ಇಲ್ಲಿದೆ ಅಶುದ್ಧ ನೀರಿನ ಘಟಕ

ಮುಂಡರಗಿ: ತಾಲೂಕಿನ ಕಕ್ಕೂರ ತಾಂಡಾದಲ್ಲಿ ಪ್ರಾರಂಭಿಸಿರುವ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಅಶುದ್ಧ ನೀರು ಪೂರೈಕೆಯಾಗುತ್ತಿದೆ. ಇದರಿಂದ ಜನ ನೀರನ್ನು ಬಳಸುವುದನ್ನೇ ಬಿಟ್ಟಿದ್ದಾರೆ. ಬೇಸಿಗೆಯ ಬಿಸಿಲಿಗೆ ಬಸವಳಿದಿರುವ ಜನ ನೀರಿಗೆ ಪರಿತಪಿಸುವಂತಾಗಿದೆ.

ಕುಡಿಯುವ ನೀರು ಸರಬುರಾಜು ಯೋಜನೆಯಡಿ ಕೆಆರ್​ಐಡಿಎಲ್(ಲ್ಯಾಡ್ ಆರ್ವಿು) ವತಿಯಿಂದ 5.5 ಲಕ್ಷ ರೂ.ವೆಚ್ಚದಲ್ಲಿ ಕಕ್ಕೂರತಾಂಡದಲ್ಲಿ ನೀರಿನ ಘಟಕ ಪ್ರಾರಂಭಿಸಲಾಗಿದೆ. ಆದರೆ, ಕೆಲ ತಿಂಗಳಲ್ಲೇ ಘಟಕ ಬಂದ್ ಆಗಿತ್ತು. ನಂತರ ಘಟಕದ ದುರಸ್ತಿ ಕಾರ್ಯ ಕೈಗೊಂಡು ನೀರು ಪೂರೈಸಲಾಗುತ್ತದೆ. ಆದರೆ, ನೀರು ಸಂಪೂರ್ಣವಾಗಿ ಸವಳು ಮಿಶ್ರಿತವಾಗಿದ್ದು, ಕುಡಿಯಲು ಯೋಗ್ಯವಾಗಿಲ್ಲ.

ತಾಂಡಾದಲ್ಲಿ ಮತ್ತೊಂದು ಶುದ್ಧ ಕುಡಿಯುವ ನೀರಿನ ಘಟಕವಿದೆಯಾದರೂ ಆಗಾಗ ದುರಸ್ತಿಗೆ ಒಳಪಡುತ್ತಿದೆ. ಒಂದು ರೂ. ನಾಣ್ಯ ಹಾಕಿದಾಗ ಕೆಲವೊಮ್ಮೆ ನೀರೇ ಬರುವುದಿಲ್ಲ. ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಎರಡೂ ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿ ಕಾರ್ಯ ಕೈಗೊಂಡು ನಿರಂತರ ಶುದ್ಧ ನೀರು ಪೂರೈಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ತಾಂಡಾದ ಜನರು ಒತ್ತಾಯಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಗ್ರಾಮೀಣ ಕುಡಿಯುವ ನೀರು ಸರಬುರಾಜು ಇಲಾಖೆ ಎಇಇ ವೈ.ಬಿ. ಕುದುರಿ, ಸ್ಥಳಕ್ಕೆ ಭೇಟಿ ನೀಡಿ ಘಟಕಗಳನ್ನು ಪರಿಶೀಲಿಸಿ ಕೂಡಲೇ ದುರಸ್ತಿ ಕಾರ್ಯ ಕೈಗೊಂಡು ಜನರಿಗೆ ಶುದ್ಧ ನೀರು ಪೂರೈಸಲಾಗುವುದು ಎಂದು ಭರವಸೆ ನೀಡಿದ್ದಾರೆ.

Leave a Reply

Your email address will not be published. Required fields are marked *