ಇಬ್ಬರು ಆರೋಪಿಗಳು ನ್ಯಾಯಾಂಗ ವಶಕ್ಕೆ

ಧಾರವಾಡ: ಇಲ್ಲಿನ ಕುಮಾರೇಶ್ವರ ನಗರದಲ್ಲಿನ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಲುದಾರ ಮಾಲೀಕರಾದ ರವಿ ಸಬರದ ಹಾಗೂ ಆರ್ಕಿಟೆಕ್ಟ್ ವಿವೇಕ ಪವಾರ್ ಅವರನ್ನು ಏ. 9ರವರೆಗೆ ನ್ಯಾಯಾಂಗ ವಶಕ್ಕೆ ನೀಡಿ ಪ್ರಧಾನ ಜೆಎಂಎಫ್​ಸಿ ನ್ಯಾಯಾಲಯ ಬುಧವಾರ ಆದೇಶಿಸಿದೆ.

ಕಳೆದ ವಿಚಾರಣೆಯಲ್ಲಿ ಮಾ. 27ರವರೆಗೆ ನೀಡಿದ್ದ ಪೊಲೀಸ್ ವಶ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಆರೋಪಿಗಳಾದ ರವಿ ಸಬರದ ಹಾಗೂ ವಿವೇಕ ಪವಾರ ಅವರ ವಿಚಾರಣೆ ಪೂರ್ಣಗೊಂಡಿರುವ ಬಗ್ಗೆ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದರು. ಪರಿಶೀಲಿಸಿದ ನ್ಯಾಯಾಧೀಶೆ ವಿಜಯಲಕ್ಷ್ಮೀ ಘಾಣಾಪುರ ಅವರು, ಏ. 9ರವರೆಗೆ ಇಬ್ಬರು ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ನೀಡಿ ಆದೇಶಿಸಿದರು.

ಕಿಮ್ಸ್​ನಲ್ಲಿ ಮೂವರು: ಕಟ್ಟಡ ಕುಸಿತ ಪ್ರಕರಣದ ಪ್ರಮುಖ ಆರೋಪಿಗಳಾದ ಗಂಗಪ್ಪ ಶಿಂತ್ರಿ, ಬಸವರಾಜ ನಿಗದಿ ಹಾಗೂ ಮಹಾಬಳೇಶ್ವರ ಪುರದನಗುಡಿ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಕಿಮ್ಸ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಆರೋಗ್ಯದ ಬಗ್ಗೆ ನ್ಯಾಯಾಲಯ ವರದಿ ಕೇಳಿತ್ತು. ಮೂವರಿಗೂ ವಯೋಸಹಜ ಕಾಯಿಲೆಗಳಾದ ಮಧುಮೇಹ ಹಾಗೂ ರಕ್ತದೊತ್ತಡವಿದೆ. ಹೀಗಾಗಿ ಹೆಚ್ಚಿನ ಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ನೀಡಿದ ಪ್ರಮಾಣಪತ್ರವನ್ನು ಪೊಲೀಸರು ನ್ಯಾಯಾಲಯಕ್ಕೆ ನೀಡಿದರು. ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ತಕ್ಷಣ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗುವುದು ಎಂದು ಪೊಲೀಸರು ತಿಳಿಸಿದರು. ಸರ್ಕಾರದ ಪರವಾಗಿ ಅಭಿಯೋಜಕಿ ಅಮರಾವತಿ ನಾಗಪ್ಪ ವಾದ ಮಂಡಿಸಿದರು.

