಿ ಒಟ್ಟು 17 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿರುವುದು ಕ್ಷೇತ್ರದಲ್ಲಿ ಗಮನಾರ್ಹವಾಗಿದೆ.

ಈ ಬಾರಿಯೂ ನೇರ ಸ್ಪರ್ಧೆ
17ನೇ ಲೋಕಸಭೆಗೆ ನಡೆಯುತ್ತಿರುವ ಸದ್ಯದ ಚುನಾವಣೆಯಲ್ಲಿಯೂ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ನಡೆಯುವುದು ನಿಶ್ಚಿತವಾಗಿದೆ. ಈ ಸಲ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿರುವುದರಿಂದ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಇರುವುದಿಲ್ಲ. ಹೀಗಾಗಿ ಕೈ, ಕಮಲದ ಅಭ್ಯರ್ಥಿಗಳ ನಡುವೆ ನೇರ ಸ್ಪರ್ಧೆ ಖಚಿತ.