ತನಿಖೆಗೆ ಮೂವರ ಅನಾರೋಗ್ಯ ಅಡ್ಡಿ

ಧಾರವಾಡ: ಕಟ್ಟಡ ಕುಸಿತ ಪ್ರಕರಣ ತನಿಖೆ ಒಂದು ಹಂತಕ್ಕೆ ಬಂದಿದ್ದು, ತ್ವರಿತಗತಿಯಿಂದ ಮುಂದುವರಿಯಲು ಪ್ರಮುಖ ಪಾಲುದಾರರ ಅನಾರೋಗ್ಯವೇ ಅಡ್ಡಿಯಾದಂತೆ ಕಾಣುತ್ತಿದೆ. ಗುತ್ತಿಗೆದಾರ ವಿವೇಕ ಪವಾರ ಮತ್ತು ಬಿಲ್ಡರ್​ಗಳಲ್ಲಿ ಒಬ್ಬನಾದ ರವಿ ಸಬರದ ವಿಚಾರಣೆ ಒಂದು ಹಂತಕ್ಕೆ ಬಂದಿದ್ದು, ಅವರನ್ನು ಈಗ ನ್ಯಾಯಾಂಗ ವಶಕ್ಕೆ ನೀಡಲಾಗಿದೆ. ಉಳಿದ ಮೂವರು ಅನಾರೋಗ್ಯದ ಕಾರಣ ನೀಡಿದ್ದರಿಂದ ಕಿಮ್ಸ್​ನಲ್ಲಿದ್ದಾರೆ. ಚಿಕಿತ್ಸೆಯಲ್ಲಿರುವಾಗ ಅವರನ್ನು ಹೆಚ್ಚು ಪ್ರಶ್ನಿಸಲು ಸಾಧ್ಯವಾಗುತ್ತಿಲ್ಲ. ಆಸ್ಪತ್ರೆ ವೈದ್ಯರು ಮೂವರಲ್ಲಿ ಯಾರೊಬ್ಬರ ಅಥವಾ ಎಲ್ಲ ಮೂವರ ಆರೋಗ್ಯವೂ ಸುಧಾರಿಸಿದೆ, ಅವರೀಗ ಒಳರೋಗಿಗಳಾಗಿ ಇರಬೇಕಿಲ್ಲ ಎಂದು ಲಿಖಿತವಾಗಿ ತಿಳಿಸಿದ ನಂತರ ಕಾನೂನು ಪ್ರಕಾರ ಅವರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದು ತನಿಖೆಗೆ ಪೂರಕ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯಬೇಕಿದೆ. ಹೀಗಾಗಿ, ತನಿಖೆ ಸದ್ಯಕ್ಕೆ ವೇಗವಾಗಿ ಪ್ರಗತಿ ಕಾಣುತ್ತಿಲ್ಲ ಎನ್ನಲಾಗಿದೆ.

ಮಾಲೀಕರ ವಿರುದ್ಧ ಪ್ರತ್ಯೇಕ ದೂರು ಸ್ವೀಕರಿಸಿ

ಧಾರವಾಡ: ಕುಮಾರೇಶ್ವರ ನಗರದ ಬಹುಮಹಡಿ ಕಟ್ಟಡ ದುರಂತ ಪ್ರಕರಣದಲ್ಲಿ 19 ಜನ ಮೃತರ ಹಾಗೂ 57 ಗಾಯಾಳುಗಳ ಕುಟುಂಬದವರಿಂದ ಪ್ರತ್ಯೇಕ ದೂರು ಸ್ವೀಕರಿಸಿ, ಕಟ್ಟಡ ಮಾಲೀಕರ, ವಿನ್ಯಾಸಗಾರ ಹಾಗೂ ಪಾಲಿಕೆ ಅಧಿಕಾರಿಗಳ ವಿರುದ್ಧ ಎಫ್​ಐಆರ್ ದಾಖಲಿಸಬೇಕು ಎಂದು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಆಗ್ರಹಿಸಿದ್ದಾರೆ.

ಜನಜಾಗೃತಿ ಸಂಘ ಹಾಗೂ ಸ್ಥಳೀಯ ನಿವಾಸಿಗಳಿಂದ ಇಲ್ಲಿನ ಕುಮಾರೇಶ್ವರ ನಗರದಲ್ಲಿ ಹಮ್ಮಿಕೊಂಡಿದ್ದ ಭಾವಪೂರ್ಣ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು. ಈ ಪ್ರಕರಣದಲ್ಲಿ ದೂರುದಾರ ಮಹಾನಗರ ಪಾಲಿಕೆ ವಲಯ ನಂ. 3ರ ಸಹಾಯಕ ಆಯುಕ್ತ ಸಂತೋಷ ಆನಿಶೆಟ್ಟರ್ ಅಮಾನತುಗೊಂಡಿದ್ದಾರೆ. ಹೀಗಾಗಿ ಈ ಪ್ರಕರಣವನ್ನು ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಮೃತರ ಕುಟುಂಬಗಳಿಗೆ 25 ಲಕ್ಷ ಹಾಗೂ ಗಾಯಾಳುಗಳಿಗೆ 3ರಿಂದ 10 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಕಟ್ಟಡದ ನಾಲ್ವರು ಮಾಲೀಕರು ರಾಜಕೀಯ ಪ್ರಭಾವದಿಂದ ತನಿಖೆಯ ದಾರಿ ತಪ್ಪಿಸಿ ಪಾರಾಗುವ ಸಾಧ್ಯತೆ ಇದೆ. ಆದ್ದರಿಂದ ಹೈಕೋರ್ಟ್ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಬೇಕು. ಜೊತೆಗೆ ಪಾಲಿಕೆ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಬೇಕು ಎಂದರು.

ಸ್ಥಳೀಯರು ಮೇಣದ ಬತ್ತಿ ಹಿಡಿದು ಶ್ರದ್ಧಾಂಜಲಿ ಸಲ್ಲಿಸಿದರು. ಮಹಾವೀರ ದಿಂಡಿಲಕೊಪ್ಪ, ಶಿವಲಿಂಗಪ್ಪ ಮತ್ತೂರ, ರಾಮಕೃಷ್ಣ ಅಗಡಿ, ಎಂ. ಈಶ್ವರಯ್ಯ, ಶ್ರೀಕಾಂತ ಜಮನಾಳ, ನಂದಾ ಗುಳೇದಗುಡ್ಡ, ಜಯಶ್ರೀ ಪಾಟೀಲ, ರಾಜೇಶ್ವರಿ ಸಾಲಗಟ್ಟಿ, ಸುಮಂಗಲಾ ಕೊರವರ, ಮಂಜು ಪವಾರ, ನಿಂಗನಗೌಡ ಪಾಟೀಲ, ಇತರರಿದ್ದರು.

ಜಿಲ್ಲಾಧಿಕಾರಿಯವರಿಂದಲೇ ತನಿಖೆ

ಧಾರವಾಡ: ಕಟ್ಟಡ ಕುಸಿತ ಪ್ರಕರಣದ ತನಿಖೆಯನ್ನು ಜಿಲ್ಲಾಧಿಕಾರಿ ದೀಪಾ ಚೋಳನ್ ಅವರಿಗೆ ವಹಿಸಿ ಸರ್ಕಾರ ಆದೇಶ ಹೊರಡಿಸಿದೆ. ಮಾ. 19ರಂದು ಕಟ್ಟಡ ಕುಸಿದ ನಂತರ ಕರ್ತವ್ಯ ನಿರ್ಲಕ್ಷ್ಯ ಆರೋಪದಡಿ 7 ಅಧಿಕಾರಿಗಳನ್ನು ಮಾ. 23ರಂದು ಅಮಾನತು ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಕಟ್ಟಡ ನಿರ್ವಣ, ಸಿಸಿ ವಿತರಣೆ ಯಲ್ಲಿ ಮೇಲ್ನೋಟಕ್ಕೆ ಕಂಡುಬಂದ ಅಧಿಕಾರಿಗಳ ಕರ್ತವ್ಯ ನಿರ್ಲಕ್ಷ್ಯ ಕುರಿತು ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ಪ್ರಾಥಮಿಕ ವರದಿ ನೀಡಿದ್ದರು. ಇವರ ವಿರುದ್ಧ ದಂಡಾಧಿಕಾರಿಗಳಿಂದ ತನಿಖೆಗೆ ಆದೇಶಿಸಲಾಗಿತ್ತು. ಅಪರ ಜಿಲ್ಲಾಧಿಕಾರಿಯವರು ತನಿಖೆ ನಡೆಸಲಿದ್ದಾರೆ ಎನ್ನಲಾಗಿತ್ತು. ಆದರೆ ಸ್ವತಃ ಜಿಲ್ಲಾ ದಂಡಾಧಿಕಾರಿ ಹಾಗೂ ಜಿಲ್ಲಾಧಿಕಾರಿಯೇ ತನಿಖೆ ಕೈಗೊಂಡು ಸರ್ಕಾರಕ್ಕೆ ವರದಿ ನೀಡಬೇಕು ಎಂದು ಸರ್ಕಾರ ಮಾ. 27ರಂದು ಸಂಜೆ ಆದೇಶಿಸಿದೆ. ಜಿಲ್ಲೆಯಲ್ಲಿ ದ್ವಿತೀಯ ಹಂತದ ಲೋಕಸಭಾ ಚುನಾವಣೆ ಪ್ರಕ್ರಿಯೆ ಮಾ. 28ರಿಂದ ಆರಂಭಗೊಳ್ಳಲಿವೆ. ಜಿಲ್ಲಾಧಿಕಾರಿ ದೀಪಾ ಚೋಳನ್ ಅವರೇ ಚುನಾವಣಾಧಿಕಾರಿಯಾಗಿದ್ದು, ನಾಮಪತ್ರ ಸ್ವೀಕಾರ, ಪರಿಶೀಲನೆ, ವಾಪಸ್ ಪಡೆಯುವ ಪ್ರಕ್ರಿಯೆಯಲ್ಲಿ ನಿರತರಾಗಲಿದ್ದಾರೆ. ಈ ಜವಾಬ್ದಾರಿಗಳ ಜೊತೆಗೆ ತನಿಖೆಯನ್ನೂ ಅವರು ನಡೆಸಲಿದ್ದಾರೆ.

ಬಿಲ್ಡರ್ ಪವಾರ ಮನೆಯಲ್ಲಿ ತಪಾಸಣೆ

ಹುಬ್ಬಳ್ಳಿ: ಬಹುಮಹಡಿ ಕಟ್ಟಡ ದುರಂತ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಆರೋಪಿ, ಬಿಲ್ಡರ್ ವಿವೇಕ ಪವಾರ ಅವರ ಹುಬ್ಬಳ್ಳಿಯ ಆದರ್ಶ ನಗರದ 2ನೇ ಕ್ರಾಸ್​ನಲ್ಲಿರುವ ನಿವಾಸದಲ್ಲಿ ಬುಧವಾರ ಪೊಲೀಸರು ದಾಖಲೆಗಳ ಪರಿಶೀಲನೆ ನಡೆಸಿದರು. ಪ್ರಕರಣದ ತನಿಖಾಧಿಕಾರಿ ಡಿಸಿಪಿ ಡಿ.ಎಲ್. ನಾಗೇಶ ನೇತೃತ್ವದ ತಂಡ ಆರೋಪಿ ವಿವೇಕ ಪವಾರನೊಂದಿಗೆ ಆಗಮಿಸಿ ಧಾರವಾಡ ಕುಮಾರೇಶ್ವರ ನಗರದ ಕಟ್ಟಡ ಸೇರಿ ವಿವಿಧ ಕಟ್ಟಡಗಳ ಕಾಗದ ಪತ್ರ, ದಾಖಲಾತಿಗಳ ಪರಿಶೀಲನೆ ನಡೆಸಿದರು ಎಂದು ಮೂಲಗಳು ತಿಳಿಸಿವೆ. ಸುಮಾರು ಒಂದು ಗಂಟೆ ಕಾಲ ತಪಾಸಣೆ ನಡೆಸಲಾಯಿತು. ಎಸಿಪಿ ರುದ್ರಪ್ಪ, ಅಶೋಕ ನಗರ ಠಾಣೆ ಪೊಲೀಸರು, ಇತರರು ಇದ್ದರು.